ಸೋತ ನಿಖಿಲ್‌ಗೆ ಎಸ್.ಎಂ ಕೃಷ್ಣ ಕೊನೆಯದಾಗಿ ಕೊಟ್ಟ ಉಪದೇಶವೇನು?
ಮಂಡ್ಯ, ಡಿಸೆಂಬರ್ 11: ಕರ್ನಾಟಕ ಮಾಜಿ ಮುಖ್ಯಮಂತ್ರಿ, ಕೇಂದ್ರದ ವಿದೇಶಾಂಗ ಸಚಿರಾಗಿದ್ದ, ಕರ್ನಾಟಕ ರಾಜಕೀಯ ಮುತ್ಸದ್ದಿ ಹಿರಿಯ ರಾಜಕಾರಣ ಎಸ್.ಎಂ. ಕೃಷ್ಣ ವಿಧಿವಶರಾಗಿ ಎರಡು ದಿನಗಳು ಕಳೆದಿದೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ( ಡಿಸೆಂಬರ್ 10) ಮಂಗಳವಾರ ಬೆಳಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು.
ಎಸ್.ಎಂ. ಕೃಷ್ಣ ಅವರು ಪಂಚಭೂತಗಳಲ್ಲಿ ಲೀನರಾದರೂ ಅವರ ಜೀವನ ಇಂದಿನ ರಾಜಕೀಯ ನಾಯಕರಿಗೆ, ಯುವ ನಾಯಕರಿಗೆ ಮಾರ್ಗದರ್ಶನವಾಗಿದೆ. ಎಸ್.ಎಂ. ಕೃಷ್ಣರ ಅಗಲಿಕೆ ರಾಜ್ಯ ರಾಜಕೀಯದ ಪ್ರತಿಯೊಬ್ಬರೂ ಕೂಡ ಸಂತಾಪ ವ್ಯಕ್ತಪಡಿಸುತ್ತಿದ್ದು, ಜೆಡಿಎಸ್ ಯುವ ನಾಯಕ ನಿಖಿಲ್ ಭಾವುಕ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಸರಳತೆ, ಸಜ್ಜನಿಕೆ, ವಿನಯದ ಮೇರು ಶಿಖರವಾಗಿದ್ದ ಅವರು ವೈಯಕ್ತಿಕವಾಗಿ ನನಗೆ ಬಹಳ ಆದರಣೀಯರು. ನಾನು ಚುನಾವಣೆಯಲ್ಲಿ ಸೋತಾಗ ಧೈರ್ಯ, ಸಾಂತ್ವನ ಹೇಳಿದ್ದರು. ಅನೇಕ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಅವರು, ತಾವು ಕೂಡ ರಾಜಕೀಯ ಸವಾಲುಗಳನ್ನು ಎದುರಿಸಿದ್ದ ಬಗ್ಗೆಯೂ ನನಗೆ ತಿಳಿಹೇಳಿ ಚೈತನ್ಯ ಮೂಡಿಸಿದ್ದರು.
2019ರ ಚುನಾವಣೆಯಲ್ಲಿ ನಾನು ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದೆ. ಫಲಿತಾಂಶ ಹೊರಬಿದ್ದ ನಂತರ ನಾನು ಮುಕ್ತ ಮನಸ್ಸಿನಿಂದ ಟ್ವೀಟ್ ಒಂದನ್ನು ಪೋಸ್ಟ್ ಮಾಡಿ, ಅದರಲ್ಲಿ ಕೆಲ ಅಂಶಗಳನ್ನು ಉಲ್ಲೇಖಿಸಿದ್ದೆ. ಆ ಟ್ವೀಟ್ ಗಮನಿಸಿದ್ದ ಶ್ರೀ ಎಸ್.ಎಂ.ಕೃಷ್ಣ ಅವರು, ಅದನ್ನು ರೀ ಟ್ವೀಟ್ ಮಾಡಿದ್ದರು ಹಾಗೂ ಆ ನಂತರ ನನಗೆ ದೂರವಾಣಿ ಕರೆ ಮಾಡಿ, 'ನಿನ್ನ ಟ್ವೀಟ್ ನೋಡಿದೆ ನಿಖಿಲ್. ಬಹಳ ಚೆನ್ನಾಗಿದೆ, ಹೃದಯಸ್ಪರ್ಶಿಯಾಗಿ ಬರೆದಿರುವೆ.
