Farmers: ಬೇಸಿಗೆಯಲ್ಲಿ ರೈತರಿಗೆ ವಿದ್ಯುತ್ ಸಮಸ್ಯೆ ಇಲ್ಲ! ಸಿಹಿ ಸುದ್ದಿ ಕೊಟ್ಟ ಸಚಿವ ಕೆಜೆ ಜಾರ್ಜ್
ಇನ್ನೇನು ಬೇಸಿಗೆ ಆರಂಭವಾಗುತ್ತಿದ್ದು ರಾಜ್ಯದಲ್ಲಿ ಈ ಬಾರಿ ವಿದ್ಯುತ್ ಪೂರೈಕೆ ಹೇಗಿರುತ್ತದೆ ಎನ್ನುವ ಆತಂಕ ಜನತೆಗೆ ಎದುರಾಗಿದೆ. ಆದರೆ ಇಂಧನ ಸಚಿವ ಕೆ.ಜೆ ಜಾರ್ಜ್ ಜನರ ಆತಂಕವನ್ನು ದೂರ ಮಾಡುವ ಹೇಳಿಕೆ ನೀಡಿದ್ದು, ಈ ಬಾರಿ ಬೇಸಿಗೆಯಲ್ಲಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ಹೇಳಿದ್ದಾರೆ. ಅನಿರೀಕ್ಷಿತ ಸಂದರ್ಭದಲ್ಲಿ ಮಾತ್ರ ವಿದ್ಯುತ್ ಕಡಿತವಾಗಬಹುದು ಎಂದಿದ್ದಾರೆ.
ಬೆಂಗಳೂರಿನ ಬೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಇಂಧನ ಇಲಾಖೆಯ ಮುಖ್ಯಸ್ಥರ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಬೇಸಿಗೆಯಲ್ಲಿ ವಿದ್ಯುತ್ ಸಮಸ್ಯೆಯನ್ನು ಎದುರಿಸುವ ಸಿದ್ಧತೆ ಬಗ್ಗೆ ಮಾತನಾಡಿದರು. ಎರಡು ತಿಂಗಳಿನಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ ಹೆಚ್ಚಳವಾಗಿದೆ ಎಂದರು.

"ಕಳೆದ ಎರಡು ತಿಂಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆಯಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ ರಾಜ್ಯಕ್ಕೆ 19,000 ಮೆಗಾವ್ಯಾಟ್ ಬೇಡಿಕೆಯಿದ್ದು, ಮುಂಬರುವ ಬೇಸಿಗೆಯಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಸಜ್ಜಾಗಿದ್ದು ರಾಜ್ಯದಲ್ಲಿ ಯಾವುದೇ ಲೋಡ್ ಶೆಡ್ಡಿಂಗ್ ಸಮಸ್ಯೆ ಇರುವುದಿಲ್ಲ, ರಾಜ್ಯದಲ್ಲಿ ವಿದ್ಯುತ್ ಬಳಕೆ ಹೆಚ್ಚಾಗುತ್ತಿರುವುದು ವಿಶಾಲ ಆರ್ಥಿಕ ಚೇತರಿಕೆಯ ಮುನ್ಸೂಚೆಯಾಗಿದೆ" ಎಂದು ಹೇಳಿದರು.
ರೈತರಿಗೆ 7 ಗಂಟೆ 3 ಫೇಸ್ ವಿದ್ಯುತ್
ರಾಜ್ಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ, ಎಲ್ಲಿಯಾದರೂ ವಿದ್ಯುತ್ ಪೂರೈಕೆಯಲ್ಲಿ ಅಡಚಣೆಯಾದರೆ ಅದು ಸ್ಥಳೀಯ ತಾಂತ್ರಿಕ ಸಮಸ್ಯೆಗಳಿಂದಲೇ ಆಗಿರುತ್ತದೆ ಎಂದು ಹೇಳಿದರು.
ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ದಿನಕ್ಕೆ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಕೈಗಾರಿಕೆ ಮತ್ತು ಗೃಹಬಳಕೆಗಾಗಿ 24 ಗಂಟೆಗಳ ನಿರಂತರ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದು ಅವರು ಭರವಸೆ ನೀಡಿದರು.
ವಿನಿಮಯ ಒಪ್ಪಂದದ ಮೂಲಕ ಪ್ರತಿದಿನ 100 ರಿಂದ 1,275 ಮೆಗಾವ್ಯಾಟ್ ವಿದ್ಯುತ್ ಪಡೆಯಲಾಗುತ್ತಿದ್ದು, ಪಂಜಾಬ್‌ನಿಂದ 300 ಮೆಗಾವ್ಯಾಟ್ ಮತ್ತು ವಿನಿಮಯ ಆಧಾರದ ಮೇಲೆ ಉತ್ತರ ಪ್ರದೇಶದಿಂದ 700 ಮೆಗಾವ್ಯಾಟ್ ವಿದ್ಯುತ್ ಪಡೆಯಲಾಗುತ್ತಿದೆ. ಜೂನ್ ಮೊದಲವಾರದವರೆಗೆ 1,000 ಮೆಗಾವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತದೆ ಎಂದು ಸಚಿವ ಜಾರ್ಜ್ ತಿಳಿಸಿದರು.
ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಮಾತನಾಡಿ, 2024ಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ವಿದ್ಯುತ್ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ ಫೆಬ್ರವರಿ 27ರಂದು 16,214 ಮೆಗಾವ್ಯಾಟ್ ವಿದ್ಯುತ್‌ಗೆ ಬೇಡಿಕೆ ಇದ್ದರೆ ಈ ವರ್ಷ ಅದೇ ದಿನ 17,874 ಮೆಗಾವ್ಯಾಟ್ ಆಗಿತ್ತು. ಬೇಡಿಕೆ ಹೆಚ್ಚಾದರೂ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದರು. ಜೂನ್ ಮೊದಲ ವಾರದವರೆಗೂ ವಿದ್ಯುತ್ ಸರಬರಾಜು ಮಾಡುವಲ್ಲಿ ಸಮಸ್ಯೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.












Click it and Unblock the Notifications