ಕರ್ನಾಟಕದಲ್ಲಿ ಮುದ್ರಾಂಕ ಶುಲ್ಕಗಳು ಏರಿಕೆ, ಎಷ್ಟು ಹೆಚ್ಚಳ? ವಿವರ
ಬೆಂಗಳೂರು, ಫೆಬ್ರವರಿ 09: ಕರ್ನಾಟಕ ಸರ್ಕಾರ ನೋಂದಣಿ ಅಗತ್ಯವಿಲ್ಲದ ಎಲ್ಲಾ ದಾಖಲೆಗಳ ಮುದ್ರಾಂಕ ಶುಲ್ಕಗಳನ್ನು ಏರಿಕೆ ಮಾಡಿದೆ. ಈ ಕುರಿತು ರಾಜ್ಯಪತ್ರದಲ್ಲಿ ಅಧಿಕೃತ ಆದೇಶ ಪ್ರಕಟವಾಗಿದ್ದು, ನೂತನ ದರಗಳು ಜಾರಿಗೆ ಬಂದಿವೆ.
ಡಿಸೆಂಬರ್‌ನಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕರ್ನಾಟಕ ಮುದ್ರಾಂಕ (ತಿದ್ದುಪಡಿ) ಮಸೂದೆ 2023 ಮಂಡಿಸಿ ಅನುಮೋದನೆ ಪಡೆಯಲಾಗಿತ್ತು. ಇದಕ್ಕೆ ಈಗ ರಾಜ್ಯಪಾಲರ ಅನುಮೋದನೆಯೂ ಸಿಕ್ಕಿದೆ.

ಅಧಿಕಾರಿಗಳ ಮಾಹಿತಿ ಪ್ರಕಾರ 28 ವರ್ಷಗಳ ಬಳಿಕ ನೋಂದಣಿ ಅಗತ್ಯವಿಲ್ಲದ ಎಲ್ಲಾ ದಾಖಲೆಗಳ ಮುದ್ರಾಂಕ ಶುಲ್ಕಗಳನ್ನು ಏರಿಕೆ ಮಾಡಲಾಗಿದೆ. ಶೇ 200 ರಿಂದ 500 ರೂ. ತನಕ ಶುಲ್ಕಗಳನ್ನು ಏರಿಕೆ ಮಾಡಲಾಗಿದ್ದು, ತಕ್ಷಣದಿಂದಲೇ ಜಾರಿಯಾಗಿದೆ.
ಎಷ್ಟು ಶುಲ್ಕಗಳು ಏರಿಕೆ: ದತ್ತು ಸ್ವೀಕಾರ, ಅಫಿಡೆವಿಟ್, ಡೈವೋರ್ಸ್, ಕಂಪನಿಗಳ ಷೇರು ಹಂಚಿಕೆ ಪತ್ರ, ಟ್ರಸ್ಟ್‌ಗಳ ಪ್ರಮಾಣ ಪತ್ರ, ಪವರ್ ಅಫ್ ಆರ್ಟಾನಿ, ಆಸ್ತಿಗಳ ಪರಭಾರೆ ಸೇರಿದಂತೆ ಒಟ್ಟು 25 ನೋಂದಣಿ ಅಗತ್ಯವಿಲ್ಲದ ಎಲ್ಲಾ ದಾಖಲೆಗಳ ಮುದ್ರಾಂಕ ಶುಲ್ಕಗಳನ್ನು ಏರಿಕೆ ಮಾಡಲಾಗಿದೆ.
