ಹುಬ್ಬಳ್ಳಿಯಲ್ಲಿ ಪೊಲೀಸರಿಂದಲೇ ಬಿಜೆಪಿ ಕಾರ್ಯಕರ್ತೆಗೆ ಬಟ್ಟೆಬಿಚ್ಚಿ ಥಳಿತ: ಆರ್ ಅಶೋಕ್ ಆಕ್ರೋಶ
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಶ್ವಾಪುರ ಪೊಲೀಸರು ಬಿಜೆಪಿ ಕಾರ್ಯಕರ್ತೆಯೊಬ್ಬರಿಗೆ ಬಟ್ಟೆ ಬಿಚ್ಚಿ ಥಳಿಸಿದ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯ ನೀಡಿದ ದೂರಿನ ಮೇರೆಗೆ ಪೊಲೀಸರು ಈ ರೀತಿ ದರ್ಪ ಮೆರೆದಿದ್ದಾರೆ ಎನ್ನಲಾಗುತ್ತಿದ್ದು, ವಿಧಾನಸಭಾ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ಆರ್ ಅಶೋಕ್ ಅವರು, ಕಾಂಗ್ರೆಸ್ ಪಕ್ಷದ ನಗರ ಪಾಲಿಕೆ ಸದಸ್ಯ ನೀಡಿದ ದೂರಿನ ಮೇರೆಗೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು ಬಿಜೆಪಿಯ ಮಹಿಳಾ ಕಾರ್ಯಕರ್ತೆಯೊಬ್ಬರನ್ನು ವಿವಸ್ತ್ರಗೊಳಿಸಿ ಥಳಿಸಿರುವ ಅಮಾನುಷ ಘಟನೆ ನಡೆದಿದ್ದು, ಈ ಲಜ್ಜೆಗೆಟ್ಟ ರಾಜ್ಯ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಎಗ್ಗಿಲ್ಲದೆ ನಡೆಯುತ್ತಿರುವ ದ್ವೇಷ ರಾಜಕಾರಣಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ದಿನ ಬೆಳಗಾದರೆ ವಿಪಕ್ಷ ಶಾಸಕರ ಮೇಲೆ ಕೊಲೆ ಯತ್ನ, ವಿಪಕ್ಷ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ ಇವೆಲ್ಲವೂ ಸರ್ವೇ ಸಾಮಾನ್ಯವಾಗುತ್ತಿದ್ದು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಿದೆ ಎಂದು ಕಿಡಿಕಾರಿದ್ದಾರೆ.

ಇನ್ನೂ ಬಿಜೆಪಿ ಕಾರ್ಯಕರ್ತೆಯನ್ನ ಪೊಲೀಸರು ಬಂಧಿಸಲು ಮುಂದಾಗಿದ್ದರು. ಈ ವೇಳೆ ಪ್ರತಿರೋಧ ತೋರಿದ ಮಹಿಳೆಯ ಬಟ್ಟೆ ಬಿಚ್ಚಿ ಕ್ರೌರ್ಯ ಮೆರೆದಿದ್ದಾರೆ ಎನ್ನಲಾಗ್ತಿದೆ. ಈ ಕುರಿತ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡ್ತಿದೆ. ಇತ್ತ ಬಿಜೆಪಿ ಕಾರ್ಯಕರ್ತೆಯರ ಮೇಲೆ ನಡೆದ ಘಟನೆ ಕುರಿತು ಹಲವು ಬಿಜೆಪಿ ನಾಯಕರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಮಹಿಳೆ ವಿವಸ್ತ್ರಗೊಳಿಸಿ ಥಳಿಸಲು ಕಾರಣ ಏನು?
ಬಿಜೆಪಿ ಕಾರ್ಯಕರ್ತೆ ಸುಜಾತಾ ಎಂಬುವವರು ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಮತದಾರರ ಪಟ್ಟಿ ಪರಿಷ್ಕರಣೆ ವಿಚಾರದಲ್ಲಿ ಗಲಾಟೆ ನಡೆದ ಹಿನ್ನೆಲೆ, ಕಾಂಗ್ರೆಸ್ ಕಾರ್ಪೊರೇಟರ್ ಸುವರ್ಣ ಕಲ್ಲಕುಂಟ್ಲಾ ನೀಡಿದ ದೂರಿನ ಮೇರೆಗೆ ಕೇಶ್ವಾಪುರ ಪೊಲೀಸರು ಸುಜಾತಾ ಹಂಡಿಯನ್ನು ಬಂಧಿಸಲು ಮುಂದಾಗಿದ್ದರು. ಕಾಂಗ್ರೆಸ್ ಮತದಾರರ ಹೆಸರನ್ನು ಪಟ್ಟಿಯಿಂದ ಡಿಲೀಟ್ ಮಾಡಿಸಿದ್ದ ಆರೋಪ ಹಂಡಿ ಮೇಲೆ ಇತ್ತು.
ಬಂಧನಕ್ಕೆ ಪ್ರತಿರೋಧ ತೋರಿದ ಸಂದರ್ಭದಲ್ಲಿ ಸುಜಾತಾ ಹಂಡಿಯನ್ನು ಬಲವಂತವಾಗಿ ಎಳೆದು ಪೊಲೀಸ್ ವ್ಯಾನ್‌ಗೆ ಕೂರಿಸಲಾಗಿದೆ. ಈ ವೇಳೆ ಪೊಲೀಸರೇ ಮಹಿಳೆಯ ಬಟ್ಟೆ ಬಿಚ್ಚಿ ಅಮಾನುಷವಾಗಿ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸ್ ವ್ಯಾನ್‌ನೊಳಗೆ ನಡೆದ ಈ ಕೃತ್ಯ ಮಹಿಳೆಯ ಮಾನ, ಗೌರವಕ್ಕೆ ಧಕ್ಕೆ ತಂದಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಮಹಿಳೆಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಪ್ರಕರಣ ರಾಜ್ಯಮಟ್ಟದ ಗಮನ ಸೆಳೆದಿದೆ.
ಇನ್ನೂ ಈ ಘಟನೆಗೆ ಹಳೇ ವೈಷಮ್ಯ ಕಾರಣ ಅಂತ ಹೇಳಲಾಗ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕೇಶ್ವಾಪುರ ಠಾಣಾ ವ್ಯಾಪ್ತಿಯಲ್ಲಿ ಗಲಾಟೆಯಾಗಿತ್ತು. ಬೂತ್ ಅಧಿಕಾರಿಗಳೊಂದಿಗೆ ತೆರಳಿದ್ದ ಬಿಜೆಪಿ ಕಾರ್ಯಕರ್ತೆ ನಮ್ಮ ವೋಟ್ ಡಿಲೀಟ್ ಮಾಡಿಸಿದ್ದಾರೆ ಅಂತ ಗಲಾಟೆ ಮಾಡಿದ್ದರು. ಹೀಗಾಗಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ತಿಕ್ಕಾಟ ನಡೆಯುತ್ತಲೇ ಇತ್ತು. ಇದೇ ಪ್ರಕರಣ ಮುಂದಿಟ್ಟುಕೊಂಡು ಕಾಂಗ್ರೆಸ್‌ನ ನಗರ ಪಾಲಿಕೆ ಸದಸ್ಯ ಸುವರ್ಣ ಕಲ್ಲಕುಂಟ್ಲಾ ದೂರು ನೀಡಿದ್ದರಂತೆ. ಇದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೂ ಪ್ರತಿದೂರು ದಾಖಲಾಗಿತ್ತು ಎಂದು ಹೇಳಲಾಗಿದೆ.












Click it and Unblock the Notifications