ಹಿಜಾಬ್, ಕೇಸರಿ ಶಾಲು ಧರಿಸಲು ಅವಕಾಶವಿಲ್ಲ; ಆರಗ ಜ್ಞಾನೇಂದ್ರ
ಬೆಂಗಳೂರು, ಫೆಬ್ರವರಿ 03; "ಶಿಕ್ಷಣ ಸಂಸ್ಥೆಗಳು ನಿಗದಿಪಡಿಸಿರುವ ಸಮವಸ್ತ್ರ ಹೊರತುಪಡಿಸಿ ವಿದ್ಯಾರ್ಥಿಗಳು ಕೇಸರಿ ಶಾಲು, ಹಿಜಾಬ್ ಧರಿಸಬಾರದು" ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, "ಶಿಕ್ಷಣ ಸಂಸ್ಥೆಗಳಲ್ಲಿ ವಿವಾದ ಬೇಡ. ಮತೀಯತೆ ಬಿಟ್ಟು ವಿಶಾಲ ಮನೋಭಾವವಿರಬೇಕು. ಶಿಕ್ಷಣ ಸಂಸ್ಥೆಗಳಲ್ಲಿ ಸಮವಸ್ತ್ರ ಕಡ್ಡಾಯವೇ ಹೊರತು ಬೇರೇನೂ ಅಲ್ಲ" ಎಂದರು.
"ಶಿಕ್ಷಣ ಸಂಸ್ಥೆಯಲ್ಲಿ ಧರ್ಮ, ಜಾತಿ ಮೀರಿ ಎಲ್ಲರೂ ಒಂದೇ ಎಂಬ ಭಾವನೆ, ಭಾರತ ಮಾತೆಯ ಮಕ್ಕಳು ಎಂಬ ರಾಷ್ಟ್ರಪ್ರೇಮ ಇರಬೇಕು. ಪೂಜೆ, ಧಾರ್ಮಿಕ ಕಾರ್ಯಗಳು ದೇವಾಲಯ, ಮಸೀದಿಗಳಲ್ಲಿರಲಿ. ಶಾಲೆಗಳಲ್ಲಿ ದೇಶದ ಏಕತೆ, ಸಮಗ್ರತೆ ಬಗ್ಗೆ ಸಂಸ್ಕಾರ ಇರಬೇಕು" ಎಂದು ತಿಳಿಸಿದರು.

"ಮತೀಯ ಸಂಘಟನೆಗಳ ಬಗ್ಗೆ ಗಮನ ಹರಿಸಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಯಾರು ಏಕತೆಗೆ ಅಡ್ಡಗಾಲು ಹಾಕುತ್ತಾರೋ ಅವರನ್ನು ಸರಿಮಾಡಲಾಗುವ ಕೆಲಸ ಮಾಡಲಾಗುತ್ತದೆ" ಎಂದು ಸಚಿವರು ಎಚ್ಚರಿಸಿದರು.
ಕುಂದಾಪುರಕ್ಕೂ ಹಬ್ಬಿದ ವಿವಾದ; ಉಡುಪಿಯಲ್ಲಿ ಹಿಜಾಬ್ ವಿವಾದ ತೀವ್ರ ಸ್ವರೂಪವನ್ನು ಪಡೆಯುತ್ತಿದೆ. ಈ ವಿವಾದದ ಈಗ ಉಡುಪಿಯ ಮೂರು ಕಾಲೇಜುಗಳಿಗೆ ಹಬ್ಬಿದೆ. ಕುಂದಾಪುರದ ಸರ್ಕಾರಿ ಕಾಲೇಜಿಗೆ ಗುರುವಾರ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಗೇಟಿನಲ್ಲೇ ತಡೆದು ಹೊರಗೆ ಕಳುಹಿಸಿದ್ದಾರೆ.
ಉಡುಪಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ಈಗ ಕುಂದಾಪುರಕ್ಕೂ ಹಬ್ಬಿದೆ.
ಕುಂದಾಪುರದ ಸರ್ಕಾರಿ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿನಿಯರ ಒಂದು ತಂಡ ಹಿಜಾಬ್ ಧರಿಸಿದರೆ ಅದಕ್ಕೆ ಪ್ರತಿಯಾಗಿ ವಿದ್ಯಾರ್ಥಿಗಳ ಗುಂಪು ಕೇಸರಿ ಶಲ್ಯವನ್ನು ಧರಿಸಿದ್ದರು.
ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಗುಂಪು ಕೇಸರಿ ಶಲ್ಯ ಧರಿಸಿ ಕಾಲೇಜಿನೊಳಗೆ ಪ್ರವೇಶಿಸಿದೆ. ಈ ವೇಳೆ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ್ ಘೋಷಣೆಯನ್ನು ಕೂಗಿದೆ.
ತರಬೇತಿ ಸಂಸ್ಥೆ; ಇದಕ್ಕೂ ಮುನ್ನ ವಿಪತ್ತು ಸ್ಪಂದನಾ ಪಡೆಯ ಆಂಬ್ಯುಲೆನ್ಸ್, ಜೀಪು, ಸರಕು ಸಾಗಾಣಿಕೆಯ ವಾಹನ, ಜನರೇಟರ್ ಒಳಗೊಂಡ ಟ್ರಕ್ ವಾಹನಗಳಿಗೆ ಗೃಹ ಸಚಿವರು ಚಾಲನೆ ನೀಡಿದರು.
"ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹೆಸರಿನಲ್ಲಿ ವಿಪತ್ತು ಸ್ಪಂದನಾ ಪಡೆಯ ತರಬೇತಿ ಸಂಸ್ಥೆಯೊಂದನ್ನು ಸ್ಥಾಪಿಸಲಾಗುವುದು. ರಾಜ್ಯ ವಿಪತ್ತು ಸ್ಪಂದನಾ ಪಡೆಯ ಕೇಂದ್ರೀಯ ತರಬೇತಿ ಅಕಾಡೆಮಿಯನ್ನು ದೊಡ್ಡಬಳ್ಳಾಪುರದಲ್ಲಿರುವ ಅಗ್ನಿಶಾಮಕ ಪಡೆಯ 20 ಎಕರೆ ಜಾಗದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ" ಎಂದರು.
"ನೇತಾಜಿ ಅವರ 125ನೇ ಜಯಂತಿ ಸಂದರ್ಭದಲ್ಲಿ ಮುಂದಿನ ತಲೆಮಾರಿಗೆ ಅವರ ಆದರ್ಶಗಳನ್ನು ನೆನಪಿಸುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅತಿವೃಷ್ಟಿ, ಅನಾವೃಷ್ಟಿ, ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ಅವಘಡ ನಿರ್ವಹಿಸಲು ವಿಶೇಷ ಕಾರ್ಯಪಡೆಯ ಅಗತ್ಯವಿದೆ. ಸಿಬ್ಬಂದಿ ಕೊರತೆ ನೀಗಿಸಲು ನಿಯೋಜನೆ ಮೇಲೆ ಸಿಬ್ಬಂದಿ ಒದಗಿಸಲು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು" ಎಂದು ಆರಗ ಜ್ಞಾನೇಂದ್ರ ಭರವಸೆ ನೀಡಿದರು.
"ರಾಷ್ಟ್ರವು ಆಂತರಿಕ ಹಾಗೂ ಬಾಹ್ಯವಾಗಿ ಸುಭದ್ರವಾಗಿರಬೇಕಾದರೆ ಆ ದೇಶದ ನಾಯಕರ ಜತೆ ಬಲಿಷ್ಠ ರಕ್ಷಣಾಪಡೆ, ಸದೃಢವಾದ ಪೊಲೀಸ್ ಹಾಗೂ ಇತರ ಸಮವಸ್ತ್ರ ಧರಿಸುವ ಇಲಾಖೆಗಳ ವ್ಯವಸ್ಥೆ ಅತ್ಯಂತ ಅವಶ್ಯಕ. ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಮತ್ತು ವಿಪತ್ತುಗಳು ಒದಗಿದಾಗ ಪ್ರಾಣದ ಹಂಗು ಲೆಕ್ಕಿಸದೆ ಸಾರ್ವಜನಿಕ ಪ್ರಾಣ, ಆಸ್ತಿಪಾಸ್ತಿ ರಕ್ಷಣಾ ಕಾರ್ಯದಲ್ಲಿ ಈ ಸ್ಪಂದನಾ ಪಡೆ ನಿರಂತರವಾಗಿ ಇರಲಿ" ಎಂದರು.
"ವಾರದ ಎಲ್ಲಾ ದಿನವೂ 24 ಗಂಟೆಯೂ ಸಹಾಯಕ್ಕಾಗಿ ಧಾವಿಸಲು ಸ್ಪಂದನಾ ಪಡೆಗೆ 20 ಕೋಟಿ ರೂ. ವೆಚ್ಚದಲ್ಲಿ ಹೊಸ ವಾಹನಗಳನ್ನು ಖರೀದಿಸಲಾಗಿದೆ. ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ ಇನ್ನೂ ಮೂರು ರಾಜ್ಯ ವಿಪತ್ತು ಸ್ಪಂದನಾ ಪಡೆ ತುಕಡಿಗಳನ್ನು ಸೃಷ್ಟಿಸಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿ ಶೋಧನಾ ಮತ್ತು ರಕ್ಷಣಾ ಉಪಕರಣ ಖರೀದಿಗೆ 9.65 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ" ಎಂದು ಮಾಹಿತಿ ನೀಡಿದರು.
"ಕಠಿಣ ಪರಿಶ್ರಮ, ಬದ್ಧತೆ, ಮುಂದಾಲೋಚನೆಯಿಂದ ಕಾರ್ಯ ನಿರ್ವಹಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿ, ರಾಷ್ಟ್ರದಲ್ಲೇ ಅತ್ಯುತ್ತಮ ಮಾದರಿ ತುರ್ತು ಪಡೆಯಾಗಿ ಹೊರ ಹೊಮ್ಮಬೇಕು. ಇಲಾಖೆಗಳ ಸರ್ವತೋಮುಖ ಅಭಿವೃದ್ಧಿಗೆ ಎಲ್ಲಾ ರೀತಿಯ ಸೌಕರ್ಯ ಮತ್ತು ಅನುದಾನ ಒದಗಿಸಲು ಸರ್ಕಾರ ಬದ್ಧವಾಗಿದೆ" ಎಂದು ಹೇಳಿದರು.












Click it and Unblock the Notifications