NWKRTC Loss: ಶಕ್ತಿ ಯೋಜನೆಯಿಂದ ವಾಯವ್ಯ ಸಾರಿಗೆ ನಷ್ಟದಲ್ಲಿದೆ: ಕಾಂಗ್ರೆಸ್ ಶಾಸಕ
ಬೆಳಗಾವಿ, ಜುಲೈ 14: ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ, ಐದು ಗ್ಯಾರೆಂಟಿ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಿಂದ ಕರ್ನಾಟಕ ವಾಯವ್ಯ ಸಾರಿಗೆ ಸಂಸ್ಥೆ (NWKRTC) ನಷ್ಟದಲ್ಲಿದೆ ಎಂದು ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಅವರು ಬಹಿರಂಗವಾಗಿ ಅಸಮಾಧಾನ ಹೊರ ಹಾಕಿದ್ದಾರೆ.
ಶಕ್ತಿ ಯೋಜನೆಯಿಂದ ಬಸ್ ನಿಗಮಕ್ಕೆ ಸಮಸ್ಯೆ ಆಗಿದೆ. ಕೆಲವು ಲೋಪದೋಷಗಳನ್ನು ನಾವು ಅರಿತಿದ್ದೇವೆ. ರಾಜ್ಯ ಸರ್ಕಾರ ಗಮನಕ್ಕೂ ತಂದಿದ್ದೇವೆ. ಹಳ್ಳಿಗಳಲ್ಲಿ ಶಾಲಾ ಮಕ್ಕಳಿಗೆ ಶಾಲೆಗೆ ಹೋಗಲು ಸಮಸ್ಯೆ ಆಗುತ್ತಿದೆ ಎಂದು ಅವರು ಬೆಳಗಾವಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ್ದಾರೆ.

ಈ ಮೂಲಕ ಆಡಳಿತ ಪಕ್ಷ ಶಾಸಕರೇ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ನೀಡಿರುವ 'ಶಕ್ತಿ ಯೋಜನೆ'ಯಿಂದ ರಾಜ್ಯ ವಾಯವ್ಯ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ ಎಂದು ಒಪ್ಪಿಕೊಂಡಿದ್ದಾರೆ.
ನಿಗಮಕ್ಕೆ ನೂತನ ಬಸ್ ಖರೀದಿ
ಸದ್ಯ ಈ ಭಾಗಕ್ಕೆ 375 ಬಸ್ ಗಳನ್ನು ಖರೀದಿ ಮಾಡಿದ್ದು, ಮುಂದಿನ ದಿನಗಳಲ್ಲಿ 300 ಬಸ್ ಗಳನ್ನು ಖರೀದಿ ಮಾಡಲಿದ್ದೇವೆ. ಈ ಮೂಲಕ ಹಾಲಿ ಸಮಸ್ಯೆಯನ್ನು ಪರಿಹರಿಸುವ ಚಿಂತನೆಯಲ್ಲಿದ್ದೇವೆ ಎಂದರು.
ರಾಜ್ಯದ ದೊಡ್ಡ ದೊಡ್ಡ ನಗರಗಳಿಗಿಂತಲೂ ಹಳ್ಳಿಯಿಂದ ಹಳ್ಳಿಗೆ ತೆರಳುವ ಗ್ರಾಮೀಣ ಭಾಗದಲ್ಲಿ ಬಸ್ ಸಮಸ್ಯೆ ಹೆಚ್ಚಿದೆ. ಹೀಗಾಗಿ ಸಮಪರ್ಕ ಬಸ್ ಸೇವೆ ಲಭ್ಯವಾಗುವಂತೆ ಹಳ್ಳಿಗಳಿಗೆ ಹೆಚ್ಚು ಬಸ್ ಕೊಡುವ ವ್ಯವಸ್ಥೆ ಮಾಡುತ್ತೇವೆ.
ನಿಯಮ ಮೀರಿ ಹೆಚ್ಚುವರಿ ಬಸ್ ಸಂಚಾರ
ಕಾನೂನು ಪ್ರಕಾರ ಒಂದು ಸಾರಿಗೆ ಬಸ್ ಬರೋಬ್ಬರಿ 10 ಲಕ್ಷ ಕಿಲೋ ಮೀಟರ್ ಚಲಿಸಿದ ನಂತರ ಆ ಬಸ್‌ಗಳನ್ನು ಸರ್ಕಾರ ಡೆಮಾಲಿಸ್ ಮಾಡಬೇಕು. ಆದರೆ ಕೆಲವು ಕಾರಣಗಳಿಂದ ಈ ಬಸ್ ಗಳನ್ನ 14 ಲಕ್ಷ ಕಿಮೀ ಓಡಿಸುತ್ತಿದ್ದೇವೆ ಎನ್ನುವ ಮೂಲಕ ಸರ್ಕಾರದ್ದು, ಸಾರಿಗೆ ಇಲಾಖೆ ಲೋಪದೋಷನಗಳನ್ನು ಅವರು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.
ಅವಧಿಗೂ ಮೀರಿದ ಬಸ್‌ಗಳನ್ನು ಹಳ್ಳಿ ಭಾಗಗಳಿಗೆ ಬಿಡುವ ಕಾರಣಕ್ಕಾಗಿ ಹಳೇ ಬಸ್ ಗಳು ಎಲ್ಲೆಂದರಲ್ಲಿ ನಿಲ್ಲುತ್ತವೆ. ಈ ಬಗ್ಗೆ ನಮಗೆ ಮನವರಿಕೆ ಆಗಿದೆ. ಇನ್ನೂ ಸಾರಿಗೆ ಬಸ್ ಗಳಲ್ಲಿ ಟಿಕೆಟ್ ದರ ಹೆಚ್ಚಳ ಮಾಡುವ ಚಿಂತನೆ ನಡೆದಿದ್ದು, ವಾಯವ್ಯ ಕರ್ನಾಟಕ ಸಾರಿಗೆ ಹಾನಿಯಲ್ಲಿದೆ ಎಂದು ಅವರು ಪುನರುಚ್ಚರಿಸಿದರು.

NWKRTC ನಿಗಮದ ಸುಧಾರಣೆಗೆ ಚಿಂತನೆ
ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಿಂದಾಗಿ ಸಾರಿಗೆ ಇಲಾಖೆ ನಷ್ಟದಲ್ಲಿದೆ. ಆದರೂ ಸಹಿತ ಸರ್ಕಾರ ನಡೆಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ವಾಯವ್ಯ ಸಾರಿಗೆ ಸಂಸ್ಥೆ ಲಾಭದಲ್ಲಿ ಕಾರ್ಯನಿರ್ವಹಿಸುವಂತೆ ಮಾಡುವ ಚಿಂತನೆಯಲ್ಲಿ ಸರ್ಕಾರ ಇದೆ ಎಂದು ತಿಳಿಸಿದರು.
ಪಂಚಮಸಾಲಿ ಮೀಸಲಾತಿ ವಿಚಾರ ಶಾಸಕ ಸ್ಥಾನಕ್ಕೂ ರಾಜಿನಾಮೆಗೆ ಸಿದ್ದ ಎನ್ನುವ ವಿಚಾರ ಬಗ್ಗೆ ಮಾತನಾಡಿ ಅವರು, ಈ ಬಗ್ಗೆ ಸ್ಪೀಕರ್‌ಗೆ ಮನವಿ ಮಾಡಿದ್ದೇವೆ, ಅವರು ಸಮಯ ಕೊಡಿ ಎಂದಿದ್ದಾರೆ. ಶೀಘ್ರವೇ ಈ ಬಗ್ಗೆ ಸ್ಪೀಕರ್ ಜೊತೆ ಚರ್ಚೆ ಮಾಡಿದ ನಂತರ ಎಲ್ಲಾ ಶಾಸಕರು ಕೂಡಿ ಮುಖ್ಯಮಂತ್ರಿ ಜೊತೆಗೆ ಚರ್ಚಿಸುತ್ತೇವೆ ಎಂದು ಅವರು ಭರವಸೆ ನೀಡಿದರು.
