NEET Exam Today: ಕರ್ನಾಟಕ ಸೇರಿ ದೇಶಾದ್ಯಂತ ಇಂದು 'ನೀಟ್' ಪರೀಕ್ಷೆ: ಚಪ್ಪಲಿ, ಹಿಲ್ಸ್, ಬಳೆ ಇವೆಲ್ಲ ನಿಷೇಧ..
ಬೆಂಗಳೂರು, ಮೇ 04: ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಾತಿಗಾಗಿ ಇಂದು (ಮೇ 04) ಕರ್ನಾಟಕ ಸೇರಿದಂತೆ ದೇಶಾದ್ಯಂತ ಏಕ ಸಮಯದಲ್ಲಿ NEET UG Exam 2025 ನಡೆಯುತ್ತಿದೆ. ಕರ್ನಾಟಕದಲ್ಲಿ ಲಕ್ಷಾಂತರ ಅಭ್ಯರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದಾರೆ. ಪಾರದರ್ಶಕ ಹಾಗೂ ಸುಸೂತ್ರ ಪರೀಕ್ಷೆ ನಡೆಸುವ ಸದುದ್ದೇಶದಿಂದ ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ವಿವಿಧ ವಸ್ತುಗಳನ್ನು ನಿಷೇಧಿಸಲಾಗಿದೆ.
ದೇಶಾದ್ಯಂತ ರಾಷ್ಟ್ರೀಯ ಏಜೆನ್ಸಿ ಎನ್‌ಟಿಎ ವತಿಯಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (NEET UG Exam 2025 in Karnataka) ನಡೆಸಲಾಗುತ್ತಿದೆ. ಇಂದು ಭಾನುವಾರ ಕರ್ನಾಟಕದಲ್ಲಿ 380ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಜರುಗಲಿದೆ. ಮಧ್ಯಾಹ್ನ 2ರಿಂದ ಸಂಜೆ 05 ಗಂಟೆವರೆಗೆ ನಡೆಯಲಿರುವ ಪರೀಕ್ಷೆಗಾಗಿ ಒಟ್ಟು ಸುಮಾರು 1.49 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದು, ಪರೀಕ್ಷೆ ಬರೆಯಲಿದ್ದಾರೆ.

ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಕಿವಿಯೋಲೆ, ಬಳೆ, ಚಪ್ಪಲಿ, ವಾಚ್, ಜಡೆ ಕ್ಲಿಪ್, ಹೈ ಹೀಲ್, ಮೂಗತಿ, ಸರ, ಕಾಲು ಚೈನ್, ಲೋಹದ ಉಪಕರಣ ಧರಿಸುವಂತಿಲ್ಲ. ಅಲ್ಲದೇ ದೊಡ್ಡ ದೊಡ್ಡ ಬಟನ್ ಗಳಿರುವ ಶರ್ಟ್, ಪ್ಯಾಂಟ್, ಶೂ ಧರಿಸುವಂತಿಲ್ಲ. ಸಾಕ್ಸ್ ಹಾಕುವಂತಿಲ್ಲ. ಇವೆಲ್ಲವನ್ನು ಪರೀಕ್ಷಾ ಅಭ್ಯರ್ಥಿಗಳಿಗೆ ನಿಷೇಧಿಸಲಾಗಿದೆ. ಯಾವುದೇ ವಿದ್ಯುನ್ಮಾನ ಸಾಧನ/ಉಪಕರಣ ತಂದರೆ ಪರೀಕ್ಷೆಗೆ ಅನುಮತಿ ಇಲ್ಲ. ಪರೀಕ್ಷೆ ಬರೆಯುವು ಮುನ್ನ ಈ ಎಲ್ಲವನ್ನು ತೆಗೆಸಲಾಗುತ್ತದೆ.
ಮಧ್ಯಾಹ್ನ 2 ಗಂಟೆಗೆ ಪರೀಕ್ಷೆ ಶುರುವಾದರೂ ಸಹಿತ ಇಂದು ನಡೆಯುವ NEET ಪರೀಕ್ಷೆ ವಿದ್ಯಾರ್ಥಿಗಳು ಬೆಳಗ್ಗೆ 11 ಗಂಟೆಯಿಂದಲೇ ಪ್ರವೇಶ ಕಾರ್ಡ್, ಆಧಾರ್, ಎರಡು ಪಾಸ್‌ಪೋರ್ಟ್ ಅಳತೆಯ ಫೋಟೋ ಸಹಿತ ಮುಂಗಡವಾಗಿ ಬರಬೇಕು. ಒಂದು ವೇಳೆ ಆಧಾರ್ ಕಾರ್ಡ್ ಇಲ್ಲಿದ್ದರೆ, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಇತರ ಯಾವುದೇ ಸರ್ಕಾರದ ಅಧಿಕೃತ ಗುರುತಿನ ಚೀಟಿ ತರಬೇಕು. ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಬಯೋಮೆಟ್ರಿಕ್ ಹಾಜರಾತಿ ಪಡೆದು ಅನುಮತಿಸಲಾಗುತ್ತದೆ ಎಂದು ಏಜೆನ್ಸಿ ತಿಳಿಸಿದೆ.
ನಕಲು ತಡೆಯುವುದು, ಪಾರದರ್ಶಕ ಪರೀಕ್ಷೆ ನಡೆಸಲು ಏಜೆನ್ಸಿಯು ವಸ್ತ್ರ ಸಂಹಿತಿ ಜಾರಿಗೆ ತಂದಿದೆ. ಅದರ ಅನುಗುಣವಾಗಿ ಈಗಾಗಲೇ ಮೇಲೆ ತಿಳಿಸಲಾಗಿರುವ ವಸ್ತುಗಳು ನಿಷಿದ್ಧವಾಗಿವೆ. ವೈದ್ಯಕೀಯ ವಿದ್ಯಾಭ್ಯಾಸ ನಡೆಸಲು ಇಚ್ಛಿಸುವವರು, ಪದವಿ ಮೂಲಕ ವೈದ್ಯಕೀಯ ರಂಗ ಪ್ರವೇಶಿಸುವವರಿಗೆ ಈ ನೀಟ್ ಪರೀಕ್ಷೆ ಪ್ರಮುಖ ವಾಗಿದೆ. ಇಲ್ಲಿ ಪರೀಕ್ಷೆ ಬಳಿಕ ಫಲಿತಾಂಶ ಹೊರ ಬೀಳಲಿದೆ. ನಂತರ ಕೌನ್ಸೆಲಿಂಗ್, ಸೀಟು ಹಂಚಿಕೆ ಇತರ ಪ್ರಕ್ರಿಯೆಗಳು ನಡೆಯಲಿವೆ.

ಕರ್ನಾಟಕದಲ್ಲಿ ವಿದ್ಯಾರ್ಥಿಗಳು NEET exam ಬರೆಯಲು ಕಾತರರಾಗಿದ್ದಾರೆ. ದೇಶಾದ್ಯಂತ ನೀಟ್ ಪರೀಕ್ಷೆಯಲ್ಲಿ ಕನ್ನಡ ಅಭ್ಯರ್ಥಿಗಳು ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು, ಮರಾಠಿ, ಗುಜರಾತಿ, ಬೆಂಗಾಲಿ, ಉರ್ದು, ಪಂಜಾಬಿ, ಅಸ್ಸಾಮಿ, ಇಂಗ್ಲಿಷ್ ಹಾಗೂ ಒರಿಯಾ ಭಾಷೆಗಳಲ್ಲೂ ಪರೀಕ್ಷೆ ಬರೆಯಲಿದ್ದಾರೆ.












Click it and Unblock the Notifications