• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಸಾವಿಗೆ ರಾಜಕೀಯ ಗಣ್ಯರ ಸಂತಾಪ

|
Google Oneindia Kannada News

ಬೆಂಗಳೂರು, ಜೂನ್ 15: ಬೈಕ್ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆ ಸೇರಿದ್ದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ನಸುಕಿನ ಜಾವ 3.30ಕ್ಕೆ ಸಾವನ್ನಪ್ಪಿದರು.

   ರಾಷ್ಟ್ರಪ್ರಶಸ್ತಿ ಪಡೆದ ಸಂಚಾರಿ ವಿಜಯ್ ಗೆ ಸರ್ಕಾರಿ ಗೌರವ ಸಿಗಬೇಕು ಎಂದ ವೈಎಸ್ ವಿ ದತ್ತಾ | Oneindia Kannada

   ಭಾನುವಾರದಿಂದ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ಸಂಚಾರಿ ವಿಜಯ್ ದೇಹ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಬನ್ನೇರುಘಟ್ಟ ರಸ್ತೆಯಲ್ಲಿ ನಡೆದ ಅಪಘಾತದಲ್ಲಿ ವಿಜಯ್‌ಗೆ ಭಾರೀ ಪ್ರಮಾಣದ ಏಟು ಬಿದ್ದಿದ್ದರಿಂದ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು.

   ಸಿಎಂ ಯಡಿಯೂರಪ್ಪ ತೀವ್ರ ಸಂತಾಪ

   ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ಸೂಚಿಸಿದ್ದು, "ರಂಗಭೂಮಿ, ಸಿನೆಮಾ ರಂಗಗಳೆರಡರಲ್ಲೂ ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಭಗವಂತನು ಮೃತರ ಆತ್ಮಕ್ಕೆ ಶಾಂತಿಯನ್ನು ನೀಡಲಿ, ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ,'' ಎಂದು ತಿಳಿಸಿದ್ದಾರೆ.

   ಸಚಿವ ಮುರುಗೇಶ್ ನಿರಾಣಿ ಶೋಕ ಸಂದೇಶ

   "ಅಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ನಟ "ಸಂಚಾರಿ ವಿಜಯ್' ನಿಧನರಾಗಿದ್ದು, ಇವರ ಅಕಾಲಿಕ ಮರಣದ ವಿಷಯ ತಿಳಿದು ಮನಸ್ಸಿಗೆ ಅತೀವ ನೋವುಂಟಾಯಿತು. ಇವರ ಅಮೋಘ ಅಭಿನಯದ 'ನಾನು ಅವನಲ್ಲ ಅವಳು' ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಕನ್ನಡ ಮಾತ್ರವಲ್ಲದೆ ತಮಿಳು ಸಿನೆಮಾರಂಗದಲ್ಲಿಯೂ ಇವರು ತಮ್ಮ ನಟನಾ ಪ್ರತಿಭೆಯನ್ನು ತೋರಿಸಿದ್ದರು. ಭಗವಂತ ಅವರ ಕುಟುಂಬ ವರ್ಗದವರಿಗೂ, ಬಂಧು- ಮಿತ್ರರಿಗೂ, ಸಮಸ್ತ ಅಭಿಮಾನಿಗಳಿಗೂ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ."

   ಡಿಸಿಎಂ ಅಶ್ವಥ್ ನಾರಾಯಣ ಸಂತಾಪ
   "ಸಂಚಾರಿ ವಿಜಯ್ ಅವರು ಚಿಕಿತ್ಸೆ ಫಲಕಾರಿಯಾಗದೆ ನಮ್ಮನ್ನು ಅಗಲಿದ್ದಾರೆ ಎಂದು ತಿಳಿದು ಮನಸ್ಸಿಗೆ ಅತೀವ ಘಾಸಿಯಾಗಿದೆ. ಪ್ರತಿಭಾವಂತ, ರಾಷ್ಟ್ರ ಪ್ರಶಸ್ತಿ ವಿಜೇತ ಕಲಾವಿದನನ್ನು ನಾವು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ.'' ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ ಸಂತಾಪ ಸೂಚಿಸಿದ್ದಾರೆ.

   ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಂಬನಿ
   ಕನ್ನಡ ಚಿತ್ರರಂಗದ ಉದಯೋನ್ಮುಖ ನಟ ಹಾಗೂ ಮನೋಜ್ಞ ಅಭಿನಯದ ಮೂಲಕ ಕನ್ನಡಿಗರ ಮನ ಗೆದ್ದಿದ್ದ ಚಲನಚಿತ್ರ ನಟ ಸಂಚಾರಿ ವಿಜಯ ನಿಧನಕ್ಕೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸಿದರು.

   ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜತೆ ಮಾತನಾಡಿದ ಅವರು, "ಸಂಚಾರಿ ವಿಜಯ ಒಬ್ಬ ಪರಿಸರ ಪ್ರೇಮಿ. ರಾಷ್ಟ್ರ ಪ್ರಶಸ್ತಿ ವಿಜೇತ ನಟ. ಅವರ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ನಷ್ಟವಾಗಿದೆ. ಇನ್ನಷ್ಟು ಬಾಳಿ, ಬದುಕಿ ಚಿತ್ರರಂಗದ ಕೀರ್ತಿ ಬೆಳಗಬೇಕಾದ ಯುವ ಕಲಾವಿದ ವಿಜಯ್ ನಮ್ಮನ್ನು ಅಗಲಿರುವುದು ಬಹಳ ದುಃಖದ ಸಂಗತಿ."

