ಯಡಿಯೂರಪ್ಪ ಮನೆಯಲ್ಲಿ ಉಪಹಾರ ಸವಿದ ನಿಖಿಲ್!
ಬೆಂಗಳೂರು, ಸೆಪ್ಟೆಂಬರ್ 24; ಕರ್ನಾಟಕದ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಕರ್ನಾಟಕ ಪ್ರದೇಶ ಜನತಾದಳ (ಜಾತ್ಯಾತೀತ) ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಿದೆ. 2024ರ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಈ ಮೈತ್ರಿ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ ಹುಟ್ಟು ಹಾಕಿದೆ.
ಶುಕ್ರವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ಅಧ್ಯಕ್ಷ ಜೆ. ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ದೆಹಲಿಯಲ್ಲಿ ಭೇಟಿ ಮಾಡಿ ಮೈತ್ರಿ ಬಗ್ಗೆ ಮಾತುಕತೆ ನಡೆಸಿದ್ದರು. ಬಳಿಕ ಜೆ. ಪಿ. ನಡ್ಡಾ ಜೆಡಿಎಸ್ ಪಕ್ಷವನ್ನು ಎನ್‌ಡಿಎ ಮೈತ್ರಿಕೂಟಕ್ಕೆ ಸ್ವಾಗತಿಸಿದ್ದರು. ಈ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಸಹ ಉಪಸ್ಥಿತರಿದ್ದರು.

ಭಾನುವಾರ ನಿಖಿಲ್ ಕುಮಾರಸ್ವಾಮಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಜೊತೆ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದರು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಬಳಿಕ ಮೊದಲ ಬಾರಿಗೆ ನಿಖಿಲ್ ಕುಮಾರಸ್ವಾಮಿ ಯಡಿಯೂರಪ್ಪ ಭೇಟಿ ಮಾಡಿದರು. ಶಾಲು ಹೊದಿಸಿ ಅವರನ್ನು ಸನ್ಮಾನಿಸಿದರು, ಕೃಷ್ಣನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದರು.
ಬೆಂಗಳೂರಿನ ನಿವಾಸದಲ್ಲಿ ಬಿ. ಎಸ್.ಯಡಿಯೂರಪ್ಪ ಭೇಟಿಯಾಗಿ ಮನಿರತ್ನ ಮತ್ತು ನಿಖಿಲ್ ಕುಮಾರಸ್ವಾಮಿ ಮಾತುಕತೆ ನಡೆಸಿದರು. ಬಳಿಕ ಯಡಿಯೂರಪ್ಪ ನಿವಾಸದಲ್ಲಿಯೇ ನಿಖಿಲ್ ಕುಮಾರಸ್ವಾಮಿ ಉಪಹಾರ ಸವಿದರು. ಎಚ್. ಡಿ. ಕುಮಾರಸ್ವಾಮಿ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿಯಾದಾಗ ರಾಜ್ಯದ ಯಾವುದದೇ ನಾಯಕರು ಜೊತೆಗೆ ಇರಲಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.
ನಿಖಿಲ್ ಕುಮಾರಸ್ವಾಮಿ ಹೇಳಿಕೆ; ಬಿ. ಎಸ್. ಯಡಿಯೂರಪ್ಪ ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, 'ಯಡಿಯೂರಪ್ಪ ಅವರ ಆಶೀರ್ವಾದ ಪಡೆಯಲು ಬಂದಿದ್ದೆ" ಎಂದರು.
"ನಿಮಗೆ ತಿಳಿದಿರುವ ಹಾಗೆ ಜೆಡಿಎಸ್ ಈಗ ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟದ ಭಾಗವಾಗಿದೆ. ಯಡಿಯೂರಪ್ಪ ರಾಜ್ಯದ ಹಿರಿಯ ನಾಯಕರಾಗಿದ್ದು, ಅವರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೆ. ಅವರು ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ" ಎಂದು ಹೇಳಿದರು.
ಜೆಡಿಎಸ್ ಶುಕ್ರವಾರ ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. 2024ರ ಲೋಕಸಭೆ ಚುನಾವಣೆ ಸೀಟು ಹಂಚಿಕೆ ಬಗ್ಗೆ ದಸರಾ ಬಳಿಕ ಉಭಯ ಪಕ್ಷಗಳ ನಾಯಕರು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ. ಕರ್ನಾಟಕದ 28 ಕ್ಷೇತ್ರಗಳ ಪೈಕಿ ಹಾಸನ (ಪ್ರಜ್ವಲ್ ರೇವಣ್ಣ) ದಲ್ಲಿ ಮಾತ್ರ ಜೆಡಿಎಸ್ ಸಂಸದರು ಇದ್ದಾರೆ.
ಪಕ್ಷದ ಮಾಹಿತಿಗಳ ಪ್ರಕಾರ ಜೆಡಿಎಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ 5 ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಹಾಸನ, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ. ಆದರೆ ಬಿಜೆಪಿಯ ಕೇಂದ್ರ ನಾಯಕರು ಈ ಕುರಿತು ಯಾವುದೇ ಘೋಷಣೆ ಮಾಡಿಲ್ಲ. ಸೀಟು ಹಂಚಿಕೆ ಬಗ್ಗೆ ಇನ್ನೂ ಚರ್ಚೆ ನಡೆಯಬೇಕಿದೆ. 5 ಕ್ಷೇತ್ರಗಳಲ್ಲಿ ಹಾಸನದಲ್ಲಿ ಜೆಡಿಎಸ್, ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 2019ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಇದೇ ಮೊದಲಲ್ಲ. 2006-07ರಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದವು. ಮೊದಲ 20 ತಿಂಗಳು ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಆದರೆ ಬಳಿಕ ಅಧಿಕಾರ ಹಸ್ತಾಂತರ ಮಾಡಲಿಲ್ಲ ಎಂಬ ಕಾರಣಕ್ಕೆ ಮೈತ್ರಿ ಮುರಿದುಬಿದ್ದಿತ್ತು, ಸರ್ಕಾರ ಪತನಗೊಂಡಿತ್ತು. ಈಗ 2ನೇ ಬಾರಿ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ.












Click it and Unblock the Notifications