ಸ್ಥಳೀಯ ಸಂಸ್ಥೆಗಳ ಫಲಿತಾಂಶ: ಗಾಳಿ ಕಾಂಗ್ರೆಸ್‌ನತ್ತ ಬೀಸಿದೆ - ಸಿದ್ದರಾಮಯ್ಯ
ಬೆಂಗಳೂರು ಡಿಸೆಂಬರ್ 30: ಹಣ ಇದೆ ಅಂತ ಬಿಜೆಪಿಯವರು ಆಡಳಿತಕ್ಕೆ ಹೋದರು. ಬಿಜೆಪಿ ದುರಾಡಳಿತದ ವಿರುದ್ಧ ಜನ ಬೇಸತ್ತಿದ್ದಾರೆ. ಅದಕ್ಕೆ ಇಂದಿನ ಕಾಂಗ್ರೆಸ್ ಗೆಲುವು ಸಾಕ್ಷಿಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದಲ್ಲಿ ಡಿಸೆಂಬರ್ 27ರಂದು ನಡೆದಿದ್ದ 19 ಜಿಲ್ಲೆಗಳ ಐದು ನಗರಸಭೆ ಸೇರಿದಂತೆ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.ಈ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಆಡಳಿತರೂಢ ಬಿಜೆಪಿಗೆ ಈ ಫಲಿತಾಂಶದಿಂದ ಮುಖಭಂಗವಾಗಿದೆ.
ಪುರಸಭೆ ಪಟ್ಟಣ ಪಂಚಾಯಿತಿ ಫಲಿತಾಂಶದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, 'ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬಂದಿದೆ. ನಮ್ಮ ರಾಜ್ಯದ ಜನ ಬಿಜೆಪಿ ವಿರುದ್ದ ಅಭಿಪ್ರಾಯ ವ್ಯಕ್ತವಮಾಡಿದ್ದಾರೆ. ಬಿಜೆಪಿಯಿಂದ ಅಭಿವೃದ್ಧಿ ಸ್ಥಗಿತವಾಗಿದೆ. ಬೆಲೆ ಏರಿಕೆಯನ್ನು ಸಾಮಾನ್ಯ ಜನ ಸಹಿಸಿಕೊಳ್ಳಲಾಗುತ್ತಿಲ್ಲ. ಈ ಸರ್ಕಾರದ ದುರಾಡಳಿತದ ವಿರುದ್ಧ ಜನರು ತಿರುಗಿಬಿದ್ದಿದ್ದಾರೆ. ಹೀಗಾಗಿ ಕಾಂಗ್ರೆಸ್ 500ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಜೊತೆಗೆ ಪಕ್ಷೇತರರು ಗೆದ್ದಾರೆ. ಇದರರ್ಥ ಜನ ಬಿಜೆಪಿ ವಿರುದ್ಧವಾಗಿದ್ದಾರೆ. ಕಾಂಗ್ರೆಸ್ ದಿಕ್ಕಿನತ್ತ ಗಾಳಿ ಬೀಸುತ್ತಿದೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕಾಂಗ್ರೆಸ್ ಪಕ್ಷ ಬೆಂಬಲಿಸಿರುವ ಎಲ್ಲಾ ಮತದಾರರಿಗೂ ಮತ್ತು ಅಭ್ಯರ್ಥಿಗಳಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಇನ್ನೂ ಸಿಎಂ ಕ್ಷೇತ್ರ ಹಾನಗಲ್‌ನಲ್ಲೇ ನಾವು ಗೆದ್ದಿದ್ದೇವೆ. ಅವರ ಕ್ಷೇತ್ರದಲ್ಲಿ ಹೆಚ್ಚು ಮತ ಗಳಿಸಿದ್ದೇವೆ. ಇದು ಮುಂದಿನ ಚುನಾವಣೆಗೆ ಬಿಜೆಪಿಗೆ ಎಚ್ಚರಿಕೆಯಾಗಿದೆ. ರಾಜ್ಯದ ಜನ ಬದಲಾವಣೆ ಬಯಸಿದ್ದಾರೆ,' ಎಂದರು.
ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, 'ರಾಜ್ಯದಲ್ಲಿ ಈಗಿರುವ ಸರ್ಕಾರ ಉಲ್ಟಾವಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇದು ಕಾಂಗ್ರೆಸ್ ಗೆಲವು ಅಲ್ಲ. ರಾಜ್ಯದ ಜನರ ಅಭಿಪ್ರಾಯ. ಕಾಂಗ್ರೆಸ್ ಗೆಲ್ಲಿಸಿದವರು ಹಳ್ಳಿ ಜನ ಅಲ್ಲ. ಪಟ್ಟಣವಾಸಿಗಳು ನಗರವಾಸಿಗಳ ಅಭಿಪ್ರಾಯ ಕಾಂಗ್ರೆಸ್ ಕಡೆ ವಾಲುತ್ತಿದೆ. ಸಾಮಾನ್ಯವಾಗಿ ಎಂಎಲ್ಎ ಇರುವ ಕಡೆ ಆಡಳಿತ ಪಕ್ಷಕ್ಕೆ ಹೆಚ್ಚು ಬಲವಿರುತ್ತದೆ. ಹೀಗಿರುವಾಗ ಕಾಂಗ್ರೆಸ್ ಕಡೆಗೆ ಜನ ಮುಖ ಮಾಡುತ್ತಿದ್ದಾರೆ ಎಂದರೆ ಈ ಮತಗಳೇ ಸಾಕ್ಷಿ' ಎಂದಿದ್ದಾರೆ. ಜೊತೆಗೆ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಜನರ ವಿಶ್ವಾಸದಂತೆ ಅವರ ನಿರೀಕ್ಷೆಯಂತೆ ಉತ್ತಮ ಆಡಳಿತವನ್ನು ಮುಂಬರುವ ದಿನಗಳಲ್ಲಿ ನೀಡುತ್ತೇವೆ,' ಎಂದು ಭರವಸೆ ನೀಡಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರ ಹಾವೇರಿ ಜಿಲ್ಲೆಯ ಬಂಕಾಪುರ ಪುರಸಭೆ ಮತ್ತು ಗುತ್ತಲ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರ ಬರುವುದು ಖಚಿತವಾಗಿದೆ. ಬಂಕಾಪುರ ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಕಾಂಗ್ರೆಸ್- 14, ಬಿಜೆಪಿ- 7, ಪಕ್ಷೇತರ- 2 ಸ್ಥಾನ ಪಡೆದಿದೆ.ಅದೇ ರೀತಿ ಗುತ್ತಲ ಪಟ್ಟಣ ಪಂಚಾಯಿತಿಯ ಒಟ್ಟು 18 ಸ್ಥಾನಗಳ ಪೈಕಿ ಕಾಂಗ್ರೆಸ್- 11, ಬಿಜೆಪಿ- 6, ಪಕ್ಷೇತರ- 1 ಸ್ಥಾನ ಲಭಿಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಏರಲಿದೆ.













Click it and Unblock the Notifications