ಮಳೆ ಕೊಯ್ಲು ಬಗ್ಗೆ ಮೊಬೈಲ್‌ನಲ್ಲೇ ಮಾಹಿತಿ ಪಡೆಯಿರಿ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 23 : ಮಳೆ ನೀರು ಕೊಯ್ಲು ವ್ಯವಸ್ಥೆ ಬಗ್ಗೆ ಜನರಿಗಿರುವ ಸಂದೇಹವನ್ನು ನಿವಾರಿಸಲು ಮೊಬೈಲ್ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಸದ್ಯ, ಈ ಅಪ್ಲಿಕೇಶನ್ ಆಂಗ್ಲ ಭಾಷೆಯಲ್ಲಿದೆ. ಮುಂಬರುವ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳನ್ನು ಇದರಲ್ಲಿ ಅಳವಡಿಸಲಾಗುತ್ತದೆ.

ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್‌ (ಕೆಎಸ್‌ಸಿಎಸ್‌ಟಿ) ವಿವಿಧ ಸಂಸ್ಥೆಗಳ ಸಹಯೋಗದಲ್ಲಿ 'RWH Advisor' ಎಂಬ ಅಪ್ಲಿಕೇಶನ್ ಸಿದ್ಧಪಡಿಸಿದೆ. ಉಚಿತವಾದ ಈ ಅಪ್ಲಿಕೇಶನ್‌ ಅನ್ನು ಜನರು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. [ನಗರದಲ್ಲಿ ಇನ್ನೂ ಹೆಚ್ಚಾಗಲಿ ಮಳೆ ಸುಗ್ಗಿ ಕೇಂದ್ರ]

rainwater harvesting

ಅಪ್ಲಿಕೇಶನ್ ಕುರಿತು ಮಾಹಿತಿ ನೀಡಿರುವ ಕೆಎಸ್‌ಸಿಎಸ್‌ಟಿ ಪ್ರಧಾನ ಸಂಶೋಧಕ (ಮಳೆ ನೀರು ಸಂಗ್ರಹ) ಎ.ಆರ್.ಶಿವಕುಮಾರ್‌ ಅವರು, 'ಮಳೆ ನೀರು ಸಂಗ್ರಹ ಕುರಿತಂತೆ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ತಂತ್ರಾಂಶ ಅಭಿವೃದ್ಧಿಪಡಿಸುವಂತೆ ವಿಶ್ವಸಂಸ್ಥೆಯು ಪರಿಷತ್ತಿಗೆ ಮನವಿ ಮಾಡಿಕೊಂಡಿತ್ತು. ಆ ಕುರಿತಂತೆ ಕಳೆದ ವರ್ಷ ಯುನೆಸ್ಕೋ ಒಪ್ಪಂದ ನಡೆದಿತ್ತು' ಎಂದು ಹೇಳಿದರು. [ಬಾಳಿಲ ಶಾಲೆ ಜಲಸಂರಕ್ಷಣೆ ಎಲ್ಲರಿಗೂ ಪಾಠ]

ಪರಿಷತ್ತು, ಭಾರತೀಯ ವಿಜ್ಞಾನ ಸಂಸ್ಥೆಯ ಸೂಪರ್‌ ಕಂಪ್ಯೂಟರ್‌ ವಿಭಾಗ ಮತ್ತು ನಿಟ್ಟೆ ಮೀನಾಕ್ಷಿ ಇಂಜಿನಿಯರಿಂಗ್‌ ಕಾಲೇಜಿನ ಕಂಪ್ಯೂಟರ್‌ ವಿಭಾಗದ ಸಹಯೋಗದಲ್ಲಿ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಇದನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ಗುಬ್ಬಿ ಲ್ಯಾಬ್‌ ಕೈಜೋಡಿಸಿದೆ. [ಶುದ್ಧ ಕುಡಿಯುವ ನೀರು ನೀಡಿದವರಿಗೆ ಅನಂತ ಧನ್ಯವಾದ]

ರಾಜ್ಯದಲ್ಲಿ 174 ಪ್ರದೇಶಗಳ 100 ವರ್ಷಗಳ ಮಳೆ ಪ್ರಮಾಣದ ದತ್ತಾಂಶ ಉಪಯೋಗಿಸಿ ಅಪ್ಲಿಕೇಶನ್ ಅಭಿವೃದ್ಧಿಪಡಿಸಲಾಗಿದೆ. ಸದ್ಯ, ಇದರಲ್ಲಿ ಕರ್ನಾಟಕ ಸೇರಿದಂತೆ 15 ರಾಜ್ಯಗಳ 285 ಜಿಲ್ಲಾ ಕೇಂದ್ರದ ಮಾಹಿತಿ ಲಭ್ಯವಿದೆ. ಮುಂಬರುವ ದಿನಗಳಲ್ಲಿ ಪ್ರತಿಯೊಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳ ಮಾಹಿತಿ ನೀಡಲು ಉದ್ದೇಶಿಸಲಾಗಿದೆ. [ಏರಿದ ಬಿಸಿಲ ಧಗೆ, ಮಡಿಕೆ ವ್ಯಾಪಾರ ಬಲು ಜೋರು]

