PM Modi Dharwad Visit: ಪ್ರಧಾನಿಗೆ ನೀಡಲು ಸಿದ್ಧವಾಗಿದೆ ಪ್ರಸಿದ್ಧ 'ಕಲಘಟಗಿ ಬಣ್ಣದ ತೊಟ್ಟಿಲು'
ಹುಬ್ಬಳ್ಳಿ, ಮಾರ್ಚ್ 8: ಮಾರ್ಚ್ 12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಧಾರವಾಡಕ್ಕೆ ಭೇಟಿ ನೀಡಲಿದ್ದಾರೆ.
ಈ ವೇಳೆ ಅವರಿಗೆ ಉಡುಗೊರೆಯಾಗಿ ನೀಡಲು ತೊಟ್ಟಿಲೊಂದು ಪ್ರಸಿದ್ಧ ಕಲಘಟಗಿಯಲ್ಲಿ ಸಿದ್ಧವಾಗಿದೆ.
ಹೌದು, ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ಬಣ್ಣದ ತೊಟ್ಟಿಲು ಸಿದ್ಧವಾಗಿದೆ. ಇಲ್ಲಿನ ತೊಟ್ಟಿಲು ದೇಶ- ವಿದೇಶಗಳಲ್ಲೂ ಹೆಸರು ಮಾಡಿವೆ. ಕಲಘಟಗಿ ಬಣ್ಣದ ತೊಟ್ಟಿಲು ಸಾಕಷ್ಟು ವಿಶೇಷತೆಗಳನ್ನು ಹೊಂದಿವೆ. ಹೀಗಾಗಿ ಇದು ಅಚ್ಚು ಮೆಚ್ಚಾಗಿದ್ದು, ಇದನ್ನು ರಾಜಕಾರಣಿ, ಉದ್ಯಮಿಗಳು, ಗಣ್ಯರಿಗೆ ಉಡುಗೊರೆಯಾಗಿ ನೀಡುವ ಸಂಪ್ರದಾಯ ಹುಟ್ಟಿಕೊಂಡಿತು.

ಕಲಘಟಗಿ ಗ್ರಾಮದ ಕಲಾವಿದರೊಬ್ಬರ ಕೈಚಳಕದಿಂದ ಸಿದ್ಧಗೊಂಡಿರುವ ಈ ತೊಟ್ಟಿಲನ್ನು ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಡುಗೊರೆಯಾಗಿ ಸ್ವೀಕರಿಸಲಿದ್ದಾರೆ.
ಹಲವರ ಶ್ರಮದಿಂದ ಬಣ್ಣದ ತೊಟ್ಟಲು ತಯಾರು
ಅಂದಿನ ಕಾರ್ಯಕ್ರಮದಲ್ಲಿ ಹಾವೇರಿಯ ಯಾಲಕ್ಕಿ ಮಾಲೆ, ಸಿದ್ಧಾರೂಢ ಸ್ವಾಮೀಜಿಗಳ ಮೂರ್ತಿ, ಕಸೂತಿ ಶಾಲ್ ಜೊತೆಗೆ ಈ ತೊಟ್ಟಲು ಸೇರಿ ಹಲವು ಗಿಫ್ಟ್‌ಗಳು ಪ್ರಧಾನಿ ಮೋದಿಯವರ ಮನೆ ಸೇರಲಿವೆ. ಸುಮಾರು ಮೂರು ತಲೆಮಾರಿನಿಂದ ತೊಟ್ಟಿಲು ಮಾಡುವ ಕಾಯಕ ಕಲಘಟಗಿಯ ಮಾರುತಿ ಬಡಿಗೇರ್ ತೊಡಗಿದ್ದಾರೆ. ಅವರೊಂದಿಗೆ ಇನ್ನಿತರ ಕಲಾವಿದರು ಸೇರಿ ಈ ತೊಟ್ಟಿಲು ಸಿದ್ಧಪಡಿಸಿದ್ದಾರೆ.
ವಿಶೇಷತೆ ಏನು?: ತೊಟ್ಟಿಲ ಸುತ್ತ ಕೃಷ್ಣನ ಬಾಲ್ಯದ ಘಟನೆ ಅನಾವರಣಗೊಂಡಿವೆ. ಕೃಷ್ಣನ ಸುಂದರ ಕಲಾಕೃತಿಗಳು ಅರಳಿವೆ. ತೊಟ್ಟಿಲಿಗೆ ಜೇಡಿಮಣ್ಣು, ಅಂಟು, ಅರಗು ಬಳಸುವ ಮೂಲಕ ಹಿಂದಿನ ಪರಂಪರೆ, ಸಾಂಪ್ರದಾಯಕ್ಕೆ ಒತ್ತು ನೀಡಲಾಗಿದೆ. ಇಲ್ಲಿನ ತೊಟ್ಟಿಲು ನಟರಾದ ಯಶ್, ರಾಧಿಕಾ ಪಂಡಿತ್ ದಂಪತಿಗೂ ಸಹ ಉಡುಗೊರೆಯಾಗಿ ಹೋಗಿದೆ.
ಮಾರ್ಚ್ 12ರಂದು ಧಾರವಾಡದಲ್ಲಿ ಪ್ರಧಾನಮಂತ್ರಿಗಳು ಐಐಟಿ ಉದ್ಘಾಟಿಸಲಿದ್ದಾರೆ. ವಿಶ್ವದ ಅತಿದೊಡ್ಡ ರೈಲ್ವೆ ಪ್ಲಾಟ್ ಫಾರಂ ಅನ್ನು ಇದೇ ವೇಳೆ ಲೋಕಾರ್ಪಣೆ ಮಾಡಲಿದ್ದಾರೆ.












Click it and Unblock the Notifications