Lok Sabha Election 2024: ಲೋಕ ಅಖಾಡದಲ್ಲಿ ಮಾತಿನಿಂದಲೇ ನಾಯಕರ ಮಾನ ಹರಾಜು!

ಬೆಂಗಳೂರು, ಏಪ್ರಿಲ್‌ 16: ಲೋಕಸಭಾ ಚುನಾವಣೆ ರಂಗೇರಿದ್ದು, ಪ್ರಚಾರ ಸಭೆ, ಪಕ್ಷಗಳ ಸಮಾವೇಶ, ರೋಡ್ ಶೋ, ಮನೆ ಮನೆ ಪ್ರಚಾರ, ಪಾದಯಾತ್ರೆ ಹೀಗೆ ರಾಜಕೀಯ ನಾಯಕರು ವಿವಿಧ ರೀತಿಯಲ್ಲಿ ಮತ ಬೇಟೆ ಆರಂಭಿಸಿದ್ದಾರೆ. ಹೀಗಿರುವಾಗಲೇ ಆರೋಪ ಪ್ರತ್ಯಾರೋಪಗಳು, ಏಟು ಎದಿರೇಟುಗಳು ಆರಂಭವಾಗಿದ್ದು, ಕೆಲವು ನಾಯಕರು ಒಂದು ಹೆಜ್ಜೆ ಮುಂದೆ ಹೋಗಿ ವೈಯಕ್ತಿಕ ಟೀಕೆಗಿಳಿದಿದ್ದರೆ, ಮತ್ತೆ ಕೆಲವರು ಕೀಳು ಮಟ್ಟದ ಹೇಳಿಕೆ ನೀಡಿ ತಮ್ಮ ಘನತೆ ಗೌರವವನ್ನು ಮತದಾರರ ಮುಂದೆ ಹರಾಜು ಹಾಕಿಕೊಳ್ಳುತ್ತಿದ್ದಾರೆ.

ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳ ನಡುವೆ ಟೀಕೆ, ಆರೋಪ ಎಲ್ಲವೂ ಇದ್ದಿದ್ದೇ ಆದರೆ ಅವುಗಳೆಲ್ಲವೂ ರಾಜಕೀಯ ಚೌಕಟ್ಟಿನೊಳಗಿರಬೇಕು ಮತ್ತು ಅವೆಲ್ಲವೂ ರಾಜಕೀಯಕ್ಕಷ್ಟೇ ಸೀಮಿತವಾಗಿರಬೇಕು. ಆದರೆ ದೇಶ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಅವರು ನೀಡುತ್ತಿರುವ ಹೇಳಿಕೆಗಳನ್ನು ನೋಡಿದರೆ ನಾಯಕರೆನಿಸಿಕೊಂಡವರು ನೀಡು ಹೇಳಿಕೆ ಮತ್ತು ನಡೆದುಕೊಳ್ಳುತ್ತಿರುವ ರೀತಿ ನೀತಿಗಳು ಇದೆನಾ ಎಂಬ ಪ್ರಶ್ನೆಗಳು ಮೂಡುವುದು ಮಾತ್ರವಲ್ಲದೆ ಅಸಹ್ಯ ಹುಟ್ಟಿಸುತ್ತಿದೆ.

Political Leaders Are Talking Out Of Bounds In The Lok Sabha Elections

ನೆರೆದ ಜನ ಚಪ್ಪಾಳೆ ಹೊಡೆಯುತ್ತಾರೆ ಎಂಬ ಒಂದೇ ಒಂದು ಕಾರಣಕ್ಕೆ ನಾಲಿಗೆ ಹರಿ ಬಿಡುತ್ತಿರುವುದು ದುರಂತವೇ.. ಅಸಹ್ಯಕರ, ಕೀಳುಮಟ್ಟದ ಮಾತುಗಳು, ಏಕವಚನ ಪ್ರಯೋಗ, ವಿವಾದಾತ್ಮಕ ಹೇಳಿಕೆಗಳು ಹೀಗೆ ಎಲ್ಲವೂ ನಾಯಕರ ಯೋಗ್ಯತೆಯನ್ನು ಜನರ ಮುಂದಿಡುತ್ತಿದೆ. ಇಲ್ಲಿ ನಾಯಕರು ಮಾಡುವ ಎಲ್ಲ ಕಸರತ್ತುಗಳು ಮತ ಸೆಳೆಯುವ ಸಲುವಾಗಿಯೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ.. ಆದರೆ ಅದಕ್ಕೂ ಒಂದು ಚೌಕಟ್ಟು ಇದೆ ಎಂಬುದನ್ನು ಬಹುತೇಕರು ಮರೆತಂತಿದೆ.

