Mann Ki Baat: ಡಿಜಿಟಲ್ ಅರೆಸ್ಟ್, ಕರ್ನಾಟಕದ ವಂಚನೆ ಪ್ರಸ್ತಾಪಿಸಿದ ಮೋದಿ
ಬೆಂಗಳೂರು, ಅಕ್ಟೋಬರ್ 27: ಡಿಜಿಟಲ್ ಅರೆಸ್ಟ್ ಪದ ಇತ್ತೀಚೆಗೆ ತೀರಾ ಸಾಮಾನ್ಯವಾಗಿದೆ. ಈ ಮಾದರಿ ಸೈಬರ್ ವಂಚನೆಯಿಂದ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿರುವ ಪ್ರಕರಣಗಳು ಕರ್ನಾಟಕದಲ್ಲಿಯೂ ನಡೆದಿವೆ. ಪ್ರಧಾನಿ ನರೇಂದ್ರ ಮೋದಿ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ಈ ಕುರಿತು ಮಾತನಾಡಿದ್ದಾರೆ. ಕರ್ನಾಟಕದ ಪ್ರಕರಣವನ್ನು ಉಲ್ಲೇಖ ಮಾಡಿ ಈ ಕುರಿತು ಎಚ್ಚರಿಕೆಯಿಂದ ಇರುವ ಕುರಿತು ಜನರಿಗೆ ಸಂದೇಶವನ್ನು ನೀಡಿದ್ದಾರೆ.
ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ 'ಮನ್ ಕಿ ಬಾತ್' 115ನೇ ಸಂಚಿಕೆಯ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು. ನನ್ನ ಪ್ರಿಯ ದೇಶವಾಸಿಗಳೇ, ನಿಮಗೆ ನಾನು ಒಂದು ಆಡಿಯೋ ಕೇಳಿಸುತ್ತೇನೆ ಎಂದು ಮನ್ ಕಿ ಬಾತ್‌ನಲ್ಲಿ ಆಡಿಯೋವನ್ನು ಪ್ಲೇ ಮಾಡಿದರು.

ಈ ಆಡಿಯೋ ಕೇವಲ ಮಾಹಿತಿಗಾಗಿ ಅಲ್ಲ, ಇದು ಕೇವಲ ಮನರಂಜನೆಯ ಆಡಿಯೋ ಅಲ್ಲ, ಈ ಆಡಿಯೋವನ್ನು ಆಳವಾದ ಕಾಳಜಿಯೊಂದಿಗೆ, ಚಿಂತನೆಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನೀವು ಈಗ ಕೇಳಿದ ಸಂಭಾಷಣೆಯು ಡಿಜಿಟಲ್ ಅರೆಸ್ಟ್ ವಂಚನೆಯ ಕುರಿತಾಗಿದೆ ಎಂದು ಮೋದಿ ಹೇಳಿದರು.
ಆಡಿಯೋ ವಿವರ
ವಂಚಕ 1: ಹಲೋ
ನೋಂದವರು : ಸರ್, ನಮಸ್ಕಾರ ಸರ್.
ವಂಚಕ 1: ಹಲೋ
ನೋಂದವರು: ಸಾರ್ ಹೇಳಿ ಸಾರ್
ವಂಚಕ 1: ನೋಡಿ ನೀವು ನನಗೆ ಎಫ್‌ಐಆರ್ ಸಂಖ್ಯೆ ಕಳುಹಿಸಿದ್ದೀರಲ್ಲ, ಇದರ ವಿರುದ್ಧ ನಮ್ಮ ಬಳಿ 17 ದೂರುಗಳಿವೆ, ನೀವು ಈ ಸಂಖ್ಯೆಯನ್ನು ಬಳಸುತ್ತಿದ್ದೀರಾ?
ನೋಂದವರು: ನಾನು ಇದನ್ನು ಬಳಸುವುದಿಲ್ಲ ಸರ್.
ವಂಚಕ 1: ಈಗ ನೀವು ಎಲ್ಲಿಂದ ಮಾತನಾಡುತ್ತಿದ್ದೀರಿ?
ನೋಂದವರು: ಸಾರ್ ಕರ್ನಾಟಕ ಸಾರ್, ಮನೆಯಲ್ಲಿದ್ದೇನೆ ಸಾರ್.
ವಂಚಕ 1: ಸರಿ, ತಮ್ಮ ಹೇಳಿಕೆಯನ್ನು ದಾಖಲಿಸಿ, ಇದರಿಂದ ಈ ಸಂಖ್ಯೆಯನ್ನು ಬ್ಲಾಕ್ ಮಾಡಲಾಗುವುದು. ಭವಿಷ್ಯದಲ್ಲಿ ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ, ಸರಿನಾ
ನೋಂದವರು: ಸರಿ ಸರ್
ವಂಚಕ 1: ನಾನು ಈಗಲೇ ನಿಮ್ಮನ್ನು ಕನೆಕ್ಟ್ ಮಾಡುತ್ತೇನೆ, ಅವರು ನಿಮ್ಮ ತನಿಖಾ ಅಧಿಕಾರಿಗಳು. ದಯವಿಟ್ಟು ನಿಮ್ಮ ಹೇಳಿಕೆಯನ್ನು ರೆಕಾರ್ಡ್ ಮಾಡಿ ಇದರಿಂದ ಈ ಸಂಖ್ಯೆಯನ್ನು ಬ್ಲಾಕ್ ಮಾಡಲಾಗುವುದು, ಸರಿನಾ.
ನೋಂದವರು: ಆಯಿತು ಸರ್
ವಂಚಕ1: ಸರಿ, ಹೇಳಿ, ನಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ? ನಿಮ್ಮ ಆಧಾರ್ ಕಾರ್ಡ್ ಅನ್ನು ತೋರಿಸಿ, ಪರಿಶೀಲಿಸಬೇಕಿದೆ.
ನೋಂದವರು: ಸಾರ್, ನನ್ನ ಬಳಿ ಈಗ ಆಧಾರ್ ಕಾರ್ಡ್ ಇಲ್ಲ, ದಯವಿಟ್ಟು ಸಾರ್.
ವಂಚಕ 1: ಫೋನ್‌ನಲ್ಲಿ, ನಿಮ್ಮ ಫೋನ್‌ನಲ್ಲಿದೆಯೇ?
ನೋಂದವರು: ಇಲ್ಲ ಸಾರ್
ವಂಚಕ 1: ನಿಮ್ಮ ಫೋನ್‌ನಲ್ಲಿ ಆಧಾರ್ ಕಾರ್ಡ್‌ನ ಚಿತ್ರವಿಲ್ಲವೇ?
ನೋಂದವರು: ಇಲ್ಲ ಸಾರ್
ವಂಚಕ 1: ನಿಮಗೆ ಸಂಖ್ಯೆ ನೆನಪಿದೆಯೇ?
ನೋಂದವರು: ಸಾರ್ ಇಲ್ಲ ಸಾರ್, ನಂಬರ್ ಕೂಡ ನೆನಪಿಲ್ಲ ಸಾರ್.
ವಂಚಕ 1: ನಾವು ಪರಿಶೀಲಿಸಬೇಕಾಗಿದೆ, ಸರಿನಾ, ಪರಿಶೀಲಿಸೋದಿಕ್ಕೆ.
ನೋಂದವರು: ಇಲ್ಲ ಸಾರ್
ವಂಚಕ 1: ಭಯಪಡಬೇಡಿ, ಹೆದರಬೇಡಿ, ನೀವು ಏನೂ ಮಾಡದಿದ್ದರೆ ಹೆದರಬೇಡಿ.
ನೋಂದವರು: ಆಯ್ತು ಸಾರ್, ಆಯ್ತು ಸಾರ್
ವಂಚಕ 1: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಪರಿಶೀಲಿಸಲು ಅದನ್ನು ನನಗೆ ತೋರಿಸಿ.
ನೋಂದವರು: ಇಲ್ಲ, ಇಲ್ಲ ಸಾರ್, ನಾನು ಹಳ್ಳಿಗೆ ಬಂದಿದ್ದೇನೆ ಸಾರ್, ಅಲ್ಲಿ ಸರ್ ಮನೆಯಲ್ಲಿದೆ ಸರ್.
ವಂಚಕ 1: ಸರಿ
ವಂಚಕ 2 : ಮೇ ಐ ಕಮ್ ಇನ್ ಸರ್
ವಂಚಕ 1: ಕಮ್ ಇನ್
ವಂಚಕ 2: ಜೈ ಹಿಂದ್
ವಂಚಕ 1: ಜೈ ಹಿಂದ್
ವಂಚಕ 1: ಪ್ರೋಟೋಕಾಲ್ ಪ್ರಕಾರ ಈ ವ್ಯಕ್ತಿಯ one sided video call record ಮಾಡಿ, ಒಕೆ ಹೀಗೆ ಅಡಿಯೋವಿದೆ.
