ನೊಣ ತಿಂದು ಜಾತಿ ಕೆಡಿಸಿಕೊಂಡ ಈ ಬಿಡಿಗಾಸು ಲಂಚಬಾಕರ ಕಥೆ ಕೇಳಿ
ಬೆಂಗಳೂರು, ಜ. 26: 'ನೊಣ ತಿಂದು ಜಾತಿ ಕೆಡಿಸಿಕೊಂಡ' ಎಂಬ ಗಾದೆ ಮಾತು ಇದೆ. ಎಸಿಬಿ ಪೊಲೀಸರ ಕಾರ್ಯಾಚರಣೆಯಲ್ಲಿ ಬಿಡಿಗಾಸು ಲಂಚ ಸ್ವೀಕರಿಸಿ ಜೈಲಿಗೆ ಹೋದ ಮೂವರು ಸರ್ಕಾರಿ ಅಧಿಕಾರಿಗಳದ್ದು ಅಕ್ಷರಶಃ ಅದೇ ಸ್ಥಿತಿ. ಎರಡು ಸಾವಿರ, ಮೂರು ಸಾವಿರ ಲಂಚಕ್ಕೆ ಕೈಚಾಚಿ ಮರ್ಯಾದೆ ಕೆಡಿಸಿಕೊಂಡು ಬೀದಿಗೆ ಬಿದ್ದಿದ್ದಾರೆ.
ಬಿಡಿಗಾಸು ಲಂಚಕ್ಕೆ ಕೈಯೊಡ್ಡಿ ಸರ್ಜನ್ ಸೇರಿದಂತೆ ಮೂವರು ಸರ್ಕಾರಿ ಅಧಿಕಾರಿಗಳು ಜೈಲು ಪಾಲಾಗಿದ್ದಾರೆ. ಕರ್ನಾಟಕದಲ್ಲಿ ಎಸಿಬಿ ಪೊಲೀಸರು ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕೇವಲ 8 ಸಾವಿರ ಲಂಚ ಸ್ವೀಕರಿಸಿ ಮೂವರು ಅಧಿಕಾರಿಗಳು ಬಂಧನಕ್ಕೆ ಒಳಗಾಗಿದ್ದಾರೆ.
ಬಾಗೇಪಲ್ಲಿ ಸರ್ಜನ್ ಸೆರೆ: ಕ್ಲಾವಿಕಲ್ ಬೋನ್ ಚಿಕಿತ್ಸೆಗಾಗಿ ಬಾಗೇಪಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ಹೋಗಿದ್ದ ವ್ಯಕ್ತಿಯ ಬಳಿ ಮೂರು ಸಾವಿರ ಲಂಚ ಸ್ವೀಕರಿಸಿ ಡಾ. ಸುದರ್ಶನ್ ಕೆ. ಎಸಿಬಿ ಬಲೆಗೆ ಬಿದ್ದಿದ್ದಾರೆ. ದೊಡ್ಡಿವಾರಿಪಲ್ಲಿ ನಿವಾಸಿಯೊಬ್ಬರು ಕ್ಲಾವಿಕಲ್ ಬೋನ್ ಚಿಕಿತ್ಸೆಗಾಗಿ ಹೋಗಿದ್ದರು. ಈ ವೇಳೆ ಹತ್ತು ಸಾವಿರ ರೂ. ಲಂಚಕ್ಕೆ ಡಾ. ಸುದರ್ಶನ್ ಬೇಡಿಕೆ ಇಟ್ಟಿದ್ದಾರೆ. ಮುಂಗಡವಾಗಿ ಮೂರು ಸಾವಿರ ರೂ. ಲಂಚ ಸ್ವೀಕರಿಸುವಾಗ ಚಿಕ್ಕಬಳ್ಳಾಪುರ ಇಲ್ಲಾ ಎಸಿಬಿ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಆರೋಪಿತ ವೈದ್ಯನನ್ನು ಬಂಧಿಸಿದ್ದು, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ.

2 ಸಾವಿರ ಲಂಚಕ್ಕೆ ಪೀಡಿಸಿದ್ದ ಪಿಡಿಓ ಕಥೆ: ಮನೆಯೊಂದಕ್ಕೆ ಕಂಪ್ಯೂಟರ್ ಪಹಣಿ ನೀಡಲು ಮೂರು ಸಾವಿರ ರೂ. ಲಂಚ ಸ್ವೀಕರಿಸಿ ಬಾಗಲಕೋಟ ಜಿಲ್ಲೆ ರಬಕವಿ ತಾಲೂಕಿನ ಸೈದಾಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಂಧನಕ್ಕೆ ಒಳಗಾಗಿದ್ದಾನೆ. ಸೈದಾಪುರ ನಿವಾಸಿ ತನ್ನ ಮಾವನ ಹೆಸರಿನಲ್ಲಿಉರವ ಮನೆಗೆ ಕಂಪ್ಯೂಟರ್ ಪಹಣಿ ನೀಡುವಂತೆ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಕಂಪ್ಯೂಟರ್ ಪಹಣಿ ನೀಡಲು ಮೂರು ಸಾವಿರ ರೂ. ಲಂಚ ನೀಡುವಂತೆ ಪಿಡಿಓ ಯಲ್ಲಪ್ಪ ಸುಭಾನಪ್ಪ ಮಾಂಗ ಬೇಡಿಕೆ ಇಟ್ಟಿದ್ದು, ಲಂಚ ಸ್ವೀಕರಿಸುವಾಗ ಬಾಗಲಕೋಟೆ ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿತನಿಂದ ಲಂಚದ ಹಣ ವಶಪಡಿಸಿಕೊಂಡಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ.

ಬರೇ ಎರಡು ಸಾವಿರಕ್ಕೆ ಸೂಪರ್ ವೈಸರ್ ಟ್ರ್ಯಾಪ್: ಶ್ರೀರಂಗಪಟ್ಟಣದ ಸಿದ್ದಾಪುರ ಗ್ರಾಮದ ನಿವಾಸಿಯೊಬ್ಬರಿಂದ ಎರಡು ಸಾವಿರ ರೂ. ಲಂಚ ಸ್ವೀಕರಿಸಿ ಶ್ರೀರಂಗಪಟ್ಟಣ ಭೂ ದಾಖಲೆಗಳ ಸಹಾಯಕ ನಿರ್ದೇಶಕ ಕಚೇರಿ ಸರ್ವೆ ಸೂಪರ್ ವೈಸರ್ ಲೋಕೇಶ್ ಎಸಿಬಿ ಬಲೆಗೆ ಬಿದ್ದಿದ್ದಾನೆ.

ಸಿದ್ದಾಪುರ ಗ್ರಾಮದ ನಿವಾಸಿ ತನ್ನ ಮೂವತ್ತು ಗುಂಟೆ ಜಮೀನನ್ನು ದುರಸ್ತಿ ಮಾಡುವಂತೆ 2018 ರಲ್ಲಿ ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆರು ತಿಂಗಳ ಹಿಂದೆ ಈ ಕಡತ ಶ್ರೀರಂಗಪಟ್ಟಣದ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗೆ ಬಂದಿತ್ತು. ತನ್ನ ಜಮೀನು ದುರಸ್ತಿ ಮಾಡುವಂತೆ ಸಿದ್ದಾಪುರ ನಿವಾಸಿ ಮನವಿ ಮಾಡಿದಾಗ, 50 ಸಾವಿರ ರೂ. ಲಂಚ ನೀಡುವಂತೆ ಸೂಪರ್ ವೈಸರ್ ಬೇಡಿಕೆ ಇಟ್ಟಿದ್ದಾನೆ. ಮುಂಗಡವಾಗಿ ಎರಡು ಸಾವಿರ ಲಂಚ ಸ್ವೀಕರಿಸುವಾಗ ಮಂಡ್ಯ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಸೂಪರ್ ವೈಸರ್ ಲೋಕೇಶ್‌ನಿಂದ ಎರಡು ಸಾವಿರ ರೂ. ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ.












Click it and Unblock the Notifications