ಮತದಾರರ ಬಳಿಗೆ ಹೋಗುವ ಮುನ್ನ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಮೋದಿ ಮನದ ಮಾತು!
ಬೆಂಗಳೂರು, ಏಪ್ರಿಲ್. 26: ಮತ್ತೆ ಈ ಬಾರಿಯೂ ಅಧಿಕಾರ ಹಿಡಿಯುವ ಕಸರತ್ತಿನಲ್ಲಿರುವ ಭಾರತೀಯ ಜನತಾ ಪಕ್ಷ ರಾಷ್ಟ್ರೀಯ ನಾಯಕರನ್ನು ಕರ್ನಾಟಕದಲ್ಲಿ ಚುನಾವಣಾ ಕಣಕ್ಕಿಳಿಸಿದೆ. ಅದರಲ್ಲೂ ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಳ್ಳಲಿದ್ದಾರೆ. ತಾವು ಪ್ರಚಾರ ಮಾಡುವುದರ ಜೊತೆಗೆ ಮತ್ತೊಂದು ಪ್ರಯತ್ನಕ್ಕೆ ಪ್ರಧಾನಿ ಕೈ ಹಾಕಿದ್ದಾರೆ.
ರಾಷ್ಟ್ರೀಯ , ರಾಜ್ಯ ನಾಯಕರ ಜೊತೆಗೆ ಬಿಜೆಪಿಯ ಕಾರ್ಯಕರ್ತರನ್ನು ಕಣಕ್ಕಿಳಿಸುವುದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಚಿಂತಿಸಿದ್ದು, ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಲು ವಿನೂತನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರು 50 ಲಕ್ಷ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ಸಭೆ ನಡೆಸಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 27 ರಂದು ಕರ್ನಾಟಕದಲ್ಲಿ ವರ್ಚುವಲ್ ಆಗಿ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದತ್ಮಕ ಸಭೆ ನಡೆಸಲಿದ್ದಾರೆ. ಇದರಲ್ಲಿ 58,112 ಬೂತ್‌ಗಳ ಪಕ್ಷದ ಕಾರ್ಯಕರ್ತರು ಸೇರಲಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ 'ಡಬಲ್ ಇಂಜಿನ್' ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಲಕ್ಷಾಂತರ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಅವರೊಂದಿಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಪಡಬೇಕಿರುವ ಪ್ರಯತ್ನಗಳು ಮತ್ತು ತಂತ್ರಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ. ಚುನಾವಣಾ ಸಮಯದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಲು ಅವರನ್ನು ಉತ್ತೇಜಿಸಲು ಕಾರ್ಯಕರ್ತರೊಂದಿಗೆ ಮಾತನಾಡುತ್ತಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಇನ್ನು, ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 29 ರಿಂದ ಆರು ದಿನಗಳ ಕಾಲ ಪ್ರವಾಸ ಮಾಡಿದ್ದಾರೆ. ಪ್ರಧಾನಿ ಮೋದಿ ಏಪ್ರಿಲ್ 29 ರಿಂದ ಮೇ 7ರ ವರೆಗೆ ರಾಜ್ಯದ ಹಲವು ಭಾಗಗಳಲ್ಲಿ ರೋಡ್ ಶೋಗಳು ಮತ್ತು ರ‍್ಯಾಲಿಗಳ ಮೂಲಕ ಬಿಜೆಪಿ ಪರ ಪ್ರಚಾರ ನಡೆಸಲಿದ್ದಾರೆ. ಈ ಆರು ದಿನಗಳ ಅಂತರದಲ್ಲಿ 20 ಕ್ಕೂ ಹೆಚ್ಚು ರೋಡ್ ಶೋಗಳು, ಸಮಾವೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
*ಪ್ರಧಾನಿ ನರೇಂದ್ರ ಮೋದಿ ಪ್ರಚಾರ ನಡೆಸುವ ಸ್ಥಳ ಮತ್ತು ದಿನಗಳ ಮಾಹಿತಿ ಇಲ್ಲಿದೆ*
1. ಏಪ್ರಿಲ್ 29 : ಹುಮ್ನಾಬಾದ್, ವಿಜಯಪುರ, ಕುಡಚಿ, ಬೆಂಗಳೂರು ಉತ್ತರ
2. ಏಪ್ರಿಲ್ 30: ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು
3. ಮೇ 2: ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ
4. ಮೇ 3: ಮೂಡುಬಿದಿರೆ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಸೆಂಟ್ರಲ್
5. ಮೇ 6: ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ
6. ಮೇ 7: ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಕೇಂದ್ರ
224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications