ಲೋಕಾಯುಕ್ತದ ಅಧಿಕಾರವನ್ನು ಶೂನ್ಯ ಮಾಡಿದವರು ಕಾಂಗ್ರೆಸ್ಸಿಗರು: ಬಸವರಾಜ ಬೊಮ್ಮಾಯಿ
ಬೆಂಗಳೂರು, ಏಪ್ರಿಲ್ 3: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ 50ಕ್ಕೂ ಹೆಚ್ಚು ಹಗರಣಗಳು ನಡೆದಿವೆ. ಅವುಗಳ ಕುರಿತ ದೂರು ಎಸಿಬಿಗೆ ಹೋಗಿತ್ತು. ಎಲ್ಲದಕ್ಕೂ ಬಿ ರಿಪೋರ್ಟ್ ಹಾಕಲಾಗಿತ್ತು. ಲೋಕಾಯುಕ್ತದ ಅಧಿಕಾರವನ್ನು ಶೂನ್ಯ ಮಾಡಿದವರು ಕಾಂಗ್ರೆಸ್ಸಿಗರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿರು.
ಈ ಕುರಿತು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರದ ವಿಚಾರದಲ್ಲಿ ನಾವು ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಶೇ 40 ಎಂದು ಆರೋಪಿಸುವ ಗುತ್ತಿಗೆದಾರರ ಸಂಘದವರು ಯಾವುದೇ ದಾಖಲೆ, ಸಾಕ್ಷ್ಯಾಧಾರ ನೀಡಿಲ್ಲ. ಕೋರ್ಟಿನಲ್ಲೂ ದಾಖಲೆ ಕೊಡಲಿಲ್ಲ. ಇವತ್ತಿನವರೆಗೂ ಸಾಕ್ಷಿ ನೀಡಿಲ್ಲ. ರಾಜಕೀಯ ಪ್ರೇರಿತವಾಗಿ ಕಾಂಗ್ರೆಸ್ ಪಕ್ಷವು ಗುತ್ತಿಗೆದಾರರ ಸಂಘವನ್ನು ಬಳಸಿಕೊಂಡಿದೆ ಎಂದು ಆರೋಪಿಸಿದರು.

ತನಿಖೆ ಎದುರಿಸಲು ನಾವು ಈಗಲೂ ಸಿದ್ಧರಿದ್ದೇವೆ. ಲೋಕಾಯುಕ್ತರಿಗೆ ವಿವರ ಕೊಡಿ. ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ ಆರೋಪ ಮಾಡುತ್ತಿದೆ, ಕಾಂಗ್ರೆಸ್ ಭ್ರಷ್ಟಾಚಾರದ ಸರಮಾಲೆ ಇದೆ. ಇವರಿಗೆ ಭ್ರಷ್ಟಾಚಾರದ ಕುರಿತು ಮಾತನಾಡಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಸರಕಾರ ಕ್ರಿಯಾಶೀಲ, ಜನಪರ, ಜನಕಲ್ಯಾಣ ಮಾಡುವ ಸರಕಾರವಾಗಿದೆ. ಬಡವರು, ದೀನದಲಿತರು, ಹೆಣ್ಣುಮಕ್ಕಳು, ಯುವಕರು, ರೈತರ ಪರವಾಗಿ ಕೆಲಸ ಮಾಡಿದ್ದೇವೆ. ದುಡಿಯುವ ವರ್ಗ ಬಿಜೆಪಿಯೇ ಭರವಸೆ ಎಂದು ನಮ್ಮ ಪರವಾಗಿ ನಿಂತಿದೆ. ಜನರ ಆಶೀರ್ವಾದ, ಬೆಂಬಲದಿಂದ ಮುಂದಿನ 5 ವರ್ಷಗಳ ಕಾಲ ನಮ್ಮ ಸರಕಾರ ಮತ್ತೆ ಆಡಳಿತ ನಡೆಸಲಿದೆ. ಜನರು ಪ್ರಧಾನಿ ಮೋದಿಜಿ ನಾಯಕತ್ವಕ್ಕೆ ಮತ್ತೆ ಅವಕಾಶ ಮಾಡಿಕೊಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನರ ನಂಬಿಕೆ, ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನವಕರ್ನಾಟಕ ನಿರ್ಮಿಸಲು ನಾವು ಬದ್ಧರಿದ್ದೇವೆ. ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಿಸುತ್ತೇವೆ. ಪ್ರಧಾನಿಯವರ 5 ಟ್ರಿಲಿಯನ್ ಡಾಲರ್ ಇಕಾನಮಿಗೆ 1 ಟ್ರಿಲಿಯನ್ ಡಾಲರ್ ಕೊಡುಗೆ ನಮ್ಮದಾಗಿರಲಿದೆ. ಕಳೆದ 4 ವರ್ಷಗಳಲ್ಲಿ ಸರಾಸರಿ 13.30 ಲಕ್ಷದಷ್ಟು ಉದ್ಯೋಗ ಸೃಷ್ಟಿಯಾಗಿದೆ. ನಿರುದ್ಯೋಗದ ರಾಷ್ಟ್ರೀಯ ಸರಾಸರಿ ಶೇ 4.2 ಇದ್ದರೆ ನಮ್ಮದು 2.6 ಇದೆ. ಎಲ್ಲ ಜಾತಿ, ಧರ್ಮಗಳಿಗೆ ಸಮಾನ ಅವಕಾಶ ಇರುವ ಸದೃಢ ಆರ್ಥಿಕ ಶಕ್ತಿಯಾಗಿ ಕರ್ನಾಟಕ ಬೆಳೆದಿದೆ ಎಂದರು.

2014ರ ಬಳಿಕ ನರೇಂದ್ರ ಮೋದಿಜಿ ಅವರ ಆಡಳಿತದಲ್ಲಿ ಪ್ರತಿ ನಾಗರಿಕರಲ್ಲಿ ಆತ್ಮವಿಶ್ವಾಸ ಮೂಡಿದೆ. ಸುರಕ್ಷತೆ, ಅಭಿವೃದ್ಧಿಯ ವಿಚಾರದಲ್ಲಿ ವಿಶ್ವಾಸ ಮೂಡಿದೆ. ಅತಿ ಹೆಚ್ಚು ಹೆದ್ದಾರಿ, ರೈಲ್ವೆ ಲೈನ್, ವಿಮಾನನಿಲ್ದಾಣಗಳು, ಮೆಡಿಕಲ್ ಕಾಲೇಜು- ಎಲ್ಲ ರಂಗದಲ್ಲಿ ಸಾಧನೆ ಆಗಿದೆ. ಸಾಮಾಜಿಕ ಸೌಕರ್ಯದಲ್ಲೂ ನಾವು ಮುಂದಿದ್ದೇವೆ. ಎಲ್ಲರಿಗೂ ಸಮಾನ ಅವಕಾಶ ಸಿಗಬೇಕೆಂದು ಹಲವು ಯೋಜನೆ ಜಾರಿಗೊಳಿಸಿದ್ದಾರೆ ಎಂದರು.
ಕರ್ನಾಟಕದ 54 ಲಕ್ಷಕ್ಕೂ ಹೆಚ್ಚು ರೈತರು ಸೇರಿ 20 ಕೋಟಿಯಷ್ಟು ರೈತರನ್ನು ಕಿಸಾನ್ ಸಮ್ಮಾನ್ ಯೋಜನೆ ತಲುಪುತ್ತಿದೆ. 16 ಸಾವಿರ ಕೋಟಿ ರೂ. ಕರ್ನಾಟಕದ ರೈತರಿಗೆ ಸಿಕ್ಕಿದೆ. ನಮ್ಮನ್ನು ಹಿಂದೆ ಆಳಿದವರು ಸ್ವಚ್ಛ ಭಾರತ ಯೋಜನೆ ಬಗ್ಗೆ ವ್ಯಂಗ್ಯವಾಡಿದ್ದರು. ಕಳೆದ 3 ವರ್ಷಗಳ ಹಿಂದೆ ಮೋದಿಜಿ ಪ್ರತಿ ಮನೆಗೆ ನಳ್ಳಿನೀರು ಕೊಡುವ ಘೋಷಣೆ ಮಾಡಿದ್ದಾರೆ. ಹಿಂದಿನ ಸರಕಾರಗಳು ಆ ಸಾಹಸ ಮಾಡಿರಲಿಲ್ಲ. ಅದು ಅನುಷ್ಠಾನಕ್ಕೆ ಬಂದಿದೆ.
