ನಂದಿನಿ ಹಾಲಿನ ಮಾರಾಟ ದರ ಸದ್ಯಕ್ಕೆ ಹೆಚ್ಚಳವಿಲ್ಲ: ಸಚಿವ
ಬೆಂಗಳೂರು, ನವೆಂಬರ್ 14: ನಂದಿನಿ ಹಾಲಿನ ಮಾರಾಟ ದರವನ್ನು ಸದ್ಯಕ್ಕೆ ಹೆಚ್ಚಳ ಮಾಡಲಾಗುವುದಿಲ್ಲ ಎಂದು ಪಶುಸಂಗೋಪನಾ ಸಚಿವ ವೆಂಕಟಗೌಡ ನಾಡಗೌಡ ಅವರು ಸ್ಪಷ್ಟಪಡಿಸಿದರು.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಭೇಟಿಮಾಡಿದ ಪತ್ರಕರ್ತರೊಡನೆ ಮಾತನಾಡಿದ ಅವರು, ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಈಗ ನೀಡುತ್ತಿರುವ 5 ರೂ. ಪ್ರೋತ್ಸಾಹ ಹಣ ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.
ಸದ್ಯಕ್ಕೆ ಕೆ.ಎಂ.ಎಫ್ ನಿಂದ ಉತ್ಪಾದನೆಗೊಳ್ಳುತ್ತಿರುವ ಹಾಲಿನ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತೀರ್ಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿಯಿರುವುದರಿಂದ ಹೊರ ರಾಜ್ಯಗಳಿಗೆ ರಾಜ್ಯದಿಂದ ಮೇವು ಸಾಗಾಟ ಮಾಡುವುದನ್ನು ನಿರ್ಭಂಧಿಸಿದ್ದು, ಈ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಹಾಲಿ ಇರುವ ಮೇವು ಅನ್ನು ಸಂಗ್ರಹಿಸಿಟ್ಟು ಅಗತ್ಯವಿರುವ ಕಡೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ. ಸಧ್ಯಕ್ಕೆ ರಾಜ್ಯದಲ್ಲಿ ಎಲ್ಲೂ ಕೂಡಾ ಮೇವಿನ ಕೊರತೆ ಕಂಡು ಬಂದಿಲ್ಲ ಎಂದರು.
ಜಾನುವಾರು ಮೇವಿನ ಉತ್ಪಾದನೆಗಾಗಿ ರೈತರಿಗೆ 15 ಕೋಟಿ ರೂ. ಮೊತ್ತದ ಮೇವಿನ ಬೀಜಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದ ಅವರು ಹಾಲು ಕರೆಯುವ ಎಲ್ಲಾ ಹಸುಗಳಿಗೆ ಅವುಗಳ ಗುರುತನ್ನು ಪತ್ತೆ ಹಚ್ಚುವ ಸಂಬಂಧ ಚಿಪ್‌ಗಳನ್ನು ಅಳವಡಿಸಲಾಗಿದೆ. ಪಶಸಂಗೋಪನಾ ಕಚೇರಿ ಹಾಗೂ ಪಶು ಆಸ್ಪತ್ರೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದರು.
ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರತಿ ಕ್ವಿಂಟಾಲ್‌ಗೆ ರೂ.1,450 ರೂ. ನೀಡಿ ಖರೀದಿ ಮಾಡಲು ಚಿಂತನೆ ಮಾಡಲಾಗಿದೆ ಎಂದರು.












Click it and Unblock the Notifications