Odisha Train Accident Kannada Helpline: ಕನ್ನಡಿಗರಿಗೆ ಸಹಾಯವಾಣಿ ಆರಂಭ
ಬೆಂಗಳೂರು, ಜೂನ್ 3: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಹಿನ್ನೆಲೆಯಲ್ಲಿ ಕನ್ನಡಿಗರಿಗೆ ಅಗತ್ಯ ನೆರವು ನೀಡಲು ಹಾಗೂ ಸುರಕ್ಷತೆಯ ಮಾಹಿತಿ ಒದಗಿಸಲು ರಾಜ್ಯ ತುರ್ತು ನಿರ್ವಹಣಾ ಕೇಂದ್ರ (SEOC)ದಲ್ಲಿ ನಾಗರೀಕರ ಅನುಕೂಲಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ.
ದೂರವಾಣಿ ಸಂಖ್ಯೆ: 1070, 080-22253707, 080-22340676 ಕ್ಕೆ ಕರೆಮಾಡಿ ಮಾಹಿತಿ ಅಥವಾ ನೆರವು ಪಡೆಯಲು ಕೋರಲಾಗಿದೆ. ಶುಕ್ರವಾರ ರಾತ್ರಿ ಓಡಿಶಾದ ಬಾಲಸೋರ್ ರೈಲು ಅಪಘಾತ ಘಟನೆಯಲ್ಲಿ ಕನ್ನಡಿಗರ ಸುರಕ್ಷತೆಗಾಗಿ ಸಚಿವ ಸಂತೋಷ್ ಲಾಡ್ ನೇತೃತ್ವದ ತಂಡವನ್ನು ನಿಯೋಜಿಸಿದೆ.

ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಯವರಿಂದ ವರದಿಯನ್ನು ಕೇಳಿದ್ದು, ಕನ್ನಡಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರಿಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಅಥವಾ ಇತರೆ ಯಾವುದೇ ಸಮಸ್ಯೆ ಎದುರಿಸುತ್ತಿರುವ ಕನ್ನಡಿಗರ ರಕ್ಷಣೆಗೆ ಸಂಪೂರ್ಣ ನೆರವು ನೀಡಲಾಗುವುದು. ಪ್ರತಿಯೊಬ್ಬ ಕನ್ನಡಿಗನನ್ನು ಸುರಕ್ಷಿತವಾಗಿ ನಾಡಿಗೆ ಕರೆತರಲು ಸರ್ಕಾರ ಬದ್ಧವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಒಡಿಶಾದ ಬಾಲಾಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದಲ್ಲಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟ ಸುದ್ದಿ ಕೇಳಿ ಅತೀವ ನೋವಾಯಿತು. ಮೃತರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ದುರ್ಘಟನೆಯಲ್ಲಿ ಗಾಯಗೊಂಡಿರುವವರೆಲ್ಲರೂ ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ಈ ಮೊದಲು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದರು.

ಒಡಿಶಾದ ಬಾಲಶೋರ್‌ನಲ್ಲಿ ನಡೆದ ಕೋರೊಮಂಡಲ್ ರೈಲು ಅಪಘಾತದಲ್ಲಿ ಬೆಂಗಳೂರಿನಿಂದ ಬಂದ ಪ್ರಯಾಣಿಕರಿಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಬಹನಾಗಾ ಬಜಾರ್ ನಿಲ್ದಾಣದಲ್ಲಿ ಹಳಿತಪ್ಪಿದ ಕೋಚ್‌ಗಳನ್ನು ಬೇರ್ಪಡಿಸಲು ಮತ್ತು ಸಂತ್ರಸ್ತರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ.
ಮೂಲಗಳ ಪ್ರಕಾರ, ಘರ್ಷಣೆಯಲ್ಲಿ ಮೀಸಲು ವರ್ಗದ ಯಾರೂ ಗಾಯಗೊಂಡಿಲ್ಲ ಎನ್ನಲಾಗಿದೆ. ಸಾಮಾನ್ಯ ಆಸನ ಬೋಗಿಯಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಇನ್ನೊಂದು ಸಾಮಾನ್ಯ ಆಸನ ಕೋಚ್ ಮತ್ತು ಎಸ್‌ಎಲ್‌ಆರ್ ಗಾರ್ಡ್ ಕೋಚ್ ಮಗುಚಿ ಬಿದ್ದಿದೆ. ಆದ್ದರಿಂದ ನಮಗೆ ಇನ್ನೂ ನಿಖರವಾದ ಸಂಖ್ಯೆಗಳು ತಿಳಿದಿಲ್ಲ. ನಾವು ಇನ್ನೂ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂರ್ನಾಲ್ಕು ಬೋಗಿಗಳು ಇನ್ನೂ ಸಿಕ್ಕಿಹಾಕಿಕೊಂಡಿರುವುದರಿಂದ ಅಪಘಾತದ ಸ್ಥಳವನ್ನು ತೆರವುಗೊಳಿಸಲಾಗುತ್ತಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಹಳಿತಪ್ಪಿದ ಕೋಚ್‌ಗಳಿಂದ ಮೃತ ದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ಗಾಯಗೊಂಡ ಸಂತ್ರಸ್ತರನ್ನು ಹತ್ತಿರದ ಮೂರ್ನಾಲ್ಕು ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತಿದೆ. ವೈದ್ಯರು ಗಾಯಗೊಂಡವರಿಗೆ ಚಿಕಿತ್ಸೆ ನೀಡುತ್ತಿದ್ದು, ಅಧಿಕಾರಿಗಳು ಸತ್ತ ಪ್ರಯಾಣಿಕರನ್ನು ಗುರುತಿಸುವ ಕೆಲಸ ಮುಂದುವರೆಸಿದ್ದಾರೆ.












Click it and Unblock the Notifications