ಸಂತ್ರಸ್ತೆ ಮತ್ತು ವಂಚಕನ ನಡುವೆ ಈ ಸಂಭಾಷಣೆ ನಡೆದಿದೆ ಎಂದು ಮೋದಿ ಮನ್ ಕಿ ಬಾತ್‌ನಲ್ಲಿ ಹೇಳಿದರು. ಡಿಜಿಟಲ್ ಅರೆಸ್ಟ್‌ನ ವಂಚನೆಯ ಪ್ರಕರಣದಲ್ಲಿ ಕರೆ ಮಾಡುವ ವ್ಯಕ್ತಿಗಳು ಕೆಲವೊಮ್ಮೆ ಪೊಲೀಸರು, ಕೆಲವೊಮ್ಮೆ ಸಿಬಿಐ, ಕೆಲವೊಮ್ಮೆ ನಾರ್ಕೋಟಿಕ್ಸ್, ಕೆಲವೊಮ್ಮೆ ಆರ್‌ಬಿಐ ಹೀಗೆ ವಿವಿಧ ಹೆಸರುಗಳನ್ನು ಹೇಳುತ್ತಾರೆ ಮತ್ತು ಅಧಿಕಾರಿಗಳಂತೆ ಮಾತನಾಡುತ್ತಾರೆ ಮತ್ತು ತುಂಬಾ ವಿಶ್ವಾಸದಿಂದ ಹೀಗೆ ಮಾಡುತ್ತಾರೆ. ಈ ವಿಷಯದ ಬಗ್ಗೆ ಮಾತನಾಡಲೇಬೇಕೆಂದು ಮನ್ ಕಿ ಬಾತ್‌ನ ಬಹಳಷ್ಟು ಜನರು ಹೇಳಿದ್ದಾರೆ. ಬನ್ನಿ, ಈ ವಂಚನೆ ಮಾಡುವ ಗ್ಯಾಂಗ್ ಹೇಗೆ ಕೆಲಸ ಮಾಡುತ್ತದೆ, ಈ ಅಪಾಯಕಾರಿ ಆಟವೇನೆಂದು ನಾನು ನಿಮಗೆ ಹೇಳುತ್ತೇನೆ ಎಂದು ಮೋದಿ ಹೇಳಿದರು.
ಮೋದಿ ಭಾಷಣದಲ್ಲಿ ನೀವು ಇದರ ಕುರಿತು ಅರ್ಥಮಾಡಿಕೊಳ್ಳುವುದು ಮತ್ತು ಇದನ್ನು ಇತರರಿಗೂ ತಿಳಿಸಿ ಹೇಳುವುದು ಕೂಡಾ ಅತ್ಯಂತ ಅಗತ್ಯವಾಗಿದೆ. ಅವರ ಮೊದಲ ಉಪಾಯ ನಿಮ್ಮ ವೈಯಕ್ತಿಕ ಮಾಹಿತಿಯೆಲ್ಲವನ್ನೂ ಅವರು ಸಂಗ್ರಹಿಸಿರುತ್ತಾರೆ. ನೀವು ಕಳೆದ ತಿಂಗಳು ಗೋವಾಗೆ ಹೋಗಿದ್ದಿರಲ್ಲವೇ?, ನಿಮ್ಮ ಮಗಳು ದೆಹಲಿಯಲ್ಲಿ ಓದುತ್ತಿದ್ದಾಳಲ್ಲವೇ? ನೀವೇ ಆಶ್ಚರ್ಯಚಕಿತರಾಗುವ ರೀತಿಯಲ್ಲಿ ನಿಮ್ಮೆಲ್ಲಾ ಮಾಹಿತಿಯನ್ನು ಅವರು ಕಲೆ ಹಾಕಿ ಇರಿಸಿಕೊಂಡಿರುತ್ತಾರೆ. ಎರಡನೆಯ ಉಪಾಯ ಭಯದ ವಾತಾವರಣ ಉಂಟುಮಾಡುವುದು, ಸಮವಸ್ತ್ರ, ಸರ್ಕಾರಿ ಕಛೇರಿಯ ಸೆಟಪ್, ಕಾನೂನಿನ ವಿಭಾಗಗಳು ಹೀಗೆ ದೂರವಾಣಿಯ ಮೂಲಕ ಅವರು ನಿಮ್ಮನ್ನು ಅದೆಷ್ಟು ಹೆದರಿಸುತ್ತಾರೆಂದರೆ ನಿಮಗೆ ಆಲೋಚಿಸಲೂ ಸಾಧ್ಯವಾಗುವುದಿಲ್ಲ.
