"ಕನ್ನಡ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗೆ ನಮ್ಮ ಸರ್ಕಾರವು ಹೆಚ್ಚಿನ ಒತ್ತು'
ಕೊಪ್ಪಳ, ನವೆಂಬರ್ 01: ಕನ್ನಡವನ್ನು ಕನ್ನಡಿಗರೆಲ್ಲರೂ ಮಾತನಾಡಿದಾಗ ಮತ್ತು ಬಳಸಿದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರೂ ಆದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ಎಸ್.ತಂಗಡಗಿ ಅವರು ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕನ್ನಡದಲ್ಲಿ ಲಿಪಿಯನ್ನು ಮುಂದಿನ ಜನಾಂಗಕ್ಕೂ ಬರೆಯಲು ಕಲಿಸಿದಾಗ ಮಾತ್ರ ಈ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಕನ್ನಡ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗೆ ನಮ್ಮ ಸರ್ಕಾರವು ಹೆಚ್ಚಿನ ಒತ್ತು ನೀಡಿದೆ ಎಂದು ತಿಳಿಸಿದರು.

ಕುವೆಂಪು ಅವರು ಹೇಳುವಂತೆ ಕರ್ನಾಟ ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಇಲ್ಲಿ ವಿವಿಧತೆಯಲ್ಲಿ ಏಕತೆ ನೆಲೆಸಿದೆ. ಕನ್ನಡನಾಡು ಸಂಪನ್ಮೂಲ ಹಾಗೂ ಸಂಸ್ಕೃತಿಯಿಂದ ಶ್ರೀಮಂತವಾಗಿದೆ. ಆದಿಕವಿ ವಾಲ್ಮೀಕಿಯಿಂದ ಆರಂಭವಾಗಿ ಪಂಪ, ರನ್ನ ಮೊದಲಾದ ಕವಿಗಳು ತಮ್ಮ ಕಾವ್ಯದಲ್ಲಿ ಕನ್ನಡನಾಡು ನುಡಿಯ ಬಗ್ಗೆ ಮನದುಂಬಿ ಹೊಗಳಿದ್ದಾರೆ. ರಾಜ್ಯ ಸರ್ಕಾರ ಕನ್ನಡ, ನಾಡು-ನುಡಿ ಸೇವೆಗೆ ಸದಾಕಾಲ ಬದ್ಧವಾಗಿದೆ ಎಂದರು.
ರಾಜ್ಯೋತ್ಸವ ಪುರಸ್ಕೃತರಿಗೆ ಅಭಿನಂದನೆ
ಇನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬಸಪ್ಪ ಭರಮಪ್ಪ ಚೌಡ್ಕಿ (ಜಾನಪದ ಕ್ಷೇತ್ರ), ಶ್ರೀ ದೇವೇಂದ್ರಕುಮಾರ ಪತ್ತಾರ (ಸಂಗೀತ ಕ್ಷೇತ್ರ), ಶ್ರೀ ಶೇಖರಗೌಡ ಮಾಲಿಪಾಟೀಲ್ (ಸಹಕಾರ ಕ್ಷೇತ್ರ) ಅವರಿಗೆ ಸಚಿವರು ಅಭಿನಂದನೆ ಸಲ್ಲಿಸಿದರು.
ಆಲೂರು ವೆಂಕಟರಾವ್ ಅವರು 1950ರಲ್ಲಿಯೇ ಕರ್ನಾಟಕ ಏಕೀಕರಣ ಚಳುವಳಿಯೊಂದಿಗೆ ರಾಜ್ಯವನ್ನು ಏಕೀಕರಿಸುವ ಕನಸನ್ನು ಕಂಡ ಮೊದಲ ವ್ಯಕ್ತಿಯಾಗಿದ್ದರು. ಬ್ರಿಟಿಷರ ಅಧಿಕಾರದ ಅವಧಿಯಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕವನ್ನು ಏಕೀಕರಣ ಚಳವಳಿ ಮೂಲಕ ಹಲವು ವರ್ಷಗಳವರೆಗೆ ನಿರಂತರ ಹೋರಾಟದ ಪ್ರತಿಫಲವಾಗಿ 1956 ನವೆಂಬರ್ 1ರಂದು ನಮ್ಮ ರಾಜ್ಯ ಉದಯವಾಯಿತು.
