ಉಪಚುನಾವಣೆಯಲ್ಲಿ ಸೋಲಲು ಅದೇ ಕಾರಣ, ನಿಖಿಲ್ ಹೇಳಿದ್ದೇನು?
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದಿದ್ದರು. ಎಕ್ಸಿಟ್ ಪೋಲ್‌ಗಳು ಕೂಡ ನಿಖಿಲ್ ಗೆಲ್ಲೋದು ಫಿಕ್ಸ್ ಎಂದು ಭವಿಷ್ಯ ನುಡಿದಿದ್ದವು. ಆದರೆ, ಫಲಿತಾಂಶದಲ್ಲಿ ನಿಖಿಲ್ ಸೋಲು ಕಂಡರು. ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರು ಗೆದ್ದು ಬೀಗಿದರು. ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ತನ್ನ ಸೋಲಿಗೆ ಬಲವಾದ ಕಾರಣವೊಂದನ್ನು ನೀಡಿದ್ದಾರೆ.
ರಾಜ್ಯದಲ್ಲಿ ನಡೆದ ಮೂರು ಉಪಚುನಾವಣೆಗಳ ಫಲಿತಾಂಶವನ್ನು ನಾವ್ಯಾರೂ ನಿರೀಕ್ಷಿಸಿರಲಿಲ್ಲ. ಇದಕ್ಕೆ ಸಾಕಷ್ಟು ಕಾರಣಗಳಿವೆ. ಚುನಾವಣೆಯ ಸಮೀಪದಲ್ಲೇ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಬಾಕಿ ಹಣ ತಡೆದಿದ್ದರು. ಆದರೆ, ಉಪಚುನಾವಣೆ ಇದ್ದ ಕೆಲವೇ ದಿನಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕಿದ್ದರು. ಇದರಿಂದಲೂ ಸೋಲಾಗಿರುವ ಸಾಧ್ಯತೆ ಇರಬಹುದು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಇದೆಲ್ಲ ನಡೆದು ಹೋಗಿದೆ. ಹಾಗಾಗಿ ಕಾರಣಗಳ ಬಗ್ಗೆ ಯೋಚನೆ ಮಾಡುವುದಿಲ್ಲ. ಚನ್ನಪಟ್ಟಣ ಚುನಾವಣೆಗೆ ಸ್ಪರ್ಧಿಸುವಂತೆ ಅನೇಕ ಹಿರಿಯ ನಾಯಕರು ಸಲಹೆ ನೀಡಿದ್ದರಿಂದ ನಾನು ಉಪಚುನಾವಣೆಗೆ ನಿಂತೆ ಎಂದು ಹೇಳಿದ್ದಾರೆ.
ಪಕ್ಷ ನನಗೆ ಟಾಸ್ಕ್ ಕೊಡಲಿ, ಕೇವಲ ಹದಿನೈದೇ ದಿನದಲ್ಲಿ ಜೆಡಿಎಸ್ ಪಕ್ಷವನ್ನು ಖಾಲಿ ಮಾಡಿಬಿಡುತ್ತೇನೆ ಎನ್ನುವ ದರ್ಪ, ಅಹಂಕಾರ ಆ ಗೆಲುವಿನಲ್ಲಿ ವ್ಯಕ್ತವಾದ ವಿಕೃತಿ. ನಮ್ಮ ಶಾಸಕರು ಕೇವಲ ಶಾಸಕರಾಗಿ ಅಥವಾ ರಾಜಕೀಯ ಉದ್ದೇಶಕ್ಕಾಗಿ ನಮ್ಮೊಂದಿಗಿಲ್ಲ. ಪಕ್ಷ ಮತ್ತು ಶಾಸಕರ ನಡುವೆ ರಕ್ತ ಸಂಬಂಧಕ್ಕಿಂತ ಮಿಗಿಲಾದ ಗಾಢ ಬಾಂಧವ್ಯವಿದೆ ಎಂದು ನಿಖಿಲ್ ಕುಮಾರಸ್ವಾಮಿ ಸೋಲಿನ ಬಳಿಕ ಹೇಳಿದ್ದರು.

ಗೆದ್ದಲು ಕಟ್ಟಿದ ಹುತ್ತದೊಳಕ್ಕೆ ಹಾವಿನಂತೆ ಹೊಕ್ಕು, ಕೈಹಿಡಿದವರನ್ನೇ ಕಚ್ಚಿ, ವಿಷಕಾರುವ ರಾಜಕೀಯ ವಿಷಜಂತುಗಳಿಗೆ ನಾವು ಹೆದರುತ್ತೇವೆಯೇ? ಇಲ್ಲ. ನಿಖಿಲ್ ಬಚ್ಚಾ.. ಪಾಪ ನಿಖಿಲ್ ಎಂಬ ಅನುಕಂಪಕ್ಕೆ ತುತ್ತಾಗಿ ಕೈಚೆಲ್ಲುವ ಬಾಲಬುದ್ಧಿಯ ಮನಸ್ಥಿತಿಯವನಲ್ಲ ನಾನು ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದರು. ಪಕ್ಷವನ್ನು ಮರಳಿ ಕಟ್ಟೋಣ, ಬೀದಿಯಲ್ಲಿ ನಿಂತು ಜನಪರವಾಗಿ ಹೊರಾಡೋಣ ಎಂದು ನನ್ನ ಕಾರ್ಯಕರ್ತ ಬಂಧುಗಳಿಗೆ ನಾನು ಮನವಿ ಮಾಡುತ್ತೇನೆ ಎಂದು ನಿಖಿಲ್ ಕರೆ ನೀಡಿದ್ದರು.
ಚುನಾವಣೆಯಲ್ಲಿ ಸೋಲು-ಗೆಲುವು ಸರ್ವೇ ಸಾಮಾನ್ಯ. ಚುನಾವಣೆಯಲ್ಲಿ ಸೋತ ಮಾತ್ರಕ್ಕೆ ಎದೆಗುಂದುವುದಿಲ್ಲ. ನಾನು ತಾಲ್ಲೂಕಿನ ಜನತೆಗೆ ನನ್ನ ಸೇವೆಯನ್ನು ಮುಂದುವರೆಸುತ್ತೇನೆ. ನನ್ನ ಮೇಲೆ ನಂಬಿಕೆಯನ್ನಿಟ್ಟು ಮತ ಚಲಾಯಿಸಿದ ಚನ್ನಪಟ್ಟಣ ಕ್ಷೇತ್ರದ ಮತದಾರರಿಗೆ ಹೃದಯಪೂರ್ವಕ ಧನ್ಯವಾದಗಳು ಎಂದು ಹೇಳಿದ್ದರು.
ನಾನು ನ್ಯಾಯದಲ್ಲಿ ನಂಬಿಕೆ ಇಟ್ಟಿದ್ದೇನೆ. ಚನ್ನಪಟ್ಟಣ ಹಾಗೂ ರಾಜ್ಯದ ಜನತೆಯ ಪರವಾಗಿ ಸದಾ ಇರುತ್ತೇನೆ. ಅವರಿಗಾಗಿ ದುಡಿಯುತ್ತೇನೆ. ಹೆದರಿಸಿ, ಬೆದರಿಸುವ ರಾಜಕೀಯಕ್ಕೆ ಬಗ್ಗಲ್ಲ. ಚನ್ನಪಟ್ಟಣ ಕ್ಷೇತ್ರದ ಕಾರ್ಯಕರ್ತರು, ಮುಖಂಡರು ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವ ಅಗತ್ಯವಿಲ್ಲ. ನಿಮ್ಮೊಂದಿಗೆ ನಾನಿದ್ದೇನೆ, ಇಡೀ ಪಕ್ಷವಿದೆ. ಒಟ್ಟಾಗಿ ಹೋರಾಟ ಮಾಡೋಣ. ಸೋತಿದ್ದೇವೆಯೇ ಹೊರತು ಸತ್ತಿಲ್ಲ ಎಂದು ನಿಖಿಲ್ ಎಚ್ಚರಿಕೆ ನೀಡಿದ್ದರು.












Click it and Unblock the Notifications