   "ಸಂಚಾರಿ ವಿಜಯ ಅವರ ಸಾವಿನ ದುಃಖವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ಅವರ ಕುಟುಂಬದ ಸದಸ್ಯರಿಗೆ ಕರುಣಿಸಲಿ," ಎಂದು ಸಚಿವ ಬೊಮ್ಮಾಯಿ ಪ್ರಾರ್ಥಿಸಿದರು.

   ಸಚಿವ ಕೆ.ಎಸ್. ಈಶ್ವರಪ್ಪ ಶೋಕ
   ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ನಟ ಸಂಚಾರಿ ವಿಜಯ್ ನಿಧನದಿಂದ ರಂಗಭೂಮಿ, ಸಿನೆಮಾ ರಂಗಗಳೆರಡಕ್ಕೂ ತುಂಬಲಾರದ ನಷ್ಟವಾಗಿದೆ. ಅವರು ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆದಿದ್ದರು. ಅವರ ಅಕಾಲಿಕ ನಿಧನದಿಂದ ಕನ್ನಡ ಚಿತ್ರರಂಗಕ್ಕೆ ಬಡವಾಗಿದೆ. ಮೃತರಿಗೆ ಚಿರಶಾಂತಿ ಸಿಗಲಿ ಮತ್ತು ಕುಟುಂಬಸ್ಥರಿಗೆ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ," ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ.ಎಸ್.ಈಶ್ವರಪ್ಪ ಶೋಕ ವ್ಯಕ್ತಪಡಿಸಿದ್ದಾರೆ.

   ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ
   ಬೈಕ್ ಅಪಘಾತಕ್ಕೆ ತುತ್ತಾದ ಉದಯೋನ್ಮುಖ ಹಾಗೂ ಪ್ರತಿಭಾವಂತ ನಟ ಸಂಚಾರಿ ವಿಜಯ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.

   "ಸಂಚಾರಿ ವಿಜಯ್ ಅವರದು, ಇನ್ನು ಚಿಕ್ಕ ವಯಸ್ಸು. ಈಗಷ್ಟೇ ಚಿತ್ರರಂಗದಲ್ಲಿ ನೆಲೆ ನಿಲ್ಲುತ್ತಿದ್ದರು. ಯಾವುದೇ ಹಿನ್ನೆಲೆ ಬೆಂಬಲ ಇಲ್ಲದೆ, ತನ್ನ ಕಲೆ, ಪ್ರತಿಭೆ ಮೂಲಕ ಬೆಳೆಯುತ್ತಿದ್ದ ವಿಜಯ್ ಅವರ ಸಾವಿನ ಸುದ್ದಿ ಕೇಳಿ ನೋವಾಗಿದೆ," ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

   "ಮಾಡಿದ್ದು ಕೆಲವೇ ಚಿತ್ರಗಳಾದರೂ ತಮ್ಮ ಅಮೋಘ ನಟನೆ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ತಮ್ಮ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿಯನ್ನೂ ಗಳಿಸಿದ್ದರು. ಕೋವಿಡ್ ಸಂಕಷ್ಟದಲ್ಲಿ ತಮ್ಮ ಸ್ನೇಹಿತರ ಜತೆಗೂಡಿ ಬಡವರಿಗೆ ಆಹಾರ ಕಿಟ್ ನೀಡುವುದು, ಆಕ್ಸಿಜನ್ ಸರಬರಾಜು ಮಾಡುವುದು ಸೇರಿದಂತೆ ಅನೇಕ ಜನಪರ ಕೆಲಸಗಳನ್ನು ಮಾಡಿ ಗಮನ ಸೆಳೆದಿದ್ದರು," ಎಂದು ಅವರು ಸ್ಮರಿಸಿದ್ದಾರೆ.

   ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಂತಾಪ
   "ವೈವಿಧ್ಯಮಯ ಪಾತ್ರಗಳ ಬೆನ್ನೇರಿ ಸಂಚರಿಸುತ್ತಿದ್ದ, ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ, ಅಪರೂಪದ ವ್ಯಕ್ತಿತ್ವದ ಸಂಚಾರಿ ವಿಜಯ್ ನಿರ್ಗಮನ ದುಃಖ ತರಿಸಿದೆ. ಶಂಕರ್ ನಾಗ್ ಇದ್ದಿದ್ದರೆ ಕನ್ನಡ ಚಿತ್ರರಂಗ ಮಹತ್ತರ ಸ್ಥಾನಕ್ಕೇರುತ್ತಿತ್ತು ಎಂದು ನಾವೆಲ್ಲ ಇಂದಿಗೂ ಬೇಸರಿಸಿಕೊಳ್ಳುತ್ತೇವೆ. ಭರವಸೆಯ ನಟ ವಿಜಯ್ ಕೂಡ ಅಂಥದ್ದೇ ನಿರಾಶೆ ಮೂಡಿಸಿಬಿಟ್ಟರು."

   "ಸರಳ, ಸಜ್ಜನಿಕೆಯ ವಿಜಯ್‌ ಕೋವಿಡ್ ಪರಿಹಾರ ಕಾರ್ಯಗಳಲ್ಲಿಯೂ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು ಎಂದು ಅವರ ಸ್ನೇಹಿತರು ಹೇಳಿದ್ದಾರೆ. ಇದು ಅವರ ಜನಪರ ನಿಲುವಿಗೆ ಹಿಡಿದ ಕನ್ನಡಿ. ವಿಜಯ್‌ ಸಾವಿನ ನೋವು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಕ್ಕೆ ಕರುಣಿಸಿಲಿ. ಸಂಚಾರಿ ವಿಜಯ್‌ ಅವರ ಕುಟುಂಬಸ್ಥರ ದುಃಖ ನಮ್ಮದೂ ಆಗಿದೆ," ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.

   English summary
   National award winning actor Sanchari Vijay was injured in a bike accident, died on Tuesday early morning.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X