ಕರ್ನಾಟಕ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ಹೆಚ್ಚಾದ ಕೂಗು, ಬಿಎಸ್ವೈ ಪ್ರಭಾವ ಕುಗ್ಗೀತೇ?
ಕರ್ನಾಟಕದಲ್ಲಿ ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿ ಬೆಳೆಸಿದ ಕೀರ್ತಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಹಲವು ದಶಕಗಳ ಕಾಲ ಪಕ್ಷದ ಬೆಳವಣಿಗೆಯ ನೇತೃತ್ವ ವಹಿಸಿದ್ದ ಅವರು, ಅಂತಿಮವಾಗಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದು, ಕರ್ನಾಟಕವನ್ನು ದಕ್ಷಿಣ ಭಾರತದ ಬಿಜೆಪಿಯ ಆಡಳಿತ ಪಡೆದ ಮೊದಲ ರಾಜ್ಯವನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಒಮ್ಮೆ ಮೂರು ಹಾಗೂ ಮತ್ತೊಮ್ಮೆ ವಾರ ಸೇರಿ ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಕರ್ನಾಟಕ ಬಿಜೆಪಿ ಏಕಮೇವ ಪ್ರಭಾವಿ ನಾಯಕ ಎಂಬುದರಲ್ಲಿ ಅನುಮಾನವೇ ಇಲ್ಲ. ಅದರಲ್ಲಿಯೂ ಲಿಂಗಾಯತ ಸಮುದಾಯದ ಜನಪ್ರಿಯ ನಾಯಕನಾಗಿ ಮೆರೆದಿದ್ದು ಸುಳ್ಳಲ್ಲ.
ಬದಲಾದ ಕಾಲಘಟ್ಟದಲ್ಲಿ ರಾಜ್ಯ ಬಿಜೆಪಿ ಲಿಂಗಾಯತರ ಬೆಂಬಲ ಉಳಿಸಿಕೊಳ್ಳಲು, ಪಕ್ಷವನ್ನು ಮತ್ತಷ್ಟು ಬಲ ಪಡಿಸಬಹುದೆಂಬ ಉದ್ದೇಶದಿಂದ ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿ ಚುಕ್ಕಾಣಿ ನೀಡಲಾಯಿತು. ಸುಮಾರು ಮೂರ ವರ್ಷಗಳ ಕಾಲ ರಾಜ್ಯ ನಾಯಕರಾಗಿ ಕಾರ್ಯ ನಿರ್ವಹಿಸುತ್ತಿರುವ ವಿಜಯೇಂದ್ರ ಅವರು ಹೇಳುವಂಥ ಸಾಧನೆಯನ್ನೇನೂ ಮಾಡಲಿಲ್ಲ. ಅತ್ಯುತ್ತಮ ಸಂಘಟಕ ಎಂಬ ಕೀರ್ತಿಗೂ ಪಾತ್ರರಾಗಿದ್ದರೂ, ಮೊನ್ನೆ ಮೊನ್ನೆ ನಡೆದ ವಿಧಾನ ಪರಿಷತ್ ಚುನಾವಣೆ ಸೇರಿ ಎಲ್ಲಿಯೂ ತಮ್ಮ ಪ್ರಭಾವ ಬೀರಿ, ಗೆಲುವು ಸಾಧಿಸಲಿಲ್ಲ. ಸೋಲಿನಿಂದಲೇ ಮನುಷ್ಯ ಸಾಮರ್ಥ್ಯವನ್ನು ಅಳೆಯೋದು ಕಷ್ಟವೆಂದರೂ, ಶಿಸ್ತಿನ ಪಕ್ಷವೆಂದೇ ಖ್ಯಾತಿ ಪಡೆದ ಕೇಸರಿ ಪಕ್ಷದಲ್ಲೀಗ ಅಶಿಸ್ತು ರಾರಾಜಿಸುತ್ತಿದೆ. ಪಕ್ಷದ ಹಿರಿಯರು, ಕಾರ್ಯಕರ್ತರು ಹಾಗೂ ಅತೃಪ್ತ ನಾಯಕರನ್ನು ಒಂದೆಡೆ ಸೇರಿಸುವಲ್ಲಿಯೂ ವಿಜಯೇಂದ್ರ ವಿಫಲರಾಗಿದ್ದು, ಇದೀಗ ಕೇಂದ್ರ ಬಿಜೆಪಿ ರಾಜ್ಯದ ನಾಯಕತ್ವ ಬದಲಾವಣೆಗೆ ಮನಸ್ಸು ಮಾಡಿದಂತೆ ತೋರುತ್ತಿದೆ.

ನಾಯಕತ್ವ ಬದಲಾವಣೆಗೆ ಬಿಜೆಪಿ ಚಿಂತನೆ
ವೈಯಕ್ತಿಕ ನಾಯಕರ ವರ್ಚಸ್ಸಿನ ಮೇಲೆ ಅವಲಂಬಿತವಾಗುವ ಬದಲು ಪಕ್ಷವನ್ನು ಬಲಿಷ್ಠಗೊಳಿಸಲು ಹೆಚ್ಚಿನ ಗಮನ ಹರಿಸುತ್ತಿರುವ ಬಿಜೆಪಿ, ಈಗ ನಾಯಕತ್ವ ಬದಲಾವಣೆಯ ಬಗ್ಗೆ ಚಿಂತಿಸುತ್ತಿದೆ. 2023ರ ವಿಧಾನಸಭಾ ಚುನಾವಣೆ ಸೋಲಿನ ನಂತರ ವಿಜಯೇಂದ್ರ ಅವರು ಸಂಘಟನೆಯನ್ನು ಬಲಪಡಿಸುತ್ತಾರೆ ಮತ್ತು ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುತ್ತಾರೆ ಎಂಬ ನಂಬಿಕೆಯಿಂದ ಕೇಂದ್ರ ನಾಯಕತ್ವ ಅವರಿಗೆ ಮೂರು ವರ್ಷಗಳ ಸುದೀರ್ಘ ಸಮಯ ನೀಡಿತ್ತು. ಆದರೆ, ಪಕ್ಷದಲ್ಲಿ ಮುಂದುವರಿದ ಆಂತರಿಕ ಭಿನ್ನಾಭಿಪ್ರಾಯಗಳು ಮತ್ತು ಬಣ ರಾಜಕೀಯ ಬಗೆಹರಿಸಲು ಸಾಧ್ಯವಾಗದಿರುವುದು ಕೇಂದ್ರ ನಾಯಕತ್ವಕ್ಕೆ ನಿರಾಶೆ ಮೂಡಿಸಿದೆ.
ಆ ಮೂಲಕ ಬಿಜೆಪಿ ಕೇಂದ್ರ ನಾಯಕತ್ವ ವಿಜಯೇಂದ್ರ ಅವರ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದೆಯೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಆ ಮೂಲಕ ರಾಜ್ಯದಲ್ಲಿದ್ದ ಯಡಿಯೂರಪ್ಪ ಅವರ ವರ್ಚಸ್ಸು, ಅದನ್ನು ಮುಂದುವರಿಸುತ್ತಾರೆಂದು ಅವರ ಮಗ ವಿಜಯೇಂದ್ರ ಅವರ ಮೇಲೆ ಪಕ್ಷ ಇಟ್ಟಿದ್ದ ನಂಬಿಕೆ ಎಲ್ಲವೂ ಕ್ಷೀಣಿಸುತ್ತಿದೆ ಎನ್ನಲಾಗುತ್ತಿದೆ. ಯಡಿಯೂರಪ್ಪ ಹಾಗೂ ಅವರ ಕುಟುಂಬದ ಸದಸ್ಯರನ್ನು ಹೊರತು ಪಡಿಸಿ, ಪಕ್ಷವನ್ನು ಸಾಂಘಿಕವಾಗಿ ಕೊಂಡೋಯ್ಯುವ ನಾಯಕರಿಗಾಗಿ ಕಮಲ ಪಾಳಯ ಹುಡುಕುತ್ತಿದೆ. ಹೊಸ ಮಾದರಿ ಪ್ರಯೋಗದೊಂದಿಗೆ ಮುಂದಿನ ವಿಧಾನಸಭಾ ಚುನಾವಣೆಗೆ ಸಂಘಟನೆಯನ್ನು ಸಜ್ಜುಗೊಳಿಸುತ್ತಿದೆ.
ಬಿಜೆಪಿ ರಾಜ್ಯದಲ್ಲಿ ವಿಫಲವಾಗಿದ್ದು ಎಲ್ಲೆಲ್ಲಿ?
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ಸದ್ದು ಮಾಡಿದ ಮುಡಾ (MUDA) ಮತ್ತು ವಾಲ್ಮೀಕಿ ನಿಗಮದ ಹಗರಣಗಳ ವಿರುದ್ಧ ಬಿಜೆಪಿಯ ಹೋರಾಟ ಬಹಳ ಸಪ್ಪೆಯಾಗಿತ್ತು. ಒಂದು ವಿಫಕ್ಷವಾಗಿ ಸರ್ಕಾರದ ವಿರುದ್ಧ ಬಲವಾದ ರಾಜಕೀಯ ಅಭಿಯಾನವನ್ನು ರೂಪಿಸುವಲ್ಲಿ ಕೇಸರಿ ಪಡೆ ಸಂಪೂರ್ಣ ವಿಫಲವಾಗಿದೆ ಎಂಬುವುದು ತೆರೆದ ಸತ್ಯ. ಬಿಜೆಪಿ ಪ್ರತಿಭಟನೆಗಳು ಮತ್ತು ಮುಡಾ ಪಾದಯಾತ್ರೆಯನ್ನು ಆಯೋಜಿಸಿದ್ದರೂ, ಈ ಅಭಿಯಾನ ನಿರೀಕ್ಷಿತ ರಾಜಕೀಯ ಪ್ರಭಾವ ಬೀರಲಿಲ್ಲ. ಆ ಕಾರಣಕ್ಕಾಗಿಯೇ ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕರಾಗಿರುವ ಆರ್ ಅಶೋಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ದಿಲ್ಲಿಗೆ ಪರೆಯಿಸಿಕೊಂಡ ಬಿಜೆಪಿ ವರಿಷ್ಠರು ಈ ಬಗ್ಗೆ ಚರ್ಚಿಸಿ, ರಾಜ್ಯ ನಾಯಕರ ಕಾರ್ಯ ಕ್ಷಮತೆಯನ್ನು ಪರಾಮರ್ಶಿಸಿತ್ತು.
ಯಡಿಯೂರಪ್ಪ ಏಕೆ ಭಿನ್ನವಾಗಿದ್ದರು?
ಇತ್ತೀಚೆಗೆ ಪಕ್ಷದ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದಾರೆಂಬ ಆಡಿಯೋವೊಂದು ವೈರಲ್ ಆಗಿ, ಡಿ.ವಿ,ಸದಾಗೌಡ ಅವರ ಹೆಸರು ತಗಲು ಹಾಕಿ ಕೊಂಡಿತ್ತು. ಆಗಲೂ ಪಕ್ಷದ ಕಾರ್ಯಕರ್ತರನ್ನು ಒಗ್ಗಟ್ಟಾಗಿಡುವ ನಾಯಕತ್ವದ ಅಗತ್ಯತೆ ಬಗ್ಗೆ ಪಕ್ಷದ ಒಳಗೂ, ಹೊರಗೂ ಬಹಳಷ್ಟು ಚರ್ಚೆಯಾಗಿತ್ತು. ಶಿಸ್ತಿನ ಸಿಪಾಯಿಯಾಗಿದ್ದ ಯಡಿಯೂರಪ್ಪ ಅವರು ಕಾರ್ಯಕರ್ತರನ್ನು ಬೈದರೂ, ನಂತರ ಹೆಗಲ ಮೇಲೆ ಕೈ ಹಾಕಿ ಮಾತನಾಡಿ, ಸಂಘಟನೆ ಗಟ್ಟಿಯಾಗಿರುವಂತೆ ನೋಡಿಕೊಳ್ಳುವ ಚಾಕಚಕ್ಯತೆ ಅವರಿಗಿತ್ತು. ಅದರಿಂದ ಪ್ರತಿಯೊಬ್ಬರೊಂದಿಗೂ ಅತ್ಯುತ್ತಮ ಬಾಂಧವ್ಯವನ್ನೇ ಕಾಪಾಡಿಕೊಂಡಿದ್ದರು. ಈಗಿನ ಪಕ್ಷದ ನಾಯಕತ್ವ ಬಿಜೆಪಿಯಲ್ಲಿ ಅಂಥದ್ದೊಂದು ವಿಶ್ವಾಸ ಮೂಡಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದೇ ಹೇಳಲಾಗುತ್ತಿದೆ. ಪಕ್ಷದ ಹೈಕಮಾಂಡ್ ಈಗ ಕೇವಲ ರಾಜ್ಯಾಧ್ಯಕ್ಷರ ಹುದ್ದೆ ಮಾತ್ರವಲ್ಲದೆ, ವಿರೋಧ ಪಕ್ಷದ ನಾಯಕನ ಹುದ್ದೆಗೂ ಬೇರೊಬ್ಬ ಸಮರ್ಥ ನಾಯಕನ ಶೋಧದಲ್ಲಿದೆ ಪಕ್ಷ ಎಂಬ ಮಾತುಗಳು ಕೇಳಿ ಬರುತ್ತಿದೆ. 2028ರ ವಿಧಾನಸಭಾ ಚುನಾವಣೆಗೆ ಮುನ್ನ ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಪಕ್ಷ ಒಲವು ತೋರುತ್ತಿದ್ದು, ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳುವುದೋ ಕಾದು ನೋಡಬೇಕಿದೆ.
ಬಿಜೆಪಿ ನಾಯಕತ್ವ ಬದಲಾವಣೆಗಿರೋ ತೊಡಕೇನು?
ಹಾಗಂಥ ರಾತ್ರಿ ಬೆಳಗಾಗುವುದರಲ್ಲಿ ರಾಜ್ಯ ಬಿಜೆಪಿ ನಾಯಕತ್ವ ಬದಲಾಯಿಸುವುದು ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟು ಸುಲಭವಲ್ಲ. ಹಾಗೆ ಮಾಡಲು ದಕ್ಷ, ಸಮರ್ಥ ನಾಯಕರ ಕೊರತೆಯೂ ರಾಜ್ಯ ಬಿಜೆಪಿಯನ್ನು ಕಾಡುತ್ತಿದೆ. ಹಾಗೂ ಹೀಗೋ ನಾಯಕರು ಸಿಕ್ಕಿದರೂ, ಯಡಿಯೂರಪ್ಪ ಅವರ ನಾಯಕತ್ವದಲ್ಲಿ ದಶಕಗಳ ಕಾಲ ಕರ್ನಾಟಕದಲ್ಲಿ ಬಿಜೆಪಿಯ ಅತ್ಯಂತ ಪ್ರಬಲ ಬೆಂಬಲ ನೆಲೆಯಾಗಿದ್ದ ಲಿಂಗಾಯತ ಮತಬ್ಯಾಂಕ್ ಅನ್ನು ರಕ್ಷಿಸಿಕೊಳ್ಳುವ ಕಾರಣಕ್ಕಾಗಿ ಪಕ್ಷದ ವರಿಷ್ಠರಿಗೆ ಈ ನಿರ್ಧಾರ ತೆಗೆದುಕೊಳ್ಳುವುದು ಕಬ್ಬಿಣದ ಕಡಲೆಯಾದಂತಾಗಿದೆ.
ಅದಕ್ಕೆ ಯಡಿಯೂರಪ್ಪ ಕುಟುಂಬ ಸದಸ್ಯರಿಗೆ ರಾಷ್ಟ್ರ ರಾಜಕಾರಣದಲ್ಲಿ ಸ್ಥಾನ ಕಲ್ಪಿಸಿ, ರಾಜ್ಯ ನಾಯಕತ್ವನ್ನು ಮುಟ್ಟಲು ಪಕ್ಷ ಚಿಂತಿಸುತ್ತಿದೆ. ಶಿವಮೊಗ್ಗದ ಸಂಸದರಾಗಿ ತಕ್ಕಮಟ್ಟಿಗೆ ಒಳ್ಳೇ ಕೆಲಸ ಮಾಡುತ್ತಿರುವ ಬಿ ವೈ ರಾಘವೇಂದ್ರ ಅವರಿಗೆ ಮುಂದಿನ ಕೇಂದ್ರ ಸಂಪುಟ ಪುನಾರಾಚನೆಯಲ್ಲಿ ಸೂಕ್ತ ಸ್ಥಾನ ಕಲ್ಪಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಈ ಬಗ್ಗೆ ಪಕ್ಷದಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲದಿದ್ದರೂ ಈ ಸಾಧ್ಯ ಸಾಧ್ಯತೆ ಬಗ್ಗೆ ಪಕ್ಷದಲ್ಲಿ ಆಗಾಗ ಗುಸುಗುಸು ಕೇಳಿ ಬರುತ್ತದೆ.
ರಾಜ್ಯದಲ್ಲಿ ಪಕ್ಷವನ್ನು ಹೊಸದಾಗಿ ರಚಿಸಲು ಹಲವು ಹೆಸರು ಮುನ್ನಲೆಗೆ ಬರುಲೇ ಇರುತ್ತವೆ. ಆರ್ಎಸ್ಎಸ್ (RSS) ಹಿನ್ನೆಲೆಯುಳ್ಳ, ಒಕ್ಕಲಿಗ ಸಮುದಾಯಕ್ಕೆ ಸೇರಿದ ಮತ್ತು ಯಡಿಯೂರಪ್ಪ ಅವರಿಗೆ ಆಪ್ತರಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಹೆಸರು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಸಂಭಾವ್ಯ ಅಭ್ಯರ್ಥಿಯಾಗಿ ಕೇಳಿಬರುತ್ತಿದೆ. ಒಂದು ವೇಳೆ ಬಿಎಸ್ ವೈ ಅವರು ಪಕ್ಷದ ವಿರುದ್ಧ ಲಿಂಗಾಯತ ಕಾರ್ಡ್ ಬಳಸಿದರೆ, ವಿಜಯೇಂದ್ರ ಅವರ ಸ್ಥಾನಕ್ಕೆ ವಿ. ಸೋಮಣ್ಣ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ರಾಜ್ಯ ರಾಜಕೀಯಕ್ಕೆ ವಾಪಸ್ ಕರೆ ತರಲು ಪಕ್ಷ ಯೋಚಿಸುತ್ತಿದೆ. ವಿ. ಸೋಮಣ್ಣ ಅವರೂ ಲಿಂಗಾಯತ ಪ್ರಭಾವಿ ನಾಯಕರಾಗಿದ್ದು, ರಾಜ್ಯಾದ್ಯಂತ ಇರುವ ಲಿಂಗಾಯತ ಮಠಗಳು ಮತ್ತು ಸ್ವಾಮೀಜಿಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಜನತಾ ಪರಿವಾರದಿಂದ ಬಂದ ಅವರು, ಕೆಲಕಾಲ ಕಾಂಗ್ರೆಸ್ನಲ್ಲಿದ್ದು, ದಶಕಕ್ಕೂ ಹೆಚ್ಚು ಕಾಲದಿಂದ ಬಿಜೆಪಿಯಲ್ಲಿದ್ದಾರೆ. ಅವರು ಬಿಜೆಪಿ ಹೈಕಮಾಂಡ್ಗೂ ಆಪ್ತರಾಗಿದ್ದಲ್ಲದೇ, ಜೆಡಿಎಸ್ ಜೊತೆಯೂ ಅತ್ಯುತ್ತಮ ಬಾಂಧವ್ಯ ಹೊಂದಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯನ್ನು ಕಮಲ ಪಾಳಯ ಜೆಡಿಎಸ್ ಮತ್ತು ಅದರ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಎದುರಿಸಬೇಕಾಗಿರುವುದರಿಂದ ಎಲ್ಲವನ್ನೂ ಸಂಭಾಳಿಸುವ ನಾಯಕನೆಂದರೆ ಸೋಮಣ್ಣ ಅವರೇ ಎಂದು ಹೇಳಲಾಗುತ್ತಿದೆ. ಅಲ್ಲದೇ ಉತ್ತರ ಕರ್ನಾಟಕದ ಪ್ರಭಾವಿ ನಾಯಕರಾದ ಮಹೇಶ್ ಟೆಂಗಿನಕಾಯಿ ಮತ್ತು ಅರವಿಂದ ಬೆಲ್ಲದ ಅವರ ಹೆಸರುಗಳೂ ಚಾಲ್ತಿಯಲ್ಲಿವೆ.
ಸುಧಾರಣೆಯ ಸಮಯ
ವಿರೋಧ ಪಕ್ಷದ ನಾಯಕನ ಹುದ್ದೆಗೆ ಹಿರಿಯ ಬಿಜೆಪಿ ನಾಯಕರಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ (ಒಕ್ಕಲಿಗ) ಮತ್ತು ವಿ. ಸುನಿಲ್ ಕುಮಾರ್ (ಹಿಂದುಳಿದ ವರ್ಗ) ಅವರ ಹೆಸರು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿವೆ. ಅಶ್ವತ್ಥ ನಾರಾಯಣ್ ಅವರು ಪ್ರಭಾವಿ ಒಕ್ಕಲಿಗ ನಾಯಕರಾಗಿ ಗುರುತಿಸಿಕೊಂಡರೆ, ಸುನಿಲ್ ಕುಮಾರ್ ಅವರು ಪಕ್ಷದಲ್ಲಿ ಪ್ರಮುಖ ಒಬಿಸಿ (OBC) ಮುಖವಾಗಿದ್ದಾರೆ.
ಒಟ್ಟಿನಲ್ಲಿ ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಸ್ವಲ್ಪನಾದ್ರೂ ಚೈತನ್ಯ ಪಡೆದುಕೊಂಡು, ಕಳೆದ ಸಲಕ್ಕಿಂತ ಹೆಚ್ಚು ಸೀಟು ಗೆಲ್ಲುವಲ್ಲಿ ಯಶಸ್ವಿಯಾಗುತ್ತದಾ ಕಾದು ನೋಡಬೇಕು.














Click it and Unblock the Notifications