ಚೌಕಟ್ಟು ಮೀರುತ್ತಿರುವ ಹೇಳಿಕೆಗಳು

ಹಲವು ದಶಕಗಳಿಂದ ದೇಶದಲ್ಲಿ ರಾಜಕೀಯ ಮಾಡಿಕೊಂಡು ಬಂದವರ ಬಗ್ಗೆ ತಿಳಿದುಕೊಳ್ಳದಷ್ಟು ದಡ್ಡರು ಮತದಾರರೇನಲ್ಲ. ಅವರು ಎಲ್ಲ ನಾಯಕರ ಬಗ್ಗೆಯೂ ತಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಜತೆಗೆ ಯಾರು ಪ್ರಾಮಾಣಿಕರು? ಯಾರು ಎಷ್ಟು ಆಸ್ತಿ ಮಾಡಿದ್ದಾರೆ? ಯಾರು ಏನೆಲ್ಲ ಭ್ರಷ್ಟಾಚಾರ ಮಾಡಿದ್ದಾರೆ? ಅದರಾಚೆಗೂ ಅವರ ಸ್ಕ್ಯಾಂಡಲ್ ಗಳೇನು ಎಂಬುದರ ಬಗ್ಗೆ ತಿಳಿಯದವರಲ್ಲ. ಎಲ್ಲವೂ ಜಗಜ್ಜಾಹೀರಾಗಿರುವಾಗ ತಾನೇ ಮಹಾ ಪ್ರಾಮಾಣಿಕ ಎಂಬಂತೆ ನಾಯಕರು ಮಾತನಾಡಿದರೆ ಜನ ಅದನ್ನು ನಂಬುವಷ್ಟು ದಡ್ಡರಲ್ಲ.

ಹಾಗೆನೋಡಿದರೆ ಐದು ವರ್ಷಗಳ ಕಾಲ ಅಭಿವೃದ್ಧಿ ಕಾರ್ಯಗಳ ಮೂಲಕ ಜನರ ಮುಂದೆ ಬರಬೇಕಾದ ನಾಯಕರು ಚುನಾವಣೆ ಬಂದಾಗ ಮಾತ್ರ ಬರುತ್ತಾರೆ. ಅಷ್ಟೇ ಅಲ್ಲದೆ ಮಾತಿನ ವೈಖರಿಯನ್ನೂ ಬದಲಾಯಿಸಿಕೊಳ್ಳುತ್ತಾರೆ. ಇನ್ನು ಜನ ಕಂಡಾಗ ತಾವೇನು ಕ್ಷೇತ್ರಕ್ಕೆ ಮಾಡಿದ್ದೇವೆ ಎನ್ನುವುದಕ್ಕಿಂತಲೂ ಎದುರಾಳಿಯನ್ನು ಕೀಳಾಗಿ ಬಿಂಬಿಸಿ ಅತ್ತ ಜನರ ಗಮನ ಹೋಗುವಂತೆ ಮಾಡುವುದು ಕೆಲವು ನಾಯಕರ ತಂತ್ರವಾಗಿದೆ. ಇನ್ನು ಕೆಲವರ ಮಾತಂತೂ ಚೌಕಟ್ಟು ಮೀರಿ ಹೋಗುತ್ತದೆ. ಇದು ಪ್ರಜ್ಞಾವಂತ ಮತದಾರರಲ್ಲಿ ಅಸಹನೆ ಮೂಡಿಸುತ್ತಿದೆ ಎಂಬುದು ಬಹುತೇಕ ನಾಯಕರಿಗೆ ಗೊತ್ತೇ ಆಗುವುದಿಲ್ಲ.

Political Leaders Are Talking Out Of Bounds In The Lok Sabha Elections

ಘನತೆಗೆ ತಕ್ಕಂತಹ ಮಾತುಗಳನ್ನಾಡಲಿ

ಇವತ್ತು ನಮ್ಮ ದೇಶದಲ್ಲಿ ಹಲವು ಪದವಿಗಳನ್ನು ಅಲಂಕರಿಸಿದ ಹಿರಿಯ ನಾಯಕರಿದ್ದಾರೆ. ಅವರು ರಾಜಕೀಯವಾಗಿ ತಮ್ಮದೇ ಆದ ಕೊಡುಗೆಗಳನ್ನು ದೇಶಕ್ಕೆ ನೀಡಿದ್ದಾರೆ. ಹೀಗಾಗಿ ಅವರ ವಯಸ್ಸು, ಗೌರವ, ಘನತೆಗೆ ತಕ್ಕಂತೆ ಆರೋಪಗಳನ್ನು ಮಾಡಬೇಕಾಗುತ್ತದೆ. ಮತ್ತು ಅಂತಹ ನಾಯಕರು ಕೂಡ ತಮ್ಮ ಘನತೆ ಗೌರವಕ್ಕೆ ತಕ್ಕಂತೆ ಮಾತನಾಡ ಬೇಕಾಗುತ್ತದೆ. ಇನ್ನು ಹಲವು ನಾಯಕರು ನಮ್ಮ ವಿರೋಧಿಗಳನ್ನು ಬಾಯಿಗೆ ಬಂದಂತೆ ಬೈದರೆ, ವ್ಯಂಗ್ಯ, ಲೇವಡಿ, ಆರೋಪ ಮಾತ್ರವಲ್ಲದೆ ತೀರ ವೈಯಕ್ತಿಕ ಟೀಕೆ ಮಾಡಿದರೆ ಮತದಾರರು ಮೆಚ್ಚಿ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಹೀಗಾಗಿಯೇ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ.

