ದೀಪಾವಳಿ ಆಚರಣೆಗೆ ಸುಪ್ರೀಂಕೋರ್ಟ್ ನಿರ್ದೇಶನ ಪಾಲನೆಗೆ ಸೂಚನೆ: ಮಾಲಿನ್ಯ ನಿಯಂತ್ರಣ ಮಂಡಳಿ
ಬೆಂಗಳೂರು, ಅಕ್ಟೋಬರ್ 23: ದೀಪಾವಳಿ ಆಚರಣೆಗೆ ಸಂಬಂಧಪಟ್ಟಂತೆ ಅರ್ಜಿವೊಂದರ ವಿಚಾರಣೆ ನಡೆಸಿ ಸುಪ್ರೀಂಕೋರ್ಟ್ ನೀಡಿದ ಆದೇಶ, ಮಾರ್ಗಸೂಚಿಗಳಂತೆ ದೀಪಾವಳಿ ಆಚರಣೆ ಮಾಡಬೇಕಿದೆ. ಈ ಕುರಿತು ಪರಿಸರಕ್ಕೆ ಪೂರಕವಾಗಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಸ್ಥಳಿಯ ಸಂಸ್ಥೆಗಳಿಗೂ ತಿಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ.
ದೀಪಾವಳಿ ವೇಳೆ ರಾತ್ರಿ 8 ಗಂಟೆಯಿಂದ 10 ರವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ ನೀಡಲಾಗಿದೆ. ಕೇವಲ ಹಸಿರು ಪಟಾಕಿ ಸಿಡಿಸಲು ಹಾಗೂ ಮಾರಾಟಕ್ಕೆ ಅನುಮತಿ ಇದೆ. ಇದರ ಹೊರತು ಉಳಿದ ಪಟಾಕಿಗಳ ಮಾರಾಟವನ್ನು ನಿಷೇಧಿಸಲಾಗಿದೆ. ಈ ನಿಟ್ಟಿನಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಮಂಡಳಿ ಪಾಲನೆ ಮಾಡುತ್ತಿದೆ. ಜೊತೆಗೆ ಜಿಲ್ಲಾ ಪರಿಸರ ಸಂರಕ್ಷಣಾ ಪ್ರಾಧಿಕಾರವು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.
ಸುಪ್ರೀಂಕೋರ್ಟ್ ನಿರ್ದೇಶನ ಮೇರೆಗೆ ನವದೆಹಲಿ ಹಾಗೂ ಬೆಂಗಳೂರು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶದಂತೆ ಹಬ್ಬದ ಏಳು ಮೊದಲು ಹಾಗೂ ಹಬ್ಬದ ನಂತರ ಏಳು ದಿನ ವಾಯು ಗುಣಮಟ್ಟ ಪರಿಶೀಲಿಸಬೇಕು. ಈಗಾಗಲೇ ಮಂಡಳಿಯು ಜಿಲ್ಲಾ ಪ್ರಾಧಿಕಾರದ ಅಧಿಕಾರಿಗಳಿಗೆ ಈ ಬಗ್ಗೆ ಸೂಚಿಸಿದ್ದು, ಕ್ರಮ ಕೈಗೊಳ್ಳಲಾಗಿದೆ.

ಎಲ್ಲ ಪ್ರಾದೇಶಿಕ ಅಧಿಕಾರಿಗಳ ವ್ಯಾಪ್ತಿಯಿಂದ ಹಿಡಿದು ರಾಜ್ಯದೆಲ್ಲಡೆ ಶಬ್ದ ಮಾಲಿನ್ಯ, ವಾಯು ಮಾಲಿನ್ಯ ತಡೆಗಟ್ಟಲು ಎಚ್ಚರಿಕೆ ವಹಿಸಲಾಗಿದೆ. ನ್ಯಾಯಾಲಯದ ಮಾರ್ಗಸೂಚಿಗಳನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಜೊತೆಗೆ ಮಂಡಳಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಪರಿಸರ ಜಾಗೃತಿ, ಪರಿಸರ ಸ್ನೇಹಿ ಹಬ್ಬದಾಚರಣೆ ಕುರಿತು ಮಕ್ಕಳು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಸಂಬಂಧಿಸಿದ ಇಲಾಖೆ ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲು ಸೂಚಿಸಿದ್ದೇವೆ. ಜೊತೆಗೆ ಹಬ್ಬದನಂತರ ಸೃಷ್ಟಿಯಾಗುವ ವ್ಯಾಪಕ ಘನ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಸುಪ್ರೀಂಕೋರ್ಟ್ ಮಾರ್ಗಸೂಚಿಗಳು ಹಾಗೂ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಮಂಡಳಿ ಮನವಿ ಮಾಡಿಕೊಂಡಿದೆ.












Click it and Unblock the Notifications