ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಂಟಿ ಅಧಿವೇಶನಕ್ಕೆ ಮೊದಲು ಸಂಪುಟ ವಿಸ್ತರಣೆಗೆ ನೂತನ ಶಾಸಕರ ಪಟ್ಟು

By ಅನಿಲ್ ಬಾಸೂರ್
|
Google Oneindia Kannada News

ಬೆಂಗಳೂರು, ಜ. 1: ಸಂಕ್ರಾಂತಿ ನಂತರವೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಧ್ಯಕ್ಕೆ ಇಲ್ಲ ಎಂಬ ಮಾಹಿತಿ ನೂತನ ಬಿಜೆಪಿ ಶಾಸಕರಲ್ಲಿ ಆತಂವನ್ನುಂಟು ಮಾಡಿದೆ. ಅದರಿಂದಾಗಿ ಹೊಸ ವರ್ಷದ ಮೊದಲ ಜಂಟಿ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಮಾಡುವಂತೆ ಉಪಚುನಾವಣೆಯಲ್ಲಿ ಗೆದ್ದಿರುವ ಶಾಸಕರು ಪಟ್ಟು ಹಿಡಿದಿದ್ದಾರೆ.

ಉಪಚುನಾವಣೆ ಫಲಿತಾಂಶ ಬಂದ 24 ಗಂಟೆಯೊಳಗೆ ಅನರ್ಹ ಶಾಸಕರನ್ನು ಮಂತ್ರಿ ಮಾಡುತ್ತೇನೆ ಎಂದು ಸಿಎಂ ಯಡಿಯೂರಪ್ಪ ಚುನಾವಣೆ ಪ್ರಚಾರದಲ್ಲಿ ಬಹಿರಂಗ ಆಶ್ವಾಸನೆ ಕೊಟ್ಟದ್ದರು. ಇದೀಗ ಉಪ ಚುನಾವಣೆ ಫಲಿತಾಂಶ ಬಂದು 24 ದಿನಗಳು ಕಳೆದಿವೆ. 15 ಅಹರ್ನ ಶಾಸಕರಲ್ಲಿ 12 ಜನರು ಶಾಸಕರಾಗಿ ಆಯ್ಕೆಯೂ ಆಗಿದ್ದಾರೆ.

ವರ್ಷಾಂತ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ!ವರ್ಷಾಂತ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆ!

ಆದರೆ ಪದೇ ಪದೇ ಸಂಪುಟ ವಿಸ್ತರಣೆ ಮುಂದೂಡಿಕೆ ಆಗುತ್ತಿರುವುದು ನೂತನ ಶಾಸಕರ ಆತಂಕಕ್ಕೆ ಕಾರಣವಾಗಿದೆ. ಈ ಮಧ್ಯೆ ನಾಳೆ ಪ್ರಧಾನಮಂತ್ರಿ ರಾಜ್ಯಕ್ಕೆ ಎರಡು ದಿನಗಳ ಭೇಟಿ ಕೊಡುತ್ತಿರುವುದು ಮತ್ತೆ ನೂತನ ಶಾಸಕರಲ್ಲಿ ಹೊಸ ಭರವಸೆ ಮೂಡಿಸಿದೆ.

ಜಂಟಿ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಇಲ್ಲ..!

ಜಂಟಿ ಅಧಿವೇಶನಕ್ಕೂ ಮೊದಲು ಸಂಪುಟ ವಿಸ್ತರಣೆ ಇಲ್ಲ..!

ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿಯೇ ಮಂತ್ರಿಗಳಾಗಿ ಭಾಗವಹಿಸಬೇಕು ಎಂದುಕೊಂಡಿದ್ದ ನೂತನ ಶಾಸಕರಿಗೆ ಮತ್ತೆ ನಿರಾಸೆಯಾಗಿದೆ. ಸಿಎಂ ಯಡಿಯೂರಪ್ಪ ಅವರು ಕೂಡ ಇದೇ ವಾರದಲ್ಲಿ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ಮಾಡಬೇಕಿತ್ತು. ಆದರೆ ಬಿಜೆಪಿ ಹೈಕಮಾಂಡ್ ಸಧ್ಯಕ್ಕೆ ಸಂಪುಟ ವಿಸ್ತರಣೆ ಬೇಡ ಎಂಬ ಸಂದೇಶ ಕಳಿಸಿದೆ. ಹೈಕಮಾಂಡ್ ಅಣತಿಯಂತೆ ದೆಹಲಿ ಪ್ರವಾಸವನ್ನು ಸಿಎಂ ಯಡಿಯೂರಪ್ಪ ಮುಂದಕ್ಕೆ ಹಾಕಿದ್ದಾರೆ. ಇದು ಫೆಬ್ರುವರಿ 17ರಿಂದ 21ರವೆರೆಗೆ ನಡೆಯುವ 5 ದಿನಗಳ ಅಧಿವೇಶನದಲ್ಲಿ ಮಂತ್ರಿಗಳಾಗಿ ಭಾಗವಹಿಸಬೇಕು ಎಂದುಕೊಂಡಿದ್ದ ಶಾಸಕರಿಗೆ ನಿರಾಸೆಯನ್ನುಂಟು ಮಾಡಿದೆ.

ಈ ಮಧ್ಯೆ ನಾಳೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಎರಡು ದಿನಗಳ ಭೇಟಿ ಕೊಡುತ್ತಿರುವುದು ನೂತನ ಶಾಸಕರಲ್ಲಿ ಮತ್ತೆ ಹೊಸ ನಂಬಿಕೆ ಮೂಡಿಸಿದೆ.

ಪ್ರಧಾನಿ ಜೊತೆ ಸಂಪುಟ ವಿಸ್ತರಣೆಯ ಚರ್ಚೆ ಮಾಡ್ತಾರ BSY-BLS?

ಪ್ರಧಾನಿ ಜೊತೆ ಸಂಪುಟ ವಿಸ್ತರಣೆಯ ಚರ್ಚೆ ಮಾಡ್ತಾರ BSY-BLS?

ನಾಳೆ ಮಧ್ಯಾಹ್ನ ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ರಾತ್ರಿ ರಾಜಭವನದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಪ್ರಧಾನಿ ಮೋದಿ ಅವರನ್ನು ರಾಜಭವನದಲ್ಲಿ ಬೇಟಿ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ನೂತನ ಶಾಸಕರು ಒತ್ತಾಯ ಮಾಡಿದ್ದಾರೆ.

ಸಂಪುಟ ವಿಸ್ತರಣೆ ಬಗ್ಗೆ ಪ್ರಧಾನಿ ಮೋದಿ ಜೊತೆಗೆ ಮಾತನಾಡುವಂತೆ ಇವತ್ತು ಬೆಳಗ್ಗೆ ಡಾಲರ್ಸ್ ಕಾಲನಿ ನಿವಾಸದಲ್ಲಿ ಹೊಸ ವರ್ಷದ ಶುಭಾಶಯ ಕೋರಲು ಹೋಗಿದ್ದ ಕೆಲವು ನೂತನ ಶಾಸಕರು ಯಡಿಯೂರಪ್ಪ ಅವರಿಗೆ ಒತ್ತಡ ಹಾಕಿದ್ದಾರೆ. ಈ ಬಗ್ಗೆ ಎಲ್ಲ 17 ಜನರ ಅಭಿಪ್ರಾಯ ಒಂದೇ ಎಂಬುದನ್ನು ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.

ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್!ಯಡಿಯೂರಪ್ಪ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್!

ಸಂಪುಟ ವಿಸ್ತರಣೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಮಾತೇ ಅಂತಿಮವಲ್ಲ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಗ್ರೀನ್ ಸಿಗ್ನಲ್ ಕೊಡುವ ಅಗತ್ಯವಿದೆ. ಪರಿಸ್ಥಿತಿ ಹೀಗಿರುವಾಗ ಇಬ್ಬರೂ ನಾಯಕರು ಒಟ್ಟಾಗಿ ಪ್ರಧಾನಿ ಮೋದಿ ಜೊತೆಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಮಾಡುವ ಸಾಧ್ಯತೆಗಳು ತೀರಾ ಕಡಿಮೆ ಎಂಬುದು ನೂತನ ಶಾಸಕರಿಗೂ ಗೊತ್ತಿದೆ. ಆದರೂ ಶೀಘ್ರ ಮಂತ್ರಿಯಾಗುವ ಒಂದು ನಂಬಿಕೆಯನ್ನಂತೂ ಮಂತ್ರಿ ಪದವಿ ಆಕಾಂಕ್ಷಿಗಳು ಇಟ್ಟುಕೊಂಡಿದ್ದಾರೆ.

ಡಿಸಿಎಂ ಹುದ್ದೆ ರದ್ದಿಗೆ ರೇಣುಕಾಚಾರ್ಯ ಸಹಿ ಸಂಗ್ರಹ ಅಭಿಯಾನ

ಡಿಸಿಎಂ ಹುದ್ದೆ ರದ್ದಿಗೆ ರೇಣುಕಾಚಾರ್ಯ ಸಹಿ ಸಂಗ್ರಹ ಅಭಿಯಾನ

ಬಿಜೆಪಿಯಲ್ಲಿನ ಹಿರಿಯ ಶಾಸಕರು ಮಂತ್ರಿಸ್ಥಾನಕ್ಕೆ ಬಿಗಿಪಟ್ಟು ಹಿಡಿದಿರುವುದು ಕೂಡ ಸಂಪುಟ ವಿಸ್ತರಣೆ ಪದೇ ಪದೇ ಮುಂದಕ್ಕೆ ಹೋಗಲು ಮತ್ತೊಂದು ಕಾರಣ ಎನ್ನಲಾಗಿದೆ. ಬಿಜೆಪಿಯ ಹಿರಿಯ ಶಾಸಕರು ಮಂತ್ರಿ ಪದವಿಗಾಗಿ ಯಡಿಯೂರಪ್ಪ ಅವರ ಮೇಲೆ ತೀವ್ರ ಒತ್ತಡ ಹಾಕಿದ್ದಾರೆ. ಬೀಳಗಿ ಶಾಸಕ ಮುರುಗೇಶ್ ನಿರಾಣಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಸುರಪುರ ಶಾಸಕ ರಾಜೂಗೌಡ, ಕಲಬುರಗಿ ದಕ್ಷಿಣ ಕ್ಷೇತ್ರದ ದತ್ತಾತ್ರೆಯ ಪಾಟೀಲ್ ರೇವೂರ, ಬೆಳಗಾವಿಯ ಉಮೇಶ್ ಕತ್ತಿ, ಬಾಗಲಕೋಟೆ ಶಾಸಕ ವೀರಣ್ಣ ಚರಂತಿಮಠ, ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಿರಿಯ ಶಾಸಕರು ಸಂಪುಟ ಸೇರಲು ಯಡಿಯೂರಪ್ಪ ಅವರ ಮೇಲೆ ಇನ್ನಿಲ್ಲದ ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ ಯಡಿಯೂರಪ್ಪ ಹೈಕಮಾಂಡ್ ಕಡೆಗೆ ಬೆರಳು ತೋರಿಸಿ ಸುಮ್ಮನಿದ್ದಾರೆ ಎಂಬ ಮಾಹಿತಿ ಇದೆ. ಡಿಸಿಎಂ ಹುದ್ದೆಗಾಗಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಜೊತೆಗೆ ಆರೋಗ್ಯ ಸಚಿವ ಶ್ರೀರಾಮುಲು ಕೂಡ ಪಟ್ಟು ಹಿಡಿದಿದ್ದಾರೆ. ಇದು ಯಡಿಯೂರಪ್ಪ ಅವರಿಗೆ ತಲೆನೋವಾಗಿದೆ.

ಮತ್ತೊಂದೆಡೆ ಹೈಕಮಾಂಡ್ ಆದೇಶದಂತೆ ಸೃಷ್ಟಿಯಾಗಿರುವ ಉಪಮುಖ್ಯಮಂತ್ರಿ ಹುದ್ದೆಗಳನ್ನು ರದ್ದು ಮಾಡಬೇಕೆಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅಭಿಯಾನವನ್ನೇ ಶುರು ಮಾಡಿದ್ದಾರೆ. ಡಿಸಿಎಂ ಹುದ್ದೆಗಳನ್ನು ರದ್ದು ಮಾಡಲು ರೇಣುಕಾಚಾರ್ಯ ಸಹಿಸಂಗ್ರಹ ಮಾಡುತ್ತಿದ್ದಾರೆ. ಇದೂ ಕೂಡ ಸಂಪುಟ ವಿಸ್ತರಣೆ ಮುಂದೂಡಲು ಮತ್ತೊಂದು ಕಾರಣ ಎನ್ನುತ್ತಾರೆ ಬಿಜೆಪಿಯ ಹಿರಿಯ ನಾಯಕರು.