ಬಳಕೆ ಹೇಗೆ? : ಬಳಕೆದಾರರು ಅಪ್ಲಿಕೇಶನ್‌ನಲ್ಲಿ ತೆರೆದುಕೊಳ್ಳುವ ಪುಟದಲ್ಲಿ ಕಾಣುವ ಸರಳ ಪ್ರಶ್ನಾವಳಿಗೆ ಉತ್ತರಿಸಬೇಕು. ಹೆಸರು, ರಾಜ್ಯ, ಜಿಲ್ಲಾ, ತಾಲೂಕು ಮಾಹಿತಿಯ ಜತೆಗೆ ಕಟ್ಟಡ ಹಳೆಯದೋ ಅಥವಾ ಹೊಸದಾಗಿ ಕಟ್ಟಲಾಗುತ್ತಿದೆಯೇ ಎಂಬ ಪ್ರಶ್ನೆಗಳಿಗೆ ಪುಟದಲ್ಲಿರುವ ಆಯ್ಕೆಗಳ ಮೇಲೆ ಕ್ಲಿಕ್‌ ಮಾಡುವ ಮೂಲಕ ಉತ್ತರಿಸಬೇಕು.

ಕಟ್ಟಡದ ಛಾವಣಿ ಸಮತಟ್ಟಾಗಿದೆಯೋ ಅಥವಾ ಓರೆಯಾಗಿದೆಯೋ, ಛಾವಣಿ ಅಳತೆ, ಮಹಡಿಗಳ ಸಂಖ್ಯೆ, ಸಂಪ್‌ ನಿರ್ಮಿಸಲು ಲಭ್ಯವಿರುವ ಜಾಗ, ಕುಟುಂಬದಲ್ಲಿರುವ ಸದಸ್ಯರ ಸಂಖ್ಯೆ ಮತ್ತು ಈ ವ್ಯವಸ್ಥೆ ಕುಡಿಯುವ ಉದ್ದೇಶಕ್ಕೋ ಅಥವಾ ಕೊಳವೆ ಬಾವಿ ಮರು ಪೂರಣಕ್ಕೋ ಎಂಬ ಪ್ರಶ್ನೆಗಳಿಗೆ ಉತ್ತರ ನೀಡಬೇಕು.

ಛಾಯಾಚಿತ್ರ ಮತ್ತು ರೇಖಾಚಿತ್ರಗಳೊಂದಿಗೆ ಎಷ್ಟು ಸಾಮರ್ಥ್ಯದ ಸಂಪ್‌ ನಿರ್ಮಿಸಬೇಕಾಗುತ್ತದೆ ಎಂಬ ಮಾಹಿತಿ ಜನರಿಗೆ ದೊರೆಯುತ್ತದೆ. ಒಟ್ಟಾರೆ ವ್ಯವಸ್ಥೆ ಅಳವಡಿಸಲು ಎಷ್ಟು ಪೈಪ್‌ಗಳು ಬೇಕು? ಅವುಗಳ ಗಾತ್ರ ಎಷ್ಟಿರಬೇಕು? ಎಷ್ಟು ಫಿಲ್ಟರ್‌ಗಳು ಬೇಕು? ಎಂಬ ಮಾಹಿತಿ ಜತೆಗೆ ಇವೆಲ್ಲಕ್ಕೂ ಎಷ್ಟು ಹಣ ಖರ್ಚಾಗುತ್ತದೆ ಎಂಬ ಅಂದಾಜು ಪಟ್ಟಿಯನ್ನು ಅಪ್ಲಿಕೇಶನ್ ಒದಗಿಸುತ್ತದೆ.

ಬಳಕೆದಾರರ ಮನೆಯ ನೆರೆಹೊರೆಯಲ್ಲಿರುವ ಪ್ಲಂಬರ್, ನಿರ್ಮಾಣ ಗುತ್ತಿಗೆದಾರರ ವಿಳಾಸ ಮತ್ತು ಸಂಪರ್ಕ ಸಂಖ್ಯೆಗಳನ್ನು ಅಪ್ಲಿಕೇಶನ್ ಒದಗಿಸುತ್ತದೆ. ಗೂಗಲ್‌ ಪ್ಲೇ ಸ್ಟೋರ್‌ನಿಂದ ಮೊಬೈಲ್‌ಗೆ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಬಹುದು. [ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Now you can get all the information about Rainwater Harvesting (RWH) on your mobile phone. Karnataka State Council for Science and Technology (KSCST) with support from Unesco, has developed 'RWH Advisor' mobile application, that answers all queries on rainwater harvesting.
Please Wait while comments are loading...