ನವಜಾತ ಶಿಶು ಬಲಿ ಪಡೆದ ಹಾವೇರಿ ಜಿಲ್ಲಾಸ್ಪತ್ರೆ: ಕಾರಣ ಬಿಚ್ಚಿಟ್ಟ ಕುಟುಂಬಸ್ಥರು ಕಣ್ಣೀರು, ಆಕ್ರೋಶ
Medical Negligence: ಜಿಲ್ಲಾಸ್ಪತ್ರೆಗಳೆಂದರೆ ರೋಗಿಗಳು ಅದರಲ್ಲೂ ಗರ್ಭಿಣಿ ಮಹಿಳೆಯರಿಗೆ ಒಂದು ರೀತಿಯ ಹೆದರಿಕೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ, ಕಾಳಜಿ ಸಿಗದಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಕೆಲವೊಮ್ಮೆ ವೈದ್ಯರು, ಜಿಲ್ಲಾಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಸಾವುಗಳೇ ಸಂಭವಿಸಿಬಿಡುತ್ತವೆ. ಇಂತದ್ದೇ ಒಂದು ಘಟನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿನ ಈ ಘಟನೆಗೆ ವಿಪಕ್ಷ ನಾಯಕ ಆರ್.ಅಶೋಕ್ ಕೆಂಡ ಕಾರಿದ್ದಾರೆ. ರಾಜ್ಯ ಸರ್ಕಾರದ ಮತ್ತು ಆರೋಗ್ಯ ಇಲಾಖೆ ಕಾರ್ಯ ನಿರ್ವಹಣೆ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಎಕ್ಸ್ ಪೋಸ್ಟ್ ಮಾಡಿರುವ ಅವರು, "ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿ ಮಹಿಳೆಗೆ ಬೆಡ್ ಕೂಡ ಕೊಡದೆ ನೆಲದ ಮೇಲೆ ಕೂರಿಸಿ ಆಕೆ ಶೌಚಾಲಯಕ್ಕೆಂದು ಹೋಗುವಾಗ ಆಸ್ಪತ್ರೆಯ ಕಾರಿಡಾರ್ ನಲ್ಲೇ ಹೆರಿಗೆಯಾಗಿದೆ. ನೆಲಕ್ಕೆ ಬಿದ್ದ ಮಗು ಮೃತಪಟ್ಟಿರುವ ದಾರುಣ ಘಟನೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ' ಎಂದರು.

"ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೇ ನಿಮ್ಮ ಇಲಾಖೆಯಲ್ಲಿ ಏನಾಗುತ್ತಿದೆ ಸ್ವಾಮಿ? ನಮ್ಮ ಹಿಂದಿನ ಬಿಜೆಪಿ ಸರ್ಕಾರವಿದ್ದಾಗ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿದ್ದೇವು. ಚಿಕಿತ್ಸೆ ಅರಸಿ ಬರುವ ಬಡ ರೋಗಿಗಳಿಗೆ ಮಾರ್ಗದರ್ಶನ ಮಾಡುವ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಿದ್ದೆವು. ಆದರೆ ನಿಮ್ಮ ಕಾಂಗ್ರೆಸ್ ಸರ್ಕಾರ ಬಂದಮೇಲೆ ಆರೋಗ್ಯ ಸೇವೆಗಳ ಶುಲ್ಕ ಹೆಚ್ಚಿಸಲಾಯಿತು. ಕಳಪೆ ಔಷಧಿ ಕೊಟ್ಟು ಗರ್ಭಿಣಿ, ಬಾಣಂತಿ ಮಹಿಳೆಯರನ್ನು ಕೊಂದಿತು. ಸರ್ಕಾರಿ ಆಸ್ಪತ್ರಗಳ ಆವರಣದಲ್ಲಿ ಜನಔಷಧಿ ಮಳಿಗೆಗಳನ್ನು ಮುಚ್ಚಿಸಿದ್ದೇ ನಿಮ್ಮ ಸಾಧನೆ. ಇದನ್ನು ಬಿಟ್ಟರೆ ಜನಸಾಮಾನ್ಯರಿಗೆ, ಬಡಬಗ್ಗರಿಗೆ ಉಪಯೋಗವಾಗುವ ಒಂದು ಕೆಲಸವನ್ನೂ ಮಾಡಲಿಲ್ಲ' ಎಂದು ಆಕ್ರೋಶ ಹೊರ ಹಾಕಿದರು.
