ಪತ್ರ; ಸಾವುಗಳು ನಿಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರಲಿಲ್ಲವೇ?

ಬೆಂಗಳೂರು, ಮೇ 04; ಆಕ್ಸಿಜನ್ ಕೊರತೆಯ ಕಾರಣದಿಂದಾಗಿ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ರೋಗಿಗಳು ಸಾವನ್ನಪ್ಪಿದ್ದಾರೆ. ರಾಜ್ಯ ಮತ್ತು ದೇಶಾದ್ಯಂತ ಈ ಕುರಿತು ಚರ್ಚೆಗಳು ಆರಂಭವಾಗಿವೆ. ಸರ್ಕಾರದ ವಿರುದ್ಧ ಜನರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ರೋಗಿಗಳು ಸಾವನ್ನಪ್ಪಿದ ಬಗ್ಗೆ ಕರ್ನಾಟಕ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಿದೆ. ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ರಮೇಶ್ ಕುಮಾರ್ ಈ ಘಟನೆ ಬಗ್ಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪಗೆ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

"ಇಂದು ಚಾಮರಾಜನಗರ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿರುವ ಸಾವುಗಳು ನಿಮ್ಮ ಮನಸ್ಸಿನ ಮೇಲೆ ಏನೂ ಪರಿಣಾಮವನ್ನು ಬೀರಲಿಲ್ಲವೇ?. ಒಂದು ಕ್ಷಣ ಕಾಲ ನಿಮ್ಮ ಸ್ಥಾನವನ್ನು ಮರೆತು ಒಬ್ಬ ಸಾಮಾನ್ಯ ಮನುಷ್ಯನಂತೆ ಇದನ್ನು ನೋಡಿದಾಗ ಸಹಜವಾಗಿಯೇ ನಿಮ್ಮಲ್ಲಿ ಕೆಲವು ಪ್ರತಿಕ್ರಿಯೆಗಳನ್ನು ಪ್ರಕೃತಿ ನಿರೀಕ್ಷಿಸುತ್ತೆ" ಎಂದು ರಮೇಶ್ ಕುಮಾರ್ ಪತ್ರವನ್ನು ಆರಂಭಿಸಿದ್ದಾರೆ.

"ನಾವು ಅಲಂಕರಿಸಿರುವ ಸ್ಥಾನಗಳು ನಮ್ಮ ಮನುಷ್ಯತ್ವಕ್ಕೆ ಹೊದಿಸಿದ ಕವಚಗಳೇ ಹೊರತು ನಮ್ಮ ಸೂಕ್ಷ್ಮತೆಯನ್ನು ನುಂಗಿಹಾಕುವ ಸಾಧನಗಳಾಗಬಾರದು. ಶಾಸಕನಾಗಿಯೇ ಆಗಲಿ, ವಿಶೇಷವಾಗಿ ಪ್ರತಿಪಕ್ಷದವರು ಆಗಿಯೇ ಆಗಲಿ ಈ ಮಾತುಗಳನ್ನಾಡುತ್ತಿಲ್ಲ" ಎಂದು ಪತ್ರದಲ್ಲಿ ರಮೇಶ್ ಕುಮಾರ್ ತಿಳಿಸಿದ್ದಾರೆ.

ರಮೇಶ್ ಕುಮಾರ್ ಪತ್ರ

ರಮೇಶ್ ಕುಮಾರ್ ಪತ್ರ

"ರಾಜಕಾರಣ ತನ್ನ ಗಾಂಭೀರ್ಯವನ್ನು, ಘನತೆಯನ್ನು ಸಂಪೂರ್ಣ ಕಳೆದುಕೊಂಡಿದೆ. ಕೆಲವೇ ದಿನಗಳ ಹಿಂದೆ ಮದ್ರಾಸ್ ಶ್ರೇಷ್ಠ ನ್ಯಾಯಾಲಯವು ಕೇಂದ್ರ ಚುನಾವಣಾ ಆಯೋಗದ ಕರ್ತವ್ಯ ಭ್ರಷ್ಟತೆಯ ಬಗ್ಗೆ ಆಡಿರುವ ನಿಷ್ಠುರದ ಮಾತುಗಳನ್ನು ನೀವು ಗಮನಿಸಿರಬಹುದು ಎಂದು ನಂಬಿದ್ದೇನೆ. ಇದರ ಹಿನ್ನೆಲೆಯಲ್ಲಿ ಇಂದು ನಡೆದಿರುವ ದುರಂತ ಏನೆಂದು ನಮಗೆ ಸೂಚನೆ ಕೊಡುತ್ತೆ"

"ಪ್ರಾಣ ಕಳೆದುಕೊಂಡಂಥವರು, ಸಮರದಲ್ಲಿ ಸಾವನ್ನಪ್ಪಿದ ವೀರಯೋಧರಲ್ಲ ಅಥವಾ ಯಾವುದಾದರೂ ಸತ್ಯಾಗ್ರಹ ಅಥವಾ ಹೋರಾಟಕ್ಕಾಗಿ ಮಡಿದ ಹುತಾತ್ಮರೂ ಅಲ್ಲ, ಮಹಾತ್ಮರೂ ಅಲ್ಲ. ಆರೋಗ್ಯ ಬಿಗಡಾಯಿಸಿ ಅಸಹಾಯಕರಾಗಿ ಜೀವ ಅಂಗೈನಲ್ಲಿ ಇಟ್ಟುಕೊಂಡು ಪ್ರಾಣ ಉಳಿಸಿ ಕೊಳ್ಳಬೇಕೆಂಬ ಒಂದೇ ಅಪೇಕ್ಷೆಯಿಂದ ಸರ್ಕಾರಿ ಆಸ್ಪತ್ರೆಗೆ ಬಂದ ಸಾಮಾನ್ಯಜನ ಎನ್ನುವುದು ಕಟುಸತ್ಯ. ಇದುವರೆವಿಗೆ ಬಂದ ವರ್ತಮಾನದ ಪ್ರಕಾರ ಆಸ್ಪತ್ರೆಯಲ್ಲಿ ಇದ್ದ ವೈಫಲ್ಯಗಳ ಕಾರಣದಿಂದ ಇವರು ಪ್ರಾಣ ಕಳೆದುಕೊಂಡಿದ್ದಾರೆ" ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ಯಾರ ತಪ್ಪಿಗಾಗಿ ಯಾರಿಗೆ ಶಿಕ್ಷೆ

ಯಾರ ತಪ್ಪಿಗಾಗಿ ಯಾರಿಗೆ ಶಿಕ್ಷೆ

"ಸತ್ತವರು ಸಾಮಾನ್ಯಜನ, ಸತ್ತಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಆದಕ್ಕೆ ಕಾರಣ ನಮ್ಮ ದಿವ್ಯ ನಿರ್ಲಕ್ಷ್ಯ. ಈ ಹಾರಿಹೋದ ಪ್ರಾಣ ಪಕ್ಷಿಗಳ ಕುಟುಂಬಗಳ ಅವಲಂಬಿತರು ಅಥವಾ ಬಂಧುಬಳಗದವರು ದುಃಖದ ಮಡುವಿನಲ್ಲಿ ಬಿದ್ದಿದ್ದಾರೆ ಎಂದು ಆಲೋಚನೆ ಮಾಡುವ ಪ್ರಯತ್ನವನ್ನಾದರೂ ನೀವು ಮಾಡಿದ್ದೀರಾ? ಯಾರ ತಪ್ಪಿಗಾಗಿ ಯಾರಿಗೆ ಶಿಕ್ಷೆ? ಯಾರ ದರ್ಪ ಮತ್ತು ಅಹಂಕಾರಗಳಿಗೆ ಯಾರು ಬಲಿಯಾಗಿದ್ದಾರೆ? ಆಲೋಚನೆ ಮಾಡಿದ್ದೀರಾ? ಸತ್ತ ಕುಟುಂಬಗಳಿಗೆ ಒಂದು ವೇಳೆ ನೀವು ಘೋಷಿಸಬಹುದಾದ ಪರಿಹಾರ ಮೌಲಿಕವಾಗಿ ಯಾವ ಯೋಗ್ಯತೆ ಉಳ್ಳದ್ದಾಗಿರುತ್ತದೆ? ಅಸಹಾಯಕ ಜನರ ಜೀವಕ್ಕೆ ಬೆಲೆ ಕಟ್ಟುವ ಒಂದು ದುರಹಂಕಾರದ ಪರಮಾವಧಿ ಯ ಪ್ರಕ್ರಿಯೆಯಾಗುತ್ತದೆಯೇ ಹೊರತು ಪಶ್ಚಾತ್ತಾಪಟ್ಟ ಮನಸ್ಸಿನಿಂದ, ಪ್ರಾಮಾಣಿಕವಾದ ಪ್ರಯತ್ನ ವಾಗುವುದಿಲ್ಲ" ಎಂದು ರಮೇಶ್ ಕುಮಾರ್ ಹೇಳಿದ್ದಾರೆ.

ಜೀವ ಉಳಿಸಲು ವ್ಯವಸ್ಥೆ ಪೂರಕವಾಗಿಲ್ಲ

ಜೀವ ಉಳಿಸಲು ವ್ಯವಸ್ಥೆ ಪೂರಕವಾಗಿಲ್ಲ

"80 ರ ಪ್ರಾಯದಲ್ಲಿರುವ ತಮಗೆ, 71, 72 ರ ಪ್ರಾಯದಲ್ಲಿರುವ ನನಗೆ ಬದುಕಿರಲೇಬೇಕೆಂಬ ದೃಢನಿಶ್ಚಯವಿದೆ ಮತ್ತು ನಮ್ಮನ್ನು ಉಳಿಸಿಕೊಳ್ಳಲು ವ್ಯವಸ್ಥೆಯೂ ಇದೆ. ಆದರೆ ನಮ್ಮನ್ನು ಈ ಸ್ಥಾನಗಳಿಗೆ ತಂದ ಜನರ ಜೀವ ಉಳಿಸಲು ವ್ಯವಸ್ಥೆ ಪೂರಕವಾಗಿಲ್ಲ. ಔಪಚಾರಿಕವಾಗಿ ಎಲ್ಲಾ ಬೆಲೆಯನ್ನು ಕಳೆದುಕೊಂಡಿರುವ ರಾಜಕೀಯ ಭಾಷೆಯಲ್ಲಿ ನೀವು ರಾಜೀನಾಮೆಯನ್ನು ಕೊಡಿ ಎಂದು ಕೇಳುವ ಮೂರ್ಖ ನಾನಲ್ಲ. ಒಂದು ವೇಳೆ ನೀವು ಅಂತಹ ನಿರ್ಧಾರ ಮಾಡಿದರೂ ಸತ್ತವರೇನೂ ಬದುಕಿ ಬರುವುದಿಲ್ಲ ಅಥವಾ ಪರಿಸ್ಥಿತಿಯೂ ಸುಧಾರಿಸುವುದಿಲ್ಲ. ಅದೊಂದು ರಾಜಕೀಯ ಮೇಲಾಟ ಮಾತ್ರ ಆಗುತ್ತದೆ. ನಾವು ಪ್ರಾಣಿ ಪ್ರಪಂಚದಿಂದ ವಿಭಿನ್ನವಾಗಿ ಮನುಷ್ಯ ಲೋಕದಲ್ಲಿ ಇದ್ದೇವೆ. ನಾಗರಿಕ ಸಮಾಜವೆಂದು ಜಂಭ ಕೊಚ್ಚಿಕೊಳ್ಳುತ್ತೇವೆ. ಅಳಲು, ದುಃಖ ದುಮ್ಮಾನಗಳನ್ನು ತೋಡಿಕೊಳ್ಳಲು ಪ್ರಾಣಿಗಳಿಗೆ ಅವಕಾಶವಿಲ್ಲ. ಆ ಪ್ರಾಣಿ ಅನುಭವಿಸುವ ನೋವೇ ಮೂಕವೇದನೆ. ಇಂದು ನಮ್ಮೆಲ್ಲರ ಬೇಜವಾಬ್ದಾರಿಯಿಂದ ನಾಗರಿಕ ಸಮಾಜ ಪ್ರಾಣಿಗಳ ರೀತಿಯಲ್ಲೇ ಮೂಕ ವೇದನೆಯನ್ನು ಅನುಭವಿಸುತ್ತಿದೆ" ಎಂದು ಪತ್ರದಲ್ಲಿ ಹೇಳಿದ್ದಾರೆ.

ಎಂಥಹ ವಿಪರ್ಯಾಸ

ಎಂಥಹ ವಿಪರ್ಯಾಸ

"ಮನುಷ್ಯನಿಗೆ ಪಂಚೇಂದ್ರಿಯಗಳು ನಿಷ್ಕ್ರಿಯವಾದ ಮೇಲೆ ಅಂತಹ ಮನುಷ್ಯ ಸಮಾಜಕ್ಕೆ ಹೆಚ್ಚು ಉಪಯುಕ್ತ ನಾಗುವುದಿಲ್ಲ. ಪಂಚೇಂದ್ರಿಯಗಳು ಸಕ್ರಿಯವಾಗಿರುವ ಮನುಷ್ಯನಿಗೆ ಇಂತಹ ಸನ್ನಿವೇಶದಲ್ಲಿ ನಿರ್ಜೀವ ಹೆಣದಂತೆ ಬಿದ್ದಿರಲೂ ಸಾಧ್ಯವಿಲ್ಲ. ನನ್ನನ್ನು ಒಳಗೊಂಡು ನಾವೆಲ್ಲರೂ ಈ ದುರಂತಕ್ಕೆ ಕಾರಣ ರಾಗಿದ್ದೇವೆ. ಸತ್ತ ಸಂಬಂಧಿಕರ ಶವವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಬರಲು ಹಣ ಇಲ್ಲದೆ ಸಂಬಂಧಿಕರು ಆ ಶವವನ್ನು ಅಲ್ಲಿಯೇ ಬಿಟ್ಟು ಬರುತ್ತಾರೆ ಇದು ಮಾಧ್ಯಮಗಳಲ್ಲಿ ಪ್ರಕಟವಾಗುತ್ತೆ. ಆದರೆ ತಮಗೆ ಮತ್ತು ನನಗೆ ಇದರ ಯಾವುದೇ ರೀತಿಯ ಸಂಬಂಧವಿಲ್ಲದಂತೆ ನಾವು ವರ್ತಿಸಿದ್ಧೇವೆ. ಹೆಮ್ಮಾರಿ ಗೆ ಬಲಿಯಾಗಿ ಗತಿಸಿಹೋದ ವರ ದಹನಕ್ರಿಯೆಗೆ ಜನ ಪರದಾಡುತ್ತಿದ್ದಾರೆ,ಆದರೂ ನಮ್ಮದೊಂದು ಸಂವಿಧಾನಬದ್ಧವಾಗಿ ಸ್ಥಾಪಿತವಾದ ಜವಾಬ್ದಾರಿಯುತ ನಾಗರಿಕ ಸರ್ಕಾರ. ಎಂತಹ ವಿಪರ್ಯಾಸ"

"ಆಸ್ಪತ್ರೆ ಸಿಗುವುದು ದುರ್ಲಭ, ಹೋದ ಆಸ್ಪತ್ರೆಯಲ್ಲಿ ಆಮ್ಲಜನಕದ ಲಭ್ಯತೆ ಆಸ್ಪತ್ರೆಯ ಜವಾಬ್ದಾರಿಯಲ್ಲ ಕೃತಕ ಉಸಿರಾಟದ ಯಂತ್ರಗಳು (ventilators) ನಮಗೆ ಸಂಬಂಧವೇ ಇಲ್ಲ. ಭಾರತ ದೇಶದ ಸರ್ವೋಚ್ಚ ನ್ಯಾಯಾಲಯ ದೆಹಲಿ ನಗರವಾಸಿಗಳಿಗೆ ಆಮ್ಲಜನಕ ಪೂರೈಕೆ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಸೂಚನೆ ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ. ಜೀವನದಲ್ಲಿ ಒಂದು ಆಸೆ ,ತಾನೇನಾದರೂ ಸಾಧಿಸಬೇಕೆಂಬುದು. ತಮಗೆ ಇನ್ನೇನು ಜೀವನದಲ್ಲಿ ಆಗಬೇಕೆಂಬ ಆಸೆ ಉಳಿದಿದೆ? ಒಂದು ವೇಳೆ ಇದೇ ಸ್ಥಿತಿಯಲ್ಲಿ ಮುಂದುವರೆಯಬೇಕೆಂದು ಇದ್ದರೆ ಯಾವ ಪುರುಷಾರ್ಥಕ್ಕಾಗಿ ಎಂದು ತಿಳಿದುಕೊಳ್ಳುವ ಕುತೂಹಲ ನನಗಿದೆ. ಈ ಮಾತು ನಿಮಗಷ್ಟೇ ಅಲ್ಲ ಸಾರ್ವಜನಿಕ ಜೀವನದಲ್ಲಿ ಇರುವ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರಿಗೆ ಅನ್ವಯಿಸುತ್ತದೆ" ಎಂದು ಹೇಳಿದ್ದಾರೆ.