ಸೋತಾಗ ಈ ರೀತಿ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ತುಂಬಾ ಅಪರೂಪ. ಸೋಲನ್ನು ಒಪ್ಪಿಕೊಳ್ಳುವ ರೀತಿ, ಗೆದ್ದವರನ್ನು ಅಭಿನಂದಿಸುವ ಬಗೆ ಎರಡೂ ಬಹಳ ಮುಖ್ಯ. ನಿನ್ನ ನಡವಳಿಕೆ ಇಷ್ಟವಾಯಿತು. ಇದು ನಿನ್ನ ಉತ್ತಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ. ಮುಂದೆ ನಿನಗೆ ಒಳ್ಳೆಯ ಭವಿಷ್ಯವಿದೆ. ಧೈರ್ಯವಾಗಿ ಮುನ್ನುಗ್ಗು..ದೇವರು ಒಳ್ಳೆಯದು ಮಾಡುತ್ತಾನೆ' ಎಂದು ಹಿತವಚನ ಹೇಳಿದ್ದರು.
ಎರಡು-ಮೂರು ನಿಮಿಷಗಳ ಅವರ ಧೈರ್ಯದ ಮಾತುಗಳು ಆವತ್ತು ನನ್ನನ್ನು ಮತ್ತಷ್ಟು ಸದೃಢಗೊಳಿಸಿದ್ದವು. ಪಕ್ಷ ರಾಜಕಾರಣ ಮೀರಿ ಇಂಥ ವ್ಯಕ್ತಿತ್ವ ಮೆರೆಯುವುದು ಎಂದರೆ ಇವತ್ತಿನ ರಾಜಕಾರಣದಲ್ಲಿ ಅಪರೂಪದಲ್ಲಿ ಅಪರೂಪ. ಉದಾರ ವ್ಯಕ್ತಿತ್ವ, ಮಾನವೀಯ ಸಂಬಂಧಗಳಿಗೆ ಶ್ರೀ ಕೃಷ್ಣ ಅವರು ಆದರ್ಶಪ್ರಾಯರಾಗಿದ್ದರು. ಇವತ್ತು ಅವರ ಭೌತಿಕ ಕಾಯದ ಮುಂದೆ ನಿಂತು ಶಿರಬಾಗಿ ನಮಿಸುವಾಗ ನನ್ನಲ್ಲಿ ಆ ಸ್ಮರಣೆಗಳೆಲ್ಲವೂ ಹಾದು ಹೋದವು.
ಐಟಿ-ಬಿಟಿ ಮೂಲಕ ಬೆಂಗಳೂರು ಮಹಾನಗರಕ್ಕೆ ಬ್ರ್ಯಾಂಡ್ ಇಮೇಜ್ ತಂದುಕೊಟ್ಟವರು ಶ್ರೀ ಎಸ್.ಎಂ.ಕೃಷ್ಣ ಅವರು. ಅನೇಕ ಕಂಪನಿಗಳನ್ನು ಕರೆತಂದು ಉದ್ಯಾನನಗರಿಯನ್ನು ಸಿಲಿಕಾನ್ ವ್ಯಾಲಿ ಮಾಡಿದ್ದು ಕೂಡ ಅವರೇ. ರಾಜ್ಯದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿದ ಪ್ರಾತಃಸ್ಮರಣೀಯರಲ್ಲಿ ಅವರು ಖಂಡಿತಾ ಒಬ್ಬರು. ಭೌತಿಕವಾಗಿ ಅವರು ನಮ್ಮೊಂದಿಗೆ ಇಲ್ಲದಿರಬಹುದು, ಅವರು ಬಿಟ್ಟುಹೋದ ಕೊಡುಗೆಗಳು ಅಜರಾಮರ. ಅವು ಎಂದೆಂದೂ ನಮ್ಮೊಂದಿಗೆ ಇರುತ್ತೇವೆ ಎಂದು ನಿಖಿಲ್ ಸುದೀರ್ಘ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.












Click it and Unblock the Notifications