ಅಧಿವೇಶನದಲ್ಲಿ ಮೀಸಲಾತಿ ಬಗ್ಗೆ ಚರ್ಚೆ
ಮೀಸಲಾತಿ ನೀಡುವ ವಿಚಾರದಲ್ಲಿ ಕಾನೂನುಗಳಲ್ಲಿ ಏನಾದರೂ ತೊಂದರೆ ಇದೆಯೇ ಎಂದು ಪರಿಶೀಲಿಸುತ್ತೇವೆ. ಅಷ್ಟೇ ಅಲ್ಲದೇ ಈ ವಿಚಾರವನ್ನು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಬಗ್ಗೆಗೆ ಎತ್ತಿಕೊಳ್ಳಲಾಗುವುದು. ನಾವು ಎಲ್ಲದ್ದಕ್ಕೂ ಸಿದ್ಧ ಎಂದು ಹೇಳಿದ್ದೇವೆ ಹೊರತು ರಾಜೀನಾಮೆ ಎಂದಿಲ್ಲ. ನಮ್ಮ ಹೇಳಿಕೆಗಳಿಗೆ ತಪ್ಪು ಅರ್ಥ ಕಲ್ಪಿಸುವುದು ಬೇಡ ಎಂದು ಅವರು ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು.
ಎಲ್ಲದ್ದಕ್ಕೂ ಸಿದ್ಧ ಎಂದರೆ, ಸಮಾಜಕ್ಕಾಗಿ ನಾವು ತ್ಯಾಗ ಮಾಡಲು ಸಿದ್ದ ಎಂದು ಹೇಳಿದ್ದೇನೆ. ನೀವು ಅಧಿಕಾರ ತ್ಯಾಗ ಮಾಡಲಿಕೂ ಸಿದ್ದ ಎಂದು ಕೇಳಿದಾಗ ನಾನು ಸಿದ್ದ ಎಂದಿದ್ದೇನೆ ಎಂದು ಹೇಳುವ ಮೂಲಕ ಪ್ರತಿ ಪ್ರಕ್ಷಗಳಿಗೆ ತಿರುಗೇಟು ಕೊಟ್ಟರು.
ಈ ಹಿಂದೆ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ದೇಶಕರು ಹೇಳಿದಂತೆ ರಾಜ್ಯ ಸರ್ಕಾರ ಶಕ್ತಿ ಯೋಜನೆಯ ಟಿಕೆಟ್ ರಿಯಾಯಿತಿ 180 ಕೋಟಿ ರೂಪಾಯಿಗೆ ಅಧಿಕ ಹಣ ನೀಡದೇ ಬಾಕಿ ಉಳಿಸಿಕೊಂಡಿತ್ತು. ಈ ಬಗ್ಗೆ ನಿಗಮದ ಅಧಿಕಾರಿಗಳೇ ಅಧಿಕೃತವಾಗಿ ಮಾಹಿತಿ ನೀಡಿದ್ದರು. ಹೀಗೆ ಹಣ ಬಾರದಿದ್ದಾರೆ, ಹೊಸ ಬಸ್ ಖರೀದಿ, ಇಲ್ಲವೇ ನಿಗದ ಆಂತರಿಕ ಅಭಿವೃದ್ಧಿಗೆ ಪೆಟ್ಟ ಬೀಳುತ್ತದೆ, ಶೀಗ್ರವೇ ಹಣ ನೀಡವಂತೆ ಮನವಿ ಮಾಡಲಾಗಿತ್ತು. ಇದೀಗ ಖುದ್ದು ಕಾಂಗ್ರೆಸ್ ಶಾಸಕರೇ ಶಕ್ತಿ ಯೋಜನೆಯಿಂದ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications