• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯ ರಾಜಕೀಯದಲ್ಲಿ ಮಳೆ ನಿಂತು ಹೋದ ಮೇಲೆ ಆಗಿದ್ದೇನು?

|

ಬೆಂಗಳೂರು, ಸೆ.25: ಕಳೆದ ಸರಿಸುಮಾರು 25 ದಿನಗಳಿಂದ ಗೊಂದಲದ ಗೂಡಾಗಿದ್ದ ಕರ್ನಾಟಕದ ರಾಜಕಾರಣ ಇದೀಗ ಭಾರಿ ಮಳೆಗೆ ಕಲಕಿದ ನೀರಿನಂತಾಗಿದ್ದು ಮಳೆ ನಿಂತು ಹೋದ ಮೇಲೆ ಎಲ್ಲವೂ ತಿಳಿಯಾದಂತೆ ಕಾಣುತ್ತದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶಪ್ರವಾಸಕ್ಕೆ ಹೊರಟ ಬೆನ್ನಲ್ಲೇ ಆರಂಭಗೊಂಡಿದ್ದ, ರಾಜಕೀಯ ದೊಂಬರಾಟ ಹಲವಾರು ಬದಲಾವಣೆಗಳನ್ನು ಉಂಟು ಮಾಡಿದ್ದು, ರಾಜ್ಯದ ಮೂರೂ ಪಕ್ಷಗಳಲ್ಲಿ ಒಂದು ಹಂತದ ಸ್ಥಿತ್ಯಂತರಕ್ಕ ಕಾರಣವಾಗಿದೆ.

ಕಾಂಗ್ರೆಸ್, ಜಡಿಎಸ್ ಮತ್ತು ಬಿಜೆಪಿ ಮೂರು ಪಕ್ಷಗಳೂ ಕೂಡ ಕಳೆದ 25 ದಿನಗಳಿಂದ ನಡೆದ ಹೈಡ್ರಾಮಾದಲ್ಲಿ ನಾನೇ ಗೆದ್ದೆ ಎಂದು ಹೇಳುವ ಪರಿಸ್ಥಿತಿಯಲ್ಲಿ ಯಾವ ಪಕ್ಷವೂ ಇಲ್ಲ.

ರಾಜಕೀಯ ಬಿಕ್ಕಟ್ಟಿಗೆ ದೇವೇಗೌಡರು ಬಳಸಿದ ಪಾಶುಪತಾಸ್ತ್ರ ಯಶಸ್ವಿಯಾಯಿತೆ?

ಸಮ್ಮಿಶ್ರ ಸರ್ಕಾರವೇನೋ ಉಳಿದಿದೆಯಾದರೂ ಸರ್ಕಾರ ಉಳಿದರೂ ಎಷ್ಟು ದಿನ ಎಂಬಂತಹ ಸ್ಥಿತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಇದ್ದರೆ ಬಿಜೆಪಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬ ಜಟ್ಟಿಯಂತಿದೆ. ಆದರೆ ಮೇಲ್ನೋಟಕ್ಕೆ ಸೋಲು ಉಂಟಾಗಿರುವುದು ಜಟ್ಟಿಗೆ ಎನ್ನುವುದು ಜಗಜ್ಜಾಹಿರ.

ದಶಕಗಳ ಕಾಲದ ಬದ್ಧವೈರಿಗಳು ಒಂದಾದರು

ದಶಕಗಳ ಕಾಲದ ಬದ್ಧವೈರಿಗಳು ಒಂದಾದರು

ಕಳೆದ 25 ದಿನಗಳಿಂದ ರಾಜ್ಯರಾಜಕೀಯದಲ್ಲಿ ಉಂಟಾದ ಬಿಕ್ಕಟ್ಟಿನ ಸಂದರ್ಭದಲ್ಲಿ 12 ದಿನಗಳ ಕಾಲ ಸಿದ್ದರಾಮಯ್ಯ ಕರ್ನಾಟಕದಲ್ಲಿ ಇರಲೇ ಇಲ್ಲ. ಆಪ್ತರೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದ ಸಿದ್ದರಾಮಯ್ಯ ಅಲ್ಲಿದ್ದುಕೊಂಡೇ ಇಲ್ಲಿನ ರಾಜಕೀಯ ಸ್ಥಿತ್ಯಂತರಕ್ಕೆ ಕಾರಣರಾಗಿದ್ದರು.

ಈ ಅವಧಿಯಲ್ಲಿ ಕಾಂಗ್ರೆಸ್ ನ 17 ಶಾಸಕರು ಬಿಜೆಪಿಗೆ ವಲಸೆ ಹೋಗುತ್ತಾರೆ ಎಂಬ ವದಂತಿಯ ಸುತ್ತವೇ ಸುತ್ತುತ್ತಿದ್ದ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಇವರೆಲ್ಲ ಬೆನ್ನಿಗಿದ್ದಾರೆ ಎಂಬ ಸಂದೇಹಗಳಿದ್ದವು.

ಆ ಕಾರಣಕ್ಕಾಗಿ ಸಿದ್ದರಾಮಯ್ಯ ವಾಪಸ ಆಗುತ್ತಿದ್ದಂತೆಯೇ ಅತೃಪ್ತರ ಜತೆ ಮಾತನಾಡಿ ಎಲ್ಲವನ್ನೂ ಶಮನಗೊಳಿಸುವ ನಿರ್ಧಾರ ತೆಗೆದುಕೊಂಡರು. ಈ ಮಧ್ಯೆಯೇ ಶತೃಗಳಂತಿದ್ದ ಎಚ್‌ಡಿ ಕುಮಾರಸ್ವಾಮಿ ನೇರವಾಗಿ ಸಿದ್ದರಾಮಯ್ಯ ನಿವಾಸ ಕಾವೇರಿಗೆ ತೆರಳಿ ಮಧ್ಯಾಹ್ನದ ಭೋಜನವನ್ನು ಸವಿದರಲ್ಲದೆ ಇಬ್ಬರಲ್ಲಿದ್ದ ಮನಸ್ತಾಪ ದೂರವಾಗಿದೆ ಎನ್ನುವ ಸಂದೇಶವನ್ನು ಉಭಯ ಪಕ್ಷಗಳ ಶಾಸಕರಿಗೆ ರವಾನಿಸುವಲ್ಲಿ ಯಶಸ್ವಿಯಾದರು.

ವಿಧಾನ ಪರಿಷತ್ ಚುನಾವಣೆ : ಸ್ಪರ್ಧೆಯಿಂದ ಹಿಂದೆ ಸರಿದ ಬಿಜೆಪಿ

ಒಂಟಿಸಲಗ ಯಡಿಯೂರಪ್ಪ, ಬಿಜೆಪಿ ಒಳಗೂ ಸರ್ಜರಿ ಬೇಕೆಂಬ ಮನವರಿಕೆ

ಒಂಟಿಸಲಗ ಯಡಿಯೂರಪ್ಪ, ಬಿಜೆಪಿ ಒಳಗೂ ಸರ್ಜರಿ ಬೇಕೆಂಬ ಮನವರಿಕೆ

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷಗಳ ಸಮ್ಮಿಶ್ರ ಸರ್ಕಾರವನ್ನು ಹೊಡೆದುರುಳಿಸಿ ಕಮಲ ಪಕ್ಷದ ಸರ್ಕಾರ ಸ್ಥಾಪಿಸಬೇಕೆಂಬ ತೆರೆ ಮರೆಯ ಹೋರಾಟದಲ್ಲಿ ಬಿಜೆಪಿಯ ಪರವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಒಂಟಿ ಸಲಗದಂತೆ ಹೋರಾಟ ಮಾಡಿರುವುದು ಗುಟ್ಟಾಗಿ ಉಳಿದಿಲ್ಲ.

