ವಾಟ್ಸಪ್‌ನಲ್ಲಿ ಬಂದಿದ್ದೆಲ್ಲ ನಿಜವಲ್ಲ ಪಾಟೀಲ್ರೇ! ಪ್ರಧಾನಿ ಮೋದಿ ಎಂದು ವಿಡಿಯೋ ಹಂಚಿಕೊಂಡು ಟ್ರೋಲ್ ಆದ ಮಾಜಿ ಸಚಿವ
ಈಗೇನಿದ್ರು ಸೋಷಿಯಲ್ ಮೀಡಿಯಾ ಕಾಲ, ವಾಟ್ಸಾಪ್‌ನಲ್ಲಿ ದಿನಕ್ಕೆ ಸಾವಿರ ಸಾವಿರ ವಿಡಿಯೋಗಳು, ಸುದ್ದಿಗಳು ಶೇರ್ ಆಗುತ್ತವೆ. ಅದರಲ್ಲಿ ಕೆಲವು ನಿಜವಾಗಿದ್ದರೆ, ಇನ್ನೂ ಕೆಲವು ಸುಳ್ಳಾಗಿರುತ್ತವೆ. ಕೆಲವೊಮ್ಮೆ ಎಂತಹವರೂ ಕೂಡ ಈ ನಕಲಿ ಸುದ್ದಿಗಳನ್ನು ನಂಬಿ ಯಾಮಾರುತ್ತಾರೆ, ಈಗ ಮಾಜಿ ಸಚಿವ ಬಿಸಿ ಪಾಟೀಲ್ ಕೂಡ ಇಂತಹ ಎಡವಟ್ಟು ಮಾಡಿಕೊಂಡಿದ್ದಾರೆ.
ಮಾಜಿ ಸಚಿವ, ಬಿಜೆಪಿ ನಾಯಕ ಬಿಸಿ ಪಾಟೀಲ್ ಸದ್ಯ ಮೋದಿ ಅವರದ್ದು ಎಂದು ಹೇಳಿರುವ ವಿಡಿಯೋ ಹಂಚಿಕೊಂಡಿದ್ದು, ಟ್ರೋಲ್‌ಗೆ ಒಳಗಾಗಿದ್ದಾರೆ. ಹಲವರು ಬಿಸಿ ಪಾಟೀಲ್ ಹಂಚಿಕೊಂಡಿರುವ ವಿಡಿಯೋಗೆ ಕಾಮೆಂಟ್ ಮಾಡಿದ್ದು ವಾಟ್ಸಾಪ್‌ನಲ್ಲಿ ಬಂದಿದ್ದನ್ನೆಲ್ಲ ನಂಬಬೇಡಿ ಎಂದು ಸಲಹೆ ನೀಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ವ್ಯಕ್ತಿಯೊಬ್ಬರು ಕಾಲ್ಗಳನ್ನು ಮೇಲೆತ್ತಿ ಕೈಯಿಂದ ನಡೆಯುತ್ತಾ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕುತ್ತಿರುವ ವಿಡಿಯೋ ಹಂಚಿಕೊಂಡಿರುವ ಬಿಸಿ ಪಾಟೀಲ್, "ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಅವರು 26 ವರ್ಷ ವಯಸ್ಸಿನವರಾಗಿದ್ದಾಗ, ಅವರು ಕೇದಾರನಾಥವನ್ನು ಹೇಗೆ ಪ್ರದಕ್ಷಿಣೆ ಮಾಡಿದರು, ನೀವೆಲ್ಲರೂ ಒಮ್ಮೆ ನೋಡಿ." ಎಂದು ಟ್ವೀಟ್ ಮಾಡಿದ್ದಾರೆ.
ಭಾರಿ ಟ್ರೋಲ್ ಮಾಡಿದ ನೆಟ್ಟಿಗರು
ಬಿಸಿ ಪಾಟೀಲ್ ಹಂಚಿಕೊಂಡಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಹಲವು ನೆಟ್ಟಿಗರು ಮಾಜಿ ಸಚಿವರನ್ನು ಸುಳ್ಳು ಮಾಹಿತಿ ಹಂಚಿಕೊಂಡಿರುವುದಕ್ಕೆ ಟೀಕಿಸಿದ್ದಾರೆ. ಪ್ರತಿಕ್ರಿಯೆ ನೀಡಿರುವ ಒಬ್ಬರು, ಈ ರೀತಿ ಸರಿಯಾಗಿ ಮಾಹಿತಿ ಇಲ್ಲದೆ, ಸುಳ್ಳು ಸುದ್ದಿಯನ್ನು ಹಂಚಬೇಡಿ ಎಂದು ಬುದ್ದಿ ಹೇಳಿದ್ದಾರೆ.
ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ, ಅವರು 26 ವರ್ಷ ವಯಸ್ಸಿನವರಾಗಿದ್ದಾಗ, ಅವರು ಕೇದಾರನಾಥವನ್ನು ಹೇಗೆ ಪ್ರದಕ್ಷಿಣೆ ಮಾಡಿದರು, ನೀವೆಲ್ಲರೂ ಒಮ್ಮೆ ನೋಡಿ. pic.twitter.com/YnQekOLSH9
— B C Patil (@bcpatilkourava) January 6, 2024
ರಾಜ್ಯದ ಮಾಜಿ ಆರಕ್ಷಕರಾಗಿ, ಜನಪ್ರತಿನಿಧಿಯಾಗಿ, ಸಚಿವರಾಗಿ ಇಂಥ ಸುಳ್ಳು ಸುದ್ದಿಯನ್ನ ಹಂಚಿಕೊಳ್ಳುವುದು ಶೋಭೆಯಲ್ಲ ಎಂದು ಮತ್ತೊಬ್ಬರು ಬಿಸಿ ಪಾಟೀಲ್ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬರು ಟ್ವೀಟ್ ಮಾಡಿ, ಪಾಟೀಲ್‌ರೆ ಅದು ಫೇಕ್ ವಿಡಿಯೋ ಕಣ್ರಿ, ವಾಟ್ಸಾಪ್‌ನಲ್ಲಿ ಕಳಿಸಿದವನಿಗೆ ಉಗಿಯಿರಿ ಎಂದಿದ್ದಾರೆ. ಮತ್ತೊಬ್ಬರು "ಪಾಟೀಲ್ರೆ ಪೂರ್ತಿ ವಿಡಿಯೋ ಇಲ್ಲಿದೆ ಫ್ರೀ ಮಾಡ್ಕೊಂಡ್ ಒಮ್ಮೆ ನೋಡಿ. ಈ ಟ್ವೀಟ್ ಡಿಲಿಟ್ ಮಾಡಿದ್ರೆ ಅಷ್ಟೇ ಮತ್ತೆ" ಎಂದಿದ್ದಾರೆ.
ಬಿಸಿ ಪಾಟೀಲ್ ಟ್ವೀಟ್‌ಗೆ ಪತ್ರಕರ್ತ ಮೊಹಮ್ಮದ್ ಜುಬೈರ್ ಕೂಡ ಪ್ರತಿಕ್ರಿಯೆ ನೀಡಿದ್ದು, "ಸರ್, ವಾಟ್ಸಾಪ್ ಗ್ರೂಪ್‌ನಲ್ಲಿ ಬರುವ ಪ್ರತಿಯೊಂದು ವಿಷಯವೂ ನಿಜವಲ್ಲ. ವಿಡಿಯೋದಲ್ಲಿರುವುದು 26 ವರ್ಷದವರಾಗಿದ್ದಾಗ ಪ್ರಧಾನಿ ಮೋದಿ ಅಲ್ಲ.
ಈ ವೀಡಿಯೊ 2021 ರಲ್ಲಿ ಅಂತರಾಷ್ಟ್ರೀಯ ಯೋಗ ದಿನದಂದು ರೆಕಾರ್ಡ್ ಮಾಡಿದ ಕೇದಾರನಾಥ ದೇವಾಲಯದ ಅರ್ಚಕ ಸಂತೋಷ್ ತ್ರಿವೇದಿ ಅವರದ್ದು." ಎಂದು ವಿಡಿಯೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.











Click it and Unblock the Notifications