ಸಮಾಜದ ಸ್ವಾಸ್ಥ್ಯ ಕೆಡಿಸಿದ ರಾಜಕಾರಣದ ತಂತ್ರಗಳು!
ಬೆಂಗಳೂರು, ಮೇ 31: 2023ರ ವಿಧಾನಸಭಾ ಚುನಾವಣೆಗೆ ದಿನಗಳು ಹತ್ತಿರವಾದಂತೆಲ್ಲ ರಾಜ್ಯ ರಾಜಕೀಯದಲ್ಲಿ ವಿಚಿತ್ರ ಬದಲಾವಣೆಗಳು ನಡೆಯುತ್ತಿರುವುದು ಎದ್ದು ಕಾಣಿಸುತ್ತಿದೆ. ಹೋರಾಟಗಳ ಮೂಲಕ ಜನಮನ ಸೆಳೆಯಬೇಕಾದ ರಾಜಕೀಯ ಪಕ್ಷಗಳ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮೂಲಕ, ಅನಗತ್ಯ ವಿವಾದಗಳನ್ನು ಎಳೆದು ತರುತ್ತಾ ರಾಜಕೀಯ ಲಾಭದ ಹುಡುಕಾಟ ನಡೆಸುತ್ತಿರುವುದು ಬೇಸರ ತರಿಸುತ್ತಿದೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹುಟ್ಟಿಕೊಳ್ಳುತ್ತಿರುವ ವಿವಾದಗಳು, ಧರ್ಮ ದಂಗಲ್ ಮತ್ತು ಅದಕ್ಕೆ ತುಪ್ಪ ಸುರಿಯುವಂತಹ ರಾಜಕೀಯ ನಾಯಕರ ಹೇಳಿಕೆಗಳು ಎಲ್ಲೋ ಒಂದು ಕಡೆ ಜಾತಿ ಧರ್ಮಗಳ ನಡುವೆ ಬಿರುಕು ಹುಟ್ಟುವಂತೆ ಮಾಡಿ ಜನರ ನೆಮ್ಮದಿಗೆ ಕೊಳ್ಳಿಯಿಡುವಂತೆ ಮಾಡುತ್ತಿದೆ.
ಸಾಮಾನ್ಯವಾಗಿ ಚುನಾವಣೆಗಳು ಹತ್ತಿರವಾದಂತೆಲ್ಲ ರಾಜಕೀಯ ನಾಯಕರು ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು, ಪ್ರತಿಭಟನೆ ನಡೆಸುವುದು ಹೀಗೆ ಹತ್ತಾರು ಚಟುವಟಿಕೆಗಳನ್ನು ನಡೆಸುವುದು ಹೊಸದೇನಲ್ಲ. ರಾಜಕೀಯದಲ್ಲಿ ಒಬ್ಬರನ್ನು ಎತ್ತಿಕಟ್ಟಿ ತಮಾಷೆ ನೋಡುವುದು ಹಾಗೂ ಅದರಲ್ಲಿ ತಮಗೇನು ಲಾಭ ಎಂಬ ಲೆಕ್ಕಾಚಾರ ಹಾಕುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.

ಫಲಿಸಿದ ಸಿದ್ದರಾಮಯ್ಯರ ತಂತ್ರ
ವಿಧಾನಸಭಾ ಚುನಾವಣೆ ಹತ್ತಿರವಾದಾಗ ಆಡಳಿತಾರೂಢ ಪಕ್ಷದ ವಿರುದ್ಧ ಅಸಮಾಧಾನಗಳು ಭುಗಿಲೇಳುವುದು ಸಹಜವೇ. ಅದಕ್ಕಿಂತ ಹೆಚ್ಚಾಗಿ ಆಡಳಿತರೂಢ ಪಕ್ಷದ ಆಡಳಿತ ವೈಫಲ್ಯಗಳನ್ನಿಟ್ಟುಕೊಂಡು ಹೋರಾಟ ನಡೆಸಿ ಆ ಮೂಲಕ ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆಯನ್ನು ಸೃಷ್ಟಿಸಿ ಅಧಿಕಾರಕ್ಕೆ ಬರಲು ಪ್ರಯತ್ನ ನಡೆಸುವುದು ವಿಪಕ್ಷಗಳ ರಾಜಕೀಯ ತಂತ್ರದಲ್ಲೊಂದಾಗಿದೆ.
ಕಳೆದ ಬಾರಿ ವಿಧಾನಸಭಾ ಚುನಾವಣೆ ವೇಳೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರೂ ಆಗಿನ ಬರಗಾಲದ ಪರಿಸ್ಥಿತಿ, ರೈತರ ಆತ್ಮಹತ್ಯೆ ವಿಚಾರಗಳನ್ನೇ ಮುಂದಿಟ್ಟುಕೊಂಡು ಜೆಡಿಎಸ್ ಮತ್ತು ಬಿಜೆಪಿ ಆಡಳಿತದ ವಿರುದ್ಧ ಹೋರಾಟ ನಡೆಸಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದ್ದವು.