ಯಡಿಯೂರಪ್ಪ ಹೊರತುಪಡಿಸಿ ಮುಂಚೂಣಿ ನಾಯಕರೆಲ್ಲ ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಿದ್ದರೆಂಬುದು ಯಡಿಯೂರಪ್ಪ ಆಪ್ತರ ಅಳಲು. ನಾಯಕರು ಯಡಿಯೂರಪ್ಪ ಪರವಾಗಿ ಹೈಕಮಾಂಡ್ ನಲ್ಲಿ ಕೆಲಸ ಮಾಡುತ್ತಿದೆಯಾದರೂ ರಾಜ್ಯದಲ್ಲಿ ಸರ್ಕಾರ ಸ್ಥಾಪಿಸಬೇಕೆಂಬ ಹಾಗೂ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬ ಅವರ ಆಸೆಗೆ ತಣ್ಣೀರೆರಚಿದ್ದು ಸುಳ್ಳಲ್ಲ.

ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿನ ಅತೃಪ್ತ ಶಾಸಕರನ್ನು ಕರೆದು ಮನವೊಲಿಸಿ ಮಾತನಾಡಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಟ್ಟು ಮತ್ತೆ ಗೆಲ್ಲಿಸಿ ಸಚಿವ ಸ್ಥಾನ ಕೊಡುವ ಭರವಸೆಯನ್ನು ತುಂಬುವ ಎಲ್ಲಾ ಪ್ರಯತ್ನವನ್ನು ಮಾಡಿದ್ದು, ಕೇವಲ ಯಡಿಯೂರಪ್ಪ ಮತ್ತು ಅವರ ಆಪ್ತರು ಎಂಬುದನ್ನು ಬಿಜೆಪಿಯ ಎಲ್ಲಾ ನಾಯಕರು ಒಪ್ಪಿಕೊಳ್ಳುತ್ತಾರೆ.

ವಿಧಾನಪರಿಷತ್ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಜೆಡಿಎಸ್ ಪಕ್ಷದಲ್ಲಿ ಶಾಸಕರಿಗೆ ಬಂತು ಎಲ್ಲಿಲ್ಲದ ಮಹತ್ವ

ಜೆಡಿಎಸ್ ಪಕ್ಷದಲ್ಲಿ ಶಾಸಕರಿಗೆ ಬಂತು ಎಲ್ಲಿಲ್ಲದ ಮಹತ್ವ

ಒಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿ ಕೆಲವು ಬದಲಾವಣೆಗಳು ಆಯಾ ಪಕ್ಷಗಳಲ್ಲಿನ ಆಂತರಿಕ ಸಮಸ್ಯೆಯನ್ನು ಬಗೆಹರಿಸಿದ್ದರೂ, ಜೆಡಿಎಸ್ ಪಕ್ಷದ ಕತೆಯೇ ಬೇರೆ. ಇರುವ 36 ಜನ ಶಾಸಕರಲ್ಲಿ ಈಗಾಗಲೇ 14ಮಂದಿ ಸಚಿವರಾಗಿದ್ದಾರೆ. ಇನ್ನುಳಿದವರು ಕೇವಲ 22 ಶಾಸಕರನ್ನು ಪಕ್ಷದಲ್ಲಿ ಯಾರೂ ಮಾತನಾಡಿಸುತ್ತಿಲ್ಲ ಎನ್ನುವ ಮಾತು ಕೇಳಿಸುತ್ತಿತ್ತು.

ಜೆಡಿಎಸ್ ಶಾಸಕರು ಸರ್ಕಾರದಲ್ಲಿದ್ದಾರೆ, ಆದರೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅಥವಾ ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡರಾಗಲೀ ಮಾತನಾಡಿಸುತ್ತಿಲ್ಲ ಎನ್ನುವ ಕೊರಗು ಕೇಳಿಬರುತ್ತಿತ್ತು.

ಕಾಂಗ್ರೆಸ್ ನಿಂದ ಹಲವು ಶಾಸಕರು ಬಿಜೆಪಿ ಹೋಗುತ್ತಾರೆ ಎಂಬ ಮಾತುಗಳು ಕೇಲಿ ಬಂದ ತಕ್ಷಣ ಶಾಸಕರನ್ನು ಪಕ್ಷದಿಂದ ಹೊರಹೋಗುವುದನ್ನು ತಡೆಗಟ್ಟಲು ಸ್ವತಃ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರು ಮುಂದಾದರು.

