ಹೆಚ್ ಡಿ ಕುಮಾರಸ್ವಾಮಿಗೆ ಪುತ್ರನ ಭವಿಷ್ಯದ ಚಿಂತೆ; ಚನ್ನಪಟ್ಟಣದಿಂದ ಮೈತ್ರಿ ಅಭ್ಯರ್ಥಿ ಯಾರು?
ರಾಮನಗರ, ಜೂನ್ 25: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಎರಡು ಚುನಾವಣೆಯಲ್ಲಿ ಸೋಲು ಅನುಭವಿಸಿದ್ದು, ಪುತ್ರ ರಾಜಕೀಯ ಭವಿಷ್ಯವನ್ನ ರೂಪಿಸಲು ಮಾಜಿ ಮುಖ್ಯಮಂತ್ರ ಹಾಗೂ ಮಂಡ್ಯ ಸಂಸದ ಹೆಚ್ ಡಿ ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸೋಲು ಕಂಡ ಡಿ ಕೆ ಬ್ರದರ್ಸ್ ಮೈತ್ರಿ ನಾಯಕರಿಗೆ ಠಕ್ಕರ್ ಕೊಡಲು ಚನ್ನ ಪಟ್ಟಣದಿಂದ ಅಚ್ಚರಿ ಅಭ್ಯರ್ಥಿಯನ್ನ ಕಣಕ್ಕಿಳಿಸಲು ಸಜ್ಜಾಗಿದ್ರೆ, ಇತ್ತ ಬಿಜೆಪಿ ಹಾಗೂ ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ನಡುವೆ ಚನ್ನಪಟ್ಟಣದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತು ಕೇಳಿ ಬಂದಿದ್ದು, ಈ ಬಗ್ಗೆ ಸಂಸದ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಚನ್ನಪಟ್ಟಣ ಬಮೂಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ ಡಿ ಕುಮಾರಸ್ವಾಮಿ ಅವರು, ಚನ್ನಪಟ್ಟಣ ಉಪಚುನಾವಣೆಗೆ ನಿಖಿಲ್ ನನ್ನು ಕಣಕ್ಕಿಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಖಿಲ್ ಎರಡು ಬಾರಿ ಸೋತು ಅವನು ಅನುಭವಿಸುತ್ತಿರುವ ನೋವು ಏನೆಂದು ನನಗೆ ಮಾತ್ರ ಗೊತ್ತು. ಚನ್ನಪಟ್ಟಣ ಉಪಚುನಾವಣೆಗೆ ಯೋಗೇಶ್ವರ್ ಕಣಕ್ಕಿಳಿಯಬಹುದು. ಇಲ್ಲ ಜೆಡಿಎಸ್ ನವರೆ ಆಗಬಹುದು, ಎನ್ ಡಿಎ ಅಭ್ಯರ್ಥಿ ಯಾರೇ ಆದರೂ ನಾವು ಒಗ್ಗೂಡಿ ಕೆಲಸ ಮಾಡೋಣ ಎಂದು ತಿಳಿಸಿದರು.
ಇನ್ನೂ ಚನ್ನಪಟ್ಟಣದಿಂದ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಅವರು ಕಣಕ್ಕಿಳಿಸಲು ಮೈತ್ರಿ ನಾಯಕರು ಚಿಂತನೆ ನಡೆಸಿದ್ದಾರೆ. ಹೀಗಾಗಿ ಅಂತಿಮವಾಗಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸಭೆ ನಡೆಸಿ, ಸಿ ಪಿ ಯೋಗೇಶ್ವರ್ ಅವರನ್ನ ಕಣಕ್ಕಿಳಿಸಲಿದ್ದಾರೆ.
ಚನ್ನಪಟ್ಟಣ ನನ್ನ ಜೀವ' ಎಂದು ಹೊಸ ನಾಟಕವಾಡಲು ಬಂದಿರುವ ಮಹಾನುಭಾವರೊಬ್ಬರು ಇಷ್ಟು ದಿನ ಎಲ್ಲಿ ಹೋಗಿದ್ದರು? ಜನರ ಕಷ್ಟಗಳೇನಾದರು ಕೇಳಿದ್ದರೇ? ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ವ್ಯಂಗ್ಯವಾಡಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆದಿದ್ದು, ಇವರೂ ಉಪಮುಖ್ಯಮಂತ್ರಿ ಯಾಗಿದ್ರಲ್ಲಾ ಇಲ್ಲಿಯವರೆಗೂ ಚನ್ನಪಟ್ಟಣ ಜ್ಞಾಪಕಕ್ಕೆ ಬರಲಿಲ್ಲವೇ? ಹೊಸದಾಗಿ ಜನಸಂಪರ್ಕ ಸಭೆ ಮಾಡುತ್ತಿದ್ದೀರಲ್ಲ ನಿಮ್ಮ ಸಹೋದರ ಮಾಡಿದ ಜನಸಂಪರ್ಕ ಸಭೆಗಳಿಂದ ಏನಾದರೂ ಪ್ರಯೋಜನವಾಯ್ತ ಎಂದು ಹೆಚ್ ಡಿ ಕುಮಾರಸ್ವಾಮಿ ಪ್ರಶ್ನಿಸಿದರು.
ಇತ್ತೀಚೆಗಷ್ಟೇ ಚನ್ನಪಟ್ಟಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧಿಕಾರಿಗಳ ಸಭೆ ನಡೆಸಿದ್ದ ಸಂದರ್ಭ ಮೊಬೈಲ್ ಫೋನ್‌ಗಳನ್ನು ಬಳಕೆ ಮಾಡದಂತೆ ತಾಕೀತು ಮಾಡಿದ್ದಾರೆ. ಕನಕಪುರದಿಂದ ಗ್ರಾನೈಟ್ ಕಲ್ಲುಗಣಿಗಾರಿಕೆ ಮಾಡಿ ರಫ್ತು ಮಾಡಿದ್ದು ಬಿಟ್ಟರೆ ಕ್ಷೇತ್ರಕ್ಕೆ ಅವರು ಬೇರೆ ಯಾವ ಕೊಡುಗೆ ಕೊಟ್ಟಿದ್ದಾರೆ? ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ನಾನು ವಿಶ್ವ ದರ್ಜೆಯ ರೇಷ್ಮೆ ಮಾರುಕಟ್ಟೆಯನ್ನು ನಿರ್ಮಿಸಲು ಸಾಕಷ್ಟು ಕೊಡುಗೆ ನೀಡಿದ್ದೇವೆ ಮತ್ತು ಟೊಯೊಟಾ ಕಾರ್ಖಾನೆಯನ್ನು ತಂದಿದ್ದೇವೆ ಎಂದು ಹೇಳಿದರು.












Click it and Unblock the Notifications