ಕಾಂಗ್ರೆಸ್ ದಿಕ್ಕು ತಪ್ಪಿಸುತ್ತಿರುವ ಜೆಡಿಎಸ್
ಈ ಬಾರಿ ರಾಜ್ಯದಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಆದರೆ ಹೋರಾಟ ಮಾಡಿ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವಲ್ಲಿ ಸೋಲುತ್ತಿದ್ದಾರೆ. ಅದಕ್ಕೆ ಕಾರಣವಾಗಿರುವುದು ಕಾಂಗ್ರೆಸ್ ಪಕ್ಷದೊಳಗಿನ ನಾಯಕರ ನಡುವಿನ ಭಿನ್ನಾಭಿಪ್ರಾಯ ಹಾಗೂ ತಮ್ಮ ಹೋರಾಟದ ಲಾಭವನ್ನು ಮತ್ಯಾರೋ ಪಡೆದುಕೊಳ್ಳಬಹುದೆಂಬ ಭಯ.
ಇದೆಲ್ಲಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಹೋರಾಟದ ದಿಕ್ಕು ತಪ್ಪಿಸಲು ಮತ್ತು ಹೋರಾಟದ ದಿಕ್ಕನ್ನು ಜನ ಸಾಮಾನ್ಯರಿಗೆ ಬೇರೆಯದ್ದೇ ಆದ ರೀತಿಯಲ್ಲಿ ಬಿಂಬಿಸುವಂತೆ ಮಾಡುವ ಕೆಲಸವನ್ನು ಬಿಜೆಪಿ ಮಾಡುತ್ತಿಲ್ಲ. ಬದಲಿಗೆ ಆ ಕೆಲಸವನ್ನು ಜೆಡಿಎಸ್ ಮಾಡುತ್ತಿದೆ. ಇವತ್ತು ರಾಜ್ಯದಲ್ಲಿ ಕಾಂಗ್ರೆಸ್ ಗೆ ಮಗ್ಗುಲ ಮುಳ್ಳಾಗಿ ಚುಚ್ಚುತ್ತಿರುವುದು ಬಿಜೆಪಿ ಅಲ್ಲ ಜೆಡಿಎಸ್ ಎಂದರೆ ನಂಬಲೇ ಬೇಕು. ಕಳೆದ ಬಾರಿ ಕಾಂಗ್ರೆಸ್ ವಿರುದ್ದ ಬಿಜೆಪಿ ಮತ್ತು ಜೆಡಿಎಸ್ ಹೋರಾಟ ನಡೆಸಿ, ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳುವಂತೆ ಮಾಡಲಾಯಿತು.

