ಸಿಬಿಐ ಸ್ವತಂತ್ರಗೊಳಿಸಲು ಹೈಕೋರ್ಟ್‌ನಲ್ಲಿ ಪಿಐಎಲ್
ಬೆಂಗಳೂರು, ಮೇ 12: ಕೇಂದ್ರ ತನಿಖಾ ಸಂಸ್ಥೆಯನ್ನು (ಸಿಬಿಐ) ಅನ್ನು ಸ್ವತಂತ್ರಗೊಳಿಸಬೇಕೆಂಬ ಕೂಗು ದಿನೇ ದಿನೇ ಹೆಚ್ಚುತ್ತಿದೆ.
ಸಾಂವಿಧಾನಿಕ ಸಂಸ್ಥೆಯಾದ ಅದು ಕೇಂದ್ರ ಸರ್ಕಾರದ ಅಧೀನದಲ್ಲಿರುವುದರಿಂದ ಸಹಜವಾಗಿಯೇ ಅದರ ದುರ್ಬಳಕೆ ಹೆಚ್ಚುತ್ತಿದೆ. ಹಾಗಾಗಿ ಅದನ್ನು ಮುಕ್ತ ಮತ್ತಿ ಸ್ವತಂತ್ರ ಸಂಸ್ಥೆಯಾಗಿ ರೂಪಿಸಬೇಕು ಎಂಬ ಒತ್ತಡ ಜಾಸ್ತಿಯಾಗುತ್ತಿದೆ.
ಇದೀಗ ಅದೇ ವಿಷಯದ ಕುರಿತು ಬೀದರ್ ಗುರುನಾಥ್ ವಡ್ಡೆ ಹೈಕೋರ್ಟ್ ನಲ್ಲಿ ಪಿಐಎಲ್ ಹೂಡಿದ್ದಾರೆ. ಅದರಲ್ಲಿ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಸಿಬಿಐ ನಿದೇರ್ಶಕರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ.

ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಮತ್ತು ನ್ಯಾಯಮೂರ್ತಿ ಎಂ.ಜಿ.ಎಸ್ ಕಮಲ್ ಅವರಿದ್ದ ವಿಭಾಗೀಯಪೀಠದ ಮುಂದೆ ಗುರುವಾರ ಆ ಪಿಐಎಲ್ ವಿಚಾರಣೆಗೆ ಬಂದಿತ್ತು.
ಆಗ ನ್ಯಾಯಪೀಠ ಅರ್ಜಿಯಲ್ಲಿನ ವಾದಾಂಶ ಹಾಗೂ ದಾಖಲೆ ಪರಿಗಣಿಸಿ, ರಜಾಕಾಲದ ನಂತರ ಜೂನ್ ಮೊದಲನೇ ವಾರದಲ್ಲಿ ಅರ್ಜಿಯನ್ನು ವಿಚಾರಣೆ ನಡೆಸುವುದಾಗಿ ಹೇಳಿ ವಿಚಾರಣೆ ಮುಂದೂಡಿತು.
ಅರ್ಜಿದಾರರು, ಸಿಬಿಐ ಅನ್ನು ಸ್ವತಂತ್ರ ಸಾಂವಿಧಾನಿಕ ತನಿಖಾ ಸಂಸ್ಥೆಯಾಗಿ ರೂಪಿಸುವಂತೆ ಕೋರಿ ತಾವು 2022ರ ಏ.8ರಂದು ಸಲ್ಲಿಸಿರುವ ಮನವಿ ಪತ್ರ ಪರಿಗಣಿಸಿ ಕೂಡಲೇ ಅಗತ್ಯ ಕ್ರಮ ಜರುಗಿಸುವಂತೆ ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ, ಸಂವಿಧಾನದ ಹಿತಾಸಕ್ತಿಯಿಂದ ಸ್ವತಂತ್ರ ತನಿಖಾ ಸಂಸ್ಥೆ ಇರುವುದು ಅತ್ಯಗತ್ಯ. ಸಾಂವಿಧಾನಿಕ ಸ್ವತಂತ್ರ ತನಿಖಾ ಸಂಸ್ಥೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಸ್ತಕ್ಷೇಪ ಮಾಡುವಂತಿರಬಾರದು ಎಂಬುದು ಅರ್ಜಿದಾರರ ಮನವಿಯಾಗಿದೆ.
