ಸರ್ಕಾರ ಕೆಡವಲು ವಿಪಕ್ಷಗಳು ಪ್ಲಾನ್: ಡಿ ಕೆ ಶಿವಕುಮಾರ್ ರಾಜಕೀಯ ವಿರೋಧಿಗಳಿಗೆ ಕೊಟ್ಟ ಉತ್ತರವೇನು?
ಹೊಸಕೋಟೆ, ಸೆಪ್ಟೆಂಬರ್ 23: ನಾವು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಎಂಬುದಕ್ಕೆ ನಿಮ್ಮ ಕಣ್ಣುಗಳೇ ಸಾಕ್ಷಿ. ಗ್ಯಾರಂಟಿ ಯೋಜನೆಗ ಮೂಲಕ ನಾಡಿನ ಪ್ರತಿಯೊಂದು ಕುಟುಂಬವು ಸಮೃದ್ಧಿಯಾಗಿದೆ. ಯಾವುದೇ ಕಾರಣಕ್ಕೂ ನಮ್ಮ ಕಾಂಗ್ರೆಸ್ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.
ತುಂಗಭದ್ರಾ ಜಲಾಶಯ ಬಾಗಿನ ಸಮರ್ಪಣೆ ಬಳಿಕ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗ ಮೂಲಕ ನಾಡಿನ ಪ್ರತಿಯೊಂದು ಕುಟುಂಬವು ಸಮೃದ್ಧಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಕಾಂಗ್ರೆಸ್ ಸರ್ಕಾರ ಚಿರಋಣಿಯಾಗಿರುತ್ತದೆ. ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಮ್ಮ ಕೈ ಹಿಡಿದಿದ್ದೀರಿ. ಇದಕ್ಕಾಗಿ ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇವೆ ಎಂದರು.

ಯಾವುದೇ ಕಾರಣಕ್ಕೂ ನಮ್ಮ ಕಾಂಗ್ರೆಸ್ ಸರ್ಕಾರ ಬೀಳಿಸಲು ಸಾಧ್ಯವಿಲ್ಲ. ಮುಂದೆ 10 ವರ್ಷಗಳ ಕಾಲ ನಾವೇ ಬಾಗಿನ ಅರ್ಪಿಸುತ್ತೇವೆ. ಈ ವರ್ಷ ಉತ್ತಮ ಮಳೆ ಬಂದು ನಾನು ಮತ್ತು ಸಿದ್ದರಾಮಯ್ಯ ಅವರು ಪ್ರಮುಖ ನಾಲ್ಕು ಅಣೆಕಟ್ಟುಗಳಿಗೆ ಬಾಗಿನ ಅರ್ಪಿಸಿದ್ದೇವೆ. ನಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ ಎಂದು ಹೇಳಿದರು.
ಜನ ಬದಲಾವಣೆ ಆಗಬಹುದು, ಜಗತ್ತು ಬದಲಾವಣೆ ಆಗಬಹುದು ಆದರೆ ನಾವು ಮಾಡಿರುವ ಸಾಧನೆಗಳು ಎಂದಿಗೂ ಶಾಶ್ವತ. ಆಣೆಕಟ್ಟು ಉಳಿಸಲು ಹಗಲು, ರಾತ್ರಿ ಕಷ್ಟಪಟ್ಟ ಕಾರ್ಮಿಕರ ಶ್ರಮದಲ್ಲಿ ನಾವು ಯಶಸ್ಸನ್ನು ಕಾಣುತ್ತಿದ್ದೇವೆ ಎಂದು ಹೇಳಿದರು.
ನಾವು ಉದ್ಘಾಟನೆ ವೇಳೆ ಗಿಡಕ್ಕೆ ನೀರು ಹಾಕಿದೆವು. ಇದು ರಾಜ್ಯದ ಜನರ ಹಾಗೂ ರೈತರ ಬದುಕನ್ನು ಹಸನು ಮಾಡಲು ಹಾಕಿದ ನೀರು. ನಮ್ಮ ಕರ್ನಾಟಕದ ಪಾಲಿನ ನೀರನ್ನು ಉಳಿಸಿಕೊಳ್ಳಲು ನಾವು ಹೋರಾಡುತ್ತೇವೆ. ನವಲಿಯಲ್ಲಿ ಸಮತೋಲಿತ ಅಣೆಕಟ್ಟು ನಿರ್ಮಾಣಕ್ಕೆ ನಾವು ಮುಂದಾಗುತ್ತೇವೆ. ಈ ಅಣೆಕಟ್ಟು ನಿರ್ಮಾಣಕ್ಕೆ ಈಗಾಗಲೇ ಡಿಪಿಆರ್ ತಯಾರಿಸಿದ್ದೇವೆ. ಸುಮಾರು ಹದಿನೈದು ಸಾವಿರ ಎಕರೆ ಭೂಮಿ ಇದಕ್ಕೆ ಬೇಕಾಗಿದೆ. ಈ ಕುರಿತು ನೆರೆಯ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಚರ್ಚೆ ನಡೆಸುತ್ತೇನೆಎಂದು ಹೇಳಿದರು.
ತುಂಗಭದ್ರಾ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡ ಕಾರಣಕ್ಕೆ ಸುಮಾರು 33 ಟಿಎಂಸಿಯಷ್ಟು ನಮ್ಮ ಪಾಲಿನ ನೀರು ಸಿಗುತ್ತಿಲ್ಲ. ಇದಕ್ಕೆಲ್ಲ ಪರಿಹಾರ ನವಲಿ ಅಣೆಕಟ್ಟು. ನಿರ್ಮಾಣಕ್ಕೆ ನೆರೆಯ ರಾಜ್ಯಗಳ ಸಹಕಾರವನ್ನು ಕೇಳಲಾಗುವುದು. ಗಂಗಾ ಸ್ನಾನ, ತುಂಗಾ ಪಾನ ಎನ್ನುವ ಮಾತಿದೆ. ಅಂದರೆ ತುಂಗಾ ನೀರು ಕುಡಿಯಲು ಅಷ್ಟು ಪವಿತ್ರವಾದುದು. ಶೃಂಗೇರಿಯ ಶಾರದಾಂಬೆಯ ಪಾದ ಮುಟ್ಟಿ ಹರಿಯು ತುಂಗಾ ನದಿ ನಮ್ಮನ್ನು ಕಾಪಾಡಿದ್ದಾಳೆ. ಹಂಪಿಯ ವಿರೂಪಾಕ್ಷನ ಆಶೀರ್ವಾದದಿಂದ ಪ್ರಕೃತಿ ಮಾತೆಯ ಆಶೀರ್ವಾದದಿಂದ ಮತ್ತೆ ಅಣೆಕಟ್ಟು ತುಂಬಿದೆ ಎಂದರು.
ತುಂಗಭದ್ರಾ ಅಣೆಕಟ್ಟು ಕಾಂಗ್ರೆಸ್ ಪಕ್ಷದ ಕೊಡುಗೆ. ಈ ಇತಿಹಾಸವನ್ನು ಯಾರಿಂದಲೂ ತಿರುಚಲು ಸಾಧ್ಯವಿಲ್ಲ. ಆಧುನಿಕ ಭಾರತದ ದೇವಾಲಯಗಳು ಆಣೆಕಟ್ಟುಗಳು ಎಂದು ನೆಹರು ಅವರು ಹೇಳಿದ್ದರು. ರೈತರನ್ನು ಕಾಪಾಡುವುದೇ ಅಣೆಕಟ್ಟುಗಳು. ನಾನು ಈ ಹಿಂದೆ ತುಂಗಾ ಆರತಿ ಆರಂಭ ಮಾಡಿದ್ದೆ. ಈಗ ಕಾವೇರಿ ಆರತಿಗೆ ತೀರ್ಮಾನ ಮಾಡಿದ್ದೇವೆ. ಅದಕ್ಕೆ ಒಂದು ತಂಡವನ್ನು ರಚನೆ ಮಾಡಲಾಗಿದೆ. ಈಗಾಗಲೇ ಹರಿದ್ವಾರಾ, ಕಾಶಿ ಸೇರಿದಂತೆ ಇತರೇ ಕಡೆ ಅಧ್ಯಯನ ಮಾಡುತ್ತಿದೆ ಎಂದು ಹೇಳಿದರು.
ಗೇಟ್ ಕಿತ್ತು ಹೋದಾಗ ವಿರೋಧ ಪಕ್ಷಗಳು ಟೀಕೆ ಮಾಡಿದವು. ನಾನು ಹಾಗೂ ಸಿದ್ದರಾಮಯ್ಯ ಅವರು ವಿರೋಧಿಗಳ ಟೀಕೆಗಳಿಗೆ ಎದೆಗುಂದಲಿಲ್ಲ. ಸರ್ಕಾರದ ಸಚಿವರ ಹಾಗೂ ಶಾಸಕರ ಬೆಂಬಲದಿಂದ, ನಾವು ಮಾಡಿದ ಕೆಲಸದಿಂದ ಟೀಕೆಗಳು ಸತ್ತಿವೆ, ಕೆಲಸಗಳು ಉಳಿದಿವೆ ಎಂದರು.












Click it and Unblock the Notifications