ಮುಂದಿನ ವಾರ ಬಿಜೆಪಿ ಹೈಕಮಾಂಡ್ ಭೇಟಿಗೆ ನೂತನ ಶಾಸಕರ ತೀರ್ಮಾನ

ಮುಂದಿನ ವಾರ ಬಿಜೆಪಿ ಹೈಕಮಾಂಡ್ ಭೇಟಿಗೆ ನೂತನ ಶಾಸಕರ ತೀರ್ಮಾನ

ತಕ್ಷಣ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲು ಉಪ ಚುನಾವಣೆಯಲ್ಲಿ ಗೆದ್ದಿರುವ 12 ಶಾಸಕರು ಪಟ್ಟು ಹಿಡಿದಿದ್ದಾರೆ. ಈಗಾಗಲೇ ನಾವೆಲ್ಲ 17 ಜನರೂ ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ತಮ್ಮ ಹೇಳಿಕೆ ಮೂಲಕ ಶಾಸಕ ಎಸ್‌.ಟಿ. ಸೋಮಶೇಖರ್ ಕೊಟ್ಟಿದ್ದಾರೆ. ಚುನಾವಣೆಯಲ್ಲಿ ಸೋತಿರುವ ಹೊಸಕೋಟೆ ಮಾಜಿ ಶಾಸಕ ಎಂ.ಟಿ.ಬಿ. ನಾಗರಾಜ ಹಾಗು ಹುಣಸೂರು ಕ್ಷೇತ್ರದ ಮಾಜಿ ಶಾಸಕ ಎಚ್. ವಿಶ್ವನಾಥ್ ಅವರಿಗೂ ಮಂತ್ರಿಸ್ಥಾನ ಕೊಡಬೇಕು ಎಂಬುದು ಉಳಿದವರ ಒತ್ತಾಯ.

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಅಘಾತ ನೀಡಿದ ಯಡಿಯೂರಪ್ಪಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಅಘಾತ ನೀಡಿದ ಯಡಿಯೂರಪ್ಪ

ನೇರವಾಗಿ ಹೇಳದೇ ಇದ್ದರೂ, ಶಾಸಕರಾದ ರಮೇಶ್ ಜಾರಕಿಹೊಳಿ, ಬಿ.ಸಿ. ಪಾಟೀಲ್, ಬೈರತಿ ಬಸವರಾಜ್, ಎಸ್‌.ಟಿ. ಸೋಮಶೇಖರ್, ಡಾ. ಸುಧಾಕರ್, ಶಿವರಾಂ ಹೆಬ್ಬಾರ್, ಗೋಪಾಲಯ್ಯ ಸೇರಿದಂತೆ ಎಲ್ಲರೂ ಮಂತ್ರಸ್ಥಾನ ಬೇಡಿಕೆಗೆ ಬಿಜೆಪಿ ಒಪ್ಪಿಗೆ ಕೊಟ್ಟ ಬಳಿಕವೇ ಬಿಜೆಪಿ ಸೇರಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಈಗ ಸಂಪುಟ ವಿಸ್ತರಣೆ ಮುಂದಕ್ಕೆ ಹೋಗುತ್ತಿರುವುದಕ್ಕೆ ಸಹಜವಾಗಿಯೆ ಬಿಜೆಪಿ ಸೇರಿ ಶಾಸಕರಾದವರ ಆಕ್ಷೇಪಣೆ ಇದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯ ಭೇಟಿಯ ಬಳಿಕ ಮತ್ತಷ್ಟು ಒತ್ತಡವನ್ನು ರಾಜ್ಯ ಬಿಜೆಪಿ ಪ್ರಮುಖರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲೆ ಹಾಕಲು ನೂತನ ಶಾಸಕರು ತೀರ್ಮಾನ ಮಾಡಿದ್ದಾರೆ. ಈ ವಾರದಲ್ಲಿ ದೆಹಲಿಗೆ ತೆರಳಿ ಅಲ್ಲಿಯೂ ಬಿಜೆಪಿ ಹೈಕಮಾಂಡ್ ಜೊತೆಗೆ ಚರ್ಚೆ ಮಾಡಲು ನೂತನ ಶಾಸಕರು ತೀರ್ಮಾನ ಮಾಡಿದ್ದಾರೆ. ಒಟ್ಟಾರೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಮೈತ್ರಿ ಸರ್ಕಾರ ಬೀಳಿಸಿ, ಬಳಿಕ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವಿನ ಪತಾಕೆ ಹಾರಿಸಿದರೂ ಮಂತ್ರಿ ಭಾಗ್ಯವಿಲ್ಲದೆ ಅತಂತ್ರಸ್ಥಿತಿಯಲ್ಲಿ ಮುಂದುವರೆಯುವಂತಾಗಿದೆ.

English summary
Karnataka cabinet expansion likely delayed because of bjp high command busy in CII.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X