ನಂತರ ಅವರು ಮಾಡುವ ಮೂರನೇ ಕೆಲಸ ಸಮಯದ ಒತ್ತಡ ಹಾಕುತ್ತಾರೆ, ಈಗಲೇ ನಿರ್ಧಾರಕ್ಕೆ ಬರಬೇಕು, ಇಲ್ಲದಿದ್ದಾರೆ ಬಂಧಿಸಬೇಕಾಗುತ್ತದೆ ಎಂದು ಮಾನಸಿಕವಾಗಿ ಒತ್ತಡ ಹೇರುತ್ತಾರೆ. ಆಗ ಜನರು ಹೆದರಿಬಿಡುತ್ತಾರೆ. ಡಿಜಿಟಲ್ ಅರೆಸ್ಟ್ ವಂಚನೆಗೆ ಬಲಿಯಾದವರ ಪೈಕಿ ಪ್ರತಿಯೊಂದು ವರ್ಗದ, ಪ್ರತಿಯೊಂದು ವಯಸ್ಸಿನ ಜನರು ಸೇರಿದ್ದಾರೆ. ಜನರು ಭಯದ ಕಾರಣದಿಂದಲೇ ಶ್ರಮದಿಂದ ಗಳಿಸಿದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ನಿಮಗೆ ಎಂದಾದರೂ ಈ ರೀತಿಯ ಕರೆ ಬಂದರೆ ನೀವು ಹೆದರಬಾರದು. ಯಾವುದೇ ತನಿಖಾ ಸಂಸ್ಥೆ, ದೂರವಾಣಿ ಕರೆ ಅಥವಾ ವಿಡಿಯೋ ಕರೆಯ ಮೂಲಕ ಈ ರೀತಿಯ ವಿಚಾರಣೆಯನ್ನು ಕೈಗೊಳ್ಳುವುದಿಲ್ಲ ಎನ್ನುವ ವಿಷಯ ನಿಮಗೆ ತಿಳಿದಿರಬೇಕು. ನಾನು ನಿಮಗೆ ಡಿಜಿಟಲ್ ಭದ್ರತೆಯ ಮೂರು ಹಂತಗಳನ್ನು ಹೇಳುತ್ತೇನೆ ಎಂದು ಮೋದಿ ವಿವರಣೆ ನೀಡಿದರು.
ಒಟ್ಟು 3 ಹಂತಗಳಿವೆ: ಮೋದಿ ಮನ್ ಕಿ ಬಾತ್‌ನಲ್ಲಿ ಇಂತಹ ಸಂದರ್ಭದಲ್ಲಿ ಒಟ್ಟು ಮೂರು ಹಂತಗಳನ್ನು ಅನುಸರಿಸಿ ತಾಳಿ, ಯೋಚಿಸಿ, ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು. ಕರೆ ಬಂದ ತಕ್ಷಣ, ತಾಳಿ, ಗಾಬರಿಯಾಗಬೇಡಿ, ಶಾಂತವಾಗಿರಿ, ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ, ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿ ನೀಡಬೇಡಿ. ಸಾಧ್ಯವಾದರೆ ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ ಮತ್ತು ಖಂಡಿತವಾಗಿಯೂ ಕರೆ ರೆಕಾರ್ಡ್ ಮಾಡಿ.
ಎರಡನೇ ಹಂತ ಆಲೋಚಿಸಿ. ಯಾವುದೇ ಸರ್ಕಾರಿ ಸಂಸ್ಥೆ ದೂರವಾಣಿ ಮೂಲಕ ಇಂತಹ ಬೆದರಿಕೆ ಹಾಕುವುದಿಲ್ಲ, ಅಥವಾ ವಿಡಿಯೋ ಕರೆಯ ಮೂಲಕ ವಿಚಾರಣೆ ಮಾಡುವುದಿಲ್ಲ ಅಥವಾ ಈ ರೀತಿ ಹಣ ಕೇಳುವುದಿಲ್ಲ. ಹೆದರಿಕೆಯಾದಲ್ಲಿ ಏನೋ ತಪ್ಪಾಗಿದೆ ಎಂದು ಅರ್ಥ ಮಾಡಿಕೊಳ್ಳಿ. ಮೊದಲ, ಎರಡನೇ ಹಂತದ ನಂತರ ಈಗ ಮೂರನೇ ಹಂತದಲ್ಲಿ ಕ್ರಮ ಕೈಗೊಳ್ಳಿ.
ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಸಂಖ್ಯೆ ಡಯಲ್ ಮಾಡಿ, cybercrime.gov.in ನಲ್ಲಿ ವರದಿ ಮಾಡಿ, ಕುಟುಂಬ ಮತ್ತು ಪೊಲೀಸರಿಗೆ ತಿಳಿಯಪಡಿಸಿ, ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಇರಿಸಿ. ತಾಳಿ, ಆಲೋಚಿಸಿ ಮತ್ತು ಕ್ರಮ ಕೈಗೊಳ್ಳಿ ಈ ಮೂರು ಹಂತಗಳು ನಿಮ್ಮ ಡಿಜಿಟಲ್ ಸುರಕ್ಷತೆಯ ರಕ್ಷಕರಾಗುತ್ತವೆ ಎಂದು ಮೋದಿ ಹೇಳಿದರು.
ಸ್ನೇಹಿತರೆ, ನಾನು ಮತ್ತೊಮ್ಮೆ ಹೇಳುತ್ತೇನೆ ಡಿಜಿಟಲ್ ಅರೆಸ್ಟ್‌ನಂತಹ ಯಾವುದೇ ವ್ಯವಸ್ಥೆ ಕಾನೂನಿನಲ್ಲಿ ಇಲ್ಲ, ಇದು ಕೇವಲ ವಂಚನೆ, ಸುಳ್ಳು, ಮೋಸ ಮತ್ತು ಕಿಡಿಗೇಡಿಗಳ ಗುಂಪಿನ ಕೆಲಸ ಮತ್ತು ಇದನ್ನು ಯಾರು ಮಾಡುತ್ತಿದ್ದಾರೋ ಅವರು ಸಮಾಜದ ಶತ್ರುಗಳು. ಈ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟಲು, ಎಲ್ಲಾ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿವೆ. ಈ ಏಜೆನ್ಸಿಗಳ ನಡುವೆ ಸಮನ್ವಯ ಉಂಟುಮಾಡಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರ ರಚಿಸಲಾಗಿದೆ. ಇಂತಹ ವಂಚನೆಗಳನ್ನು ಮಾಡುವ ಸಾವಿರಾರು ವಿಡಿಯೋ ಕಾಲಿಂಗ್ ಐಡಿಗಳನ್ನು ಏಜೆನ್ಸಿಗಳ ಮೂಲಕ ನಿರ್ಬಂಧಿಸಲಾಗಿದೆ. ಲಕ್ಷಾಂತರ ಸಿಮ್ ಕಾರ್ಡ್, ಮೊಬೈಲ್ ಫೋನ್ ಮತ್ತು ಬ್ಯಾಂಕ್ ಖಾತೆಗಳನ್ನು ಕೂಡಾ ತಡೆಹಿಡಿಯಲಾಗಿದೆ ಎಂದು ಮೋದಿ ತಿಳಿಸಿದರು.
ಏಜೆನ್ಸಿಗಳು ತಮ್ಮ ಕೆಲಸ ಮಾಡುತ್ತಿವೆ ಆದರೆ, ಡಿಜಿಟಲ್ ಅರೆಸ್ಟ್‌ನ ಹೆಸರಿನಲ್ಲಿ ನಡೆಯುತ್ತಿರುವ ಹಗರಣದಿಂದ ತಪ್ಪಿಸಿಕೊಳ್ಳುವುದು ಬಹಳ ಅಗತ್ಯವಾಗಿದೆ. ಇದಕ್ಕೆ ಪ್ರತಿಯೊಬ್ಬ ನಾಗರಿಕ ಜಾಗರೂಕನಾಗಿರುವುದು ಬಹಳ ಮುಖ್ಯ. ಈ ರೀತಿಯ ಸೈಬರ್ ವಂಚನೆಗೆ ಬಲಿಯಾದ ಜನರು ಆ ವಿಷಯವನ್ನು ಹೆಚ್ಚು ಹೆಚ್ಚು ಜನರಿಗೆ ಹೇಳಬೇಕು. ಸೈಬರ್ ಹಗರಣದ ವಿರುದ್ಧದ ಅಭಿಯಾನದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಶಾಲೆ ಮತ್ತು ಕಾಲೇಜುಗಳನ್ನು ನಾನು ಮನವಿ ಮಾಡುತ್ತೇನೆ. ಸಮಾಜದ ಪ್ರತಿಯೊಬ್ಬರ ಪ್ರಯತ್ನದಿಂದ ಮಾತ್ರ ನಾವು ಈ ಸವಾಲನ್ನು ಎದುರಿಸಲು ಸಾಧ್ಯ ಎಂದರು.












Click it and Unblock the Notifications