"ನಿಮ್ಮ ಈ ನಿರ್ಲಕ್ಷ್ಯ, ನಿರಾಸಕ್ತಿಯಲ್ಲೇ ಸರ್ಕಾರದ ಅರ್ಧ ಆಯುಸ್ಸು ಮುಗಿದು ಹೋಯಿತು. ಈಗಲಾದರೂ ಎಚ್ಚೆತ್ತುಕೊಂಡು ಸರ್ಕಾರಿ ಆಸ್ಪತ್ರೆಗಳ ಸುಧಾರಣೆ ಕಡೆಗೆ ಗಮನ ಕೊಡಿ ಸ್ವಾಮಿ' ಎಂದು ಆಗ್ರಹಿಸಿದ್ದಾರೆ.
ಗರ್ಭಿಣಿ ಮಹಿಳೆಯ ಕಟುಂಬಸ್ಥರು ಹೇಳೋದೇನು?
ಗರ್ಭಿಣಿ ಜಿಲ್ಲಾಸ್ಪತ್ರೆಗೆ ಬಂದಾಗ ಅವರನ್ನು ಕೂರಿಸಿದ್ದಾರೆ. ವೈದ್ಯರು ಆಸ್ಪತ್ರೆಯಲ್ಲಿ ಇಲ್ಲ. ಅವರು ತಿಂಡಿಗೆ ಹೋಗಿದ್ದಾರೆ ಎಂದು ಹೇಳಿದ್ದಾರೆ. ಯಾರೊಬ್ಬ ನರ್ಸ್ ಸಹ ಗರ್ಭಿಣಿ ಮಹಿಳೆ ಬಳಿ ಬಂದಿಲ್ಲ. ಅವರನ್ನು ಪರಿಶೀಲನೆಯೇ ಮಾಡದೇ ಸಾಮಾನ್ಯರಂತೆ ಕೂರಿಸಿದ್ದಾರೆ. ಆಗ ಗರ್ಭಿಣಿ ಮಹಿಳೆಯು ಮೂತ್ರ ವಿಸರ್ಜನೆಗೆಂದು ಏಳುತ್ತಿದ್ದಂತೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ನಡೆದು ಹೋಗುವಾಗಲೇ ಹೆರಿಗೆ ಆಗಿದೆ. ಹೊಟ್ಟಿಯಿಂದ ಆಚೆ ಬಂದ ಶಿಶುವಿಗೆ ಪೆಟ್ಟಾಗಿದೆ. ಆ ನೋವಿನಿಂದ ಮಗು ಸಾವನ್ನಪ್ಪಿದೆ. ಬೆಡ್ ನೀಡಿ ಪರಿಶೀಲಿಸಿದ್ದರೆ ಮಗುವಿನ ಜೀವ ಉಳಿಯುತ್ತಿತ್ತು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕರುಳ ಕುಡಿಯ ಈ ಸ್ಥಿತಿ ಕಂಡು ತಾಯಿಗೆ ಆಘಾತವಾಗಿದೆ. ಕುಟುಂಬಸ್ಥರು ಮಗು ಕಳೆದುಕೊಂಡಿದ್ದಾರೆ. ಜಿಲ್ಲಾಸ್ಪತ್ರೆ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಹೀಗಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ಕರುಳ ಕುಡಿ ಕಳೆದುಕೊಂಡ ತಾಯಿ ಸರ್ಕಾರ, ಜಿಲ್ಲಾಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆ, ಸಚಿವರು ಸೂಕ್ತ ಕ್ರಮ ವಹಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿ ಬಂದಿದೆ.












Click it and Unblock the Notifications