ಕಾಲ ಬದಲಾಗಿದೆ ಯುವ ಮತ್ತು ವಿದ್ಯಾವಂತ ಮತದಾರರ ಸಂಖ್ಯೆ ಹೆಚ್ಚಾಗಿದೆ. ಹಿಂದಿನಂತೆ ನಾಯಕರು ಹೇಳಿದ್ದೆಲ್ಲವೂ ಸತ್ಯವೆಂದು ನಂಬಿ ಅಥವಾ ಹಣ, ಉಡುಗೊರೆಗಳ ಆಮಿಷಕ್ಕೆ ಬಲಿಯಾಗಿ ಮತ ನೀಡುವವರ ಸಂಖ್ಯೆ ಕಡಿಮೆಯಾಗಿದೆ. ಎಲ್ಲವನ್ನು ಪ್ರಶ್ನಿಸುವ, ವಿಶ್ಲೇಷಿಸುವ, ಯಾವುದು ಸರಿ ಅದನ್ನಷ್ಟೆ ಮಾಡುವ ಪ್ರಜ್ಞಾವಂತ ನಾಗರಿಕರು ದೇಶದಲ್ಲಿದ್ದಾರೆ. ಹೀಗಾಗಿ ಕಳೆದ ಏಳು ದಶಕಗಳಿಂದ ಮಾಡಿಕೊಂಡು ಬಂದಂತಹ ರಾಜಕೀಯ ತಂತ್ರಗಳನ್ನು ಈಗಲೂ ಮುಂದುವರೆಸಿದರೆ ಅದು ಫಲ ನೀಡುವುದಿಲ್ಲ.

ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡದಿರಿ

ರಾಜಕೀಯವಾಗಿ ವಿರೋಧಿಗಳು ಎಂಬ ಕಾರಣಕ್ಕೆ ಮನಬಂದಂತೆ, ಬಾಯಿಗೆ ಬಂದ ಪದಗಳನ್ನು ಪ್ರಯೋಗಿಸುವುದು ಎಷ್ಟು ಸರಿ? ಆರೋಪ ಪ್ರತ್ಯಾರೋಪಗಳು ನಿಮ್ಮ ಕೆಲಸ ಕಾರ್ಯದಲ್ಲಿರಲಿ, ಅಷ್ಟೇ ಅಲ್ಲ ಎದುರಾಳಿ ಭ್ರಷ್ಟಚಾರಿಯೇ? ಹಾಗಾದರೆ ಸಾಕ್ಷಿ ಸಹಿತ ಸಾರ್ವಜನಿಕವಾಗಿ ಬಹಿರಂಗಗೊಳಿಸಿ ಅದು ಬಿಟ್ಟು ತೀರಾ ಅಸಹನೀಯ ಹೇಳಿಕೆಗಳನ್ನು ನೀಡುವುದೆಷ್ಟು ಸರಿ? ಇತ್ತೀಚೆಗೆ ಪ್ರತಿ ಚುನಾವಣೆಗಳೂ ಒಬ್ಬರನೊಬ್ಬರು ಬೈದುಕೊಳ್ಳುವ ಚುನಾವಣೆಯಾಗಿ ಬಿಂಬಿತವಾಗುತ್ತಿದೆ. ಇದು ಬದಲಾಗಬೇಕಿದೆ.

ನೆರೆದವರು ಚಪ್ಪಾಳೆ ತಟ್ಟುತ್ತಿದ್ದಾರೆ ಎಂಬ ಕಾರಣಕ್ಕೆ ಏನೇನೋ ಹೇಳಿ ಮತ್ತೊಬ್ಬರ ತೇಜೋವಧೆ ಮಾಡುವುದನ್ನು ರಾಜಕೀಯ ನಾಯಕರು ಬಿಡಬೇಕು. ರಾಜಕೀಯದಲ್ಲಿ ಟೀಕೆಗಳಿರಬೇಕು ಮತ್ತು ಅವು ಮಾರ್ಮಿಕವಾಗಿರಬೇಕು, ನೈಜಾಂಶಗಳಿರಬೇಕು. ಆದರೆ ಅದ್ಯಾವುದೂ ಇಲ್ಲದೆ ಅವಿವೇಕಿಗಳಂತೆ ಟೀಕೆಗಳನ್ನು ಮಾಡುವುದು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಆದ್ದರಿಂದ ನಾಲಿಗೆ ಹರಿ ಬಿಡುವ ಮುನ್ನ ಎಚ್ಚರವಿರಲಿ. ಭಾರತದ ಪ್ರಜಾಪ್ರಭುತ್ವಕ್ಕೆ ಅವಮಾನವಾಗದಿರಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+