ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆಯುವರ ಸಂಖ್ಯೆ ಮೂರು ಪಟ್ಟು ಹೆಚ್ಚಳ
ಬೆಂಗಳೂರು, ಮಾ. 03: ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಭಾರತದಲ್ಲಿ ವೈದ್ಯಕೀಯ ಪದವಿಯ ಅಂತರಂಗದ ಸತ್ಯಗಳನ್ನು ಒಂದೊಂದನ್ನಾಗಿ ಹೊರ ಹಾಕುತ್ತಿದೆ. ವಿದೇಶದಲ್ಲಿ ಎಂಬಿಬಿಎಸ್ ಪದವಿ ಪಡೆದು ಭಾರತದಲ್ಲಿ ಚಿಕಿತ್ಸೆ ಕೊಡಲು ಅರ್ಹತೆ ಪಡೆಯಲು ನಡೆಸುವ ವಿದೇಶಿ ವೈದ್ಯಕೀಯ ಪದವಿ ಅರ್ಹತಾ ಪರೀಕ್ಷೆ ತೆಗೆದುಕೊಂಡವರ ಸಂಖ್ಯೆ ಕಳೆದ ಐದು ವರ್ಷದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. ಭಾರತದಲ್ಲಿ ದುಬಾರಿ ಶುಲ್ಕ ಕಟ್ಟಲಾಗದೇ ಕಡಿಮೆ ವೆಚ್ಚದಲ್ಲಿ ಎಂಬಿಬಿಎಸ್ ಪದವಿ ಕೊಡುವ ರಷ್ಯಾ, ಚೀನಾ, ಉಕ್ರೇನ್, ಫಿಲಿಫೈನ್ಸ್‌ನತ್ತ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ.
ಅರ್ಹತಾ ಪರೀಕ್ಷೆ ನಡೆಸುವ ಮಂಡಳಿಯ ಅಂಕಿ ಅಂಶಗಳ ಪ್ರಕಾರ 2015ರಲ್ಲಿ 12,116 ವಿದ್ಯಾರ್ಥಿಗಳು ಎಎಮ್ ಜಿಇ ಪರೀಕ್ಷೆಯನ್ನು ತೆಗೆದುಕೊಂಡಿದ್ದರು. 2020 ರಲ್ಲಿ 35,774 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದಾರೆ. ವರ್ಷಕ್ಕೆ ಎರಡು ಬಾರಿ ರಾಷ್ಟ್ರೀಯ ಪರೀಕ್ಷಾ ಮಂಡಳಿ ವಿದೇಶದಲ್ಲಿ ಮೆಡಿಕಲ್ ಪದವಿ ಪಡೆದು ಬಂದವರಿಗಾಗಿ ಎಫ್‌ಎಮ್‌ಜಿಇ ಪರೀಕ್ಷೆಯನ್ನು ಆಯೋಜಿಸುತ್ತದೆ. ಈ ಪರೀಕ್ಷೆ ತೆಗೆದುಕೊಂಡ ವಿದ್ಯಾರ್ಥಿಗಳಲ್ಲಿ ಬಹುತೇಕರು ಕಜಕಿಸ್ತಾನ್, ಫಿಲಿಫೈನ್ಸ್, ಉಕ್ರೇನ್, ರಷ್ಯಾ, ಚೀನಾದಲ್ಲಿ ವೈದ್ಯಕೀಯ ಪದವಿ ಪಡೆದವರು. 2020 ರಲ್ಲಿ ಚೈನಾ ಮೂಲದ ವಿಶ್ವ ವಿದ್ಯಾಲಯಗಳಲ್ಲಿ ಎಂಬಿಬಿಎಸ್ ಪದವಿ ಪಡೆದ 12,680 ವಿದ್ಯಾರ್ಥಿಗಳು ಅರ್ಹತಾ ಪರಿಕ್ಷೆ ಬರೆದಿದ್ದಾರೆ. ಉಳಿದವರಲ್ಲಿ 4313 ರಷ್ಯಾ, 4258 ವಿದ್ಯಾರ್ಥಿಗಳು ಉಕ್ರೇನ್‌ನಿಂದ 4156 ವಿದ್ಯಾರ್ಥಿಗಳು ಕಜಕಿಸ್ತಾನ್, 3142 ವಿದ್ಯಾರ್ಥಿಗಳು ಫಿಲಿಫೈನ್ಸ್‌ನಲ್ಲಿ ಮೆಡಿಕಲ್ ಪದವಿ ಪಡೆದಿದ್ದಾರೆ.
FMGE ಪರೀಕ್ಷೆ ತೆಗೆದುಕೊಂಡ ವೈದ್ಯಕೀಯ ವಿದ್ಯಾರ್ಥಿಗಳ ಅಂಕಿ ಅಂಶಗಳು
2015 - 12,116
2016- 12342
2017- 15949
2018- 21,345
2019- 28,532,
2020- 35774

FMGE ಉತ್ತೀರ್ಣ ಪ್ರಮಾಣ: ಇನ್ನು ಕಳೇದ ಐದು ವರ್ಷದಲ್ಲಿ ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ FMGE ಅರ್ಹತಾ ಪರೀಕ್ಷೆಯಲ್ಲಿ ಶೇ. 15. 82 ರಷ್ಟು ಮಂದಿ ಉತ್ತೀರ್ಣರಾಗುತ್ತಿದ್ದಾರೆ. ಉಕ್ರೇನ್‌ನಲ್ಲಿ ವೈದ್ಯಕೀಯ ಪದವಿ ಪಡೆದವರ ಉತ್ತೀರ್ಣ ಪ್ರಮಾಣ 17.22 ಆಗಿದ್ದು, ಉಕ್ರೇನ್‌ನತ್ತ ಹೆಚ್ಚು ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ.

