ಕರ್ತವ್ಯದ ವೇಳೆ ಮಹಿಳಾ ಪೊಲೀಸರು ಸೀರೆ ಉಡುವಂತಿಲ್ಲ
ಬೆಂಗಳೂರು, ಅಕ್ಟೋಬರ್ 21 : ಪೊಲೀಸ್ ಇಲಾಖೆ ಮಹಿಳಾ ಸಿಬ್ಬಂದಿಗಳಿಗೆ ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ. ಕರ್ತವ್ಯದ ವೇಳೆ ಸೀರೆ ಉಡುವಂತಿಲ್ಲ, ಗಾಜಿನ ಬಳೆ ತೊಡುವಂತಿಲ್ಲ, ಹೂ ಮುಡಿಯುವಂತಿಲ್ಲ ಮುಂತಾದ ನಿಯಮಗಳನ್ನು ಪಾಲಿಸಬೇಕಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಈ ಕುರಿತು ಅಕ್ಟೋಬರ್ 16ರಂದು ಸುತ್ತೋಲೆ ಹೊರಡಿಸಿದ್ದಾರೆ. ಮಹಿಳಾ ಪೊಲೀಸರಿಗಾಗಿ ರೂಪಿಸಿರುವ ನಿಯಮಗಳ ಬಗ್ಗೆ ಪರವಿರೋಧ ಚರ್ಚೆ ನಡೆಯುತ್ತಿದೆ.
ನೂತನ ಸುತ್ತೋಲೆ ಪ್ರಕಾರ ಎಲ್ಲಾ ಮಹಿಳಾ ಅಧಿಕಾರಿಗಳು/ಸಿಬ್ಬಂದಿ ಇನ್ನು ಮುಂದೆ ಕರ್ತವ್ಯದ ವೇಳೆ ಸೀರೆ ಬದಲು ಪ್ಯಾಂಟ್-ಶರ್ಟ್ ಸಮಸ್ತ್ರ ಧರಿಸಬೇಕು ಎಂದು ಸೂಚನೆ ನೀಡಲಾಗಿದೆ. ಮಹಿಳಾ ಸಿಬ್ಬಂದಿಗಳ ಅಭಿಪ್ರಾಯ ಪಡೆದು ಉನ್ನತ ಮಟ್ಟದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಹೊಸ ಸುತ್ತೋಲೆಯಲ್ಲಿ ಏನಿದೆ?
* ಗಾಜಿನ ಬಳೆ ಧರಿಸುವಂತಿಲ್ಲ. ಸಣ್ಣ ಗಾತ್ರದ ಲೋಹದ ಬಳೆಗಳನ್ನು ಹಾಕಿಕೊಳ್ಳಬಹುದು
* ಕೂದಲು ಹರಡದಂತೆ ತುರುಬು ಕಟ್ಟಿಕೊಂಡು ಕಪ್ಪು ಬಣ್ಣದ ಬ್ಯಾಂಡ್ ಸುತ್ತಿಕೊಳ್ಳಬೇಕು
* ಬೇರೆ ಬಣ್ಣದ ಹೇರ್‌ಪಿನ್/ಬ್ಯಾಂಡ್ ಧರಿಸಬಾರದು
* ಹೂವು ಮತ್ತು ಇತರ ಯಾವುದೇ ಪರಿಕರ ಹಾಕಿಕೊಳ್ಳಬಾರದು
* ಕೂದಲಿಗೆ ಬಣ್ಣ ಹಚ್ಚುವಂತಿಲ್ಲ. ಕಪ್ಪು ಬಣ್ಣ ಡೈ ಮಾತ್ರ ಬಳಸಬೇಕು
* ಕಿವಿಯೋಲೆ ಹಾಗೂ ಹಣೆಬಿಂದಿ ಚಿಕ್ಕದಾಗಿರಬೇಕು
ಕರ್ನಾಟಕ ಪೊಲೀಸ್ ಕಾಯ್ದೆ ಪ್ರಕಾರ ಪ್ರತಿ ಮಹಿಳಾ ಸಿಬ್ಬಂದಿ ವಿಶೇಷ ಸಂದರ್ಭದ ಹೊರತುಪಡಿಸಿ ಕಡ್ಡಾಯವಾಗಿ ಪ್ಯಾಂಟ್, ಶರ್ಟ್ ಸಮವಸ್ತ್ರ ಧರಿಸಬೇಕು. ಆದರೆ, ಕೆಲವರು ತಮ್ಮ ದೇಹಕ್ಕೆ ಸರಿ ಹೊಂದುವುದಿಲ್ಲ ಎಂದು ಸೀರೆ ಉಡುತ್ತಿದ್ದರು. ಆದರೆ, ಈಗ ಸೀರೆ ಉಡದಂತೆ ಸುತ್ತೋಲೆ ಹೊರಡಿಸಲಾಗಿದೆ.












Click it and Unblock the Notifications