ರಾಜಕಾರಣಿ ಹೆಸರಲ್ಲಿ ಕೊರಿಯರ್‌ನಲ್ಲಿ ಬಂತು ವಿಷಪೂರಿತ ಸ್ವೀಟ್ ಬಾಕ್ಸ್, ಆಮೇಲೆ ನಡೆದಿದ್ದೇನು?
ಶುಭ ಸಂದರ್ಭಗಳಲ್ಲಿ ಶುಭಾಶಯಗಳನ್ನು ಕೋರುವ ಸೋಗಿನಲ್ಲಿ ಸಹಿ ಹಂಚುವ ಪದ್ಧತಿ ಮೊದಲಿನಿಂದಲೂ ಇದೆ. ಆದರೆ ಕಿಡಿಗೇಡಿಗಳು ರಾಜ್ಯದ ರಾಜಕಾರಣಿಯೊಬ್ಬರ ಹೆಸರಿನಲ್ಲಿ ವಿಷಪೂರಿತ ಸ್ವೀಟ್ ಬಾಕ್ಸ್‌ಗಳನ್ನು ಕೊರಿಯರ್‌ನಲ್ಲಿ ಕಳಿಸಿಕೊಟ್ಟಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ವಿಧಾನಪರಿಷತ್ ಸದಸ್ಯ ಧನಂಜಯ ಸರ್ಜಿ ಅವರ ಹೆಸರನಲ್ಲಿ ಈ ಸ್ವೀಟ್ ಬಾಕ್ಸ್‌ಗಳನ್ನು ಗಣ್ಯ ವ್ಯಕ್ತಿಗಳಿಗೆ ಕೊರಿಯರ್ ಮೂಲಕ ಕಳಿಸಿದ್ದಾರೆ ಎಂದು ತಿಳಿದುಬಂದಿದೆ. ಹೊಸ ವರ್ಷಕ್ಕೆ ಶುಭಾಶಯ ಕೋರುವ ಸೋಗಿನಲ್ಲಿ ಈ ದುಷ್ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ.

ವಿಧಾನಪರಿಷತ್ ಸದಸ್ಯ ಧನಂಜಯ ಸರ್ಜಿ ಶಿವಮೊಗ್ಗದ ಮೂವರು ಗಣ್ಯ ವ್ಯಕ್ತಿಗಳಿಗೆ ಈ ವಿಷಪೂರಿತ ಸ್ವೀಟ್ ಬಾಕ್ಸ್‌ಗಳನ್ನು ಕೊರಿಯರ್‌ನಲ್ಲಿ ಕಳಿಸಿದ್ದಾರೆ. ಪಾರ್ಸೆಲ್ ಸಂಸ್ಥೆಗೆ ಭದ್ರಾವತಿ ಮೂಲದಿಂದ ಈ ಸ್ವೀಟ್ ಬಾಕ್ಸ್‌ಗಳು ಬಂದಿರುವುದು ಪತ್ತೆಯಾಗಿದೆ.
ಇನ್ನು ಎಂದಿನಂತೆ ಪಾರ್ಸೆಲ್‌ಗಳನ್ನು ಅವರವರ ವಿಳಾಸಕ್ಕೆ ಡೆಲಿವರಿ ನೀಡಲಾಗಿದ್ದು, ಹೊಸ ವರ್ಷ ಆದ ಕಾರಣ ರಾಜಕಾರಣಿಯೇ ಈ ಸ್ವೀಟ್ ಬಾಕ್ಸ್‌ಗಳನ್ನು ಕಳಿಸಿರಬಹುದು ಎಂದು ನಂಬಿದ್ದಾರೆ. ಒಬ್ಬರು ಸ್ವೀಟ್ ಅನ್ನು ಬಾಯಲ್ಲಿ ಇಟ್ಟುಕೊಂಡ ಕೂಡಲೇ ಕಹಿ ಅನುಭವವಾಗಿದೆ. ಕೂಡಲೇ ಅದನ್ನು ತಿನ್ನದೇ ಉಗುಳಿದ ಕಾರಣ ಬಚಾವ್ ಆಗಿದ್ದಾರೆ ಎನ್ನಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆ ಎಂಎಲ್ಸಿ ಧನಂಜಯ ಸರ್ಜಿ ಅವರು ಈ ಸ್ವೀಟ್ ಬಾಕ್ಸ್‌ಗಳನ್ನು ಪರಿಶೀಲನೆಗಾಗಿ ಲ್ಯಾಬ್‌ಗೆ ಕಳುಹಿಸಿದ್ದರು. ಈ ರೀತಿ ರಾಜಕಾರಣಿ ಹೆಸರಿನಲ್ಲಿ ವಿಷಪೂರಿತ ಸ್ವೀಟ್ ಬಾಕ್ಸ್‌ಗಳನ್ನು ಹಂಚಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಎಸ್‌ಪಿಗೆ ಅವರು ದೂರು ಕೂಡ ನೀಡಿದ್ದಾರೆ.

ಅದೃಷ್ಟವಶಾತ್ ಈ ಸ್ವೀಟ್ ತಿಂದ ತಕ್ಷಣವೇ ಸಂಶಯ ವ್ಯಕ್ತವಾಗಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ ಉಳಿದವರು ಕೂಡ ಈ ಸ್ವೀಟ್ ತಿನ್ನುವ ಗೋಜಿಗೂ ಹೋಗಿಲ್ಲ. ಹೀಗಾಗಿ ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎಂಎಲ್ಸಿ ಧನಂಜಯ ಸರ್ಜಿ, ನನ್ನ ಹೆಸರಲ್ಲಿ ಯಾರೋ ಕಿಡಿಗೇಡಿಗಳು ಕಹಿ ಅಂಶ ಇರುವ ಸ್ವೀಟ್ ಬಾಕ್ಸ್‌ಗಳನ್ನು ಕೊರಿಯರ್ ಮೂಲಕ ಕಳಿಸಿದ್ದಾರೆ. ಒಂದು ವೇಳೆ ಯಾರಾದರೂ ಮಕ್ಕಳು ತಿಳಿಯದೆ ಈ ಸ್ವೀಟ್ ತಿಂದಿದ್ದರೆ ದೊಡ್ಡ ಅನಾಹುತವೇ ನಡೆದು ಹೋಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವುದಾಗಿ ಹೇಳಿದ್ದಾರೆ. ಇಂತಹ ಕೆಲಸ ಮಾಡಿದ ಕಿಡಿಗೇಡಿಗೆ ತಕ್ಕ ಪಾಠ ಮಾಡಲೇಬೇಕು ಎಂದು ಗರಂ ಆಗಿದ್ದಾರೆ. ಎಲ್ಲರೂ ಹಬ್ಬಗಳ ಸಂಭ್ರಮದಲ್ಲಿ ಸಿಹಿಹಂಚುವ ಕೆಲಸ ಮಾಡುತ್ತಾರೆ. ಈ ರೀತಿ ದುರುದ್ದೇಶಪೂರ್ವಕವಾಗಿ ವಿಷಪೂರಿತ ಸ್ವೀಟ್‌ಗಳನ್ನು ಹಂಚಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದಿದ್ದಾರೆ. ಈ ವಿಚಾರ ಬೆಳಕಿಗೆ ಬಂದ ನಂತರ ಉಡುಗೊರೆಯಾಗಿ ಬರುವ ಸ್ವೀಟ್ ತಿನ್ನಲು ಜನ ಭಯ ಬೀಳುತ್ತಿದ್ದಾರಂತೆ.












Click it and Unblock the Notifications