ಜನ ನನ್ನನ್ನು ಟಗರು ಎಂದು ಪ್ರೀತಿಯಿಂದ ಕರೆಯುತ್ತಾರೆ: ಸಿದ್ದರಾಮಯ್ಯ ಹೇಳಿದ್ದೇನು.?
ಬಸವರಾಜ ಬೊಮ್ಮಾಯಿ ಅವರು ಕುರುಬರನ್ನು ಎಸ್,ಟಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಅದನ್ನು ಮೋದಿ ಅವರ ಬಳಿ ಮಾತನಾಡಿ ಮೊದಲು ಮಾಡಿಸಲಿ. ಇಲ್ಲಿ ನಿಂತು ಮೀಸೆ ತಿರುವಿ ಭಾಷಣ ಮಾಡಿದರೆ ಅರ್ಥವಿರಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ವಿಜಯನಗರ,ಫೆಬ್ರವರಿ6: ಜನ ನನ್ನನ್ನು ಟಗರು ಎಂದು ಪ್ರೀತಿಯಿಂದ ಕರೆಯುತ್ತಾರೆ, ನಾನು ಸಮಾಜದಲ್ಲಿನ ಎಲ್ಲಾ ಜಾತಿಗಳ ಬಡಜನರಿಗೆ ಸಹಾಯ ಮಾಡಬೇಕು ಎಂದು ಕೆಲಸ ಮಾಡಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ವಿಜಯನಗರದಲ್ಲಿ ಮಾತನಾಡಿದ ಅವರು, ನಾನು ಕುರುಬ ಜಾತಿಯವನು ಎನ್ನುವ ಕಾರಣಕ್ಕೆ ಟಗರು ಎನ್ನುವುದಲ್ಲ. ನಾವು ಅನ್ನಭಾಗ್ಯ ಅಕ್ಕಿಯನ್ನು ಯಾವುದೇ ಒಂದು ಜಾತಿಗೆ ಮಾತ್ರ ಸೀಮಿತಗೊಳಿಸಿ ಜಾರಿ ಮಾಡಿದ್ವಾ? ಎಲ್ಲಾ ಬಡವರಿಗೆ ನೀಡಿರಲಿಲ್ವಾ? ಕೃಷಿ ಭಾಗ್ಯ ಯೋಜನೆಯನ್ನು ಬರೀ ಕುರುಬ ಜಾತಿಯ ರೈತರಿಗೆ ಮಾತ್ರ ನೀಡಿದ್ದೆವಾ? ಶೂಭಾಗ್ಯ, ಇಂದಿರಾ ಕ್ಯಾಂಟೀನ್, ವಿದ್ಯಾಸಿರಿ, ಶಾದಿ ಭಾಗ್ಯ, ಇವೆಲ್ಲ ಯೋಜನೆಯನ್ನು ಬರೀ ಹಿಂದುಳಿದ ಜಾತಿಗಳಿಗೆ ಸೀಮಿತವಾಗಿ ಜಾರಿ ಮಾಡಿರಲಿಲ್ಲ, ಈ ನಾಡಿನಲ್ಲಿ ಆರ್ಥಿಕವಾಗಿ ಯಾರೆಲ್ಲ ದುರ್ಬಲರಿದ್ದಾರೆ ಅವರಿಗೆ ಸಹಾಯವಾಗಲಿ ಎಂದು ಮಾಡಿದ್ದು ಎಂದು ಹೇಳಿದರು.
ಯಾವ ಧರ್ಮವೂ ಹಿಂಸೆ ಮಾಡಿ, ಕೊಲೆ ಮಾಡಿ, ಇನ್ನೊಬ್ಬರನ್ನು ನೋಯಿಸಿ ಎಂದು ಹೇಳುವುದಿಲ್ಲ. ಧರ್ಮಗಳು ಇರುವುದು ಜನರ ಕಲ್ಯಾಣಕ್ಕೆ. ಧರ್ಮ ಜನರ ಬದುಕಿಗೆ ಸನ್ಮಾರ್ಗವನ್ನು ತೋರಿಸುವಂತಿರಬೇಕು. ಹಾಗಾಗಿಯೇ ಧರ್ಮವನ್ನು "ವೇ ಆಫ್ ಲೈಫ್" ಎಂದು ಇಂಗ್ಲೀಷ್ ನಲ್ಲಿ ಕರೆಯುತ್ತಾರೆ. ಬಸವಾದಿ ಶರಣರು ದಯೆಯೇ ಧರ್ಮದ ಮೂಲವಯ್ಯ, ದಯೆಯಿಲ್ಲದ ಧರ್ಮವಾವುದಯ್ಯ ಎಂದು ಹೇಳಿದ್ದರು. ಮನುಷ್ಯತ್ವ ಇಲ್ಲದ ಧರ್ಮವನ್ನು ಯಾರು ಕೂಡ ಪಾಲನೆ ಮಾಡಬಾರದು, ಅಂಥಾ ಧರ್ಮವನ್ನು ತಿರಸ್ಕಾರ ಮಾಡಬೇಕು ಎಂದರು.

