ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ: ಸಿದ್ದರಾಮಯ್ಯ
ಹುಬ್ಬಳ್ಳಿ,ಜನವರಿ 3: ನಾವು 2023ರಲ್ಲಿ ಅಧಿಕಾರಕ್ಕೆ ಬಂದೇ ಬರುತ್ತೇವೆ. ಬಿಜೆಪಿ ಎಷ್ಟೇ ಸುಳ್ಳು ಹೇಳಲಿ, ಹಣದ ಹೊಳೆ ಹರಿಸಲಿ, ಕಾಂಗ್ರೆಸ್ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಮಹದಾಯಿ ಜಲ-ಜನ ಆಂದೋಲನದಲ್ಲಿ ಮಾತನಾಡಿದ ಅವರು, ಈ ಡೋಂಗಿತನ ಬಿಟ್ಟು, ಜನರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಸತ್ಯ ಹೇಳುವುದನ್ನು ಕಲಿಯಿರಿ, ಕಾಂಗ್ರೆಸ್ ಅಧಿಕಾರದಲ್ಲಿ ಇರುವಾಗ ನುಡಿದಂತೆ ನಡೆದಿದ್ದೇವೆ. 2013ರಲ್ಲಿ ನಮ್ಮ ಪ್ರಣಾಳಿಕೆ ಮೂಲಕ 165 ಭರವಸೆ ನೀಡಿದ್ದೆವು. ಅದರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಅದರ ಜತೆಗೆ ಪ್ರಣಾಳಿಕೆಯಲ್ಲಿ ಹೇಳದ 30 ಕಾರ್ಯಕ್ರಮ ಕೊಟ್ಟಿದ್ದೇವೆ. ನುಡಿದಂತೆ ನಡೆದ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ. ನಾವು ಕೊಟ್ಟ ಮಾತಿಗೆ ತಪ್ಪಲ್ಲ ಎಂದರು.
ಕಾಂಗ್ರೆಸ್ ಪಕ್ಷ ಇಡೀ ರಾಜ್ಯದಲ್ಲಿ ಜನಪರ ಹೋರಾಟ ಮಾಡಿಕೊಂಡು ಹುಬ್ಬಳ್ಳಿಯಲ್ಲಿ ಮಹದಾಯಿ ಯೋಜನೆ ತ್ವರಿತ ಜಾರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಒತ್ತಾಯ ಮಾಡಲು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಡಿ.30ರಂದು ವಿಜಯಪುರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಆರಂಭಿಸಲು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದೆವು.

ಕಳಸಾ ಬಂಡೂರಿ ನಾಲಾ ಯೋಜನೆಯನ್ನು ತೀವ್ರಗತಿಯಲ್ಲಿ ಪ್ರಾರಂಭಿಸುವಂತೆ ಆಗ್ರಹಿಸಲು ಹುಬ್ಬಳ್ಳಿಯಲ್ಲಿ ಈ ಕಾರ್ಯಕ್ರಮ ಮಾಡಲು 15 ದಿನಗಳ ಹಿಂದೆ ಕಾಂಗ್ರೆಸ್ ಎಲ್ಲ ನಾಯಕರು ದೆಹಲಿಯಲ್ಲಿ ತೀರ್ಮಾನ ಮಾಡಿದ್ದೆವು. ನಾವು ಇಲ್ಲಿ ಸಮಾವೇಶ ಘೋಷಣೆ ಮಾಡಿದ ನಂತರ ಬಿಜೆಪಿಯವರು ಎಚ್ಛೆತ್ತುಕೊಂಡು ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿರುವ ಕಾರಣ ಈಗ ಈ ಯೋಜನೆ ಡಿಪಿಆರ್ ಅನುಮೋದನೆ ಮಾಡಿದ್ದೇವೆ ಎಂದು ನಿನ್ನೆ ವಿಜಯೋತ್ಸವ ಆಚರಿಸಿದ್ದಾರೆ ಎಂದರು.
