ಬೆಳಗಾವಿ: ಪಂಚಮಸಾಲಿ ಬೃಹತ್ ಸಮಾವೇಶ, ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಚಾರ ನಿಷೇಧ: ಪೊಲೀಸ್ ಇಲಾಖೆ
ಬೆಳಗಾವಿ, ಡಿಸೆಂಬರ್ 21: ಪಂಚಮಸಾಲಿ ಸಮುದಾಯದಿಂದ 2ಎ ಮೀಸಲಾತಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಂಡಿದ್ದಾರೆ. ಹೀಗಾಗಿ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿನ ವಾಹನ ಸಂಚಾರ ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತ ಬುಧವಾರ ಆದೇಶ ಹೊರಡಿಸಿದ್ದಾರೆ.
ಬೆಳಗಾವಿಯ ಜಿಲ್ಲೆಯ ಹಿರೇಬಾಗೇವಾಡಿ ಕಡೆಗಿಂದ ರಾಷ್ಟ್ರೀಯ ಹೆದ್ದಾರಿ (NH4) ಮೂಲಕ ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಪಂಚಮಸಾಲಿ ಸಮುದಾಯದ ಮುಖಂಡರು, ರಾಜ್ಯದ ಲಕ್ಷಗಟ್ಟಲೇ ಜನರು ಪ್ರತಿಭಟನಾ ಮೆರವಣಿಗೆ ಮೂಲಕ ಈಗಾಗಲೇ ಬೆಳಗಾವಿಯತ್ತ ಆಗಮಿಸುತ್ತಿದ್ದಾರೆ.
ಬೆಳಗಾವಿಯಲ್ಲಿ ಪಂಚಮಸಾಲಿ ಸಮುದಾಯದಿಂದ ಬೃಹತ್ ಸಮಾವೇಶ ನಡೆಯಲಿದ್ದು, ಸುಮಾರು ಐದಾರು ಲಕ್ಷ ಮಂದಿ ಸೇರುವ ಸಾಧ್ಯತೆ ಇದೆ. ಈ ಕಾರಣಕ್ಕೆ ಈ ಭಾಗದ ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬೋರಲಿಂಗಯ್ಯ ಅವರು ಆದೇಶ ಹೊರಡಿಸಿದ್ದಾರೆ.

ಬೆಂಗಳೂರು, ಪುಣೆಗೆ ತೆರಳು ಬದಲಿ ಮಾರ್ಗ
ಮಹಾರಾಷ್ಟ್ರದ ಪುಣೆಕಡೆಯಿಂದ ಬರುವ ವಾಹನಗಳು ಬೆಂಗಳೂರಿಗೆ ಹೋಗುವವರು ಹುಬ್ಬಳ್ಳಿ ಧಾರವಾಡಕ್ಕೆ ಬದಲಾಗಿ ಹುಕ್ಕೇರಿ, ಗೋಕಾಕ್, ಯರಗಟ್ಟಿ, ಸವದತ್ತಿ ಮಾರ್ಗವಾಗಿ ಧಾರವಾಡಕ್ಕೆ ಪ್ರಯಾಣ ಬೆಳೆಸಿ ಅಲ್ಲಿಂದ ಸಾಗಬಹುದು. ಬೆಳಗಾವಿ ಬರುವವರು ಸಾಮಾನ್ಯ ದಿನಗಳಲ್ಲಿ ಬರುವಂತೆ ರಾಷ್ಟ್ರೀಯ ಹೆದ್ದಾರಿ ಹಿಡಿದುಕೊಂಡೆ ಬರಬಹುದು. ಆದರೆ ಬೆಂಗಳೂರಿನಿಂದ ಬೆಳಗಾವಿ ನಗರದ ಹಾದು ಕೊಲ್ಹಾಪುರಕ್ಕೆ ಹೋಗುವವರು ಮಾತ್ರ ಎಂಕೆ ಹುಬ್ಬಳಿ ಬಳಿ ಮಾರ್ಗ ಬದಲಿಸಿ, ಬೈಲಹೊಂಗಲ, ನೇಸರಗಿ ಮೂಲಕ ಸಂಚರಿಸಬಹುದು ಎಂದು ನಗರ ಪೊಲೀಸ್ ಆಯುಕ್ತ ಆದೇಶದಲ್ಲಿ ತಿಳಿಸಲಾಗಿದೆ.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಅನೇಕ ಬಾರಿ ಮನವಿ ನೀಡಿದರು ಪ್ರಯೋಜವಾಗಿಲ್ಲ. ರಾಜ್ಯ ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಘೋಷಿಸಿದ್ದನ್ನು ಸ್ವಾಗತಿಸಿದ ಪಂಚಮಸಾಲಿ ಸಮಾಜವು ಇದೇ ಡಿ.19ರೊಳಗೆ ತಮಗೆ ಮೀಸಲಾತಿ ಘೋಷಿಸಿ ಬೇಡಿಕೆ ಈಡೇರಿಸಬೇಕು ಎಂದು ಗಡುವ ನೀಡಿದ್ದಾರೆ. ಅದು ಈಡೇರದ ಹಿನ್ನೆಲೆಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಹೊರಟು, ಸಮಾವೇಶ ಹಮ್ಮಿಕೊಂಡಿದ್ದಾರೆ.












Click it and Unblock the Notifications