ಡಿಸೆಂಬರ್ 27ರ ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ
ಬೆಂಗಳೂರು, ಡಿಸೆಂಬರ್ 02 : ಚಳಿಗಾಲದ ವಿಧಾನಸಭೆ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ರಾಜಕೀಯ ಪಕ್ಷಗಳು ವಿಧಾನಪರಿಷತ್ ಚುನಾವಣೆ ಬಗ್ಗೆ ಗಮನ ಹರಿಸಿವೆ. ಬುಧವಾರ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ್ದು, ಡಿಸೆಂಬರ್ 27 ರಂದು ಮತದಾನ ನಡೆಯಲಿದೆ.
ಶಿಕ್ಷಕರ, ಪದವೀಧರರ ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳಿಂದ 25 ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್‌ನ 12, ಬಿಜೆಪಿಯ 7, ಜೆಡಿಎಸ್ 5, ಒಬ್ಬರು ಪಕ್ಷೇತರ ಸದಸ್ಯರು 2016ರ ಜನವರಿ 5ರಂದು ನಿವೃತ್ತರಾಗಲಿದ್ದು, ಇವರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. [ಪರಿಷತ್ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ]

ವೇಳಾಪಟ್ಟಿ : ಡಿಸೆಂಬರ್ 2 ರಂದು ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದೆ. ನಾಮಪತ್ರ ಸಲ್ಲಿಸಲು ಡಿಸೆಂಬರ್ 9 ಕೊನೆಯ ದಿನ. ಡಿಸೆಂಬರ್ 10ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಡಿಸೆಂಬರ್ 12 ಕೊನೆಯ ದಿನ. ಡಿಸೆಂಬರ್ 27 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಫಲಿತಾಂಶ ಹೊರಬೀಳಲಿದೆ. [ಅಭ್ಯರ್ಥಿಗಳ ಪಟ್ಟಿ ಹಿಡಿದು ಸಿಎಂ ದೆಹಲಿಗೆ]
ಚುನಾಯಿತ ಅಭ್ಯರ್ಥಿಗಳೇ ಮತದಾರರು : ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಯ ಚುನಾಯಿತ ಅಭ್ಯರ್ಥಿಗಳು, ಶಿಕ್ಷಕರು ಮತ್ತು ಪದವೀಧರರು ಈ ಚುನಾವಣೆಯಲ್ಲಿ ಮತದಾನ ಮಾಡುತ್ತಾರೆ. ['ಪರಿಷತ್ ಚುನಾವಣೆಗೆ ರಮ್ಯಾಗೆ ಟಿಕೆಟ್ ಕೊಡಬೇಡಿ']
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಕಾರಣ ಈ ಚುನಾವಣೆಯಲ್ಲಿ ಪಕ್ಷ ಹಿಂದೆ ಗೆಲುವು ಸಾಧಿಸಿದ 12 ಸ್ಥಾನಗಳ ಜೊತೆಗೆ ಹೆಚ್ಚಿನ ಸ್ಥಾನಗಳನ್ನು ಗಳಿಸಬೇಕಾಗಿದೆ. ಆದ್ದರಿಂದ ಕಾಂಗ್ರೆಸ್‌ಗೆ ಚುನಾವಣೆ ಮಹತ್ವದ್ದಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಕ್ಷದ ಅಭ್ಯರ್ಥಿಗಳ ಪಟ್ಟಿ ಹಿಡಿದು ದೆಹಲಿಗೆ ತೆರಳಿದ್ದಾರೆ.
ಒಟ್ಟು ಬಲಾಬಲ : ವಿಧಾನಪರಿಷತ್ ಸದಸ್ಯರ ಬಲಾಬಲ 75 (ಸಭಾಪತಿಗಳು ಸೇರಿ). ಸದ್ಯ ಕಾಂಗ್ರೆಸ್ 28, ಬಿಜೆಪಿ 30, ಜೆಡಿಎಸ್ 12 ಸದಸ್ಯ ಬಲ ಹೊಂದಿವೆ. 4 ಪಕ್ಷೇತರ ಸದಸ್ಯರಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಿದರೆ ಪರಿಷತ್‌ನಲ್ಲಿ ಬಲಾಬಲ ಹೆಚ್ಚಲಿದೆ.
ಎಲ್ಲೆಲ್ಲಿ ಚುನಾವಣೆ? : ವಾಯುವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರ ಕ್ಷೇತ್ರ, ವಾಯುವ್ಯ ಪದವೀಧರ ಕ್ಷೇತ್ರ
ಸ್ಥಳೀಯ ಸಂಸ್ಥೆಗಳು : ಮೈಸೂರು, ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ವಿಜಯಪುರ, ಕಲಬುರಗಿ, ರಾಯಚೂರು, ಚಿತ್ರದುರ್ಗ.












Click it and Unblock the Notifications