ಹುಬ್ಬಳ್ಳಿ-ಗದಗ ಮಧ್ಯೆ ತಡೆರಹಿತ 'ರಾಜಹಂಸ' ಬಸ್ ಸೇವೆ ಆರಂಭ, ಟಿಕೆಟ್ ದರವೆಷ್ಟು-ವೇಳಾಪಟ್ಟಿ
ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಸಂಚಾರ ಕೇಂದ್ರಗಳು ಮತ್ತು ಅವಳಿ ನಗರಗಳಾದ ಹುಬ್ಬಳ್ಳಿ-ಧಾರವಾಡಕ್ಕೆ ಬೇರೆ ಬೇರೆ ಭಾಗಗಳಿಂದ ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ಅದೇ ರೀತಿ ಗದಗ ಜಿಲ್ಲೆಯಿಂದ ಅಪಾರ ಪ್ರಯಾಣಿಕರು ಬರುತ್ತಾರೆ. ಅವರಿಗೆಲ್ಲ ಉತ್ತಮ ತಡೆರಹಿತ ಸಂಚಾರ ಸೇವೆ ಒದಗಿಸುವ ಉದ್ದೇಶದಿಂದ ವಾಯವ್ಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಹುಬ್ಬಳ್ಳಿ-ಗದಗ ಮಾರ್ಗದಲ್ಲಿ ತಡೆರಹಿತ 'ರಾಜಹಂಸ' ಬಸ್‌ಗಳ ಸಂಚಾರ ಆರಂಭಿಸಿದೆ.
ಉದ್ಯೋಗ, ಶೈಕ್ಷಣಿಕ, ಕೈಗಾರಿಕೆ, ಮಾರುಕಟ್ಟೆ ಇನ್ನಿತರ ಉದ್ದೇಶಗಳು ಸೇರಿದಂತೆ ನಾನಾ ಕಾರಣಗಳಿಗಾಗಿ ಗದಗಿನ ಜನರು ಹುಬ್ಬಳ್ಳಿ-ಧಾರವಾಡಕ್ಕೆ ಆಗಮಿಸುತ್ತಾರೆ. ಈ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಮತ್ತು ಆರಾಮದಾಯಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ 'ರಾಜಹಂಸ' ಬಸ್ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಹುಬ್ಬಳ್ಳಿ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ಅವರು ಮಾಹಿತಿ ನೀಡಿದ್ದಾರೆ.

ಈಡೇರಿದ ಸಾರ್ವಜನಿಕರ ಬಹುದಿನಗಳ ಬೇಡಿಕೆ
ಬಹುದಿನಗಳಿಂದಲೂ ಈ ಮಾರ್ಗದಲ್ಲಿ ಹೆಚ್ಚಿನ ಹಾಗೂ ತಡೆರಹಿತ ಬಸ್‌ಗಳ ಸಂಚಾರಕ್ಕೆ ಸಾರ್ವಜನಿಕರು ಬೇಡಿಕೆ ಇಟ್ಟಿದ್ದರು. ಇದೀಗ ಅವರ ಬೇಡಿಕೆ ಈಡೇರಿದೆ. ಆರಂಭಿಕ ಹಂತವೆಂಬಂತೆ ಹುಬ್ಬಳಿ-ಗದಗ ಮಧ್ಯೆ ಪ್ರಾಯೋಗಿಕವಾಗಿ ತಡೆ ರಹಿತ ರಾಜಹಂಸ ಬಸ್ ಗಳ ಸಂಚಾರವು ಶುರುವಾಗಿದೆ.
ಹುಬ್ಬಳ್ಳಿ ನಗರದ ಹೊಸೂರು ಬಸ್ ನಿಲ್ದಾಣದಿಂದ ಗದಗಗೆ ರಾಜಹಂಸ ಬಸ್‌ಗಳು ಹೊರಡುತ್ತವೆ. ಅಲ್ಲಿ ಗದಗ ಬಸ್ ನಿಲ್ದಾಣದಿಂದ ಮರಳಿ ಹುಬ್ಬಳ್ಳಿಯತ್ತ ಬರುತ್ತವೆ. ಈ ಬಸ್‌ಗಳ ಸಂಚಾರ ಸಮಯ, ವೇಳಾಪಟ್ಟಿ ಮಾಹಿತಿ ಇಲ್ಲಿದೆ.