ಭೀಕರ ದುರಂತದ ಸನ್ನಿವೇಶ

ಭೀಕರ ದುರಂತದ ಸನ್ನಿವೇಶ

ನಮಗೆ (ರಾಜಕೀಯ ಮುಖಂಡರುಗಳಿಗೆ) ನಾವು ಗಳಿಸಿರುವ ಭ್ರಷ್ಟ ಹಣ ನಮ್ಮ ಖಾಸಗಿ ಬದುಕಿನಲ್ಲಿ ಅಭದ್ರತೆಯನ್ನು ದೂರಮಾಡುತ್ತದೆ ಹಾಗಾಗಿ ನಮ್ಮ ಹೊಸಲಿಂದಾಚೆಗಿರುವ ನೋವು ನಮ್ಮದಾಗಿರುವುದಿಲ್ಲ. ನಮಗೆ ಅರ್ಥವೂ ಆಗುವುದಿಲ್ಲ. ಆದ್ದರಿಂದ ಇಂದು ನಡೆದಿರುವಂತಹ ಭೀಕರ ದುರಂತ ಸನ್ನಿವೇಶಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳಮುಖಂಡರಾದ ನಮ್ಮ ಪ್ರತಿಕ್ರಿಯೆಗಳು ಅಸಹಜ ವಾಗಿರುತ್ತೆ, ನಾಟಕೀಯ ವಾಗಿರುತ್ತೆ. ಈ ನಾಟಕಕ್ಕೆ ಕೊನೆ ಎಂದು?
ಎಂದು, ನಮ್ಮ ಪಂಚೇಂದ್ರಿಯಗಳು ಸಕ್ರಿಯವಾಗುತ್ತೋ ಅಂದು ನಾಟಕ ಅಂತ್ಯವಾಗುತ್ತದೆ. ಇಂತಹ ಅಗ್ನಿ ಪರೀಕ್ಷೆಯ ಸಮಯದಲ್ಲಿ ನಾಟಕ ಮುಂದುವರೆಯುತ್ತೋ ಅಥವಾ ಅಂತ್ಯವಾಗಿ ಪಂಚೇಂದ್ರಿಯಗಳು ಸಕ್ರಿಯವಾಗಿತ್ತೋ ಸಾಮಾನ್ಯ ಜನರಿಗೆ ಸಾಬೀತು ಮಾಡುವ ಹೊಣೆ ನಿಮ್ಮ ಮೇಲಿದೆ. ನನಗೆ ರಾಜಕೀಯ ಪೂರ್ವಗ್ರಹಪೀಡಿತ ಆಲೋಚನೆ ಯಾಗಲಿ ಅಥವಾ ಮತ್ತಾವುದೇ ದುರಾಲೋಚನೆ ಗಳು ಇರುವುದಿಲ್ಲ. ಇದು ಕೇವಲ ನೊಂದ ಮನಸ್ಸಿನ ಹೃದಯಾಂತರಾಳದ ಮಾತುಗಳು. ನಾನು ಯಾವುದೇ ರೀತಿಯ ಆಶ್ಚರ್ಯಕರ ಪ್ರತಿಕ್ರಿಯೆಗಳು ಈ ಪತ್ರಕ್ಕೆ ಸಿಗುತ್ತದೆ ಎಂದು ವಿಶ್ವಾಸಿಸಿಲ್ಲ. ಅದಕ್ಕೆ ಕಾರಣ ಸ್ಥಗಿತಗೊಂಡ ಪಂಚೇಂದ್ರಿಯಗಳು.

ಇಂತಿ ನಿಮ್ಮ ವಿಶ್ವಾಸಿ
ಕೆ. ರ್. ರಮೇಶ್ ಕುಮಾರ್
ಶಾಸಕರು, ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+