ಕರ್ನಾಟಕದಲ್ಲಿ ಸುಮಾರು 40 ಲಕ್ಷ ಮನೆಗಳಿಗೆ ಸೇರಿದಂತೆ ದೇಶದಲ್ಲಿ 12 ಕೋಟಿ ಮನೆಗಳಿಗೆ ನೀರಿನ ಸೌಕರ್ಯ ಕೊಡಲಾಗಿದೆ. ಮನೆಮನೆಗೆ ಬೆಳಕು ಕೊಟ್ಟಿದ್ದೇವೆ. ಶೌಚಾಲಯಗಳನ್ನು ನಿರ್ಮಿಸಿದ್ದೇವೆ. ರಾಜ್ಯ ಸರಕಾರವು ರೈತ ವಿದ್ಯಾನಿಧಿ ಘೋಷಿಸಿದೆ. 11 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು 800 ಕೋಟಿ ರೂ. ಲಾಭ ಪಡೆದಿದ್ದಾರೆ ಎಂದರು.
ಮಹಿಳೆಯರಿಗಾಗಿ ಸ್ತ್ರೀಸಾಮಥ್ರ್ಯ ಯೋಜನೆ ಜಾರಿ ಮಾಡಿದ್ದು, 3 ಲಕ್ಷ ಜನರಿಗೆ ಪ್ರಯೋಜನ ಸಿಗುತ್ತಿದೆ. ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ, ಕಾಯಕ ಯೋಜನೆ ಮೂಲಕ ಜನರಿಗೆ ನೆರವಾಗುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಅವಕಾಶ ಮತ್ತು ಗೌರವ ಕೊಡಲಾಗುತ್ತಿದೆ. ಶಿಕ್ಷಣ- ಆರೋಗ್ಯಕ್ಕೆ ವಿಶೇಷ ಗಮನ ನೀಡುತ್ತಿದ್ದೇವೆ. ಕೋವಿಡ್ ನಂತರವೂ ಮಿಗತೆ ಬಜೆಟ್ ಕೊಡಲಾಗಿದೆ ಎಂದು ತಿಳಿಸಿದರು.
ಗರಿಷ್ಠ ಬಂಡವಾಳ ಹೂಡಿಕೆ, ಕಂದಾಯ ಸಂಗ್ರಹದಲ್ಲಿ 15ರಿಂದ 20 ಸಾವಿರ ಕೋಟಿ ಏರಿಕೆ ಆಗುತ್ತಿದೆ. ಜಿಎಸ್‍ಟಿಯಲ್ಲಿ ನಂಬರ್ 2, ಇನೊವೇಶನ್- ಎಫ್‍ಡಿಐಯಲ್ಲಿ ನಂಬರ್ ವನ್ ಆಗಿದ್ದೇವೆ. 500 ಫಾರ್ಚೂನ್ ಕಂಪೆನಿಯಲ್ಲಿ 400 ಕರ್ನಾಟಕದ್ದೇ ಇವೆ ಎಂದು ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ಅವರ ಜನಪರ ಹೋರಾಟಗಳಿಂದ ಜನಮಾನಸದಲ್ಲಿ ಪಕ್ಷವು ಬೆಳೆಯಿತು. ಅನಂತಕುಮಾರ್ ಅಧ್ಯಕ್ಷತೆಯಲ್ಲೂ ಈ ಬೆಳವಣಿಗೆ ಮುಂದುವರಿದಿದೆ. 2008ರಿಂದ 5 ವರ್ಷ ಬಡವರ ಪರವಾಗಿ, ವಯೋವೃದ್ಧರಿಗೆ ಸೇರಿ ವಿವಿಧ ಯೋಜನೆ, ರೈತರಿಗೆ ವಿಶೇಷ ಬಜೆಟ್ ಕೊಡಲಾಗಿದೆ. ಯುಪಿಎ ಸರಕಾರ 10 ವರ್ಷ ದೇಶದ ಆಡಳಿತವನ್ನು ಹದಗೆಡಿಸಿತ್ತು. ಅಸ್ಥಿರತೆಯ ಯುಗ ಆರಂಭವಾಗಿತ್ತು. ಭಯೋತ್ಪಾದನೆ ಹೆಚ್ಚಾಯಿತು. ಬೆಂಗಳೂರು ಸೇರಿ ವಿವಿಧೆಡೆ ಸ್ಫೋಟಗಳು ಸಂಭವಿಸಿದವು. ಭ್ರಷ್ಟಾಚಾರದ ಸರಣಿ ಹೆಚ್ಚಾಯಿತು. ಆಡಳಿತದಲ್ಲಿ ಅವ್ಯವಸ್ಥೆ ಇತ್ತು ಎಂದು ವಿವರಿಸಿದರು. ಆದರೆ, ಮೋದಿಜಿ ನೇತೃತ್ವದಲ್ಲಿ ದೇಶದಲ್ಲಿ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಿದೆ ಎಂದರು.











Click it and Unblock the Notifications