ಮತ್ತೆ ದೆಹಲಿಯ ರಹಸ್ಯ ಸ್ಥಳದಲ್ಲಿ ಕಾಂಗ್ರೆಸ್ ನಾಯಕರ ಸಭೆ!
ಬೆಂಗಳೂರು, ಮೇ 18; ಸಿದ್ದರಾಮಯ್ಯ ಮುಖ್ಯಮಂತ್ರಿ. ಡಿ. ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ. 30 ತಿಂಗಳ ಅಧಿಕಾರ ಹಂಚಿಕೆ. ರಾಜ್ಯ ರಾಜಕಾರಣದ ಒಂದು ತೀರ್ಮಾನ ದೆಹಲಿಯಲ್ಲಿ ಆಗಿದೆ. ಉಭಯ ನಾಯಕರು ಒಟ್ಟಾಗಿ ಉಪಹಾರ ಸೇವನೆ ಮಾಡಿ, ಕೈ ಹಿಡಿದು ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ.
ಆದರೆ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಒಪ್ಪಿಸಲು ಡಿ. ಕೆ. ಶಿವಕುಮಾರ್ ಒಬ್ಬರೇ ಉಪ ಮುಖ್ಯಮಂತ್ರಿಯಾಗಿರುತ್ತಾರೆ ಎಂಬ ಸಂಧಾನ ಸೂತ್ರ ರಚಿಸಿದೆ. ಇದಕ್ಕೆ ವಿರೋಧ ವ್ಯಕ್ತವಾಗಿದೆ.

2023ರ ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡು ಕಾಂಗ್ರೆಸ್ 135 ಸ್ಥಾನದಲ್ಲಿ ಜಯಗಳಿಸಿದಾಗ ಪಕ್ಷ ಮೂರು ಉಪಮುಖ್ಯಮಂತ್ರಿ ಹುದ್ದೆ ರಚನೆ ಮಾಡಲು ಚಿಂತನೆ ನಡೆಸಿತ್ತು. ಆದರೆ ಈ ಡಿ. ಕೆ. ಶಿವಕುಮಾರ್ ಒಬ್ಬರೇ ಡಿಸಿಎಂ ಎನ್ನುವ ತೀರ್ಮಾನ ಹಿರಿಯ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ರಹಸ್ಯ ಸ್ಥಳದಲ್ಲಿ ಸಭೆ; ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಜೊತೆಗೆ ಹಲವು ಕಾಂಗ್ರೆಸ್‌ನ ಹಿರಿಯ ನಾಯಕರು ದೆಹಲಿಯಲ್ಲಿದ್ದಾರೆ. ಡಿ. ಕೆ. ಶಿವಕುಮಾರ್ ಒಬ್ಬರೇ ಉಪ ಮುಖ್ಯಮಂತ್ರಿ ಎಂಬ ಹೈಕಮಾಂಡ್ ತೀರ್ಮಾನ ಅವರು ಒಪ್ಪುತ್ತಿಲ್ಲ. ಕನಿಷ್ಠ ಇಬ್ಬರು ಉಪ ಮುಖ್ಯಮಂತ್ರಿಗಳು ಬೇಕು ಎಂದು ಪಟ್ಟು ಹಿಡಿದಿದ್ದಾರೆ.

2024ರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಹಿರಿಯ ನಾಯಕರನ್ನು ಡಿಸಿಎಂ ಮಾಡಬೇಕು ಎಂದು ಹೈಕಮಾಂಡ್ ನಾಯಕರ ಮುಂದೆ ಬೇಡಿಕೆ ಇಡಲು ತೀರ್ಮಾನಿಸಿದ್ದಾರೆ. ಅದಕ್ಕಾಗಿ ದೆಹಲಿಯಲ್ಲಿನ ರಹಸ್ಯ ಸ್ಥಳದಲ್ಲಿ ಹಿರಿಯ ನಾಯಕರು ಸಭೆ ನಡೆಸುತ್ತಿದ್ದಾರೆ.
ದೆಹಲಿಯಲ್ಲಿರುವ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಮಧ್ಯಾಹ್ನ ಬೆಂಗಳೂರಿಗೆ ಹೊರಡಲಿದ್ದಾರೆ. ಒಂದೇ ವಿಮಾನದಲ್ಲಿ ಹಲವು ಕಾಂಗ್ರೆಸ್ ನಾಯಕರು ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ. ಸಂಜೆ ನಡೆಯುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಯಾರು? ಎಂದು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ.
ಈ ಘೋಷಣೆಗೂ ಮುನ್ನವೇ ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಸ್ಪಷ್ಟನೆ ಪಡೆಯಲು ಹಿರಿಯ ನಾಯಕರು ಪ್ರಯತ್ನ ನಡೆಸಿದ್ದಾರೆ. ಲಿಂಗಾಯತ, ಅಲ್ಪ ಸಂಖ್ಯಾತ ಸಮುದಾಯಕ್ಕೆ ಒದೊಂದು ಡಿಸಿಎಂ ಹುದ್ದೆ ನೀಡಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ.
ಡಾ. ಜಿ. ಪರಮೇಶ್ವರ ಮಾತು; ಬೆಂಗಳೂರಿನಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಹ ಒಂದು ಡಿಸಿಎಂ ಹುದ್ದೆಯ ಬಗ್ಗೆ ಮಾತನಾಡಿದ್ದಾರೆ. "ನನಗೆ ಡಿಸಿಎಂ ಸ್ಥಾನ ಕೊಡಲೇಬೇಕು. ನಾನು ಈ ಹಿಂದೆ ಕೂಡಾ ಉಪಮುಖ್ಯಮಂತ್ರಿಯಾಗಿದ್ದೆ. ಎಲ್ಲಾ ಸಮುದಾಯನ್ನು ಪರಿಗಣಿಸಿ ಡಿಸಿಎಂ ಸ್ಥಾನವನ್ನು ಕೊಡಬೇಕಾಗುತ್ತದೆ" ಎಂದರು.
"ಒಬ್ಬರು ಮಾತ್ರ ಅಧಿಕಾರದಲ್ಲಿರಬೇಕು ಎಂಬುದು ಸರಿಯಲ್ಲ. ಎಲ್ಲರ ನಾಯಕತ್ವದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ" ಎಂದು ಪರಮೇಶ್ವರ ಹೇಳಿದ್ದಾರೆ.
ಹೈಕಮಾಂಡ್ ಸಂಧಾನ ಸೂತ್ರ; ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಸಮಾಧಾನ ಪಡಿಸಲು ಒಬ್ಬರೇ ಉಪ ಮುಖ್ಯಮಂತ್ರಿಯಾಗಿರುತ್ತಾರೆ. ಅದು ಡಿ. ಕೆ. ಶಿವಕುಮಾರ್ ಮಾತ್ರ. ಬೇರೆ ಯಾರನ್ನೂಉಪಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಹೈಕಮಾಂಡ್ ನಾಯಕರು ಸಂಧಾನ ಸೂತ್ರ ರಚನೆ ಮಾಡಿದ್ದರು. ಉಪಮುಖ್ಯಮಂತ್ರಿಯಾಗುವ ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರೆಯಲಿದ್ದಾರೆ ಎಂದು ನಾಯಕರು ಹೇಳಿದ್ದರು. ಆದರೆ ಈಗ ಹಿರಿಯ ನಾಯಕರು ಈ ಸೂತ್ರಕ್ಕೆ ಅಸಮಾಧಾನಗೊಂಡಿದ್ದಾರೆ.












Click it and Unblock the Notifications