ಫೋಕ್ಸೋ ಪ್ರಕರಣ: ಸಂತ್ರಸ್ತೆಯ ಪಾಟೀ ಸವಾಲಿಗೂ ಅವಕಾಶವಿದೆಯೆಂದ ಹೈಕೋರ್ಟ್
ಬೆಂಗಳೂರು ಮಾ.26. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೋ) ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಒಂದು ವೇಳೆ ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯಹೇಳಿದರೆ, ಅವರನ್ನೂ ಪಾಟೀ ಸವಾಲಿಗೆ ಒಳಪಡಿಸಲು ಅವಕಾಶವಿದೆ ಎಂದು ಹೈಕೋರ್ಟ್ ಆದೇಶ ನೀಡಿದೆ.
ಅಲ್ಲದೆ ಈ ಕುರಿತು ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಪೋಕ್ಸೋ ಪ್ರಕರಣವೊಂದರಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದ ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಒಳಪಡಿಸಲು ಅನುಮತಿ ನಿರಾಕರಿಸಿದ್ದ ಚಾಮರಾಜನಗರ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ನ್ಯಾಯಾಲಯದ ಆದೇಶವೇನು?
"ಪೋಕ್ಸೋ ಕಾಯ್ದೆ-2012ರ ಸೆಕ್ಷನ್ 33(2)ರ ಪ್ರಕಾರ ಅಪ್ರಾಪ್ತ ಸಂತ್ರಸ್ತರು ಪ್ರತಿಕೂಲ ಸಾಕ್ಷಿ ಹೇಳಿದಾಗ ಅವರನ್ನು ಪಾಟೀ ಸವಾಲಿಗೊಳಪಡಿಸಲು ಅವಕಾಶವಿದೆ. ಆದರೆ, ಪಾಟೀ ಸವಾಲಿನ ವೇಳೆ ಪ್ರಶ್ನೆಗಳನ್ನು ಸಂತ್ರಸ್ತೆಗೆ ನೇರವಾಗಿ ಕೇಳುವಂತಿಲ್ಲ. ಸರ್ಕಾರಿ ಅಭಿಯೋಜಕರು ಅಥವಾ ಇತರ ಆರೋಪಿಗಳ ಪರ ವಕೀಲರು ವಿಶೇಷ ನ್ಯಾಯಾಲಯದ ಮುಂದೆ ಪ್ರಶ್ನೆಗಳನ್ನಿಡಬೇಕು, ಅದೇ ಪ್ರಶ್ನೆಗಳನ್ನು ನ್ಯಾಯಾಲಯ ಸಂತ್ರಸ್ತರ ಮುಂದಿಟ್ಟು, ಅವರಿಂದ ಉತ್ತರ ಪಡೆಯಬೇಕು. ಸೆಕ್ಷನ್ 33(2) ಪ್ರಕಾರ ಇದು ಕಡ್ಡಾಯ ಪ್ರಕ್ರಿಯೆಯೂ ಆಗಿದೆ'' ಎಂದು ನ್ಯಾಯಾಲಯ ಹೇಳಿದೆ.

ಪೋಕ್ಸೋ ಕಾಯ್ದೆಯ ನಿಯಮಗಳ ಅನುಸಾರವೇ ಸಂತ್ರಸ್ತರ ಪಾಟೀ ಸವಾಲು ನಡೆಸಬೇಕು. ಈ ವೇಳೆ ನ್ಯಾಯಾಧೀಶರೂ ಎಚ್ಚರದಿಂದಿರಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶಿಸಿದೆ.
ಪಾಟೀ ಸವಾಲು ನಡೆಸಲು ಸರ್ಕಾರಕ್ಕೆ ಅನುಮತಿ ನಿರಾಕರಿಸಿ ವಿಚಾರಣಾ ಕೋರ್ಟ್ ಹೊರಡಿಸಿದ್ದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಒಳಪಡಿಸಲು ಸರ್ಕಾರಿ ಅಭಿಯೋಜಕರಿಗೆ ಅನುಮತಿ ನೀಡಲು ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ:
2018ರ ಡಿ.3ರಂದು ಬಾಲಕಿಯೊಬ್ಬಳಿಗೆ ಮದುವೆ ಮಾಡಲಾಗಿತ್ತು. ಅಪ್ರಾಪ್ತೆಯೆಂದು ತಿಳಿದಿದ್ದರೂ ಆಕೆಯೊಂದಿಗೆ ಪತಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂಬ ಆರೋಪದಲ್ಲಿ 2019ರರ ಏ.29ರಂದು ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪೊಲೀಸರು ಐಪಿಸಿ, ಪೋಕ್ಸೋ ಕಾಯ್ದೆ ಹಾಗೂ ಬಾಲ್ಯ ವಿವಾಹ ತಡೆ ಕಾಯ್ದೆಯ ನಾನಾ ಸೆಕ್ಷನ್‌ಗಳಡಿಯಲ್ಲಿ ಅಪ್ರಾಪ್ತೆಯ ಪತಿ ಮತ್ತು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧಿಸಿದ ವಿಚಾರಣಾ ನ್ಯಾಯಾಲಯದಲ್ಲಿ 2019ರ ಸೆ.16ರಂದು ಸಾಕ್ಷ್ಯಗಳ ಹೇಳಿಕೆ ದಾಖಲಿಸಿಕೊಳ್ಳುವಾಗ, ಸಂತ್ರಸ್ತೆ ಪ್ರತಿಕೂಲ ಸಾಕ್ಷ್ಯ ಹೇಳಿದ್ದರು. ಹಾಗಾಗಿ ಸರ್ಕಾರ ಸಂತ್ರಸ್ತೆಯನ್ನು ಪಾಟೀ ಸವಾಲಿಗೆ ಗುರಿಪಡಿಸಲು ವಿಚಾರಣಾ ನ್ಯಾಯಾಲಯದ ಅನುಮತಿ ಕೇಳಿತ್ತು. ಆದರೆ, ವಿಚಾರಣಾ ಕೋರ್ಟ್ ಅನುಮತಿ ನೀಡಲು ನಿರಾಕರಿಸಿತ್ತು.












Click it and Unblock the Notifications