ನಮ್ಮ ಸರ್ಕಾರ ಇದ್ದಾಗ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಿದ್ದೆ. ಯಾವೊಬ್ಬ ಬಡವನೂ ಹಸಿದು ಮಲುಗಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ನಾನು ಹುಡುಗನಾಗಿದ್ದಾಗ ನಮ್ಮದು ಐದಾರು ಎಕರೆ ತರಿ ಜಮೀನಿದ್ದರೂ ಹಬ್ಬ ಹರಿದಿನಗಳಲ್ಲಿ ಮಾತ್ರ ಅನ್ನ ಮಾಡುತ್ತಿದ್ದರು. ಆಗೆಲ್ಲ ಮಕ್ಕಳಿಗೆ ಖಾಯಿಲೆ ಬಂದರೆ ಅನ್ನ ಮಾಡುವವರ ಮನೆ ಮುಂದೆ ಬಂದು ಕೈಯೊಡ್ಡಿ ನಿಂತುಕೊಳ್ಳೋರು.
ಇವೆಲ್ಲವನ್ನು ನಾನು ಕಣ್ಣಾರೆ ನೋಡಿದ್ದೆ, ಹಾಗಾಗಿ ನಾನು ಮುಖ್ಯಮಂತ್ರಿಯಾಗಿರುವಾಗ ಯಾರೊಬ್ಬರು ತುತ್ತು ಅನ್ನಕ್ಕಾಗಿ ಇನ್ನೊಬ್ಬರ ಮನೆ ಮುಂದೆ ಕೈಚಾಚಬಾರದು ಎಂದು ಎಲ್ಲಾ ಜಾತಿಯ ಜನರಿಗೆ, ಎಲ್ಲಾ ಧರ್ಮದ ಜನರಿಗೆ 7 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದ್ದೆ. ಈಗ ನಮ್ಮ ಪಕ್ಷದ ಪ್ರಜಾಧ್ವನಿ ಯಾತ್ರೆ ನಡೆಯುತ್ತಿದೆ, ಈ ಯಾತ್ರೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದೇವೆ. ದೇಶದ ಸಂಪತ್ತು ಎಲ್ಲರ ಸಂಪತ್ತು, ದುಡಿಯುವ ಜನರ ಸಂಪತ್ತು. ಈ ದೇಶದಲ್ಲಿ ಯಾರೂ ಹಸಿದು ಮಲುಗಬಾರದು ಎಂಬುದು ನನ್ನ ಆಶಯ. ಎಲ್ಲರೂ ಹೊಟ್ಟೆತುಂಬಾ ಊಟ ಮಾಡಬೇಕು.
ಬಸವರಾಜ ಬೊಮ್ಮಾಯಿ ಅವರು ಕುರುಬರನ್ನು ಎಸ್,ಟಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಮಾಡಿದರೆ ಸಂತೋಷ. ಈ ಕೆಲಸ ಮಾಡಬೇಕಾಗಿರುವುದು ಕೇಂದ್ರ ಸರ್ಕಾರ, ಬೊಮ್ಮಾಯಿ ಅವರಲ್ಲ. ನಾನು ಈಗಾಗಲೇ ಯಾದಗಿರಿ, ಕಲಬುರಗಿ, ಬೀದರ್, ಕೊಡಗಿನ ಕುರುಬರು, ಗೊಂಡ, ರಾಜಗೊಂಡ ಸಮಾಜವನ್ನು ಎಸ್,ಟಿ ಗೆ ಸೇರಿಸುವಂತೆ ಶಿಫಾರಸು ಮಾಡಿ ಕಳಿಸಿದ್ದೇನೆ. ಅದನ್ನು ಮೋದಿ ಅವರ ಬಳಿ ಮಾತನಾಡಿ ಮೊದಲು ಮಾಡಿಸಲಿ. ಇಲ್ಲಿ ನಿಂತು ಮೀಸೆ ತಿರುವಿ ಭಾಷಣ ಮಾಡಿದರೆ ಅರ್ಥವಿರಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಸಂವಿಧಾನ ತಿದ್ದುಪಡಿ ಮಾಡಿಸಲಿ.

ಎಸ್,ಸಿ ಮೀಸಲಾತಿಯನ್ನು 15 ರಿಂದ 17 ಮತ್ತು ಎಸ್,ಟಿ ಮೀಸಲಾತಿಯನ್ನು 3 ರಿಂದ 7% ಗೆ ಏರಿಕೆ ಮಾಡಿದ್ದಾರೆ, ಆದರೆ ಇದಕ್ಕೆ ಸಂವಿಧಾನ ತಿದ್ದುಪಡಿಯನ್ನೇ ಮಾಡಿಲ್ಲ. ನಾನು ಮೂಗಿಗೆ ತುಪ್ಪ ಹಚ್ಚುವವರನ್ನು ನೋಡಿದ್ದೆ, ಹಣೆಗೆ ತುಪ್ಪ ಹಚ್ಚುವವರನ್ನು ನೋಡಿದ್ದು ಇದೇ ಮೊದಲು. ಮೇಲ್ಜಾತಿಯ ಬಡವರಿಗೆ 10% ಮೀಸಲಾತಿ ನೀಡಿದ್ದನ್ನು ಯಾರಾದರೂ ವಿರೋಧ ಮಾಡಿದ್ದು ನೀವು ನೋಡಿದ್ದೀರಾ? ನಾನು ಮಾತ್ರ ಇದನ್ನು ಹಲವು ಬಾರಿ ಪ್ರಶ್ನೆ ಮಾಡಿದ್ದೇನೆ. ಸಂವಿಧಾನದ 15 ಮತ್ತು 16ನೇ ವಿಧಿಗಳು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬಹುದು ಎಂದು ಹೇಳಿದೆ ಆದರೂ ಹೇಗೆ ಸಂವಿಧಾನಬಾಹಿರವಾಗಿ ಮೀಸಲಾತಿ ನೀಡಿದ್ರು? ಈ ಬಗ್ಗೆ ಹಿಂದುಳಿದ ಜಾತಿಗಳ ಸ್ವಾಮೀಜಿಗಳು ಧ್ವನಿಯೆತ್ತಬೇಕು ಎಂದು ಹೇಳಿದರು.












Click it and Unblock the Notifications