ಅರ್ಜಿಯಲ್ಲಿರುವ ಅಂಶಗಳೇನು?
ಅರ್ಜಿಯಲ್ಲಿ, ದೆಹಲಿ ಪೊಲೀಸ್ ಎಸ್ಟ್ರಾಬ್ಲಿಸ್ಮೆಂಟ್ ಕಾಯ್ದೆ (ಡಿಎಸ್‌ಪಿಇ)-1946ರ ಅಡಿಯಲ್ಲಿ ಸಿಬಿಐ ರಚಿಸಲಾಗಿದ್ದು, ಅದು ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ. ಇದರಿಂದಾಗಿ ಅದು ಸ್ವತಂತ್ರ ಹಾಗೂ ನಿಸ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಕೇಂದ್ರದ ಒತ್ತಡದಲ್ಲಿಯೇ ಸಿಬಿಐ ಕಾರ್ಯನಿರ್ವಹಿಸಬೇಕಿದೆ. ಸಿಬಿಐ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವುದಾಗಿ ರಾಜ್ಯ ಸರ್ಕಾರ ಮತ್ತು ರಾಜಕೀಯ ಪಕ್ಷಗಳ ಅರೋಪ ಮಾಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ ಎಂದು ವಿವರಿಸಲಾಗಿದೆ.
ಕೇಂದ್ರ ಸರ್ಕಾರವು ಸಿಬಿಐ ಅನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಅದನ್ನು ಗಮನಿಸಿಯೇ ಸಿಬಿಐ ಅನ್ನು ಸಾರ್ವಜನಿಕರು ನಂಬುತ್ತಿಲ್ಲ. ಭ್ರಷ್ಟಚಾರ-ಪಕ್ಷಪಾತ ರಹಿತ ಮತ್ತು ಪಾರದರ್ಶಕ ಆಡಳಿತ ನಡೆಸುವಂತಹ ಸ್ವತಂತ್ರ ಸಂಸ್ಥೆ ಹೊಂದುವುದು ಪ್ರಜೆಗಳ ಹಕ್ಕು ಆಗಿದೆ. ಆದರೆ, ಇತ್ತೀಚೆಗೆ ದೊಡ್ಡ ಹಗರಣಗಳು ನಡೆದಿದೆ. ಚುನಾವಣೆ ವೇಳೆ ಮತ್ತು ನಂತರ ರಾಜಕೀಯ ಅಪರಾಧಗಳು ರಾಜಕೀಯ ಪ್ರೇರಿತ ಕೊಲೆಗಳು ನಡೆಯುತ್ತಿವೆ ಎಂದೂ ಸಹ ಹೇಳಲಾಗಿದೆ.
ಅಲ್ಲದೆ, ಜಾತಿ, ಮತ , ಭಾಷೆ ಮತ್ತು ಪ್ರಾದೇಶಿಕ ಹೆಸರಿನಲ್ಲಿ ದಂಗೆಗಳು ಹೆಚ್ಚುತ್ತಿವೆ. ಇದರಿಂದ ಜನ ಭಯದ ವಾತಾವರಣದಲ್ಲಿ ಜೀವಿಸುವಂತಾಗಿದೆ. ನಿರ್ಭೀತ ಮತ್ತು ಸ್ವತಂತ್ರವಾದ ಜೀವನ ನಡೆಸುವುದಕ್ಕೆ ಉತ್ತಮ ವಾತಾವರಣ ರೂಪಿಸುವುದು ಸರ್ಕಾರದ ಕರ್ತವಾಗಿದೆ. ಆದ್ದರಿಂದ ಸಿಬಿಐ ಅನ್ನು ಸ್ವತಂತ್ರ ಸಾಂವಿಧಾನಿಕ ತನಿಖಾ ಸಂಸ್ಥೆಯಾಗಿ ರೂಪಿಸಲು ನಿರ್ದೇಶಿಸಬೇಕು ಎಂದು ಕೋರಿದರು.












Click it and Unblock the Notifications