ಗೆಜೆಟ್ ನೋಟಿಫಿಕೇಷನ್ ಆಗಿದ್ದು ಯಾವಾಗ? 27-2-2020. ಕೇಂದ್ರ, ರಾಜ್ಯ, ಗೋವಾ, ಮಹಾರಾಷ್ಟ್ರದಲ್ಲಿ ನಿಮ್ಮದೇ ಸರ್ಕಾರ ಇದ್ದರೂ 2 ವರ್ಷ 10 ತಿಂಗಳು ಯಾಕೆ ಪ್ರಾರಂಭ ಮಾಡಲಿಲ್ಲ? ಡಿಪಿಆರ್ ಗೆ ಈ ಹಿಂದೆ ಅನುಮೋದನೆ ನೀಡಲಿಲ್ಲ ಯಾಕೆ? ಜೋಷಿ ಅವರು, ಬಸವರಾಜ ಬೊಮ್ಮಾಯಿ ಅವರೇ ನೀವು ರಾಜ್ಯದ ಜನರಿಗೆ ಸುಳ್ಳು ಹೇಳುತ್ತಿದ್ದೀರಿ. ನ್ಯಾಯಾಧೀಕರಣ 14-8-2018ರಲ್ಲಿ ತನ್ನ ತೀರ್ಮಾನ ನೀಡಿತು. ಐದು ವರ್ಷಗಳಲ್ಲಿ ನಾವು ಗೋವಾ ಮಹಾರಾಷ್ಟ್ರದವರು ಮೇಲ್ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಐಎಎಂ ಅರ್ಜಿ ಹಾಕಿದೆವು. ನಮ್ಮ ಅರ್ಜಿಯನ್ನು ಒಪ್ಪಿ ಸುಪ್ರೀಂ ಕೋರ್ಟ್ 27-2-2020ರಲ್ಲಿ ಗೆಜೆಟ್ ನೋಟಿಫಿಕೇಷನ್ ಆಯಿತು. ಬೊಮ್ಮಾಯಿ ಹಾಗೂ ಯಡಿಯೂರಪ್ಪನವರೇ ನಿಮ್ಮದೇ ಸರ್ಕಾರವಿತ್ತು. ಆದರೂ ಈ ವಿಚಾರವಾಗಿ ನಿದ್ದೆ ಮಾಡಿದ್ದು ಯಾಕೆ? ಸುಳ್ಳು ಹೇಳಿ ವಿಜಯೋತ್ಸವ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? 2013ರಲ್ಲಿ ನಾವು ಅದಿಕಾರಕ್ಕೆ ಬಂದಾಗ ನ್ಯಾಯಾಧಿಕರಣದ ಮುಂದೆ ಸಮರ್ಥ ಸಾಕ್ಷ್ಯ ಒದಗಿಸಿ ವಾದ ಮಂಡಿಸಿದ ಪರಿಣಾಮ ನಮಗೆ 13.42 ಟಿಎಂಸಿ ನೀರು ಸಿಕ್ಕಿದೆ. ಗೋವಾದವರಿಗೆ 24 ಟಿಎಂಸಿ, ಮಹಾರಾಷ್ಟ್ರದವರಿಗೆ 1.3 ಟಿಎಂಸಿ ಸಿಕ್ಕಿತು. ಈ ತೀರ್ಪು ಸಮಾಧಾನವಿಲ್ಲದಿದ್ದರೂ ಅದನ್ನು ಒಪ್ಪಿದ್ದೇವೆ.
ನಾನು ಸಿಎಂ ಆಗಿದ್ದಾಗ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಿದ್ದೆ. ಪ್ರಹ್ಲಾದ್ ಜೋಷಿ, ಯಡಿಯೂರಪ್ಪ, ಅನಂತ ಕುಮಾರ್, ಸದಾನಂದ ಗೌಡ, ಶೋಭಾ ಕರಂದ್ಲಾಜೆ ಅವರೆಲ್ಲರೂ ಬಂದಿದ್ದರು. ಆ ಯೋಜನೆಗಾಗಿ ಹೋರಾಟ ಮಾಡುತ್ತಿದ್ದ ರೈತ ಮುಖಂಡರು ಬಂದಿದ್ದರು. ಸ್ವಾಮೀಜಿಗಳು ಬಂದಿದ್ದರು. ಇವರೆಲ್ಲರ ಸಮ್ಮುಖದಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೈಮುಗಿದು ಪ್ರಾರ್ಥನೆ ಮಾಡಿ, ಮೋದಿ ಅವರೇ ಗೋವಾದಲ್ಲಿ, ಮಹಾರಾಷ್ಟ್ರದಲ್ಲಿ ನಿಮ್ಮ ಪಕ್ಷ ಅಧಿಕಾರದಲ್ಲಿದೆ. ನಾನು ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿದ್ದು, ನೀವು ಯಾವುದೇ ತೀರ್ಮಾನ ಕೊಟ್ಟರೂ ನಾವು ಒಪ್ಪಲು ಸಿದ್ಧನಿದ್ದೇನೆ. ನಿಮ್ಮ ಮುಖ್ಯಮಂತ್ರಿಗಳನ್ನು ಕರೆದು ಚರ್ಚೆ ಮಾಡಿ. ನೀವು ನಿಮ್ಮ ಮುಖ್ಯಮಂತ್ರಿಗಳನ್ನು ಒಪ್ಪಿಸಿ ಇದನ್ನು ಇತ್ಯಾರ್ಥ ಮಾಡಿ ಎಂದು ಪರಿಪರಿಯಾಗಿ ಗೋಗರೆದೆ. ಆದರೂ ಒಪ್ಪಲಿಲ್ಲ. ಆಗ ಬಿಜೆಪಿ ನಾಯಕರು ಒಳಗಡೆ ಹೋಗಿ ಮಾತನಾಡಿ ಬಂದರು. ಸಿದ್ದರಾಮಯ್ಯ ಅವರ ಮನವಿ ಒಪ್ಪಬೇಡಿ ಎಂದು ಮೋದಿ ಅವರಿಗೆ ಹೇಳಿ ಬಂದರು. ಇದಕ್ಕೆ ಸ್ವಾಮೀಜಿಗಳು, ರೈತ ಮುಖಂಡರೇ ಸಾಕ್ಷಿ ಎಂದರು.

ಅಂದು ನರೇಂದ್ರ ಮೋದಿ ಅವರು ಒಪ್ಪಲಿಲ್ಲ. ಇಂದಿರಾ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ತೆಲುಗು ಗಂಗಾ ಯೋಜನೆಗೆ, ಆಂಧ್ರ, ಕರ್ನಾಟಕ, ತಮಿಳುನಾಡು ಮುಖ್ಯಮಂತ್ರಿ ಕರೆದು ಇತ್ಯರ್ಥ ಮಾಡಿದ್ದಾರೆ. ಅದೇ ರೀತಿ ನೀವು ಮಾಡಿ ಮೋದಿಯವರೇ ಎಂದು ಗೋಗರೆದಿದ್ದೆ. ಆಗ ಮೋದಿ ಅವರು ನೀವು ಗೋವಾ ಕಾಂಗ್ರೆಸ್ ಒಪ್ಪಿಸಿಕೊಂಡು ಬನ್ನಿ ಆಗ ನಾನು ನೋಡುತ್ತೇನೆ ಎಂದರು.
ಇಂದಿರಾ ಗಾಂಧಿ ಅವರಿಗೆ ಸಾಧ್ಯವಾಗುವುದಾದರೆ ನಿಮ್ಮ ಕೈಯಲ್ಲಿ ಯಾಕೆ ಸಾಧ್ಯವಾಗಲಿಲ್ಲ? ನೀವು ಪ್ರಯತ್ನವನ್ನೇ ಮಾಡಲಿಲ್ಲ. ಗೋವಾದ ನಿಯೋಗ ಪ್ರಧಾನಿ ಭೇಟಿಗೆ ಹೋಗುತ್ತಿದ್ದಾರೆ. ಒಮ್ಮೆ ವಾಜಪೇಯಿ ಸರ್ಕಾರ ಇದ್ದಾಗ ಅನುಮತಿ ನೀಡಿ ಅದನ್ನು 2 ತಿಂಗಳಲ್ಲಿ ಹಿಂಪಡೆದಿದ್ದರು. 2018ರಲ್ಲಿ ಯಡಿಯೂರಪ್ಪ ಇದೇ ಮೈದಾನದಲ್ಲಿ ಏನು ಹೇಳಿದ್ದರು. ನಾವು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮಹದಾಯಿ ಯೋಜನೆ ಬಗೆಹರಿಸಿ ಕೆಲಸ ಆರಂಭಿಸುವುದಾಗಿ ರಕ್ತದಲ್ಲಿ ಬರೆದುಕೊಡುವುದಾಗಿ ಹೇಳಿದ್ದರು.
ಕೂಡಲಸಂಗಮದಲ್ಲಿ 5 ವರ್ಷಗಳಲ್ಲಿ ನೀರಾವರಿ ಯೋಜನೆಗೆ 50 ಸಾವಿರ ಕೋಟಿ ನೀಡುವುದಾಗಿ ಹೇಳಿದ್ದೆವು. ನಾವು ಅಧಿಕಾರದಲ್ಲಿ 50 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಿದ್ದೇವೆ. ನೀವು 2018ರಲ್ಲಿ 1.50 ಲಕ್ಷ ಕೋಟಿ ನೀರಾವರಿಗೆ ನೀಡಲಾಗುವುದು ಎಂದು ಹೇಳಿದ್ದೀರಿ. ಇಲ್ಲಿಯವರೆಗೂ ಕೇವಲ 45 ಸಾವಿರ ಕೋಟಿ ಖರ್ಚು ಮಾಡಿದ್ದೀರಿ. ಇನ್ನು 1 ಲಕ್ಷ ಕೋಟಿ ಏನಾಯ್ತು? ಕಳಸಾ ಬಂಡೂರಿ ಜನೆ ಯಾಕೆ ಆರಂಭಿಸಲಿಲ್ಲ. ನಿಮ್ಮ ಪ್ರಣಾಳಿಕೆಯಲ್ಲಿ 600 ಭರವಸೆ ಕೊಟ್ಟಿದ್ದು ಅದಲ್ಲಿ ಶೇ.10ರಷ್ಟು ಜಾರಿ ಮಾಡಲು ಆಗಿಲ್ಲ. ರಾಜ್ಯದ ಜನರಿಗೆ ಸುಳ್ಳು ಹೇಳಿ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ರಾಜ್ದ ಜನರಿಗೆ ದ್ರೋಹ ಮಾಡಿದ್ದೀರಿ.

ನಾವು 2023ರಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯದ ಅಲ್ಲ ಬಾಕಿ ನೀರಾವರಿ ಯೋಜನೆಗೆ 5 ವರ್ಷಗಳಲ್ಲಿ ಪೂರೈಸಲು 2 ಲಕ್ಷ ಕೋಟಿ ಅನುದಾನ ನೀಡಲಾಗುವುದು. 93 ಕೋಟಿ ಇದ್ದ ಯೋಜನಾ ವೆಚ್ಚ ಇಂದು 1677 ಕೋಟಿ ಆಗಿದೆ. ಈ ಹಣ ನೀಡುವವರು ಯಾರು? ನಿಮ್ಮ ವಿಳಂಬ ನೀತಿ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಇಷ್ಟು ಹೆಚ್ಚಾಗಿದೆ. ಕೇಂದ್ರಸರ್ಕಾರ ಈ ಹಣ ನೀಡುತ್ತದೆಯಾ? ಮೋದಿ, ನಿರ್ಮಲಾ ಸೀತರಾಮನ್ ಅವರು ನೀವು ನೀಡುತ್ತೀರಾ? ನೀವು ನೀಡಬೇಕು ಎಂದು ಒತ್ತಾಯಿಸುತ್ತೇನೆ. ನಾವು ಅಧಿಕಾರಕ್ಕೆ ಬಂದ 2 ವರ್ಷದಲ್ಲಿ ಇಡೀ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಈ ಭಆಗದ ಜನರಿಗೆ ಹೇಳಲು ಬಯಸುತ್ತೇನೆ.












Click it and Unblock the Notifications