ಈಗಲ್‌ಟನ್ ರೆಸಾರ್ಟ್‌ನ ಪೊಲೀಸ್ ಭದ್ರತೆ ವಾಪಸ್, ಬಿಎಸ್‌ವೈ ತಂತ್ರ?
ಬಿಡದಿ, ಮೇ 17: ಕಾಂಗ್ರೆಸ್ ಶಾಸಕರು ತಂಗಿರುವ ಈಗಲ್‌ಟನ್ ರೆಸಾರ್ಟ್‌ಗೆ ನೀಡಲಾಗಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆದುಕೊಳ್ಳಲಾಗಿದೆ. ಯಡಿಯೂರಪ್ಪ ಅಧಿಕಾರ ಸ್ವೀಕಾರ ಮಾಡಿದ ಬೆನ್ನಲ್ಲೇ ನಡೆದಿರುವ ಈ ಬೆಳವಣಿಗೆ ಕುತೂಹಲ ಕೆರಳಿಸಿದೆ.
ಕುದುರೆ ವ್ಯಾಪಾರದಿಂದ ಪಾರಾಗಲು ಬಿಡದಿ ಬಳಿ ಇರುವ ಈಗಲ್‌ಟನ್ ರೆಸಾರ್ಟ್‌ನಲ್ಲಿ ನಿನ್ನೆ ರಾತ್ರಿಯಿಂದಲೂ ಹಲವು ಶಾಸಕರು ವಾಸ್ತವ್ಯ ಹೂಡಿದ್ದಾರೆ, ನಿನ್ನೆ ರಾತ್ರಿಯಿಂದಲೂ ರೆಸಾರ್ಟ್‌ಗೆ ಭಾರಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು ಆದರೆ ಇಂದು ಬೆಳಿಗ್ಗೆ ಯಡಿಯೂರಪ್ಪ ಅವರು ಅಧಿಕಾರ ಸ್ವೀಕಾರ ಮಾಡಿದ ಕೆಲವೇ ಗಂಟೆಗಳಲ್ಲಿ ಭದ್ರತೆಯನ್ನು ವಾಪಾಸ್ ಪಡೆಯಲಾಗಿದೆ.
ಪೊಲೀಸರು ಮಾಧ್ಯಮದವರನ್ನೂ ಸೇರಿದಂತೆ ಯಾರನ್ನೂ ರೆಸಾರ್ಟ್ ಒಳಗೆ ಮತ್ತು ಹೊರಗೆ ಹೋಗಲು ಬಿಡದೆ ಕಾವಲು ನಿಂತಿದ್ದರು ಆದರೆ ಈಗ ಪೊಲೀಸ್ ಭದ್ರತೆ ವಾಪಾಸ್ ಪಡೆದಿರುವ ಬೆನ್ನಲ್ಲೆ ಕಾಂಗ್ರೆಸ್‌ನ ಕಾರ್ಯಕರ್ತರೆ ಈಗಲ್‌ಟನ್ ರೆಸಾರ್ಟ್ ಮುಂದೆ ನಿಂತು ಕಾವಲು ಕಾಯುತ್ತಿದ್ದಾರೆ.

ಬಹುಮತ ಸಾಬೀತು ಪಡೆಸಲು ನಾನಾ ಪ್ರಯತ್ನ ಮಾಡುತ್ತಿರುವ ಬಿಜೆಪಿಗೆ ಕಾಂಗ್ರೆಸ್ ಅಥವಾ ಜೆಡಿಎಸ್‌ನ ಶಾಸಕರನ್ನು ಸಂಪರ್ಕ ಮಾಡಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಇದು ಯಡಿಯೂರಪ್ಪ ಅವರ ತಂತ್ರವಾಗಿದೆ, ಭದ್ರತೆ ತೆಗೆದುಹಾಕಿ ನಂತರ ಶಾಸಕರನ್ನು ವಾಮಮಾರ್ಗದಲ್ಲಿಯಾದರೂ ಸಂಪರ್ಕ ಮಾಡುವ ಪ್ರಯತ್ನದ ಭಾಗವಿದು ಎಂಬ ಅನುಮಾನ ಮೂಡಿಸಿದೆ.

ಈಗಲ್‌ಟನ್ ರೆಸಾರ್ಟ್‌ನ ಭದ್ರತೆ ವಾಪಾಸ್ ತೆಗೆದುಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರನ್ನು ಕೊಚ್ಚಿಗೆ ವರ್ಗಾಯಿಸಲು ಕೂಡ ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಶಾಸಕರನ್ನು ಕಾವಲು ಕಾಯುವ ಜವಾಬ್ದಾರಿಯನ್ನು ಸಂಸದ ಡಿ.ಕೆ.ಸುರೇಶ್ ಅವರಿಗೆ ನೀಡಲಾಗಿದೆ.











Click it and Unblock the Notifications