ರಾಜ್ಯದ ಪ್ರಗತಿಗೆ ಭದ್ರ ಬುನಾದಿ ಹಾಕಿದ ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿ. ದೇವರಾಜ ಅರಸುರವರ ಗಟ್ಟಿ ನಿರ್ಧಾರದಿಂದ 1973ರ ನವೆಂಬರ್ 1 ರಂದು ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಿದರು. ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಅನೇಕ ಮಹನೀಯರಲ್ಲಿ ಸಾಹಿತಿಗಳಾದ ಬಿ.ಎಂ.ಶ್ರೀಕಂಠಯ್ಯ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಕೆ.ಶಿವರಾಂ ಕಾರಂತರು, ದ.ರಾ.ಬೇಂದ್ರೆಯವರು ಹಾಗೂ ಕೆ.ಎನ್ ಕೃಷ್ಣರಾವ್ ಮತ್ತು ಇನ್ನೂ ಹಲವು ಮಹನೀಯರನ್ನು ಈ ಸಮಯದಲ್ಲಿ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕೊಪ್ಪಳ ಜಿಲ್ಲೆಯ ಪಾತ್ರವೂ ಅಷ್ಟೇ ಪ್ರಮುಖವಾದುದಾಗಿದೆ. ಜಿಲ್ಲೆಯ ಅಳವಂಡಿ ಶಿವಮೂರ್ತಿಸ್ವಾಮಿ, ಶಿರೂರು ವೀರಭದ್ರಪ್ಪ ತೆಗ್ಗಿನಮನಿ, ಶಂಕರಗೌಡ್ರು, ಪ್ರಭುರಾಜ ಪಾಟೀಲ್ ಸಂಗನಾಳ, ಪಂಚಾಕ್ಷರಿ ಹಿರೇಮಠ, ಸೋಮಪ್ಪ ಡಂಬಳ, ದೇವೇಂದ್ರಕುಮಾರ ಹಕಾರಿ, ಭೀಮನಗೌಡ ಪಾಟೀಲ್, ಹನುಮರಡ್ಡಿ ಕಲ್ಗುಡಿ, ಪಂಚಪ್ಪ ಶೆಟ್ಟರು, ಹಂಜಿ ಕೊಟ್ರಪ್ಪ ಮುಂತಾದವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದಾರೆ ಎಂದು ಸಚಿವರು ತಮ್ಮ ಭಾಷಣದಲ್ಲಿ ಸ್ಮರಿಸಿದರು.
ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಜನರು ನೆಮ್ಮದಿಯಿಂದ ಬದುಕುವಂತಾಗಿದೆ. ಈ ನಿಟ್ಟಿನಲ್ಲಿ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎನ್ನುವ ಸಾಮಾಜಿಕ ನ್ಯಾಯದ ಪರಿಪಾಲನೆ ಮಾಡುತ್ತಾ ನಾವು ಬರುತ್ತಿದ್ದೇವೆ ಎಂದು ಹೇಳಲು ನನಗೆ ಹೆಮ್ಮೆ ಅನಿಸುತ್ತದೆ.
ಪಂಚ ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷ 52 ರಿಂದ 56 ಸಾವಿರ ಕೋಟಿ ರೂ.ಗಳನ್ನು ಸರ್ಕಾರದಿಂದ ಖರ್ಚು ಮಾಡಲಾಗುತ್ತಿದೆ. ಈ ಯೋಜನೆಗಳಿಂದ ಬಡ ಜನರಿಗೆ ಅನುಕೂಲವಾಗಿದೆ. ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಶಕ್ತಿ ತುಂಬುವಂತಹ ಕೆಲಸವಾಗುತ್ತಿದೆ ಎಂದು ಹೇಳಿದರು.
ಇತಿಹಾಸದ ಪುಟದಲ್ಲಿ ದಾಖಲು
ಕೊಪ್ಪಳ ಜಿಲ್ಲೆಯಲ್ಲಿ ಅಂದಾಜು 2000 ಕೋಟಿ ರೂ.ಮೊತ್ತದ ನಾನಾ ಅಭಿವೃದ್ಧಿ ಕಾರ್ಯಗಳಿಗೆ ಅಕ್ಟೋಬರ್ 6ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ಚಾಲನೆ ದೊರೆತದ್ದು, ಆ ದಿನ ಕೊಪ್ಪಳ ಜಿಲ್ಲೆಯ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.












Click it and Unblock the Notifications