ಜೆಡಿಎಸ್ - ಕಾಂಗ್ರೆಸ್ ಜಗಳ ಬಿಜೆಪಿಗೆ ಲಾಭ
ಇವತ್ತು ಕಾಂಗ್ರೆಸ್ ಮತ್ತು ಜೆಡಿಎಸ್ ಆಡಳಿತರೂಢ ಬಿಜೆಪಿ ವಿರುದ್ಧ ಹೋರಾಟ ನಡೆಸುವುದಕ್ಕಿಂತ ಹೆಚ್ಚಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಾ ಮತದಾರರ ಮುಂದೆ ಮೌಲ್ಯ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಯಾವುದೇ ಹೋರಾಟ ಮಾಡಿದರೂ ಅದಕ್ಕೆ ಪ್ರತಿಕ್ರಿಯೆ ನೀಡುವುದು ಬಿಜೆಪಿಗಿಂತ ಜೆಡಿಎಸ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ವಿಪಕ್ಷಗಳಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಿತ್ತು. ಆದರೆ ಇದೆರಡು ಪಕ್ಷಗಳು ಒಂದರ ಮೇಲೊಂದು ಪೈಪೋಟಿಗೆ ಬಿದ್ದಿದ್ದು ಅದರ ಲಾಭವನ್ನು ಆಡಳಿತರೂಢ ಬಿಜೆಪಿ ಪಡೆಯುತ್ತಿದೆ.
ರಾಜ್ಯದಲ್ಲಿ ಅಲ್ಪಸಂಖ್ಯಾತ ಮತದಾರರನ್ನು ಸೆಳೆಯುವ ಸಲುವಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್ ಡಿಪಿಐ ತೀವ್ರ ಕಸರತ್ತು ನಡೆಸುತ್ತಿವೆ. ಹೀಗಾಗಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮುಸ್ಲಿಂ ನಾಯಕರನ್ನು ಜೆಡಿಎಸ್ ಗೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಗೆ ಟಾಂಗ್ ನೀಡುತ್ತಿದ್ದಾರೆ. ಜತೆಗೆ ಸಂಘ ಪರಿವಾರಗಳನ್ನು ವಿರೋಧಿಸುತ್ತಾ ಮುಸ್ಲಿಂ ಸಂಘಟನೆಗಳಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದ್ದಾರೆ.

ಸಂಘಪರಿವಾರದ ವಿರುದ್ಧ ನಿಂತ ಸಿದ್ಧು
ಯಾವಾಗ ಕುಮಾರಸ್ವಾಮಿ ಅವರು ಆರ್‌ಎಸ್‌ಎಸ್ ನ್ನು ವಿರೋಧಿಸಿ ಮಾತನಾಡಲು ಆರಂಭಿಸಿದರೋ ಕೂಡಲೇ ಎಚ್ಚೆತ್ತುಕೊಂಡ ಸಿದ್ದರಾಮಯ್ಯ ಅವರು ಮೇಲಿಂದ ಮೇಲೆ ಸಂಘ ಪರಿವಾರವನ್ನು ಹಿಗ್ಗಾಮುಗ್ಗ ಜಾಡಿಸಲು ಆರಂಭಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲುವ ತನಕ ಆತ ಒಂದು ಜಾತಿ, ಸಮುದಾಯದ ನಾಯಕನಾಗಿರಬಹುದು. ಆದರೆ ಗೆದ್ದು ಅಧಿಕಾರಕ್ಕೆ ಬಂದ ಬಳಿಕ ಸರ್ವರ ನಾಯಕನಾಗಿರುತ್ತಾನೆ. ಇಂತಹ ನಾಯಕರು ಹೇಳಿಕೆ ನೀಡುವಾಗ ತುಂಬಾ ಎಚ್ಚರಿಕೆ ವಹಿಸಬೇಕಾಗುತ್ತದೆ.
ಒಂದು ಸಮುದಾಯವನ್ನು ಓಲೈಕೆ ಮಾಡಿಕೊಂಡು ಮತ್ತೊಂದು ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡುವುದು ಯಾವುದೇ ಒಬ್ಬ ನಾಯಕನಿಗೆ ಭೂಷಣವಲ್ಲ. ಅದಕ್ಕಿಂತ ಹೆಚ್ಚಾಗಿ ಓಲೈಕೆ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ. ಜನ ಸಾಮಾನ್ಯರು ಸಂಕಷ್ಟದಲ್ಲಿದ್ದಾರೆ. ಅವರ ಬದುಕಿಗೆ ದಾರಿ ತೋರಿಸುವತ್ತ ಗಮನಹರಿಸದೆ ಧರ್ಮದ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಹೊರಡುವುದೆಷ್ಟು ಸರಿ? ಇದಕ್ಕೆ ಉತ್ತರ ಮತದಾರರೇ ನೀಡಬೇಕಾಗುತ್ತದೆ.












Click it and Unblock the Notifications