ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ; ಮುಂದಿನ ಚುನಾವಣೆಗೆ ಯಾರ ನೇತೃತ್ವದಲ್ಲಿ? ಇಲ್ಲಿದೆ ಮಾಹಿತಿ
ಬೆಂಗಳೂರು, ಮೇ 29: ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗಲಿದ್ದಾರೆ ಎಂಬ ಚರ್ಚೆ ಕೈ ಪಾಳಯದಲ್ಲಿ ನಡೆಯುತ್ತಿದೆ. ಆದರೆ, ಸದ್ಯದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಯಾವುದೇ ಬದಲಾವಣೆ ಇಲ್ಲ, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಮುಂಬರುವ ಚುನಾವಣೆ ಎದುರಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಸೋಮವಾರ ಸ್ಪಷ್ಟಪಡಿಸಿದ್ದಾರೆ. .
ಸದ್ಯ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡುವ ಪರಿಸ್ಥಿತಿ ಇಲ್ಲ. ಮುಂಬರುವ ಬಿಬಿಎಂಪಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಶಿವಕುಮಾರ್ ಅವರೊಂದಿಗೆ ಕಾಂಗ್ರೆಸ್ ಚರ್ಚೆ ನಡೆಸಲಿದೆ. ಶಿವಕುಮಾರ್ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಚಂದ್ರಶೇಖರ್ ತಿಳಿಸಿದರು.

ಕೆಪಿಸಿಸಿ ಸ್ಥಾನ ನೀಡದಿದ್ದರೆ ಸಚಿವ ಸ್ಥಾನ ತ್ಯಜಿಸಲು ಸಿದ್ಧ ಎಂಬ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆಗೆ ಉತ್ತರಿಸಿದ ಚಂದ್ರಶೇಖರ್, ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂದು ತಿರುಗೇಟು ನೀಡಿದರು. ಕೆಪಿಸಿಸಿ ಅಧ್ಯಕ್ಷರಾಗಲು ಹಲವರು ಹಾತೊರೆಯುತ್ತಿದ್ದಾರೆ. ಯಾರೇ ಆಗಲಿ ಪಕ್ಷದ ವೇದಿಕೆಯಲ್ಲಿ ಈ ವಿಚಾರವನ್ನು ಮುಂದಿಟ್ಟುಕೊಂಡು ಮುಖಂಡರು ಸಾರ್ವಜನಿಕವಾಗಿ ಮಾತನಾಡುವುದರಿಂದ ಪಕ್ಷಕ್ಕೆ ಮುಜುಗರವಾಗಬಾರದು ಎಂದು ಸಲಹೆ ನೀಡಿದರು.
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯನ್ನು ಕಾಂಗ್ರೆಸ್ ಪಕ್ಷ ಬಹಳ ಗಂಭೀರವಾಗಿ ಪರಿಗಣಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಜತೆಯಾಗಿ ಚುನಾವಣೆ ಮಾಡುತ್ತಿದ್ದು, ಹೀಗಾಗಿ ಹಿಂದೆಂದೂ ನೀಡದ ಪ್ರಾಮುಖ್ಯತೆ ನೀಡಿದ್ದೇವೆ. ಈಗ ಮೇಲ್ಮನೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 29 ಶಾಸಕರಿದ್ದು, ಐದು ಕ್ಷೇತ್ರಗಳಲ್ಲಿ ಚುನಾವಮೆ ಎದುರಿಸುತ್ತಿದ್ದೇವೆ. ಮೇಲ್ಮನೆಯಲ್ಲಿ ಬಹುಮತ ಪಡೆಯಲು ಇನ್ನು 14 ಸದಸ್ಯರ ಅಗತ್ಯವಿದ್ದು, ಮುಂಬರುವ ಚುನಾವಣೆಯಲ್ಲಿ 7 ಸದಸ್ಯರು, ಶೆಟ್ಟರ್ ಅವರು ರಾಜೀನಾಮೆ ಕೊಟ್ಟಿರುವ ಕ್ಷೇತ್ರವೂ ಕಾಂಗ್ರೆಸ್ ಪರವಾಗಿದ್ದು, ಶಿಕ್ಷಕರು ಮತ್ತು ಪದವೀಧರರ ಕ್ಷೇತ್ರ ಚುನಾವಣೆಯಲ್ಲಿ ಆರು ಕ್ಷೇತ್ರಗಳನ್ನು ಗೆಲ್ಲಬೇಕಿದೆ. ಆಗ ಮಾತ್ರ ನಾವು ಬಹುಮತ ಪಡೆಯಲು ಸಾಧ್ಯ. ಇಲ್ಲದಿದ್ದರೆ ಬಹುಮತ ಪಡೆಯಲು 2 ವರ್ಷ ಕಾಯಬೇಕಾಗುತ್ತದೆ.
ಈ ಕಾರಣಗಳಿಂದ ಈ ಚುನಾವಣೆಯನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ವಿಧಾನಸಭೆಯಲ್ಲಿ 135 ಸ್ಥಾನಗಳನ್ನು ಗೆದ್ದಿರುವುದನ್ನು ಸಹಿಸಲಾಗದೇ ಬಿಜೆಪಿ ಹಾಗೂ ಜೆಡಿಎಸ್ ಒಂದಾಗಿದ್ದಾರೆ. ಕಾರಣ ಅವರು ಏಕಾಂಗಿಯಾಗಿ ಹೋರಾಡುವ ಶಕ್ತಿ ಕಳೆದುಕೊಂಡಿದ್ದಾರೆ. ಈ ಕಾರಣದಿಂದಾಗಿ ಬಿಜೆಪಿಯು ರಾಜ್ಯಾಧ್ಯಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಆಯ್ಕೆಗೆ ಹೆಚ್ಚಿನ ಕಾಲಾವಕಾಶ ಪಡೆಯಿತು.
ರಾಜ್ಯದಲ್ಲಿ ಬಿಜೆಪಿಗೆ ನಾಯಕತ್ವದ ಕೊರತೆ ಇದೆ. ಹೀಗಾಗಿ ಜೆಡಿಎಸ್ ಪಕ್ಷವನ್ನು ಸೇರಿಸಿಕೊಂಡಿದ್ದಾರೆ. ಜೂನ್ 4ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬೀಳಲಿದ್ದು, ಆನಂತರ ಅವರ ಮೈತ್ರಿ ಏನಾಗುತ್ತದೆ ಎಂಬುದು ಗೊತ್ತಾಗುತ್ತದೆ. ನಿರಂತರವಾಗಿ ಸೋತಿದ್ದ ಚುನಾವಣೆಯಲ್ಲಿ ಈ ಬಾರಿ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ಇತ್ತೀಚೆಗೆ ನಡೆದ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲೂ ಅವರು ಮೈತ್ರಿ ಮಾಡಿಕೊಂಡಿದ್ದರು. ಆದರೂ ಪುಟ್ಟಣ್ಣ ಅವರು ಗೆದ್ದರು. ನಂತರ ಈ ಆರು ಕ್ಷೇತ್ರಗಳ ಚುನಾವಣೆ ಬಂದಿದೆ.
ಕಾಂಗ್ರೆಸ್ ಪಕ್ಷ ಈ ಕ್ಷೇತ್ರಗಳಿಗೆ ಒಂದು ವರ್ಷದ ಹಿಂದೆಯೇ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದೆವು. ಕಳೆದ ಒಂದು ವರ್ಷದಲ್ಲಿ ರಾಮೋಜಿಗೌಡರು ನಿರಂತರವಾಗಿ ಸುತ್ತಾಡಿ ಅವರ ಪರವಾಗಿ ಮತದಾರರಲ್ಲಿ ಒಲವು ಮೂಡಿದೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಅವರ ಮನಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಎಂಬುದಕ್ಕೆ ಇದೇ ಸಾಕ್ಷಿ. ಜಾತಿ, ಧರ್ಮದ ಆಧಾರದ ಮೇಲೆ ಚುನಾವಮೆ ಮಾಡುವ ಕೆಟ್ಟ ಪಕ್ಷ ಇದ್ದರೆ ಇದು ಬಿಜೆಪಿ.
ಎಲ್ಲಾ ಜಾತಿ, ಧರ್ಮವರು ನಿಮಗೆ ಮತ ನೀಡಿ ಶಾಸಕರಾಗಿ ಆಯ್ಕೆ ಮಾಡಿರುತ್ತಾರೆ. ಆದರೂ ಈ ರೀತಿ ಮಾತನಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ದೇಶದ ಯಾವುದೇ ಮೂಲೆಯಲ್ಲಿದ್ದರೂ ಎಲ್ಲಿ ಬೇಕಾದರೂ ಚುನಾವಣೆಗೆ ಸ್ಪರ್ಧಿಸಲು ಸಂವಿಧಾನದಲ್ಲಿ ಅವಕಾಶ ಕಲ್ಪಿಸಲಾಗಿದೆ. ಅದನ್ನು ಪ್ರಶ್ನೆ ಮಾಡಲು ಇವರಾರು? ಇವರಿಗೆ ಪ್ರಶ್ನೆ ಮಾಡುವ ಯೋಗ್ಯತೆ ಇಲ್ಲ. ಆದರೂ ಇಲ್ಲೇ ಹುಟ್ಟಿ, ಬೆಳೆದಿರುವ ಅಭ್ಯರ್ಥಿ ವಿರುದ್ಧ ಇಷ್ಟು ಕೀಳು ಮಟ್ಟದ ಮಾತುಗಳನ್ನಾಡಿರುವುದು ಸರಿಯಲ್ಲ. ವಿರೋಧ ಪಕ್ಷದ ನಾಯಕ ಅಶೋಕ್ ಅವರು ಇದನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದರೆ ವಿರೋಧ ಪಕ್ಷದ ನಾಯಕರು ಎಷ್ಟು ಅಸಮರ್ಥರಿದ್ದಾರೆ ಎಂಬುದು ಗೊತ್ತಾಗುತ್ತದೆ.
ಕಾಂಗ್ರೆಸ್ ಪಕ್ಷ ಈ ಚುನಾವಣೆಯಲ್ಲಿ ಬ್ಲಾಕ್, ಜಿಲ್ಲಾ ಅದ್ಯಕ್ಷರುಗಳಿಂದ ಮಂತ್ರಿಗಳನ್ನು ಜವಾಬ್ದಾರಿ ವಹಿಸಿದ್ದು, ಈ ಚುನಾವಮೆಯಲ್ಲಿ ಕಾಂಗ್ರೆಸ್ 6ಕ್ಕೆ ಆರೂ ಕ್ಷೇತ್ರಗಳಲ್ಲಿ ಗೆಲ್ಲುವುದರಲ್ಲಿ ಅನುಮಾನವಿಲ್ಲ.ಸೋಲಿನ ಭಯದಿಂದ ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಮಾತೆತ್ತಿದರೆ ಸುಳ್ಳನ್ನೇ ಹೇಳುತ್ತಾರೆ. ಮೋದಿ ಅವರು ಯಾವುದೇ ರಾಜ್ಯಕ್ಕೆ ಹೋದರೂ ನಂಬರ್ ರಾಜ್ಯ ಮಾಡುವುದಾಗಿ ಹೇಳುತ್ತಾರೆ. ಬಿಜೆಪಿ ಪ್ರಮುಖ ನಾಯಕರೇ ಸುಳ್ಳು ಹೇಳುತ್ತಿರುವಾಗ ಸ್ಥಳೀಯ ನಾಯಕರು ಸುಳ್ಳು ಹೇಳುವುದರಲ್ಲಿ ಅಚ್ಚರಿಯಿಲ್ಲ.












Click it and Unblock the Notifications