ಅತೃಪ್ತ ಶಾಸಕರನ್ನು ಹಾಸನಕ್ಕೆ ಕರೆಸಿಕೊಂಡು ಜೆಡಿಎಲ್ ಪ ಸಭೆ ನಡೆಸುವ ನೆಪದಲ್ಲಿ ವಯಕ್ತಿಕ ಕುಂದುಕೊರತೆಗಳನ್ನು ಬಗೆಹರಿಸುವುದಲ್ಲದ, ಸಚಿವ ಎಚ್‌ಡಿ ರೇವಣ್ಣ ತಮಗೆ ಬೇಕಾದವರನ್ನು ಮಾತ್ರ ವರ್ಗಾವಣೆ ಮಾಡಿಕೊಳ್ಳುತ್ತಾರೆ ಎಂಬ ಆರೋಪದಿಂದ ಹೊರ ಬಂದು ಎಲ್ಲಾ ಶಾಸಕರ ವರ್ಗಾವಣೆ, ಅನುದಾನ ಬೇಡಿಕೆಗಳನ್ನು ನೀಗಿಸುವಲ್ಲಿ ಯಶಸ್ವಿಯಾದರು.

ಮಳೆನಿಂತಿದೆಯಾದರೂ ಹನಿ ಯಾವಾಗ ಜಾರುತ್ತೋ ಗೊತ್ತಿಲ್ಲ

ಮಳೆನಿಂತಿದೆಯಾದರೂ ಹನಿ ಯಾವಾಗ ಜಾರುತ್ತೋ ಗೊತ್ತಿಲ್ಲ

ರಾಜ್ಯ ರಾಜಕಾರಣದಲ್ಲಿ ಮೂರು ಪಕ್ಷಗಳಲ್ಲಿ ಸದ್ಯಕ್ಕೆ ಮಳೆ ನಿಂತು ಹೋದ ಪರಿಸ್ಥಿತಿ ಇದೆ. ಬಿಜೆಪಿ ವಿಧಾನ ಪರಿಷತ್ ಚುನಾವಣೆಯಿಂದ ಹಿಂದೆ ಸರಿದು ತಮ್ಮ ಶಾಸಕರನ್ನು ಒಳಗೊಳಗೇ ಗಟ್ಟಿಗೊಳಿಸಲು ಮುಂದಾಗಿದೆ. ಕಾಂಗ್ರೆಸ್ ತಮ್ಮ ಸರ್ಕಾರ ಉಳಿದಿದೆ ಎಂದುಕೊಂಡಿದ್ದರೂ ಸಚಿವ ಸಂಪುಟ ವಿಸ್ತರಣೆ ನಂತರ ಏನಾಗುತ್ತದೆ ಎಂಬ ಧಾವಂತದಲ್ಲಿದೆ.

ಇನ್ನು ಜೆಡಿಎಸ್ ನಲ್ಲಿ ಸಧ್ಯಕ್ಕೆ ಎಲ್ಲವೂ ಶಮನವಾಗಿದ್ದರೂ ಮುಂದಿನ ದಿನಗಳಲ್ಲಿ ಪಕ್ಷದ ಎಲ್ಲಾ ಶಾಸಕರು ಒಟ್ಟಾಗಿ ಇರುತ್ತಾರಾ ಎಂಬುದನ್ನು ಧೈರ್ಯವಾಗಿ ಹೇಳುವ ಪರಿಸ್ಥಿತಿಯಲ್ಲಿಲ್ಲ. ಈಗ ನಿಂತು ಹೋಗಿರುವ ಮಳೆ ಮತ್ತೆ ಯಾವಾಗ ಬಿರುಗಾಳಿಯಾಗಿ ಬೀಸುತ್ತದೆಯೋ ಎಂಬ ಆತಂಕ ಮೂರು ಪಕ್ಷಗಳಲ್ಲಿದೆ.

English summary
Political instability in Karnataka for the last 25 days has taught a big lesson for all three parties in the state. The coalition government was safe after a big big drama, but no body knows the future of the same.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X