ಪ್ರಧಾನಿ ಮೋದಿಗೆ ಮಾಧ್ಯಮಗಳ ಮುಂದೆ ಬರುವ ತಾಕತ್ತು ಇಲ್ಲ: ಬಿಜೆಪಿ ಶಾಸಕ ಕಿಡಿ
ಮೈಸೂರು, ಡಿಸೆಂಬರ್ 21: ಸಂಸತ್ ನಲ್ಲಿ ಭದ್ರತಾ ಲೋಪಕ್ಕೆ ಭದ್ರತಾ ಸಿಬ್ಬಂದಿ ಕೊರತೆ ಕಾರಣ ಇದೆ. ಶೇ.40ರಷ್ಟು ಅಧಿಕಾರಿಗಳೇ ಇಲ್ಲ, ಇದೆಲ್ಲ ಹೊರಗೆ ಬರುತ್ತೆ ಅನ್ನುವ ಕಾರಣಕ್ಕೆ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಪ್ರಧಾನ ಮಂತ್ರಿಗೆ ಮಾಧ್ಯಮಗಳ ಮುಂದೆ ಬರುವ ತಾಕತ್ತು ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಸಂಸತ್ ಅಧಿವೇಶನದಿಂದ ಸಂಸದರ ಅಮಾನತು ವಿಚಾರವಾಗಿ ಮಾತನಾಡಿ, ಲೋಕಸಭೆ, ರಾಜ್ಯಸಭೆಯ ಒಟ್ಟು 142 ಸಂಸದರನ್ನು ಅಮಾನತು ಮಾಡಲಾಗಿದೆ.
ನುಸುಳುಕೋರರ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಅಮಾನತು ಮಾಡಲಾಗಿದೆ. ಸಂಸತ್ತು ಇರೋದೇ ಚರ್ಚೆ ಮಾಡುವುದಕ್ಕೆ, ಮಾತನಾಡುವುದೇ ಬೇಡ ಎಂದರೆ ಹೇಗೆ ? ವಿರೋಧ ಪಕ್ಷಗಳು ಪ್ರಶ್ನೆ ಮಾಡುತ್ತಾರೆ. ಅದೆಲ್ಲದಕ್ಕೂ ಆಡಳಿತ ಪಕ್ಷ ಉತ್ತರ ಕೊಡಬೇಕು. ಪ್ರಪಂಚದ ಮುಂದೆ ಭಾರತ ಬೆತ್ತಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮಲ್ಲಿಕಾರ್ಜುನ ಖರ್ಗೆ ಅವರನ್ನು ಇಂಡಿಯಾ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿವೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ರಾಜ್ಯದ ದೇವೇಗೌಡರು ಪ್ರಧಾನಿ ಆಗಿದ್ದರು. ಮಲ್ಲಿಕಾರ್ಜುನ ಖರ್ಗೆ ಅವರ ಮೂಲಕ ಇನ್ನೊಂದು ಅವಕಾಶ ಸಿಕ್ಕಿದೆ, ಮಲ್ಲಿಕಾರ್ಜುನ ಖರ್ಗೆ ಸಾಮಾನ್ಯರಲ್ಲ. ಕಾರ್ಮಿಕನ ಮಗನಾಗಿ ಹುಟ್ಟಿ ಕೇಂದ್ರದಲ್ಲಿ ಕಾರ್ಮಿಕ ಸಚಿವರಾಗಿ ಬೆಳೆದವರು. ಶೋಷಿತ ಸಮುದಾಯಗಳಿಂದ ಬಂದವರು. ಶಾಸಕರು, ಸಚಿವರು, ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಪ್ರಧಾನಿಯಾದರೆ ದೇಶ ಸಂತೋಷ ಪಡುತ್ತದೆ. ಪ್ರಧಾನಿಯಾಗಲಿ ಎಂದು ಬಯಸುವ ಪ್ರಜಾತಂತ್ರ ಪರವಾದ ಜನರಲ್ಲಿ ನಾನೂ ಒಬ್ಬ ಎಂದು ಹೇಳಿದರು.
ಇನ್ನೂ ರಾಮಮಂದಿರ ನಿರ್ಮಾಣವಾಗಲು ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಕಾರಣ. ಎಚ್.ಡಿ.ದೇವೇಗೌಡ ರಾಮಮಂದಿರ ವಿರೋಧ ಮಾಡಿದ್ದರು. ನೀವು ದೇವೇಗೌಡನ್ನು ಬನ್ನಿ ಅನ್ನುತ್ತೀರಿ, ಅಡ್ವಾಣಿ ಅವರನ್ನು ಬರಬೇಡಿ ಅನ್ನುತ್ತೀರಿ. ಈ ಇಬ್ಬಂದಿತನ ಯಾಕೆ ? ಎಂದು ಹೆಚ್ ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್‌ಗೆ ಪರ್ಯಾಯವಾಗಿ ಬಿಜೆಪಿ ಬೆಳೆಯಲು ಎಲ್.ಕೆ. ಅಡ್ವಾಣಿ ಕಾರಣ. ದೇಶಾದ್ಯಂತ ಯಾತ್ರೆ ಮಾಡಿ ಹಿಂದೂ ಪರವಾಗಿ ಜನರನ್ನು ಬಡಿದೆಬ್ಬಿಸಿದರು ಅಂತಹ ಹಿರಿಯರನ್ನು ಗೌರವಿಸಬೇಕಾದ್ದು ನಿಮ್ಮ ಜವಾಬ್ದಾರಿ. ಅಡ್ವಾಣಿ ಬಂದರೆ ನನಗೆ ಕ್ರೆಡಿಟ್ ಸಿಗೋದಿಲ್ಲ, ಮಸುಕಾಗುತ್ತೇನೆ ಅಂತ ಪ್ರಧಾನಿ ಮೋದಿ ಅಂದುಕೊಂಡಿದ್ದಾರೆ. ಆದ್ದರಿಂದಲೇ ವಯಸ್ಸಿನ ಕಾರಣ ಅಡ್ವಾಣಿ, ಜೋಷಿ ಅವರನ್ನು ಹೊರಗಿಡುತ್ತಿದ್ದೀರಿ. ದೇವೇಗೌಡರಿಗೆ ವಯಸ್ಸು ಆಗಿಲ್ವ ? ಅವರ ಆರೋಗ್ಯ ಚನ್ನಾಗಿದೆಯೇ ? ಎಂದು ಪ್ರಶ್ನಿಸಿದರು.
ಕೋವಿಡ್ ಪ್ರಾರಂಭಿಕ ಹಂತದಲ್ಲಿ ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ಕುಂಭಮೇಳ ಮಾಡಿತ್ತು. ಅದರಿಂದ ದೇಶಾದ್ಯಂತ ಕೋವಿಡ್ ಹರಡಿ ಸಾವು, ನೋವುಗಳಾದವು. ರಾಮಮಂದಿರ ಎಷ್ಟು ಜನರನ್ನು ಬಲಿ ಪಡೆಯುತ್ತೋ ಗೊತ್ತಿಲ್ಲ. ಚುನಾವಣೆ ಕಾರಣಕ್ಕೆ ಅಪೂರ್ಣವಾದ ಮಂದಿರ ಉದ್ಘಾಟನೆ ಮಾಡುತ್ತಿದ್ದೀರಿ. ಕೋವಿಡ್ ಹರಡದಂತೆ ಜಾಗೃತೆ ವಹಿಸಿ.












Click it and Unblock the Notifications