ಮುಖ್ಯಮಂತ್ರಿ ಪರಿಹಾರ ನಿಧಿಗೆ ಅರ್ಜಿ ಸಲ್ಲಿಕೆಗೆ ಹೊಸ ನಿಯಮ, ವಿವರ
ಬೆಂಗಳೂರು, ಆಗಸ್ಟ್ 25: ಕರ್ನಾಟಕದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಕೆಗೆ ಹೊಸ ನಿಯಮವನ್ನು ಅಳವಡಿಕೆ ಮಾಡಲಾಗಿದೆ. ಅರ್ಜಿ ಸಲ್ಲಿಕೆ ಮಾಡುವಾಗ ಯಾವ-ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂದು ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರದದಲ್ಲಿ ಈ ಕುರಿತು ಮಾಹಿತಿ ನೀಡಲಾಗಿದೆ. ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ ಮಾನ್ಯ ಸಚಿವರು, ವಿಧಾನಸಭಾ, ವಿಧಾನ ಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರುಗಳ ಕಛೇರಿಗಳಿಂದ ಸಲ್ಲಿಕೆಯಾಗುತ್ತಿರುವ ಬಹುತೇಕ ಅರ್ಜಿಗಳು ಸಮರ್ಪಕವಲ್ಲದ ದಾಖಲಾತಿಗಳೊಂದಿಗೆ ಸಲ್ಲಿಕೆಯಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ ಎಂದು ತಿಳಿಸಲಾಗಿದೆ.

ಇದರಿಂದಾಗಿ ಶೀಘ್ರಗತಿಯಲ್ಲಿ ಕಡತ ವಿಲೇವಾರಿ ಮಾಡಲು ತೊಂದರೆಯಾಗುತ್ತಿದ್ದು, ಬಡವರು, ನಿರ್ಗತಿಕರು ಹಾಗೂ ನೊಂದ ಜನರಿಗೆ ಸಕಾಲದಲ್ಲಿ ಪರಿಹಾರ ನೀಡಲು ವಿಳಂಬವಾಗುತ್ತಿರುವುದರಿಂದ, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮುಖ್ಯ ಉದ್ದೇಶ ಈಡೇರಿದಂತಾಗುವುದಿಲ್ಲ ಎಂದು ಪತ್ರದಲ್ಲಿ ವಿವರಣೆ ನೀಡಲಾಗಿದೆ.
ಆದ್ದರಿಂದ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಕಛೇರಿಯಿಂದ ಇನ್ನು ಮುಂದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಈ ದಾಖಲಾತಿಗಳನ್ನು ಸಲ್ಲಿಸುವಂತೆ ಈ ಮೂಲಕ ತಿಳಿಸಲಾಗಿದೆ.
ಯಾವ-ಯಾವ ದಾಖಲೆಗಳು
* ಅರ್ಜಿದಾರರ ಭಾವಚಿತ್ರ (ಪಾಸ್‌ಪೋರ್ಟ್ ಸೈಜ್)
* ಅರ್ಜಿದಾರರ ಬಿಪಿಎಲ್ ಪಡಿತರ ಚೀಟಿ
* ಅರ್ಜಿದಾರರ ಆಧಾರ್ ಕಾರ್ಡ್. (ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಆಗಿರಬೇಕು)
* ಅರ್ಜಿದಾರರು ಚಿಕಿತ್ಸೆ ಪಡೆದಿರುವ ಆಸ್ಪತ್ರೆಯ ಸೀಲು ಸಹಿ ಇರುವ ಅಂತಿಮ ಮೂಲ ಬಿಲ್‌ಗಳು
* ಆಸ್ಪತ್ರೆಯ ಬಿಡುಗಡೆ ಸಾರಾಂಶ ಪತ್ರದ ಪ್ರತಿ
* ಅರ್ಜಿದಾರರು ಚಿಕಿತ್ಸೆ ಪಡೆಯಬೇಕಾದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಮೂಲ ಅಂದಾಜು ಪಟ್ಟಿ
* ಅರ್ಜಿದಾರ ಬ್ಯಾಂಕ್ ಖಾತೆ ಹೊಂದಿರಬೇಕು. ಸದರಿ ಖಾತೆಯ ಪಾಸ್‌ಬುಕ್ ಮೊದಲ ಪುಟದ ಪ್ರತಿ. ಬ್ಯಾಂಕ್ ಖಾತೆ ಎನ್‌ಪಿಸಿಐಗೆ ಮ್ಯಾಪ್ ಆಗಿರಬೇಕು.
* ಅರ್ಜಿದಾರ ಅಥವ ಅವರ ಕುಟುಂಬ ವರ್ಗದವರ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ಪರಿಹಾರ ಪಡೆಯಲು ಜನರು ನೇರವಾಗಿ ಮುಖ್ಯಮಂತ್ರಿಗಳ ಕಛೇರಿಗೆ ಅರ್ಜಿ ಸಲ್ಲಿಕೆ ಮಾಡುತ್ತಾರೆ. ಅಲ್ಲದೇ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರ ಕಛೇರಿಗೆ ಸಲ್ಲಿಸುತ್ತಾರೆ. ಅವರ ಕಛೇರಿ ಮೂಲಕವೂ ಅರ್ಜಿಗಳು ಮುಖ್ಯಮಂತ್ರಿಗಳ ಕಛೇರಿಗೆ ಬರುತ್ತವೆ.
ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆದವರು ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ಪ್ರಯೋಜನ ಪಡೆಯುತ್ತಾರೆ. ಇದಕ್ಕಾಗಿ ಅವರು ಅರ್ಜಿಗಳನ್ನು ಸಲ್ಲಿಕೆ ಮಾಡುತ್ತಾರೆ. ಮುಖ್ಯಮಂತ್ರಿಗಳ ಕಛೇರಿ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುತ್ತದೆ.
2016ರಲ್ಲಿ ನಕಲಿ ದಾಖಲೆಗಳನ್ನು ನೀಡಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ಹಣಕಾಸು ನೆರವು ಪಡೆಯುವುದನ್ನು ತಡೆಯಲು ಮುಖ್ಯಮಂತ್ರಿಗಳ ಸಚಿವಾಲಯ ಹಲವಾರು ಕ್ರಮಗಳನ್ನು ಕೈಗೊಂಡಿತ್ತು. ನಕಲಿ ದಾಖಲೆ ನೀಡಿ ಪರಿಹಾರ ಪಡೆಯಲಯ ಪ್ರಯತ್ನ ನಡೆಸಿದ 154 ಪ್ರಕರಣಗಳನ್ನು ಪತ್ತೆ ಹಚ್ಚಿತ್ತು.
ಮುಖ್ಯಮಂತ್ರಿಗಳ ಪರಿಹಾರ ನಿಧಿ ಸರ್ಕಾರದ ನಂಬಿಕಸ್ಥ ಶಾಖೆ. ಪ್ರಕೃತಿ ವಿಕೋಪಗಳು, ಗಂಭೀರ ಅಪಘಾತ ಪ್ರಕರಣಗಳ ಸಂದರ್ಭದಲ್ಲಿ ನೊಂದ ಸಂತ್ರಸ್ತರಿಗೆ ಹಾಗೂ ಹಾನಿಗೊಳಗಾದ ಪ್ರದೇಶಗಳ ಅಭಿವೃದ್ಧಿಗಾಗಿ ಸಹ ಪರಿಹಾರ ನಿಧಿಯಿಂದ ಹಣವನ್ನು ನೀಡಲಾಗುತ್ತದೆ.
ಜನರು ಹಾಗೂ ಸಂಘ ಸಂಸ್ಥೆಗಳು ಸ್ವಇಚ್ಚೆಯಿಂದ ನೀಡುವ ದೇಣಿಗೆಯನ್ನು ಸಂಗ್ರಹಿಸಿ ತುರ್ತು ಅಗತ್ಯ ಯೋಜನೆಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಡಿ ಬಳಕೆ ಮಾಡಲಾಗುತ್ತದೆ.












Click it and Unblock the Notifications