ಚನ್ನಪಟ್ಟಣ ಎಲೆಕ್ಷನ್‌ಗೆ ಹೋಗಿರೋದು ಇದೇ ದುಡ್ಡಾ? ಅಶೋಕ್ ಶಾಕಿಂಗ್ ಹೇಳಿಕೆ
ಝಣ-ಝಣ ಕಾಂಚಾಣದಲ್ಲಿ, ಕಾಂಗ್ರೆಸ್ ಸರ್ಕಾರದಲ್ಲಿ, ರಸ್ತೆ ಗುಂಡಿ ಮುಚ್ಚುವ ಹಣವೂ ಮಾಯ, ನಾಳೆ ರಸ್ತೆಯೂ ಮಾಯ, ಎಲ್ಲಾ ಮಾಯಾ ನಾಳೆ ನಾವೂ ಮಾಯ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ.
ಪಾರ್ಟ್ ಟೈಮ್ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರೇ..ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚಲು ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಪ್ರತಿ ವಾರ್ಡ್‌ಗೆ ತಲಾ 15 ಲಕ್ಷ ರೂಪಾಯಿ ಬಿಡುಗಡೆ ಮಾಡಿದ್ದರಲ್ಲ, ಆ ಹಣವೆಲ್ಲಾ ಏನಾಯ್ತು? ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಉದ್ದಗಲಕ್ಕೂ ಬಾಯ್ತೆರಿದಿರುವ ಯಮಸ್ವರೂಪಿ ರಸ್ತೆ ಗುಂಡಿಗಳನ್ನು ನೋಡಿದರೆ ಬಹುಶಃ ಆ ದುಡ್ಡೆಲ್ಲವೂ ತಮ್ಮ ಕಮಿಷನ್ ಪಾಲಾದಂತಿದೆ. ಅಥವಾ ಈಗ ಚನ್ನಪಟ್ಟಣ ಚುನಾವಣೆ ಖರ್ಚಿಗೆ ಆ ಹಣ ಸಾಗಿಸಿದ್ದೀರೋ? ಎಂದು ವ್ಯಂಗ್ಯ ಮಾಡಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಕಟ್ಟುವುದು ದೂರದ ಮಾತು ಸ್ವಾಮಿ, ಮೊದಲು ರಸ್ತೆ ಗುಂಡಿ ಮುಚ್ಚಿಸಿ ಜನರ ಪ್ರಾಣ ಉಳಿಸಿ ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ 6,000 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ ಎಂದು ತಾವು ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಪುಕ್ಕಟೆ ಪ್ರಚಾರ ಪಡೆದುಕೊಂಡು ಇನ್ನೂ ಸರಿಯಾಗಿ ಒಂದು ತಿಂಗಳೂ ಕಳೆದಿಲ್ಲ ಎಂದು ತಿವಿದಿದ್ದಾರೆ.

ಆದರೆ ಇವತ್ತು ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳಿದೆಯೋ ಅಥವಾ ಗುಂಡಿಗಳಲ್ಲಿ ರಸ್ತೆ ಇದೆಯೋ ಅರ್ಥವಾಗದ ಪರಿಸ್ಥಿತಿ ಎದುರಾಗಿದೆ. ಬೆಂಗಳೂರಿನ ಜನತೆ ತಮಗೆ ಕೇಳುತ್ತಿರುವ ಪ್ರಶ್ನೆಗಳಿಗೆ ಉತ್ತರ ನೀಡುವಿರಾ? ಎಂದು ಅಶೋಕ್ ಪ್ರಶ್ನಿಸಿದ್ದಾರೆ.
6,000 ರಸ್ತೆಗುಂಡಿಗಳನ್ನು ಮುಚ್ಚಿದ್ದೇವೆ ಅಂತ ಹೇಳಿದ್ದು ನಿಜವಾ ಅಥವಾ ಹಸಿ ಸುಳ್ಳಾ? ರಸ್ತೆ ಗುಂಡಿ ಮುಚಿದ್ದೇವೆ ಎಂದು ಒಂದೆರಡು ಫೋಟೋ, ವಿಡಿಯೋ ಕಳಿಸಿ ಅಮೆರಿಕದಲ್ಲಿದ್ದ ತಮಗೆ ಅಧಿಕಾರಿಗಳು ಟೋಪಿ ಹಾಕಿದ್ದಾರಾ? ರಸ್ತೆ ಗುಂಡಿ ಮುಚ್ಚುವ ನೆಪದಲ್ಲಿ ನಕಲಿ ಬಿಲ್ ಸೃಷ್ಟಿ ಮಾಡಿ ಕಮಿಷನ್ ಹೊಡೆದು ಜನರ ಹಣ ಲಪಾಟಾಯಿಸಿದ್ದೀರ? ಎಂದು ಕಾಲೆಳೆದಿದ್ದಾರೆ.
ರಸ್ತೆಗುಂಡಿ ಮುಚ್ಚಿದ್ದ ಕಾಮಗಾರಿ ಒಂದೇ ತಿಂಗಳಲ್ಲಿ ಕಿತ್ತು ಹೋಗುವಷ್ಟು ಕಳಪೆ ಕಾಮಗಾರಿ ಆಗಿತ್ತಾ?ಉತ್ತರ ಕೊಡಿ ಉಪಮುಖ್ಯಮಂತ್ರಿಗಳೇ, ಬ್ರ್ಯಾಂಡ್ ಬೆಂಗಳೂರು ಹೆಸರಿನಲ್ಲಿ ಇನ್ನೆಷ್ಟು ಬಂಡಲ್ ಬಿಡುತ್ತೀರಿ? ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಎಂದು ರಾಜಕಾರಣ ಮಾಡುತ್ತಲೇ ಕಾಲಹರಣ ಮಾಡುತ್ತಾರೋ ಅಥವಾ ಇನ್ನಾದರೂ ಬೆಂಗಳೂರು ಅಭಿವೃದ್ಧಿ ಮಂತ್ರಿ ನಾನೇ ಎಂದು ನೆನಪಿಸಿಕೊಂಡು ನಗರದ ಅವಸ್ಥೆ ಕಡೆ ಗಮನ ಹರಿಸುತ್ತಾರೋ? ಎಂದು ದೂರಿದ್ದಾರೆ.
ಉಲ್ಟಾ ಚೋರ್ ಕೊತ್ವಾಲ್ ಕೋ ಡಾಂಟಾ ಎಂಬಂತೆ ಬೆಂಗಳೂರಿನ ಮರ್ಯಾದೆ ತೆಗೆಯುತ್ತಿದ್ದೀರಿ ಎಂದು ಮಾಧ್ಯಮಗಳ ಮೇಲೆ ಹರಿಹಾಯುತ್ತಾರೋ, ಅಥವಾ ತಮ್ಮ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಸರ್ಕಾರದ ಮರ್ಯಾದೆ ಉಳಿಸಿಕೊಳ್ಳುತ್ತಾರೋ? ಎಂದು ಬೆಂಗಳೂರಿನಲ್ಲಿ ಮಳೆಯಿಂದ ಸಂಭವಿಸಿದ ಘಟನೆಗಳನ್ನು ಮುಂದಿಟ್ಟಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಅಶೋಕ್ ಹರಿಹಾಯ್ದಿದ್ದಾರೆ.












Click it and Unblock the Notifications