1995ರ ಬಳಿಕ ಮೊದಲ ಬಾರಿಗೆ ರಾಜ್ಯ ಸರ್ಕಾರ ಮುದ್ರಾಂಕ ಶುಲ್ಕಗಳನ್ನು ಏರಿಕೆ ಮಾಡಿದೆ. ಇತರ ರಾಜ್ಯಗಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಶುಲ್ಕ ಹೆಚ್ಚಿಸಲಾಗಿದೆ. ವಿವಿಧ ದಾಖಲಾತಿಗಳನ್ನು ಪಡೆಯುವವರು ಈಗ ಹೊಸ ಶುಲ್ಕವನ್ನು ಪಾವತಿಸಬೇಕು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
* ದತ್ತು ಸ್ವೀಕಾರ ಪತ್ರದ ಶುಲ್ಕ 500 ರಿಂದ 1000 ರೂ.ಗೆ ಹೆಚ್ಚಳ
* ಅಫಿಡೆವಿಟ್ 20 ರೂ. ನಿಂದ 100 ರೂ.ಗೆ ಏರಿಕೆ
* ಡೈವೋರ್ಸ್ ಪ್ರಮಾಣ ಪತ್ರ 100 ರಿಂದ 500 ರೂ.ಗೆ ಏರಿಕೆ
* ಕಂಪನಿ ಷೇರುಗಳ ಅಲಾಟ್‌ಮೆಂಟ್ ಶುಲ್ಕ 1 ರೂ.ನಿಂದ 10 ರೂ. ಗೆ ಏರಿಕೆ
* ಟ್ರಸ್ಟ್ (ಸಾರ್ವಜನಿಕ, ಧಾರ್ಮಿಕ, ಚಾರಿಟಬಲ್) 1000 ರೂ. ನಿಂದ 2 ಸಾವಿರಕ್ಕೆ ಏರಿಕೆ
* ಪವರ್ ಆಫ್ ಅರ್ಟಾನಿ 100 ರಿಂದ 500 ರೂ. ಗೆ ಹೆಚ್ಚಳ
* ಆಸ್ತಿ ಪರಭಾರೆ (ಸೆಕ್ಷನ್ 25 ಅನ್ವಯ) 100 ರಿಂದ 200 ರೂ.ಗಳಿಗೆ ಏರಿಕೆ
* ಪಾನ್ ಡಾಕ್ಯುಮೆಂಟ್ ಶುಲ್ಕಗಳಲ್ಲಿ ಯಾವುದೇ ಏರಿಕೆಯಾಗಿಲ್ಲ
ಹಲವು ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳುವಾಗ ನೋಂದಣಿ ಅಗತ್ಯವಿಲ್ಲದ ಎಲ್ಲಾ ದಾಖಲೆಗಳು ಎರಡೂ ಕಡೆಯವರಿಗೆ ಕಾನೂನಿನ ರಕ್ಷಣೆಯನ್ನು ನೀಡುತ್ತವೆ. ಆದ್ದರಿಂದ ಇವುಗಳು ಮಹತ್ವದ ದಾಖಲೆಗಳಾಗಿವೆ. ಇವುಗಳ ಮುದ್ರಾಂಕ ಶುಲ್ಕಗಳನ್ನು ಏರಿಕೆ ಮಾಡಿರಲಿಲ್ಲ. ಈಗ ಅವುಗಳನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ.
ನೋಂದಣಿ ಅಗತ್ಯವಿಲ್ಲದ ಎಲ್ಲಾ ದಾಖಲೆಗಳ ಮುದ್ರಾಂಕ ಶುಲ್ಕಗಳ ಏರಿಕೆ ಕುರಿತು ಜನರಿಗೆ ಅರಿವು ಮೂಡಿಸಲು ಸಹ ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಸಬ್ ರಿಜಿಸ್ಟಾರ್ ಕಛೇರಿಗಳಲ್ಲಿ ಈ ಕುರಿತು ಫಲಕಗಳನ್ನು ಆಳವಡಿಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸ್ಥಿರಾಸ್ತಿ ಮಾರ್ಗಸೂಚಿ ದರಗಳನ್ನು ಪರಿಷ್ಕರಣೆ ಮಾಡಿತ್ತು. ನಂತರ ಸರ್ಕಾರ ಮುದ್ರಾಂಕ ಶುಲ್ಕಗಳನ್ನು ಪರಿಷ್ಕರಣೆ ಮಾಡಿತ್ತು.












Click it and Unblock the Notifications