ಭಾರತದಲ್ಲಿ ಕಟ್ಟಲಾಗದ ಶುಲ್ಕ: ರಾಜಕಾರಣಿಗಳ , ಉಳ್ಳವರ ಅಧೀನದಲ್ಲಿರುವ ಭಾರತದ ಮೆಡಿಕಲ್ ಕಾಲೇಜುಗಳಲ್ಲಿ ವೈದ್ಯಕೀಯ ಪದವಿ ಮಾಡಬೇಕಾದರೆ ಕನಿಷ್ಠ ಒಂದೂವರೆ ಕೋಟಿ ರೂ.ನಿಂದ ಎರಡು ಕೋಟಿ ರೂ. ಪಾವತಿಸಬೇಕು. ಅದೇ ಉಕ್ರೇನ್, ಫಿಲಿಫೈನ್ಸ್‌ನಂತಹ ದೇಶಗಳಲ್ಲಿ ಕೇವಲ 15 ರಿಂದ 20 ಲಕ್ಷ ರೂ. ನಲ್ಲಿ ಆರು ವರ್ಷದ ವೈದ್ಯಕೀಯ ಪದವಿ ಮುಗಿಸಬಹುದು. ಭಾರತದಲ್ಲಿ ನೀಟ್ ಪರೀಕ್ಷೆ ಪಾಸಾಗಿ ಸರ್ಕಾರಿ ಸೀಟು ಗಿಟ್ಟಿಸಿಕೊಂಡರು ತಗಲುವ ವೆಚ್ಚದಲ್ಲಿ ವಿದೇಶದಲ್ಲಿ ಮೆಡಿಕಲ್ ಪದವಿ ಪಡೆಯಬಹುದು. ಅಂತಹ ದುಃಸ್ಥಿತಿ ಭಾರತದಲ್ಲಿ ನಿರ್ಮಾಣವಾಗಿದೆ.
ಈ ಕುರಿತು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಇಲಾಖೆಯ ನಿವೃತ್ತ ಕಾರ್ಯದರ್ಶಿ ಸುಜಾತಾ ರಾವ್, ಭಾರತದಲ್ಲಿ ಜನ ಸಂಖ್ಯೆ ಹೆಚ್ಚಳವಾದಂತೆ ಮೆಡಿಕಲ್ ಕೇರ್‌ನಲ್ಲಿ ವೈದ್ಯರಿಗೆ ಹೆಚ್ಚು ಬೇಡಿಕೆ ಇದೆ. ಬೇಡಿಕೆಗೆ ತಕ್ಕಂತೆ ನಮ್ಮಲ್ಲಿ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಇನ್ನು ಪ್ರಸಕ್ತ ಸಾಲಿನಲ್ಲಿ 16 ಲಕ್ಷ ವಿದ್ಯಾರ್ಥಿಗಳು 2021 ರ ನೀಟ್ ಪರೀಕ್ಷೆ ಬರೆದಿದ್ದಾರೆ. ಅದರಲ್ಲಿ ಭಾರತದಲ್ಲಿ 83,000 ವೈದ್ಯಕೀಯ ಸೀಟುಗಳು ಲಭ್ಯವಿದ್ದು, ಅದರಲ್ಲಿ ಅರ್ಧ ಭಾಗ ಖಾಸಗಿ, ಇನ್ನರ್ಧ ಸೀಟುಗಳು ಸರ್ಕಾರಿ ಕೋಟಾದ ಸೀಟುಗಳು. ದೇಶದಲ್ಲಿ ವೈದ್ಯರ ಮತ್ತು ರೋಗಿಗಳ ಸರಾಸರಿ ನೋಡಿದಾಗ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತಕ್ಕೆ 1.38 ಮಿಲಿಯನ್ ವೈದ್ಯರು ಬೇಕು. ಆದರೆ ರಾಷ್ಟ್ರೀಯ ಆರೋಗ್ಯ ಇಲಾಖೆ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಸದ್ಯ 1.2 ಮಿಲಿಯನ್ ವೈದ್ಯರಿದ್ದಾರೆ. ಹೀಗಾಗಿ ವೈದ್ಯಕೀಯ ಕ್ಷೇತ್ರದಲ್ಲಿ ವೈದ್ಯರಿಗೆ ಹೆಚ್ಚು ಬೇಡಿಕೆ ಇದ್ದು, ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಪದವಿ ಕೊಡುವ ದೇಶಗಳತ್ತ ಮುಖ ಮಾಡುತ್ತಿದ್ದಾರೆ.












Click it and Unblock the Notifications