ಕಂದಾಚಾರ ನಿಷೇಧ ಕಾಯ್ದೆ ಜರೂರತ್ತೇ ಇಲ್ಲ -ಪೂಜಾರಿ

ಅಸಲಿಗೆ ಕಂದಾಚಾರ ನಿಷೇಧ ಕಾಯ್ದೆಯ ಜರೂರತ್ತೇ ಇಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅಪಸ್ವರ ಎತ್ತಿದ್ದಾರೆ. ಮಾಟ-ಮಂತ್ರ ಮತ್ತು ಮೂಢನಂಬಿಕೆ ನಿಷೇಧ ಮಾಡಲು ಹೊಸ ಕಾನೂನು ಜಾರಿಗೆ ತರುವ ಅಗತ್ಯವಿಲ್ಲ. ಈಗಿರುವ ಕಾಯ್ದೆಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡರೆ ಸಾಕು, ಇವುಗಳನ್ನೆಲ್ಲಾ ತಡೆಗಟ್ಟಬಹುದು. ಹೀಗಾಗಿ ಹೊಸ ಕಾಯ್ದೆ ಮತ್ತು ಕಾನೂನು ತರುವ ಅಗತ್ಯವಿಲ್ಲ ಎಂದಿದ್ದಾರೆ.
ಜಾಗೃತಿ ಮೂಡಿಸಿದರೆ ಸಾಕಾದೀತು; ಕಾಯಿದೆ ಅಗತ್ಯವಿಲ್ಲ:
ಕಾಯ್ದೆ/ಮಸೂದೆ ಮಾತು ಬಿಡಿ. ಬದಲಾಗಿ ಇಂತಹ ಕೆಲವು ಅನಿಷ್ಟ ಪದ್ಧತಿಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಪೂಜಾರಿ ಕಿವಿಮಾತು ಹೇಳಿದ್ದಾರೆ. ಗೋಕರ್ಣನಾಥ ದೇವಾಲಯದಲ್ಲಿ ವಿಧವೆಯರಿಂದ ಪೂಜೆ ಮಾಡಿಸುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದು ಹೊಸ ಇತಿಹಾಸ ನಿರ್ಮಾಣ ಮಾಡಿದ್ದ ಪೂಜಾರಿಯವರೇ ಈಗ ಸರ್ಕಾರದ ನಿರ್ಧಾರದ ವಿರುದ್ಧ ಸೆಟೆದು ನಿಂತಿರುವುದು ಸರಕಾರಕ್ಕೆ ಮಗ್ಗಲು ಮುಳ್ಳಾಗಿ ಪರಿಣಮಿಸಿದೆ.
ಸಾರ್ವಜನಿಕ ವಲಯದಲ್ಲಿ ಮಸೂದೆ ಜಾರಿ ಬಗ್ಗೆ ಪರ-ವಿರೋಧ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಇದಕ್ಕಾಗಿ ಹೊಸ ಕಾನೂನು ಬೇಕಿಲ್ಲ ಎಂದು ಅಪಸ್ವರ ಎತ್ತಿರುವುದು ಆಡಳಿತ ಪಕ್ಷದಲ್ಲಿ ಒಂದು ರೀತಿಯ ಮಿಂಚಿನ ಸಂಚಲನ ಉಂಟಾಗಿದೆ. ಮುಂದಿನ ಕೆಲ ದಿನಗಳಲ್ಲಿ ಕಾಂಗ್ರೆಸ್ಸಿನ ಇನ್ನೂ ಹಲವಾರು ನಾಯಕರು ಉದ್ದೇಶಿತ ಮಸೂದೆ ವಿರೋಧಿಸುವ ಸಾಧ್ಯತೆ ಹೆಚ್ಚಾಗಿದೆ.
ಕಂದಾಚಾರ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂಬ ಸರ್ಕಾರದ ನಿರ್ಧಾರಕ್ಕೆ ರಾಜ್ಯದಲ್ಲಿ ಪ್ರತಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ. ಅಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲೂ ವಿರೋಧ ಕಂಡುಬಂದಿದೆ. ಆದರೂ ಏನೇ ಆಗಲಿ, ಯಾವುದೇ ಬೆಲೆ ತೆತ್ತಾದರೂ ಸರಿಯೇ ಸಿಎಂ ಸಿದ್ದು ಕಾಯ್ದೆ ಜಾರಿಗೆ ತರುವ ಧಾವಂತದಲ್ಲಿದ್ದಾರೆ.
ದೇವರ ಮೇಲೆ ನಂಬಿಕೆ ಇಲ್ಲದವರ ಜತೆ ಚರ್ಚೆ ಮಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಕೂಡ ಪರೋಕ್ಷವಾಗಿ ಸರ್ಕಾರದ ತೀರ್ಮಾನಕ್ಕೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications