Karnataka rain: ರಾಜ್ಯಾದ್ಯಂತ ಜ.10 ವರೆಗೆ ಜೋರು ಮಳೆ, ನಿಮ್ಮ ಜಿಲ್ಲೆಗಳ ಹವಾಮಾನ ವರದಿ ತಿಳಿಯಿರಿ
ಬೆಂಗಳೂರು, ಜನವರಿ 07: ಕರ್ನಾಟಕ ರಾಜ್ಯದಲ್ಲಿ ಚಳಿಗಾಲ ಆವರಿಸಿದ್ದರ ಮಧ್ಯೆ ಇದೀಗ ಮಳೆಯು ಆಗುತ್ತಿದೆ. ಹುಬ್ಬಳ್ಳಿ, ಹಾವೇರಿ ಸೇರಿದಂತೆ ರಾಜ್ಯ ಕೆಲವೆಡೆ ಮಳೆ ಸುರಿಯುತ್ತಿದ್ದು, ಇಂದಿನಿಂದ (ಜನವರಿ 7) ನಾಲ್ಕು ದಿನ ರಾಜ್ಯಾದ್ಯಂತ ದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಹೀಗೆ ವ್ಯಾಪಕ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಬದಲಾವಣೆಗಳು ರಾಜ್ಯದಲ್ಲಿ ಮಳೆ ಸುರಿಯುವಿಕೆಗೆ ಕಾರಣವಾಗಿದೆ. ವಿವಿಧ ಜಿಲ್ಲೆಗಳಲ್ಲಿ ಮೂರು ನಾಲ್ಕು ದಿನದಿಂದ ತಾಪಮಾನ ಕಡಿಮೆ ಆಗಿದೆ. ಮಬ್ಬು ವಾತಾವರಣವೇ ಕಂಡು ಬಂರುತ್ತಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆಯ ನಿರೀಕ್ಷೆ ಇದೆ.

ಇಂದಿನಿಂದ ಜನವರಿ 10ರವರೆಗೆ ನಾಲ್ಕು ದಿನಗಳವರೆಗೆ 30 ಜಿಲ್ಲೆಗಳಲ್ಲಿ ಮಳೆ ಆಗಲಿದೆ. ಇದರಲ್ಲಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರ, ವಿಜಯನಗರ, ಮಂಡ್ಯ, ಮೈಸೂರು, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಕೊಡುಗ ಸೇರಿದಂತೆ ಈ ಭಾಗದಲ್ಲಿ ಅತ್ಯಧಿಕ ಮಳೆಯಾಗುವ ಸಾಧ್ಯತೆಗಳು ಇವೆ.
ಉತ್ತರ ಒಳನಾಡು ಜಿಲ್ಲೆಗಳ ಮುನ್ಸೂಚನೆ
ಇದೇ ವೇಳೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಕೊಪ್ಪಳ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಾಲ್ಕು ದಿನ ಆಗಾಗ ತುಂತುರು ಮಳೆ ಬರಲಿದೆ. ಕೆಲವೊಮ್ಮೆ ಒಂದರೆ ಕಡೆ ಹಗುರ ಮಳೆಯ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ತಿಳಿಸಿದೆ.
ಇದಕ್ಕೂ ಮೊದಲು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅತ್ಯಧಿಕ ಚಳಿ ವಾತಾವರಣ ಕಂಡು ಬಂದಿತ್ತು. ವಿಜಯಪುರದಲ್ಲಿ ತಾಪಮಾನ 10 ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿಕೆ ಆಗುವ ಮೂಲಕ ಮೈಕೊರೆಯುವ ಚಳಿ ಏರ್ಪಟ್ಟಿತ್ತು. ಇದೀಗ ಚಳಿ ನಡುವೆ ಈ ಭಾಗದಲ್ಲಿ ಆಗಾಗ ಜಿಟಿ ಜಿಟಿ ಮಳೆ ಬರುತ್ತಿದೆ.

ಗರಿಷ್ಠ-ಕನಿಷ್ಠ ತಾಪಮಾನ ಮಾಹಿತಿ
ಕಳೆದ 24 ಗಂಟೆಯಲ್ಲಿ ಶಿರಾಲಿ, ಕುಟುಟಾ, ಹಾವೇರಿ, ಹುಬ್ಬಳ್ಳಿ ಕಡೆಗಳಲ್ಲಿ ಜೋರು ಮಳೆ ಆಗಿದೆ. ಈ ವೇಳೆ ರಾಜ್ಯದ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಕಾರವಾರದಲ್ಲಿ ದಾಖಲಾಗಿದೆ. ಪೆಣಂಬೂರು 33, ಹೊನ್ನಾವರದಲ್ಲಿ 32 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗದಲ್ಲಿ 30 ಡಿಗ್ರಿ ಸೆಲ್ಸಿಯಸ್ ಕಂಡು ಬಂದಿದೆ. ಇನ್ನೂ ವಿಜಯಪುರದಲ್ಲಿ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಹುಬ್ಬಳ್ಳಿಯಲ್ಲಿ ಅರ್ಧ ಗಂಟೆ ಮಳೆ
ನಗರದಾದ್ಯಂತ ಶನಿವಾರ ಸಂಜೆ ಸುಮಾರು 30 ನಿಮಿಷಗಳ ಕಾಲ ಅಕಾಲಿಕ ಮಳೆ ಸುರಿಯಿತು. ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣ ಕಂಡು ಬಂದಿತ್ತು. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನತೆಗೆ, ಮಳೆ ತುಸು ತಂಪನ್ನೆರೆಯಿತು. ಮಾರುಕಟ್ಟೆಗೆ ಬಂದವರು ಏಕಾಏಕಿ ಸುರಿದ ಮಳೆಯಿಂದ ಪರದಾಡಿದರು. ಬೈಕ್ ಸವಾರರು ನೆನೆಯುತ್ತಲೇ ಸಂಚರಿಸಿದ ದೃಶ್ಯ ಸಾಮಾನ್ಯವಾಗಿತ್ತು.
ರಸ್ತೆ ಕಾಮಗಾರಿ ನಡೆಯುತ್ತಿರುವ ಅಶೋಕನಗರ, ದೇಶಪಾಂಡೆನಗರ, ದೇವಾಂಗಪೇಟೆ, ಚನ್ನಪೇಟೆ, ಆನಂದನಗರ ರಸ್ತೆಯ ಅಲ್ಲಲ್ಲಿ ನೀರು ನಿಂತಿತ್ತು. ಕಾಮಗಾರಿಯಿಂದಾಗಿ ನಿಂತ ಕೊಳಚೆ ನೀರಿನಿಂದ ಸವಾರರು ಹಾಗೂ ಪಾದಚಾರಿಗಳು ತೊಂದರೆ ಅನುಭವಿಸಿದರು.
ಬೆಂಗಳೂರಿನಲ್ಲಿ ಸಹ ಮೋಡ ಕವಿದ ಹಾಗೂ ಹೆಚ್ಚು ಚಳಿಯ ವಾತಾವರಣ ಕಂಡು ಬಂದಿದೆ. ಇನ್ನೂ ಎರಡು ಮೂರು ದಿನ ಇದೇ ವಾತಾವರಣ ಮುಂದುರಿಯುವ ಸಾಧ್ಯತೆಗಳು ಇವೆ.












Click it and Unblock the Notifications