ಕಾಂಗ್ರೆಸ್ ಸರ್ಕಾರ ಉರುಳಿಸಲು ಕಮಲ-ದಳ ಪ್ಲಾನ್!: ದಿನೇಶ್ ಗುಂಡೂರಾವ್ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 17: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದ್ದು, ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಬಿಜೆಪಿ ಜೆಡಿಎಸ್ ಸೇರಿಕೊಂಡು ಎನೇ ಪ್ರಯತ್ನ ಮಾಡಿದ್ರೂ ಸರ್ಕಾರವನ್ನ ಏನು ಮಾಡೊಕೆ ಆಗಲ್ಲ ಎಂದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಈ ಕುರಿತು ಬೆಂಗಳೂರಿನ ಶಾಸಕರ ಕಚೇರಿಯಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇದು ಎಲ್ಲರಿಗೂ ಗೊತ್ತಿರುವ ವಾಸ್ತವ ಸಂಗತಿ. ಆದರೆ ಬಿಜೆಪಿ ಭ್ರಮೆಯಲ್ಲಿದೆ. ಏನೋ ಮಾಡಿಬಿಡ್ತೇವೆ ಎಂಬ ಭ್ರಮೆ ಅವರನ್ನ ಆವರಿಸಿದೆ. ಇನ್ನೂ ಬಿಜೆಪಿಯವರು ಗ್ರೌಂಡ್ ರಿಯಾಲಿಟಿಗಳನ್ನ ಅರಿತಿಲ್ಲ. ಈಗಲೂ ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತಾಡ್ತಿದ್ದಾರೆ. ಪಂಚರಾಜ್ಯಗಳ ಚುನಾವಣೆ ಎದುರಿಗಿದೆ. ಈ ಚುನಾವಣೆಯ ಫಲಿತಾಂಶಗಳಲ್ಲಿ ಬಿಜೆಪಿಯ ಸ್ಥಿತಿ ಗೊತ್ತಾಗಲಿದೆ ಎಂದರು.

20 ಶಾಸಕ ಜೊತೆಗೆ ಸತೀಶ್ ಜಾರಕಿಹೊಳಿ ಮೈಸೂರು ತೆರಳಲು ಯೋಜನೆ ಹಾಕಿರುವ ವಿಚಾರವಾಗಿ ಮಾತನಾಡಿ, ಸಚಿವ ಸತೀಶ್ ಜಾರಕಿಹೊಳಿ ಅವರು ಶಾಸಕರ ಜೊತೆ ಮೈಸೂರು ದಸರಾ ಪ್ರವಾಸಕ್ಕೆ ಹೋಗುವುದರಲ್ಲಿ ತಪ್ಪೇನಿಲ್ಲ. ಅವರ ಆತ್ಮೀಯರ ಜೊತೆ ದಸರಾ ನೋಡಲು ಮೈಸೂರಿಗೆ ಹೋಗುವುದರಲ್ಲಿ ತಪ್ಪೇನಿದೆ. ಪಕ್ಷ ಎಂದ ಮೇಲೆ ಸಣ್ಣ ಪುಟ್ಟ ವಿಭಿನ್ನ ಅಭಿಪ್ರಾಯಗಳುರುತ್ತವೆ. ಜಾರಕಿಹೊಳಿ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಯಾರದ್ದೇ ಅಸಮಾಧಾನಗಳಿದ್ದರೂ, ಅದನ್ನ ಸರಿಪಡಿಸುವಂತಹ ನಾಯಕತ್ವ ಕಾಂಗ್ರೆಸ್ ನಲ್ಲಿದೆ ಎಂದರು.
ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರವಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರ ನಿಲುವು ಸರಿಯಾಗಿದೆ. ಜನತಾದಳ ಸೆಕ್ಯುಲರ್ ಎಂಬ ಹೆಸರಿಟ್ಟುಕೊಂಡಿರುವ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಸೆಕ್ಯುಲರ್ ಸಿದ್ಧಾಂತವಾ ಎಂಬ ಪ್ರಶ್ನೆ ಮೂಡುತ್ತದೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಹೆಸರು ಬದಲಿಸಿಕೊಳ್ಳುವುದು ಒಳ್ಳೆಯದು ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಐಟಿ, ಇಡಿ ತನ್ನ ಜೇಬಿನಲ್ಲೇ ಇಟ್ಟುಕೊಂಡಿರುವ ಬಿಜೆಪಿ, ಯಾರ ಮೇಲಾದರೂ ಅನುಮಾನ ಇದ್ದರೆ ಪರಿಶೀಲನೆಗೆ ಕಳಿಸಿಕೊಡಲಿ, ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ. ಐಟಿ ದಾಳಿಯಲ್ಲಿ ಸಿಕ್ಕಿರುವ ಹಣಕ್ಕೂ ಕಾಂಗ್ರೆಸ್ ಗೂ ಸಂಬಂಧವಿಲ್ಲ. ಬಿಜೆಪಿ ಆಧಾರ ರಹಿತ ಆರೋಪ ಮಾಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದ ಅವರು, ಬಿಜೆಪಿಯವರಿಗೆ ಬೇರೆ ಯಾವ ಅಸ್ತ್ರವಿಲ್ಲ. ಈ ರೀತಿಯ ಸುಳ್ಳುಗಳನ್ನ ಹೇಳಿ ಜನರ ದಾರಿ ತಪ್ಪಿಸುವುದೇ ಅವರಿಗೆ ಕೆಲಸವಾಗಿದೆ ಎಂದು ವಾಗ್ದಾಳಿ ನಡೆಸಿದರು.
ಐಟಿ ದಾಳಿಗೆ ಒಳಗಾದವರು ಯಾರು. ಅವರಿಗೂ ಕಾಂಗ್ರೆಸ್ ಗೂ ಏನು ಸಂಬಂಧ.? ಅವರೇನು ಕಾಂಗ್ರೆಸ್ ಕಾರ್ಯಕರ್ತಾರಾ ಅಥವಾ ಮುಖಂಡರಾ ಎಂದು ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದಾಗ ಐಟಿ ಇಡಿ ಯವರು ಆಕ್ವೀವ್ ಆಗಿರಲ್ಲ. ಬಿಜೆಪಿಯೇತರ ಸರ್ಕಾರಗಳು ಅಧಿಕಾರಕ್ಕೆ ಬಂದಾಗ ಐಟಿ ಅವರು ಆಕ್ವೀವ್ ಆಗ್ತಾರೆ.
ರಾಜ್ಯದಲ್ಲಿ ಈ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಬಹಿರಂಗವಾಗಿ ಭ್ರಷ್ಟಾಚಾರ ತಾಂಡವಾಡುತ್ತಿತ್ತು. ಆಗ ಈ ಐಟಿ, ಇಡಿ ಯವರು ಯಾರ ಕಣ್ಣಿಗೂ ಕಾಣಿಸುತ್ತಿರಲಿಲ್ಲ. ಅವರ ಕರ್ತವ್ಯ ಅವರು ಮಾಡುವುದಕ್ಕೆ ನಮ್ಮ ತಕರಾರಿಲ್ಲ. ಆದರೆ ಐಟಿ ದಾಳಿಯಲ್ಲಿ ಸಿಕ್ಕಿರುವ ಹಣವನ್ನ ಕಾಂಗ್ರೆಸ್ ನವರಿಗೆ ತಳುಕು ಹಾಕುವುದು ಸರಿಯಲ್ಲ ಎಂದರು. ಬಿಜೆಪಿಯವರು ತಮ್ಮ ಜೇಬಿನಲ್ಲೇ ಐಟಿ ಇಡಿ ಯವರನ್ನ ಇಟ್ಟುಕೊಂಡಿದ್ದಾರೆ. ಯಾರ ಮೇಲಾದರೂ, ಅನುಮಾನಗಳಿದ್ದರೇ ಐಟಿ ಇಡಿ ಯವರನ್ನ ಬಿಜೆಪಿಯವರು ಪರಿಶೀಲನೆಗೆ ಕಳಿಸಿಕೊಡಲಿ ಎಂದು ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಬಿಜೆಪಿಗೆ ತಿರುಗೇಟು ನೀಡಿದರು.












Click it and Unblock the Notifications