ತಡೆರಹಿತ ರಾಜಹಂಸ ಬಸ್ ವೇಳಾಪಟ್ಟಿ
* ಹುಬ್ಬಳ್ಳಿಯಿಂದ ಬೆಳಗ್ಗೆ 8 ಗಂಟೆ, 8.30ಕ್ಕೆ, 9 ಮತ್ತು ಮಧ್ಯಾಹ್ನ 12 ಗಂಟೆಗೆ, 12.30, 1ಕ್ಕೆ ಸಂಜೆ 4 ಗಂಟೆಗೆ, 4.30 ಹಾಗೂ 5.00ಕ್ಕೆ ಹೊರಡುತ್ತವೆ.
* ಮರಳಿ ಅದೇ ದಿಕ್ಕಿನಲ್ಲಿ ಗದಗನಿಂದ ಬೆಳಗ್ಗೆ 10 ಗಂಟೆಗೆ, 10.30ಕ್ಕೆ, 11 ಗಂಟೆ ಹಾಗೂ ಮಧ್ಯಾಹ್ನ 2ಕ್ಕೆ, 2.30 ಗಂಟೆಗೆ, 3 ಸಂಜೆ 5.30ಕ್ಕೆ, 6 ಗಂಟೆಗೆ ಹಾಗೂ 6.30ಕ್ಕೆ ಬಸ್‌ಗಳು ಸಂಚರಿಸುತ್ತವೆ. ಈ ಸಮಯ ವೇಳಾಪಟ್ಟಿಗೆ ಅನುಗುಣವಾಗಿ ಪ್ರಯಾಣಿಕರು ತಮ್ಮ ಸಂಚಾರವನ್ನು ಯೋಜಿಸಿಕೊಳ್ಳಬೇಕು. ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲೂ ಬಸ್‌ಗಳ ಸೇವೆ ಸಿಗಲಿದೆ.
ಟಿಕೆಟ್ ದರ ಎಷ್ಟಿದೆ?
ಗದಗ-ಹುಬ್ಬಳ್ಳಿ ರಾಜಹಂಸ ಬಸ್ ಪ್ರಯಾಣದ ದರ ತಲಾ ಒಬ್ಬರಿಗೆ ರೂ.100 ನಿಗದಿಪಡಿಸಲಾಗಿದೆ. ಇದು ಅಪಘಾತ ಪರಿಹಾರ ವಿಮೆ, ಟೋಲ್ ಫೀ ಎಲ್ಲವನ್ನು ಒಳಗೊಂಡು ಟಿಕೆಟ್ ಬೆಲೆ ನಿಗದಿ ಮಾಡಲಾಗಿದೆ. ಈ ಮಾರ್ಗದಲ್ಲಿ ಸದರಿ ಬಸ್‌ಗಳಿಗೆ ಸಾರ್ವಜನಿಕರಿಂದ ಸಿಗುವ ಸ್ಪಂದನೆ, ಅಗತ್ಯತೆ ನೋಡಿಕೊಂಡು ಬಸ್‌ಗಳನ್ನು ಹೆಚ್ಚಿಸಬೇಕೇ? ಬೇಡವೇ? ಎಂದು ನೀರ್ಧರಿಸಲಾಗುವುದು ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟಿಕೆಟ್ ಹಣವನ್ನು ಯುಪಿಐ ಮೂಲಕ ಪಾವತಿಸಬಹುದು. ಇಲ್ಲವೇ ನಗದು ಹಣ ಕೊಟ್ಟು ಟಿಕೆಟ್ ಖರೀದಿಸಲು ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಹುಬ್ಬಳ್ಳಿ ಇಲ್ಲವೇ ಗದಗ ಬಸ್ ನಿಲ್ದಾಣದ ಸಿಬ್ಬಂದಿ, ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications